ಶಿರಾ:
ಎಲ್ಲೆಡೆ ಜಲಕ್ಷಾಮಗಳು ಉಂಟಾಗುತ್ತಿರುವ ಸೂಚನೆಗಳಿದ್ದು ಜೀವಜಲ ಸಂರಕ್ಷಿಸಿಕೊಳ್ಳಬೇಕಾದ ಅನಿವಾರ್ಯತೆ ಬಂದೊದಗಿದೆ ಎಂದು ಪರಿಸರ ಚಿಂತಕ ಸಿ. ಯತಿರಾಜು ಅಭಿಪ್ರಾಯಪಟ್ಟರು.
ಅವರು ಜಿಲ್ಲಾ ಸರ್ವೋದಯ ಮಂಡಲ ಹಾಗೂ ಮಹಾತ್ಮಗಾಂಧಿ ಚಿಂತನ ಪ್ರತಿಷ್ಠಾನದ ಆಶ್ರಯದಲ್ಲಿ ಶಿರಾ ತಾಲೂಕು ಹುಯಿಲ್ದೊರೆ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಗ್ರಾಮವಾಸ್ತವ್ಯ ಕಾರ್ಯಕ್ರಮದಲ್ಲಿ ಗ್ರಾಮಸಭೆ.ಕೇವಲ 40 ವರ್ಷಗಳ ಹಿಂದೆ ಶಿರಾ ಭಾಗದ ಬಹಳಷ್ಟು ಕಡೆ ಜೀವಜಲ ಉಕ್ಕಿ ಹರಿಯುತ್ತಿತ್ತು. ಆದರೆ ಈಗ ನೀರಿಗಾಗಿ ಹಾಹಾಕಾರ ಶುರುವಾಗಿದೆ. ಒಂದು ತಲೆಮಾರಿನ ಅವಧಿಯಲ್ಲಿ ಇಷ್ಟೊಂದು ಬದಲಾವಣೆಯಾಗಿರುವುದು ಆತಂಕಕಾರಿ ವಿಷಯ ಎಂದರು.ಯಥೇಚ್ಛವಾಗಿ ಕೊಳವೆಬಾವಿಗಳನ್ನು ಕೊರೆದ ಪರಿಣಾಮ ನೀರಿನ ಭೀಕರತೆಯನ್ನು ಈಗ ಎದುರಿಸುತ್ತಿದ್ದು ಇನ್ನಾದರೂ ಎಚ್ಚೆತ್ತುಕೊಳ್ಳದಿದ್ದರೆ ಮುಂದಿನ ಪೀಳಿಗೆಗೆ ಕುಡಿಯುವ ನೀರು ಸಿಗುವುದು ಕಷ್ಟ ಸಾಧ್ಯ ಎಂದರು.
ಸರ್ವೋದಯ ಕಾರ್ಯಕರ್ತ ಆರ್.ವಿ. ಪುಟ್ಟಕಾಮಣ್ಣ ಪ್ರಾಸ್ತಾವಿಕವಾಗಿ ಮಾತನಾಡಿ ಪ್ರಜಾಪ್ರಭುತ್ವದಲ್ಲಿ ದೊರಕಬಹುದಾದ ಎಲ್ಲ ಸೌಲಭ್ಯಗಳು ಸಮಾಜದ ಕಟ್ಟಕಡೆಯ ವ್ಯಕ್ತಿಗೆ ತಲುಪಬೇಕು. ಆ ನಿಟ್ಟಿನಲ್ಲಿ ಸರ್ವೋದಯ ಮಂಡಲ ಕಾರ್ಯಪ್ರವೃತ್ತವಾಗಿದೆ ಎಂದರು.
ಜಿಲ್ಲೆಯ ಎಲ್ಲಾ ಗ್ರಾಮಗಳಲ್ಲೂ ಸಂಚರಿಸಿ ಗ್ರಾಮಸ್ಥರ ಸಹಭಾಗಿತ್ವದಲ್ಲಿ ಕಾರ್ಯಕ್ರಮ ಅನುಷ್ಠಾನ ಮಾಡುವ ಕಾರ್ಯಕ್ಕೆ ಚಾಲನೆ ನೀಡಲಿದ್ದೇವೆ ಎಂದರು. ಮುಖ್ಯವಾಗಿ ಜನರಿಗೆ ಅರಿವು ಮೂಡಿಸುವ ಕೆಲಸವನ್ನು ಮಾಡುವುದಾಗಿ ತಿಳಿಸಿದರು.
ನಿವೃತ್ತ ಉಪವಿಭಾಗಾಧಿಕಾರಿ ಭಕ್ತರಾಮೇಗೌಡ ಮಾತನಾಡಿ ನೀರಿನ ಸೆಲೆಯನ್ನು ಜೋಪಾನ ಮಾಡಿಕೊಳ್ಳಬೇಕು. ಲಭ್ಯ ನೀರನ್ನು ಮಿತವಾಗಿ ಬಳಸಿ ಜೀವ ಜಲ ಸಂರಕ್ಷಿಸಬೇಕು ಎಂದರು. ಗಿಡ ಮರಗಳನ್ನು ಬೆಳೆಸುವುದರ ಮೂಲಕ ವಾತಾವರಣದ ಉಷ್ಣತೆಯನ್ನು ಕಡಿಮೆ ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ಗ್ರಾಮಸ್ಥರ ಸಹಕಾರ ಅತ್ಯಗತ್ಯ ಎಂದರು.
ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕತ ರಂಗಕರ್ಮಿ ಉಗಮ ಶ್ರೀನಿವಾಸ ಮಾತನಾಡಿ ಗಣಿಗಾರಿಕೆಯಿಂದ ಅರಣ್ಯ ನಾಶವಾಗುತ್ತಿದ್ದು ನದಿ ಮೂಲಗಳೇ ಬತ್ತಿ ಹೋಗುತ್ತಿವೆ. ತುಂಗಾ ಮತ್ತು ಭದ್ರಾ ನದಿಗಳು ಸಂಗಮವೇ ಆಗುತ್ತಿಲ್ಲ. ಇಂತಹ ಸಂದರ್ಭದಲ್ಲಿ ಜೀವಜಲ ಜೋಪಾನ ಮಾಡಬೇಕು ಹಾಗೂ ನಿಸರ್ಗವನ್ನು ಕಾಪಾಡಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ತಾಲೂಕು ಸರ್ವೋದಯ ಮಂಡಲದ ಅಧ್ಯಕ್ಷ ಲೋಕೇಶ ಅಗ್ರಹಾರ ಮಾತನಾಡಿ ಗ್ರಾಮವಾಸ್ತವ್ಯದ ಕಾರ್ಯಕ್ರಮವನ್ನು ಶ್ಲಾಘಿಸಿದರು. ಕಾರ್ಯಕ್ರಮದಲ್ಲಿ ನೀರಾವರಿ ಹೋರಾಟಗಾರ ರಘುರಾವ್, ಕರ್ನಾಟಕ ನಾಟಕ ಅಕಾಡೆಮಿ ಮಾಜಿ ಸದಸ್ಯ ಎಲ್,ಹೆಚ್. ರಂಗನಾಥಪ್ಪ,ನೇರಲಗುಡ್ಡ ಶಿವಕುಮಾರ್, ಕಾಮೇಗೌಡ, ಶಿವಣ್ಣ, ಹರೀಶ್, ಪುಟ್ಟಯ್ಯ ಹಾಗೂ ಹುಯಿಲ್ದೊರೆ ಗ್ರಾಮಸ್ಥರು ಉಪಸ್ಥಿತರಿದ್ದರು.