ದಾವಣಗೆರೆ:
ಅಹಿಂಸಾ ಮಾರ್ಗದ ಮೂಲಕ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟು, ಭಾರತ ವಿಭಜನೆಯಾದಾಗ ಕಣ್ಣೀರು ಹಾಕಿದ್ದ ಮಹಾತ್ಮ ಗಾಂಧಿಯನ್ನೇ ಕೊಂದ ಗೋಡ್ಸೆಗೆ ದೇವಸ್ಥಾನ ಕಟ್ಟಿ ಪೂಜಿಸುತ್ತಿರುವುದು ಅತ್ಯಂತ ವಿಷಾಧನೀಯ ಸಂಗತಿಯಾಗಿದೆ ಎಂದು ಬಾಪೂಜಿ ವಿದ್ಯಾಸಂಸ್ಥೆ ಗೌರವ ಕಾರ್ಯದರ್ಶಿ, ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಬೇಸರ ವ್ಯಕ್ತಪಡಿಸಿದರು.
ನಗರದ ಎವಿಕೆ ಮಹಿಳಾ ಕಾಲೇಜು ಆವರಣದಲ್ಲಿರುವ ಶ್ರೀಮತಿ ಪಾರ್ವತಮ್ಮ ಶಿವಶಂಕರಪ್ಪ ಸಭಾಂಗಣಲ್ಲಿ ಬುಧವಾರ ಬಾಪೂಜಿ ವಿದ್ಯಾಸಂಸ್ಥೆ ಹಾಗೂ ಮಾನವ ಹಕ್ಕುಗಳ ವೇದಿಕೆ ಇವುಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ 150ನೇ ಜನ್ಮ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮಹಾತ್ಮ ಗಾಂಧೀಜಿ ಅವರನ್ನೇ ಗುಂಡಿಟ್ಟು ಕೊಂದ ನಾಥುರಾಮ್ ಗೋಡ್ಸೆಗೆ ಉತ್ತರ ಪ್ರದೇಶದಲ್ಲಿ ದೇವಸ್ಥಾನ ನಿರ್ಮಿಸಿ, ಪೂಜೆ ಸಲ್ಲಿಸುತ್ತಿರುವುದನ್ನು ನೋಡಿದರೆ, ನಮ್ಮ ದೇಶದಲ್ಲಿ ಎಂತಹ ಮನಸ್ಥಿತಿಯ ಜನರಿದ್ದಾರೆಂಬುದು ಗೊತ್ತಾಗುತ್ತದೆ ಎಂದು ಮಾರ್ಮಿಕವಾಗಿ ನುಡಿದರು.
ಗಾಂಧೀಜಿ ಅವರ ಹೆಸರು ಗೊತ್ತಿಲ್ಲದವರು ಯಾರೂ ಇಲ್ಲ. ಅವರು ಭಾರತಕ್ಕೆ ಅಹಿಂಸೆಯ ಮೂಲಕ ಸ್ವಾತಂತ್ರ್ಯ ತಂದುಕೊಟ್ಟ ಮಹಾತ್ಮರಾಗಿದ್ದು, ಎಲ್ಲರನ್ನೂ ಮಹಾತ್ಮರನ್ನಾಗಿ ಕರೆಯಲು ಸಾಧ್ಯವಿಲ್ಲ ಎಂದ ಅವರು, ಗುಡಿ ಕೈಗಾರಿಕೆಗಳಿಂದ ಗ್ರಾಮೀಣ ಪ್ರದೇಶದ ಜೀವನ ಸುಧಾರಿಸಬಹುದೆಂಬ ಕನಸು ಗಾಂಧೀಜಿ ಹೊಂದಿದ್ದರು. ಆದರೆ, ಈಗ ದೇಶದಲ್ಲಿ ಬೃಹತ್ ಕೈಗಾರಿಕೆಗಳ ಹಾವಳಿಯಿಂದಾಗಿ ಗುಡಿ ಕೈಗಾರಿಕೆಗಳಿಗೆ ಜಾಗವೇ ಇಲ್ಲದ್ದಂತಾಗಿದೆ ಎಂದು ವಿಷಾಧಿಸಿದರು.
ಗಾಂಧಿ ಚಿಂತನೆ ಕುರಿತು ಮಾತನಾಡಿದ ಕವಿ ಚಂದ್ರಶೇಖರ ತಾಳ್ಯ, ವಿಶ್ವದ ಶ್ರೇಷ್ಠ ಮನುಷ್ಯರಾಗಿರುವ ಗಾಂಧೀಜಿ ಸುಖವಾಗಿ ಬದುಕಿದ್ದರು ಎಂಬುದು ತಪ್ಪು ಕಲ್ಪನೆಯಾಗಿದೆ. ಏಕೆಂದರೆ, ಗಾಂಧೀಜಿ ಅವರ ಬದುಕು ವಿಷಾದದ ಬಹು ದೊಡ್ಡ ಕದನವಾಗಿದೆ. ಇದಕ್ಕೆ ಅವರು ಬಾಲ್ಯದಲ್ಲಿ ಸುಳ್ಳು ಹೇಳಿದಾಗಲೂ ವಿಷಾದ ವ್ಯಕ್ತಪಡಿಸಿ ತಮ್ಮ ತಂದೆಗೆ ಪತ್ರ ಬರೆದುದ್ದೇ ಸಾಕ್ಷಿ ಎಂದರು.
ಬೇರೆಯವರನ್ನು ಬದಲಾಯಿಸಬೇಕೆಂಬ ನಿರೀಕ್ಷೆಯಿಂದಲೇ ಗಾಂಧೀಜಿ ಇಡೀ ಜೀವನ ಕಳೆದಿದ್ದರಿಂದ ಅವರೊಬ್ಬ ಬಹುದೊಡ್ಡ ಪರಿವರ್ತನಾಶೀಲರಾಗಿ ಕಾಣುತ್ತಾರೆ. ಅವರು ಪಾಲಿಸಿದ್ದ ಸತ್ಯ, ಅಹಿಂಸೆ ಎಲ್ಲಿಯೂ ಇಲ್ಲ. ಅಲ್ಲದೇ, ಇವೆರಡು ಹಿಂದು ಧರ್ಮದ ತಳಹದಿಯ ಮೇಲೆ ಬಂದವು ಎಂಬ ತಪ್ಪು ಕಲ್ಪನೆ ನಮ್ಮಲ್ಲಿ ಮನೆ ಮಾಡಿದೆ. ಸತ್ಯ ಮತ್ತು ಅಹಿಂಸೆಯನ್ನು ಗಾಂಧೀಜಿ ಜೈನ ಧರ್ಮದಿಂದ ಸ್ವೀಕರಿಸಿದ್ದರು ಎಂದು ಸ್ಮರಿಸಿದರು.
ಸತ್ಯ ಹಣ್ಣು ಮತ್ತು ಅಸತ್ಯವನ್ನು ಹುಣ್ಣು ಎಂಬುದಾಗಿಯೇ ಗಾಂಧಿ ಭಾವಿಸಿದ್ದರು. ಹೀಗಾಗಿ ಗಾಂಧಿಯನ್ನು ಮುಟ್ಟಲು, ಅವರ ವಿಚಾರಗಳ ಬಗ್ಗೆ ಮಾತನಾಡಲು ಯೋಗ್ಯತೆ ಬೇಕಾಗಿದೆ. ದೇಶವನ್ನು ಆಧುನಿಕತೆಗೆ ದೂಡಿ ಸರ್ವನಾಶ ಮಾಡುವ ರೈಲು, ಯಂತ್ರ, ವೈದ್ಯರು ಮತ್ತು ವಕೀಲರು ಈ ದೇಶಕ್ಕೆ ಬೇಡ ಎಂಬುದಾಗಿಯೇ ಬಲವಾಗಿ ಪ್ರತಿಪಾದಿಸಿದ್ದರು.
ಗಾಂಧೀಜಿ ಅವರ ಆತ್ಮಚರಿತ್ರೆಯನ್ನು ಪ್ರತಿಯೊಬ್ಬರು ಅಧ್ಯಯನ ಮಾಡಿ, ಅವರ ಕಡೆ ಮುಖ ಮಾಡಿದರೆ, ಇಡೀ ಜಗತ್ತು ಸುಸ್ಥಿರವಾಗಿರಲಿದೆ ಎಂದು ಪ್ರತಿಪಾದಿಸಿದರು.ಎಆರ್‍ಜಿ ಕಾಲೇಜಿನ ವಿದ್ಯಾರ್ಥಿ ನಂದೀಶ್ ಮಾತನಾಡಿ, ದೇಶದಲ್ಲಿ ಪ್ರಸ್ತುತ ಗಾಂಧಿ ಚಿಂತನೆಯನ್ನು ವಿರೂಪಗೊಳಿಸುವ ಕೆಲಸ ನಡೆಯುತ್ತಿದ್ದು, ಯಾವ ಯುವಕರು ಇದಕ್ಕೆ ಬಲಿಯಾಗಬಾರದು ಎಂದು ಮನವಿ ಮಾಡಿದರು.
ಡಿಆರ್‍ಎಂ ಕಾಲೇಜಿನ ವಿದ್ಯಾರ್ಥಿನಿ ಕವಿತಾ, ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಒಂದೇ ಒಂದು ವರ್ಷದಲ್ಲಿ ಗಾಂಧಿಯ ಹತ್ಯೆ ನಡೆದದ್ದು, ಅತ್ಯಂತ ದುರ್ದೈವದ ಸಂಗತಿಯಾಗಿದೆ. ಗಾಂಧಿ ಮಾತ್ರ ನಮ್ಮಿಂದ ಮರೆಯಾಗಿಲ್ಲ. ಅವರ ತತ್ವ, ಚಿಂತನೆಗಳು ಸಹ ಮೂಲೆ ಗುಂಪಾಗುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು.
ಎಂಎಎಸ್‍ಬಿ ಕಾಲೇಜಿನ ವಿದ್ಯಾರ್ಥಿನಿ ಯಾಸ್ಮೀನ್, ಇಂದು ಬಾಪುವಿನ ಮೂಲ ಪರಿಕಲ್ಪನೆಗಳು ಅಪಾಯದಲ್ಲಿ ಸಿಲುಕಿವೆ. ಅವುಗಳನ್ನು ರಕ್ಷಣೆ ಮಾಡಬೇಕಾಗಿರುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಗಾಂಧಿ ದೇಶದಲ್ಲಿ ಇಂದು ಗಾಂಧಿಯೇ ಕಣ್ಮರೆ ಆಗುವ ವಾತಾವರಣ ಸೃಷ್ಟಿಯಾಗಿರುವುದು ಅತ್ಯಂತ ಅಪಾಯಕಾರಿ ಎಂದರು.
ಬಾಪೂಜಿ ವಿದ್ಯಾಸಂಸ್ಥೆಯ ಸದಸ್ಯೆ ಕಿರುವಾಡಿ ಗಿರಿಜಮ್ಮ ಮಾತನಾಡಿದರು. ಎವಿಕೆ ಕಾಲೇಜಿನ ವಿದ್ಯಾರ್ಥಿನಿ ಪವಿತ್ರಾ ಡಿ.ಆರ್. ತಮ್ಮ ಅಭಿಪ್ರಾಯ ಹಂಚಿಕೊಂಡರು. ವಿದ್ಯಾಸಂಸ್ಥೆಯ ಶೈಕ್ಷಣಿಕ ನಿರ್ದೇಶಕ ಡಾ.ಎಂ.ಜಿ.ಈಶ್ವರಪ್ಪ ಅಧ್ಯಕ್ಷತೆ ವಹಿಸಿದ್ದರು. ಮಾನವ ಹಕ್ಕುಗಳ ವೇದಿಕೆ ಅಧ್ಯಕ್ಷ ಬಿ.ಎಂ.ಹನುಮಂತಪ್ಪ, ಕಾರ್ಯದರ್ಶಿ ಎಲ್.ಎಚ್.ಅರುಣಕುಮಾರ್, ಪ್ರಾಂಶುಪಾಲರಾದ ಡಾ.ಹನುಮಂತಪ್ಪ, ನಾಗರತ್ನಮ್ಮ, ಗೋಪಾಲ್, ಬೊಮ್ಮಣ್ಣ, ಶಿವಪ್ಪ, ಉಪನ್ಯಾಸಕರಾದ ಬಿ.ಪಿ.ಕುಮಾರ್, ಮಲ್ಲಿಕಾರ್ಜುನ್, ಶಿವಕುಮಾರ್, ಗೀತಾ ಮತ್ತಿತರರು ಉಪಸ್ಥಿತರಿದ್ದರು. ತೃಪ್ತಿ, ಲಾಸ್ಯ, ಸಹನಾ ಪ್ರಾರ್ಥಿಸಿದರು. ಪ್ರಾಂಶುಪಾಲ ಪ್ರೊ.ಶಿವಪ್ರಕಾಶ್ ಸಿ.ಎಸ್ ಸ್ವಾಗತಿಸಿದರು. ಡಾ.ಅನುರಾಧ ಪಿ.ಎಂ. ಕಾರ್ಯಕ್ರಮ ನಿರೂಪಿಸಿದರು. ಪ್ರಾಂಶುಪಾಲ ಕೆ.ಎಸ್.ಬಸವರಾಜ್ ವಂದಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ