ದಾವಣಗೆರೆ
ನಮ್ಮ ಮುಂದಿನ ಪೀಳಿಗೆಗೆ ಆರೋಗ್ಯಕರ ಪರಿಸರ ನೀಡುವ ನಿಟ್ಟಿನಲ್ಲಿ ಜಲ ಸಂರಕ್ಷಣೆಗಾಗಿ ಪ್ರತಿಯೊಬ್ಬರೂ ಸಂಕಲ್ಪ ಮಾಡಬೇಕೆಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹೆಚ್.ಬಸವರಾಜೇಂದ್ರ ಕರೆ ನೀಡಿದರು.ನಗರದ ಜಿಲ್ಲಾ ಪಂಚಾಯತ್ ಆವರಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ವಿಶ್ವ ಜಲ ದಿನಾಚರಣೆಯ ಹಿನ್ನೆಲೆಯಲ್ಲಿ ಸಸಿ ನೆಟ್ಟು, ಜಲಾಮೃತದ ಪ್ರತಿಜ್ಞಾವಿಧಿ ಸ್ವೀಕರಿಸಿ ಮಾತನಾಡಿದ ಅವರು, ಆಧುನಿಕತೆ ಬೆಳೆದಂತೆ, ಸಾವಿರಾರು ವರ್ಷಗಳಿಂದ ಆಗದಷ್ಟು ಪರಿಸರ ನಾಶವು ಕಳೆದ ನೂರು ವರ್ಷಗಳಲ್ಲೇ ಆಗಿದೆ.
ನಮ್ಮ ಪೂರ್ವಜರು ನಮಗೆ ಒಳ್ಳೆಯ ಪರಿಸರ ಬಿಟ್ಟು ಹೋಗಿರುವ ಕಾರಣ ನಾವು ಇಂದು ಆರೋಗ್ಯಕರವಾಗಿ ಬದುಕಲು ಸಾಧ್ಯವಾಗಿದೆ. ಇದೇ ರೀತಿ ನಾವೂ ಸಹ ಮುಂದಿನ ಪೀಳಿಗೆಗೆ ಉತ್ತಮ ಪರಿಸರವನ್ನು ನೀಡಬೇಕಾಗಿದೆ. ಈ ನಿಟ್ಟಿನಲ್ಲಿ ಫಲವತ್ತಾದ ಭೂಮಿ, ಶುದ್ಧ ನೀರು, ನೈಸರ್ಗಿಕ ಸಂಪನ್ಮೂಲಗಳನ್ನು ರಕ್ಷಿಸಲು ಸಂಕಲ್ಪ ಮಾಡಬೇಕೆಂದು ಕಿವಿಮಾತು ಹೇಳಿದರು.
ನೀರಿನ ಅಗತ್ಯತೆಯ ಬಗ್ಗೆ ಅರಿವಿದ್ದರೂ ಸಹ ನಗರ ಪ್ರದೇಶಗಳಲ್ಲಿ ಜನರು ಹೆಚ್ಚಿನ ಪ್ರಮಾಣದಲ್ಲಿ ನೀರು ವ್ಯರ್ಥ ಮಾಡುತ್ತಿದ್ದಾರೆ. ಕೆಲವು ಗ್ರಾಮೀಣ ಪ್ರದೇಶಗಳಲ್ಲಿ ಕೂಡ ಜನರು ನೀರನ್ನು ಮಿತವಾಗಿ ಬಳಸುತ್ತಿಲ್ಲ. ಇಂದು ನಾವು ಉಳಿಸುವ ಸ್ವಲ್ಪ ನೀರು ಮತ್ತು ನಾವು ನೆಡುವ ಸಸಿಗಳಿಂದ ಭವಿಷ್ಯತ್ತಿನಲ್ಲಿ ಹೆಚ್ಚಿನ ಪ್ರಯೋಜನಗಳನ್ನು ನಮ್ಮ ಮುಂಬರುವ ಪೀಳಿಗೆ ಪಡೆದುಕೊಳ್ಳಬಹುದಾಗಿದೆ. ಹೀಗಾಗಿ ಎಲ್ಲರೂ ತಮ್ಮ ಮನೆಗಳಲ್ಲಿ ನೀರನ್ನು ಮಿತವಾಗಿ ಬಳಸಬೇಕು. ಸಾಧ್ಯವಾದಷ್ಟು ಗಿಡ-ಮರ ಬೆಳೆಸಬೇಕು ಎಂದರು.
ಕರ್ನಾಟಕ ಸರ್ಕಾರವು 2019ನೇ ವರ್ಷವನ್ನು ಜಲವರ್ಷವೆಂದು ಘೋಷಿಸಿದ್ದು, ಇದರ ಆಚರಣೆಗಾಗಿ ಇಂದು ರಾಜ್ಯಾದ್ಯಂತ ವಿವಿಧ ಚಟುವಟಿಕೆ, ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗುತ್ತಿದೆ. ಇದರ ಭಾಗವಾಗಿ ಸಮುದಾಯ ಹಾಗೂ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ವಿಶ್ವ ಜಲ ದಿನಾಚರಣೆಯನ್ನು ಆಚರಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಆಲಾಮೃತ ಕಾರ್ಯಕ್ರಮದಡಿಯಲ್ಲಿ ನೀರನ್ನು ಮಿತವಾಗಿ ಬಳಸಿ- ನಾಳೆಗೂ ಉಳಿಸಿ, ನೀರು ಅಮೃತ, ನೀರಿನ ಜವಾಬ್ದಾರಿ ನನ್ನದು, ಸರ್ವರಿಗೂ ಜಲ ಸದಾಕಾಲ ಎಂಬ ಘೋಷವಾಕ್ಯಗಳ ಮೂಲಕ ಜನರಿಗೆ ನೀರಿನ ಬಳಕೆ ಮತ್ತು ಪ್ರಾಮುಖ್ಯತೆ, ಮುಂದಿನ ಪೀಳಿಗೆಗೆ ನೀರನ್ನು ಉಳಿಸಬೇಕು ಎಂಬ ಮಾಹಿತಿ ನೀಡಲಾಗುತ್ತಿದೆ. ಇದು ಒಂದು ದಿನಕ್ಕೆ ಮಾತ್ರ ಸೀಮಿತವಾಗದೆ, ನಿರಂತರವಾಗಿ ಮುಂದುವರೆಯಲಿ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಭೀಮಾ ನಾಯ್ಕ, ಮುಖ್ಯ ಲೆಕ್ಕಾಧಿಕಾರಿ ಟಿ.ಆಂಜನೇಯ, ಪ್ರಥಮ ದರ್ಜೆ ಸಹಾಯಕ ನೌಕರರಾದ ಮಹಾಲಕ್ಷ್ಮೀ, ಮಂಗಳಮ್ಮ, ಡಿ-ಗ್ರೂಪ್ ನೌಕರರಾದ ಬಸವರಾಜಪ್ಪ ಸೇರಿದಂತೆ ಅಧಿಕಾರಿಗಳು, ಸಿಬ್ಬಂದಿ ವರ್ಗದವರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
