ಲಾಕ್ ಡೌನ್ ನಿಂದ ಕೊರೋನಾ ನಿಯಂತ್ರಣ ಅಸಾಧ್ಯ : ಸಿಎಂ

ಬೆಂಗಳೂರು

     ಕೊರೋನಾ ಸೋಂಕು ನಿಯಂತ್ರಣ ಲಾಕ್‍ಡೌನ್‍ನಂತಹ ಮಾರ್ಗಗಳಿಂದ ಸಾಧ್ಯವೇ ಇಲ್ಲ ಎಂದು ಮತ್ತೊಮ್ಮೆ ಬಲವಾಗಿ ಪ್ರತಿಪಾದನೆ ಮಾಡಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಸೋಂಕು ಹತೋಟಿಗೆ ಸಾಮಾಜಿಕ ಅಂತರ ಕಾಯ್ದುಕೊಂಡು ನಿಯಂತ್ರಣ ಕ್ರಮಗಳನ್ನು ಬಿಗಿಗೊಳಿಸುವಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ.

     ರಾಜ್ಯದ ಜನತೆಯನ್ನುದ್ದೇಶಿಸಿ ಪ್ರಸಾರ ಭಾಷಣ ಮಾಡಿದ ಯಡಿಯೂರಪ್ಪ, ಸೋಂಕು ನಿಯಂತ್ರಣ ಕ್ರಮಗಳಿಗೆ ಆದ್ಯತೆ ನೀಡುವಂತೆ ಸೂಚಿಸಲಾಗಿದೆ. ಕೆಲವು ಜಿಲ್ಲೆಗಳಲ್ಲಿ ಸೋಂಕು ಹೆಚ್ಚಾಗಿದ್ದು, ಲಾಕ್ ಡೌನ್ ನಂತಹ ಕ್ರಮಗಳ ಮೊರೆ ಹೋಗಬೇಡಿ. ನಿಯಂತ್ರಣಕ್ಕೆ ಆದ್ಯತೆ ನೀಡುವಂತೆ ಸೂಚಿಸಲಾಗಿದೆ ಎಂದರು.

    ಸೋಂಕು ಹೆಚ್ಚಿನ ಸಂಖ್ಯೆಯಲ್ಲಿ ಹರಡುತ್ತಿರುವ ಹಿನ್ನೆಲೆಯಲ್ಲಿ ಯಾರು ಆತಂಕ ಪಡುವ ಅಗತ್ಯವಿಲ್ಲ. ಶೇಕಡ 80ರಷ್ಟು ಸೋಂಕಿತರಲ್ಲಿ ರೋಗಲಕ್ಷಣಗಳು ಕಂಡುಬರುತ್ತಿಲ್ಲ. ಇಂತಹವರಿಗೆ ಮನೆಗಳಲ್ಲಿ ಅಥವಾ ಕೋವಿಡ್ ಕೇರ್ ಕೇಂದ್ರಗಳಲ್ಲಿ ಚಿಕಿತ್ಸೆ ಒದಗಿಸಲು ಸೂಚಿಸಲಾಗಿದೆ. ಅಗತ್ಯಕ್ಕೆ ತಕ್ಕಂತೆ ಚಿಕಿತ್ಸಾ ಕ್ರಮಗಳ ಬದಲಾವಣೆ ಮಾಡಲಾಗುತ್ತಿದೆ ಎಂದು ಹೇಳಿದರು.

    ಶೇಕಡ 95ರಷ್ಟು ಸೋಂಕಿತರಿಗೆ ವೆಂಟಿಲೇಟರ್ ಅವಶ್ಯಕತೆಯಿಲ್ಲ. ಆಸ್ಪತ್ರೆಗೆ ದಾಖಲಾದ ಬಹುತೇಕ ಮಂದಿ ಗುಣಮುಖರಾಗುತ್ತಿದ್ದಾರೆ. ಹೀಗಾಗಿ ಜನತೆ ಗಾಬರಿ ಪಡುವ ಅಗತ್ಯವಿಲ್ಲ ಎಂದು ಯಡಿಯೂರಪ್ಪ ಸಲಹೆ ಮಾಡಿದರು.

    ಬೆಂಗಳೂರು ನಗರದಲ್ಲಿ ಸೋಂಕು ನಿಯಂತ್ರಣಕ್ಕೆ ವ್ಯಾಪಕ ಕ್ರಮಗಳನ್ನು ಕೈಗೊಳ್ಳಲಾಗಿದೆ. ಹಾಸಿಗೆಗಳ ಸಮಸ್ಯೆ ಎದುರಾಗದಂತೆ ನೋಡಿಕೊಳ್ಳಲಾಗುತ್ತಿದೆ. ಸೋಂಕು ಪತ್ತೆ ಪರೀಕ್ಷೆಯ ವರದಿಯನ್ನು ತ್ವರಿತವಾಗಿ ದೊರಕಿಸಲು ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ವಿಶೇಷವಾಗಿ ಶೇಕಡ 98 ರಷ್ಟು ಸೋಂಕಿತರು ಗುಣಮುಖರಾಗಲಿದ್ದು, ಶೇಕಡ 2 ರಷ್ಟು ಮಾತ್ರ ಸಾವನ್ನಪ್ಪುತ್ತಿದ್ದಾರೆ. ಕೋವಿಡ್ ಹಾಗೂ ಕೋವಿಡ್ ಅಲ್ಲದ ಅನ್ಯ ಕಾರಣಗಳಿಗಾಗಿಯೂ ಸೋಂಕಿತರು ಸಾವನ್ನಪ್ಪುತ್ತಿದ್ದಾರೆ. ಹೀಗಾಗಿ ಜನತೆ ಆತಂಕ, ಕಳವಳಗೊಳ್ಳಬಾರದು ಎಂದು ಯಡಿಯೂರಪ್ಪ ಮನವಿ ಮಾಡಿದರು. 

    ಸೋಂಕು ನಿಯಂತ್ರಣಕ್ಕೆ ಸರ್ಕಾರದ ಮಾರ್ಗಸೂಚಿ ಪಾಲನೆಯೊಂದೇ ಸೂಕ್ತ ವಿಧಾನವಾಗಿದೆ. ತಜ್ಞರು ಸಹ ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಹೇಳಿದ್ದು, ರೋಗ ಪತ್ತೆ, ಪರೀಕ್ಷೆ, ಚಿಕಿತ್ಸೆ, ತಂತ್ರಜ್ಞಾನ ಕುರಿತಂತೆ 5ಸೂತ್ರಗಳನ್ನು ನೀಡಿದ್ದು, ಎಲ್ಲರೂ ಇವುಗಳನ್ನು ಪಾಲನೆ ಮಾಡಬೇಕು ಎಂದರು.

   ವದಂತಿಗಳಿಗೆ ಕಿವಿಗೊಡಬಾರದು, ಆತ್ಮಸ್ಥೈರ್ಯ ಕಳೆದುಕೊಳ್ಳಬಾರದು ಎಂದು ಸಲಹೆ ಮಾಡಿದ ಯಡಿಯೂರಪ್ಪ, ಬೆಂಗಳೂರು ನಗರದಲ್ಲಿ ನಾಳೆಯಿಂದ ಲಾಕ್‍ಡೌನ್ ಇರುವುದಿಲ್ಲ. ಆರ್ಥಿಕ ಚಟುವಟಿಕೆಗಳ ಜೊತೆಗೆ ಜೀವನ ನಿರ್ವಹಣೆ ಕೂಡ ಅಗತ್ಯವಾಗಿದ್ದು, ಇದನ್ನು ಎಲ್ಲರೂ ಅರಿತುಕೊಳ್ಳಬೇಕು ಎಂದರು.

    ಕೋವಿಡ್ ಸೋಂಕು ನಿಯಂತ್ರಣ ಪರಿಕರಗಳ ಖರೀದಿ ಸೇರಿದಂತೆ ಈ ಉದ್ದೇಶಕ್ಕೆ ಸರ್ಕಾರ ಮಾಡಿರುವ ವೆಚ್ಚದಲ್ಲಿ ಯಾವುದೇ ಅಕ್ರಮಗಳು ನಡೆದಿಲ್ಲ. ಈ ಬಗ್ಗೆ ಸರ್ಕಾರ ಮಾಹಿತಿ ನೀಡಲು ಪ್ರತಿಪಕ್ಷಗಳ ರಚನಾತ್ಮಕ ಸಲಹೆಗಳಿಗೆ ಸ್ವಾಗತವಿದೆ. ಇಂತಹ ಸಂಕಷ್ಟ ಸಂದರ್ಭದಲ್ಲಿ ಸರ್ಕಾರ ಮತ್ತು ಪ್ರತಿಪಕ್ಷಗಳು ಒಟ್ಟಿಗೆ ಸಾಗಬೇಕು ಎಂದು ಮನವಿ ಮಾಡಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap