ಜೈವಿಕ ತಂತ್ರಜ್ಞಾನದಿಂದ ಆಧುನಿಕ ಸಮಸ್ಯೆಗಳಿಗೆ ಪರಿಹಾರ

ತುಮಕೂರು

      ಜೈವಿಕ ತಂತ್ರಜಾನವು ಮಾನವನ ಆಧುನಿಕ ಜೀವನದಿಂದ ಆಗಿರುವ ಸಮಸ್ಯೆಗಳಿಗೆ ಪರಿಹಾರವನ್ನು ಒದಗಿಸುತ್ತದೆ ಎಂದು ಹಿರಿಯ ವಿಜ್ಞಾನಿ ಸಿಎಫ್‍ಟಿಆರ್‍ಐ ಮಾಜಿ ನಿರ್ದೇಶಕ ಪದ್ಮಶ್ರೀ ಡಾ. ಪ್ರಕಾಶ್ ವಿ. ತಿಳಿಸಿದರು.ತುಮಕೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಜೈವಿಕ ತಂತ್ರಜ್ಞಾನ ವಿಭಾಗ ಮತ್ತು ಇಂಡೋ -ಫ್ರೆಂಚ್ ಸೆಂಟರ್ ಫಾರ್ ದಿ ಪ್ರಮೋಷನ್ ಆಫ್ ಅಡ್ವಾನ್ಸಡ್ ರಿಸರ್ಚ್, ನವ ದೆಹಲಿ, ಜಂಟಿಯಾಗಿ ಗುರುವಾರ ಆಯೋಜಿಸಿದ್ದ ರಾಷ್ಟ್ರೀಯ ಸಂಶೋಧನಾ ಕಾರ್ಯಾಗಾರದಲ್ಲಿ ಮಾತನಾಡಿದರು.

      ಉತ್ತಮ ಆಹಾರ ಒದಗಿಸುವಲ್ಲಿ ಮತ್ತು ನೀರಿನ ಸಂರಕ್ಷಣೆಯನ್ನು ಮಾಡುವಲ್ಲಿ ಜೈವಿಕ ತಂತ್ರಜ್ಞಾನವು ಅತಿ ಹೆಚ್ಚು ಕೊಡುಗೆಯನ್ನು ನೀಡಲಿದೆ ಎಂದರು.ಮೈಸೂರು ವಿಶ್ವವಿದ್ಯಾನಿಲಯದ ವಿಶ್ರಾಂತ ಪ್ರಾಧ್ಯಾಪಕರಾದ ಪ್ರೊಫೆಸರ್ ಪ್ರಕಾಶ್ ಎಚ್. ಎಸ್. ದಿಕ್ಸೂಚಿ ಭಾಷಣವನ್ನು ನೆರವೇರಿಸಿದರು.

       ಸಂಶೋಧನೆಯ ರೂಪರೇಷೆಗಳು ಇತ್ತೀಚಿನ ದಿನಗಳಲ್ಲಿ ಬದಲಾಗುತ್ತಿರುವುದನ್ನು ಗಮನಿಸಿ ವಿಶ್ವವಿದ್ಯಾನಿಲಯಗಳು ಅಂತರ ಶಾಸ್ತ್ರೀಯ ವಿಷಯಗಳಲ್ಲಿ ಸಂಶೋಧನೆಗೆ ಮತ್ತು ಕಲಿಕೆಗೆ ಅವಕಾಶವನ್ನು ಮಾಡಿಕೊಡಬೇಕು ಮತ್ತು ಸಮುದಾಯದ ಸಮಸ್ಯೆಗಳಿಗೆ ಸ್ಪಂದಿಸಬೇಕೆಂದು ತಿಳಿಸಿದರು. ವಿದ್ಯಾರ್ಥಿಗಳು ಮತ್ತು ಸಂಶೋಧನಾರ್ಥಿಗಳು ಸ್ವಯಂ ಪ್ರೇರಣೆಯಿಂದ ಸಂಶೋಧನೆ ನಡೆಸಿ ವಿಶ್ವವಿದ್ಯಾನಿಲಯಕ್ಕೆ ಮತ್ತು ದೇಶಕ್ಕೆ ಉತ್ತಮ ಹೆಸರು ಗಳಿಸಿಕೊಡಬೇಕೆಂದು ತಿಳಿಸಿದರು.

      ಇದೇ ಸಂದರ್ಭದಲ್ಲಿ ತುಮಕೂರು ವಿಶ್ವವಿದ್ಯಾನಿಲಯದ ಇನ್ಕ್ಯುಬೇಷನ್ ಸೆಂಟರ್ ಯೋಜನೆಯ ಅಡಿಯಲ್ಲಿ ಲಿವಿಂಗ್ ಅರ್ಥ್ ಬೈಯೋಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ಎಂಬ ಸ್ಟಾರ್ಟ್‍ಅಪ್ ಕಂಪನಿಯನ್ನು ಉದ್ಘಾಟಿಸಲಾಯಿತು.ತುಮಕೂರು ವಿಶ್ವವಿದ್ಯಾನಿಲಯದ ಕುಲಪತಿ  ವೈ. ಎಸ್. ಸಿದ್ದೇಗೌಡ ಮಾತನಾಡಿ, ಹಿರಿಯ ವಿಜ್ಞಾನಿಗಳಾದ ಪ್ರಕಾಶ್ ವಿ. ಮತ್ತು ಪ್ರಕಾಶ್ ಎಚ್. ಎಸ್. ಇವರನ್ನು ಮಾದರಿಯನ್ನಾಗಿಟ್ಟುಕೊಂಡು ಅತಿ ಹೆಚ್ಚು ಸಂಶೋಧನೆಯಲ್ಲಿ ಯುವಜನತೆಯು ತೊಡಗಿಸಿಕೊಳ್ಳಬೇಕೆಂದು ತಿಳಿಸಿದರು.

      ಮುಂದಿನ ದಿನಗಳಲ್ಲಿ ವಿಶ್ವವಿದ್ಯಾನಿಲಯವು ಆಧುನಿಕ ಸಂಶೋಧನೆಯನ್ನು ಮಾಡಲು ಅಗತ್ಯವಿರುವ ಸೌಕರ್ಯಗಳನ್ನು ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಸಂಶೋಧನಾ ಕಾರ್ಯಾಗಾರದಲ್ಲಿ ದೇಶದ ಹಲವು ವಿಶ್ವವಿದ್ಯಾನಿಲಯಗಳ ಸಂಶೋಧನಾ ವಿದ್ಯಾರ್ಥಿಗಳು ಭಾಗವಹಿಸಿದ್ದರು ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಂಶೋಧನೆಯನ್ನು ನಡೆಸಿರುವ ಪ್ರಾಧ್ಯಾಪಕರುಗಳು ತಮ್ಮ ಸಂಶೋಧನೆಯನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರು. ಈ ಸಂದರ್ಭದಲ್ಲಿ ಜೈವಿಕ ತಂತ್ರಜ್ಞಾನ ವಿಭಾಗದ ಸಂಯೋಜಕರಾದ ಡಾ. ಶರತ್‍ಚಂದ್ರ ಆರ್. ಜಿ. ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

 

Recent Articles

spot_img

Related Stories

Share via
Copy link