ಬೆಂಗಳೂರು:
ಜಗತ್ತು ಕೊರೊನಾ ಭೀತಿಯಿಂದಿರುವ ಪ್ರಸ್ತುತ ಸಮಯದಲ್ಲಿ ಭಾರತದಲ್ಲಿ ಕ್ರಿಕೆಟ್ ಪಂದ್ಯಗಳನ್ನು ಆಯೋಜಿಸುವುದು ಕಷ್ಟ ಮತ್ತು ಕಾದು ನೋಡುವ ತಂತ್ರಕ್ಕೆ ಮೊರೆ ಹೋಗುವುದು ಒಳಿತು ಎಂದು ಭಾರತದ ಮಾಜಿ ನಾಯಕ ರಾಹುಲ್ ದ್ರಾವಿಡ್ ಹೇಳಿದ್ದಾರೆ.
ಎನ್‌ಸಿಎ ಮುಖ್ಯಸ್ಥರಾಗಿರುವ ದ್ರಾವಿಡ್, “ನಾವು ಕ್ರಿಕೆಟ್ ಅನ್ನು ಪುನರಾರಂಭಿಸುವ ಸ್ಥಿತಿಯಲ್ಲಿದ್ದೇವೆ ಎಂದು ನಾನು ಭಾವಿಸುವುದಿಲ್ಲ ಎಂದಿದ್ದಾರೆ. ದೇಶಾದ್ಯಂತ ಏಕಾಏಕಿ ಕೊರೋನಾ ವೈರಸ್ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ದೇಶಿಯ ಋತುವು ಸರಿಯಾದ ಸಮಯದಲ್ಲಿ ಆರಂಭವಾಗದೆ ಇದ್ದಲ್ಲಿ, ಪಂದ್ಯ ಕಡಿಮೆ ಮಾಡಬಹುದು ಎಂದು ಸಲಹೆ ನೀಡಿದ್ದಾರೆ.
ಸಾಮಾನ್ಯವಾಗಿ ಆಗಸ್ಟ್ – ಸೆಪ್ಟೆಂಬರ್ ವೇಳೆಗೆ ಆರಂಭವಾಗಬೇಕಿದ್ದ ದೇಶಿಯ ಪಂದ್ಯಗಳು ಅಕ್ಟೋಬರ್ ನಲ್ಲಿಯೂ ಆರಂಭ ವಾಗದಿದ್ದರೆ ಪಂದ್ಯ ಕಡಿಮೆ ಮಾಡಬಹುದು.ಇಂತಹ ಪರಿಸ್ಥಿತಿಯಲ್ಲಿ ಕ್ರಿಕೆಟ್ ಪ್ರಾರಂಭ ಕಷ್ಟಸಾಧ್ಯ. ತಾಳ್ಮೆಯಿಂದ ಕಾಯುವುದು ಉತ್ತಮ ಎಂದು ದಿ ವೀಕ್ ಮ್ಯಾಗಜೀನ್ ಗೆ ರಾಹುಲ್ ದ್ರಾವಿಡ್ ಹೇಳಿಕೆ ನೀಡಿದ್ದಾರೆ.
ಇಂತಹ ಅನಿಶ್ಚಿತ ಪರಿಸ್ಥಿಯಲ್ಲಿ ದೇಶಾದ್ಯಂತ ಕೊರೋನಾ ವರಸ್ ಬಿಕ್ಕಟ್ಟಿನಿಂದಾಗಿ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ತನ್ನ ಯೋಜನೆಗಳನ್ನು ಬಲವಂತದಿಂದ ಪುನರ್ ರಚಿಸಬೇಕಾಗಿದೆ ಎಂದು ಅವರು ತಿಳಿಸಿದ್ದಾರೆ.
ಕ್ರಿಕೆಟ್ ಆಡಲು ಏನೆಲ್ಲಾ ಕ್ರಮ ಕೈಗೊಳ್ಳಬೇಕು ಹಾಗೂ ಯಾವ ರೀತಿ ಆಡಬೇಕು ಎಂಬುದು ಸರ್ಕಾರದ ಮಾರ್ಗಸೂಚಿಗಳು ಹಾಗೂ ವೈದ್ಯಕೀಯ ತಜ್ಞರ ಸಲಹೆಗಳನ್ನು ಒಳಗೊಂಡಿರುತ್ತವೆ. ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಗೆ ಏಪ್ರಿಲ್ ನಿಂದ ಜೂನ್ ಸಾಮಾನ್ಯವಾಗಿ ಬ್ಯುಸಿ ದಿವಸಗಳು,ಈ ಸಂದರ್ಭದಲ್ಲಿ ಅಂಡರ್ -16, ಅಂಡರ್ -19, ಅಂಡರ್ -23 ಪಂದ್ಯಗಳು ನಡೆಯಲಿವೆ.ಆದರೆ, ಈ ಯೋಜನೆಗಳನ್ನು ಪುನರ್ ರಚಿಸಲಾಗಿದೆ. ಈ ವರ್ಷದಲ್ಲಿ ಕೆಲ ಪಂದ್ಯಗಳು ನಡೆಯುವ ವಿಶ್ವಾಸ ಹೊಂದಿರುವುದಾಗಿ ರಾಹುಲ್ ದ್ರಾವಿಡ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.