ತುಮಕೂರು
ಡಾ.ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳಿಗೆ ಭಾರತರತ್ನ ಪ್ರಶಸ್ತಿ ಸಂದಾಯವಾಗಲಿಲ್ಲವೆಂಬ ಕೊರಗು ಯಾರಿಗೂ ಬೇಡ. ಅದು ಬರಿ ಭಾರತ ದೇಶದ ಎಲ್ಲೆಗೆ ಮಾತ್ರ ಸೀಮಿತವಾದುದು. ಆದರೆ ದಾಸೋಹ ರತ್ನವೆಂಬುದು ಅಖಂಡ ವಿಶ್ವವ್ಯಾಪಿಯಾದುದು ಎಂದು ಹಿರೇಮಠದ ಡಾ.ಶ್ರೀ ಶಿವಾನಂದ ಶಿವಾಚಾರ್ಯ ಮಹಾಸ್ವಾಮಿಗಳು ತಿಳಿಸಿದರು.
ಅವರು ಬುಧವಾರ ಸಂಜೆ ನಗರದ ಕನ್ನಡ ಭವನದಲ್ಲಿ ಸಂಗೀತ ಸಾಗರ ಕಲ್ಚರಲ್ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಡಾ.ಬಿ.ಆರ್. ಅಂಬೇಡ್ಕರ್, ಡಾ.ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳು ಮತ್ತು ವರನಟ ಡಾ.ರಾಜ್‍ಕುಮಾರ್‍ರವರ ಜಯಂತ್ಯುತ್ಸವ ಮತ್ತು ಟ್ರಸ್ಟ್ ಉದ್ಘಾಟನೆ ಪ್ರಯುಕ್ತ ಗೀತಗಾಯನ ಹಾಗೂ ಜಗತ್ತಿಗೊಬ್ಬನೆ ಜಂಗಮ ಧ್ವನಿ ಸುರುಳಿ ಬಿಡುಗಡೆ ಕಾರ್ಯಕ್ರಮದ ದಿವ್ಯಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.
ಜಂಗಮ, ದಾಸೋಹ, ಕಾಯಕ ಶಬ್ದಗಳಿಗೆ ಶ್ರೀ ಶಿವಕುಮಾರ ಸ್ವಾಮೀಜಿ ಪರ್ಯಾಯವಾಗಿದ್ದರು. ಭಕ್ತರು ನೀಡಿದ ನಡೆದಾಡುವ ದೇವರು ಬಿರುದಿಗೆ ಮಿಗಿಲಾದ ಗೌರವವಿಲ್ಲ. ದಿಬ್ಬೂರು ಮಂಜುನಾಥ್ ಹಾಡಿರುವ ಹರಳೂರು ಶಿವಕುಮಾರ್ ಗೀತೆ ರಚಿಸಿರುವ ಜಗತ್ತಿಗೊಬ್ಬನೆ ಜಂಗಮ ಧ್ವನಿಸುರುಳಿ ಕೇಳಿದರೆ ಕೇಳುಗರ ಕಿವಿ ಪಾವನವಾಗುತ್ತದೆ. ಡಾ.ಬಿ.ಆರ್.ಅಂಬೇಡ್ಕರ್ ನಿಜವಾದ ಮೂಕನಾಯಕ. ಇಂದಿನವರು ಸಾಂಸ್ಕತಿಕ ಸೊಗಡಿಲ್ಲದ ವಾಚಾಳಿ ನಾಯಕರು.
ಮೊನ್ನೆ ಚುನಾವಣೆಯಲ್ಲಿ ನಾನೇನು ಮಾಡುವೆ ಎಂದು ಯಾವೊಬ್ಬ ನಾಯಕನು ಹೇಳಲಿಲ್ಲ. ಬದಲಾಗಿ ಬೇರೆಯವರು ಏನೂ ಮಾಡಲಿಲ್ಲ ಎಂದು ಬರೀ ದೂರಿದ್ದೇ ಆಯಿತು. ಇಂತಹವರಿಗೆ ಇವರ ಕಾಲಾನಂತರ ಜಯಂತಿಯ ಭಾಗ್ಯ ಇರುವುದಿಲ್ಲ. ಇವರು ಇರುವಾಗಲೇ ಸ್ವತಃ ತಮ್ಮ ಜಯಂತಿ ಆಚರಿಸಿಕೊಳ್ಳಬೇಕು ಅಷ್ಟೆ ಎಂದು ತಿಳಿಸಿದರು.
ಇಂದು ಜಾತೀಯೇ ಬಂಡವಾಳವಾಗಿದೆ. ಆದರೆ ಅಂಬೇಡ್ಕರರಿಗೆ ಜಾತಿ ಎಂದಿಗೂ ಬಂಡವಾಳವಾಗಲಿಲ್ಲ. ಅವರು ಸವರ್ಣೀಯ ಪ್ರವಾಹದ ಎದುರು ಈಜಿದ ಧೀಮಂತ. ಬಹುದೊಡ್ಡ ವಿದ್ವಾಂಸ. ಹಲವು ದೇಶಗಳ, ಹಲವು ವಿಶ್ವವಿದ್ಯಾನಿಲಯಗಳ ಹತ್ತು ಹಲವು ಪದವಿ ಪಡೆದವರು ಅವರು. ಡಾ.ರಾಜ್‍ಕುಮಾರ್ ಕನ್ನಡಿಗರ ಹೆಮ್ಮೆ. ನಾನು ಕೂಡ ಅವರ ಅಭಿಮಾನಿಯಾಗಿದ್ದವನು. ಅವರ ಚಿತ್ರಗಳಲ್ಲಿ ಸಮಾಜಕ್ಕೆ ಪೂರಕವಾದ ಸಂದೇಶವಿರುತ್ತಿತ್ತು. ಕೇವಲ ನಾಲ್ಕನೇ ತರಗತಿ ಓದಿದ್ದರೂ ಕೂಡ ಕನ್ನಡ ಭಾಷಾ ಉಚ್ಛಾರಣೆಯನ್ನು ಅವರ ಬಾಯಿಂದಲೇ ಕೇಳಬೇಕಿತ್ತು ಎಂದು ತಿಳಿಸಿದರು.
ಮುಖ್ಯ ಅತಿಥಿಯಾಗಿದ್ದ ಪ್ರಜಾಪ್ರಗತಿ ಸಂಪಾದಕ ಎಸ್.ನಾಗಣ್ಣನವರು ಮಾತನಾಡಿ, ಡಾ.ರಾಜ್‍ಕುಮಾರ್ ಮಾತೇ ಒಂದು ಮೌಲ್ಯ. ನಮ್ಮ ದುರ್ದೈವ ಭಾಷೆ ಇಂದು ಹಾಳಾಗುತ್ತಿದೆ, ಅರ್ಥವ್ಯತ್ಯಾಸಗಳಾಗುತ್ತಿದೆ ಎಂದು ತಿಳಿಸಿ, ಸಿಡಿದ ಕಾಳೊಂದು ಎಲ್ಲೋ ಮೊಳಕೆಯೊಡೆದು ಫಸಲು ನೀಡುವ ರೀತಿ ಕುರಿ ಕಾಯುವ ಹುಡುಗನೊಬ್ಬನಿಗೆ ಇಂದು ದೃಶ್ಯಮಾಧ್ಯಮಗಳು ವೇದಿಕೆ ಕಲ್ಪಿಸಿವೆ.
ಇದು ಸಂತಸದ ವಿಷಯ. ಇಲ್ಲಿ ಡಾ.ಬಿ.ಆರ್.ಅಂಬೇಡ್ಕರ್, ಡಾ.ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳು ಮತ್ತು ಡಾ.ರಾಜ್‍ಕುಮಾರ್ ಭಾವಚಿತ್ರಗಳನ್ನು ನೋಡಿ ರೋಮಾಂಚನವಾಗಿ ಮನಸ್ಸಿಗೆ ಸಮಾಧಾನವಾಯಿತು. ದಿಬ್ಬೂರು ಮಂಜುನಾಥ್ ಸ್ತುತ್ಯಾರ್ಹ ಕಾರ್ಯ ಮಾಡಿದ್ದಾರೆ ಎಂದು ತಿಳಿಸಿದರು.
ಕಲಾಶ್ರೀ ಡಾ.ಲಕ್ಷ್ಮಣದಾಸ್ ಮಾತನಾಡಿ, ಶ್ರದ್ದೆ, ಭಕ್ತಿ, ಸಂಕಲ್ಪ , ಸಾಧನೆ ಇವುಗಳಿದ್ದರೆ ಭಗವಂತನನ್ನು ಕಾಣಲು ಸಾಧ್ಯ ಎಂಬುದಕ್ಕೆ ಡಾ.ರಾಜ್ ಉದಾಹರಣೆ. ಹಾಗಾಗಿಯೇ ಅವರು ವಿಶ್ವದಲ್ಲೇ ಶ್ರೇಷ್ಠ ನಟನೆನಿಸಿಕೊಂಡರು. 1963ರಲ್ಲಿ ತುಮಕೂರಿನ ಶಿರಾಣಿ ರಸ್ತೆಯಲ್ಲಿ ಎಂ.ವಿ.ಸುಬ್ಬಯ್ಯನಾಯ್ಡು ನಾಟಕ ಕಂಪನಿಯಲ್ಲಿ ರಾಜ್‍ಕುಮಾರ್‍ರವರ ಎಚ್ಚಮ ನಾಯಕ ಪಾತ್ರವನ್ನು ನೋಡಿದ್ದೆ.
ಮುಂದೆ ಎಂ.ಪಿ.ಶಂಕರ್, ಉದಯ್‍ಕುಮಾರ್, ಶ್ರೀನಿವಾಸಮೂರ್ತಿ ಮುಂತಾದವರ ಜೊತೆ ಎಚ್ಚಮನಾಯಕ ನಾಟಕದಲ್ಲಿ ನಾನು ಕೂಡ ಪಾತ್ರವನ್ನು ವಹಿಸಿದ್ದೆ. ಆದರೆ ರಂಗಭೂಮಿಯ ಮಟ್ಟಿಗೆ ಡಾ.ರಾಜ್ ಅಭಿನಯದ ಎಚ್ಚಮ ನಾಯಕ ಪಾತ್ರವನ್ನು ಮೀರಿದ ಪಾತ್ರ ನಾನು ಕಾಣಲಾಗಲಿಲ್ಲ. ಬಡತನದಿಂದ ಬಂದು ಶ್ರೀಮಂತರಾದವರ ಕಥೆಯನ್ನು ಹೇಳಲು ಬೇರೆಯವರಿಗೆ ಹಕ್ಕಿರುವುದಿಲ್ಲ. ಸ್ವತಃ ಅವರೇ ಹೇಳಿಕೊಳ್ಳಬೇಕು ಎಂದು ತಿಳಿದವ ನಾನು. ಅವರ ಜೇಬಿನಲ್ಲಿ ಬಿಳಿಯ ಕರವಸ್ತ್ರ ಬಿಟ್ಟರೆ ಒಂದು ನಯಾಪೈಸೆ ಇರುತ್ತಿರಲಿಲ್ಲ. ಅವರ ಸಿನಿಮಾಗಳು ಸಮಾಜಕ್ಕೆ ಆದರ್ಶದ ಸಂದೇಶವನ್ನು ನೀಡಿವೆ. ಅವುಗಳನ್ನು ನೋಡಿ ಎಷ್ಟೋ ಜನ ತಮ್ಮ ಬದುಕನ್ನು ಕಟ್ಟಿಕೊಂಡಿದ್ದಾರೆ.
ಆದರೆ ಅವರ ರಂಗಭೂಮಿ ಪಾತ್ರಗಳು ಅವರ ಸಿನಿಮಾಕ್ಕೂ ಮಿಗಿಲಾಗಿದ್ದವು. ಅದು ಬಹುಜನಕ್ಕೆ ಗೊತ್ತಿಲ್ಲ. ಇಂದು ಕುರಿ ಕಾಯುವ ಲಂಬಾಣಿ ಹುಡುಗ ಪ್ರಖ್ಯಾತ ಗಾಯಕನಾಗಿ ಬೆಳಕಿಗೆ ಬಂದಿದ್ದಾನೆ ಎಂದರೆ ಅಲ್ಲಿ ಡಾ.ರಾಜ್‍ಕುಮಾರ್ ಬೆಳಕು ಇದೆ. ಅವರು ಸಾಮಾನ್ಯರಲ್ಲಿ ಸಾಮಾನ್ಯರಾಗಿ ಬದುಕಿದವರು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಹರಳೂರು ಶಿವಕುಮಾರ್ ಗೀತೆ ರಚಿಸಿದ ಜಗತ್ತಿಗೊಬ್ಬನೇ ಜಂಗಮ ಧ್ವನಿಸುರುಳಿ ಬಿಡುಗಡೆ ಮಾಡಲಾಯಿತು. ಕಾರ್ಯಕ್ರಮಕ್ಕೂ ಮೊದಲು ಮತ್ತು ನಂತರ ದಿಬ್ಬೂರು ಮಂಜುನಾಥ್, ಸುಜಾತದತ್, ತ್ರಿವೇಣಿ ಮುಂತಾದವರಿಂದ ಡಾ.ರಾಜ್ ಚಿತ್ರಗಳ ಗಾಯನ ನಡೆಯಿತು. ವೇದಿಕೆಯಲ್ಲಿ ಶ್ರೀಚಂದ್ರು, ದೇವರಾಜ್ ದಾಸ್, ಶಂಕರಭಾರತಿಪುರ, ಸಿ.ಹನುಮಂತರಾಯಪ್ಪ, ಹರಳೂರು ಶಿವಕುಮಾರ್, ದಿಬ್ಬೂರು ಮಂಜುನಾಥ್ ಮುಂತಾದವರಿದ್ದರು.