ದಾವಣಗೆರೆ
ಜನಪದ ಸಂಸ್ಕೃತಿ ಉಳಿಯದಿದ್ದರೆ, ಬದುಕು ಮೂರಾಬಟ್ಟೆಯಾಗಿ ಹರಿದು ಹಂಚಿಹೋಗಲಿದೆ ಎಂದು ಜಾನಪದ ತಜ್ಞ ಡಾ.ಎಂ.ಜಿ. ಈಶ್ವರಪ್ಪ ಸೂಚ್ಯವಾಗಿ ಎಚ್ಚರಿಸಿದರು.ನಗರದ ಆರ್.ಎಲ್ ಲಾ ಕಾಲೇಜಿನಲ್ಲಿ ಶುಕ್ರವಾರ ಕನ್ನಡ ಜಾನಪದ ಪರಿಷತ್ತು ಜಿಲ್ಲಾ ಹಾಗೂ ತಾಲ್ಲೂಕು ಘಟಕ, ಅದಮ್ಯ ಕಲಾ ಸಂಸ್ಥೆ ಹಾಗೂ ಆರ್.ಎಲ್. ಕಾನೂನು ಕಾಲೇಜು ಇವುಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ವಿಶ್ವ ಜಾನಪದ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಇಂದಿಗೂ ಕಥೆ ಹೇಳುವ ಅಜ್ಜ-ಅಜ್ಜಿಯರಿದ್ದಾರೆ. ಆದರೆ, ಆಧುನಿಕತೆಯ ರೂಪದಲ್ಲಿ ನಮ್ಮ ಮನೆಗಳಿಗೆ ದಾಂಗುಡಿ ಇಟ್ಟಿರುವ ಮೊಬೈಲ್, ಟಿವಿಗಳು ಕೇಳಲು ಬಿಡುತ್ತಿಲ್ಲ. ಆಧುನಿಕ ಸಾಮಾಗ್ರಿಗಳು ಇಂದು ಪ್ರತಿಯೊಂದು ಮನೆಗಳಲ್ಲೂ ದಾಳಿ ಇಟ್ಟಿದ್ದು, ನಮ್ಮನ್ನು ಜಾನಪದ ಬದುಕಿನಿಂದ ದೂರ ಸರಿಸುತ್ತಿವೆ. ನಾವು ಆಧುನಿಕತೆಗೆ ಮಾರುಹೋಗಿ, ಜನಪದ ಸಂಸ್ಕೃತಿಯನ್ನು ಕಳೆದುಕೊಂಡರೆ ನಮ್ಮ ಬದುಕು ಮೂರಾಬಟ್ಟೆಯಾಗಿ ಹರಿದು ಹಂಚಿ ಹೋಗಲಿದೆ. ಆದ್ದರಿಂದ ಜನಪದವನ್ನು ಉಳಿಸುವುದು ಪ್ರತಿಯೊಬ್ಬ ಭಾರತೀಯನ ಆದ್ಯ ಕರ್ತವ್ಯವಾಗಿದೆ ಎಂದು ಕಿವಿಮಾತು ಹೇಳಿದರು.
ಯಾವಾಗ ನಾವು ಗ್ರಾಮೀಣ ಬದುಕಿನಿಂದ ದೂರ ಸರಿಯುತ್ತೇವೆಯೋ, ಅಂದಿನಿಂದಲೇ ಜನಪದ ಸಂಸ್ಕತಿಯನ್ನು ಕಳೆದುಕೊಂಡಂತಾಗಲಿದೆ.ನಮ್ಮ ಹಿರಿಯರು ಓದಿರಲಿಲ್ಲ, ಅಕ್ಷರ ಬರೆಯಲು ಬರುತ್ತಿರಲಿಲ್ಲ, ವೇದ, ಉಪನಿಷತ್ತುಗಳು ಗೊತ್ತಿರಲಿಲ್ಲ, ಆದರೂ ನಮಗೆ ಆಚಾರ-ವಿಚಾರಗಳನ್ನು ಕಲಿಸಿ ಹೋಗಿದ್ದಾರೆ ಎಂದರು.
ಜಾನಪದ ಬದಕು ಉಳಿಯಬೇಕಾದರೆ ನಾವೆಲ್ಲರೂ ಜೊತೆಯಾಗಿ ಬದುಕಬೇಕಿದೆ. ಏಕೆಂದರೆ, ಒಬ್ಬರಿಗಿಂತ ಇನ್ನೊಬ್ಬ ರಿರುವುದು ಲೇಸು. ಅಲ್ಲಿ ಪ್ರೀತಿ, ವಿಶ್ವಾಸ ಕಾಮ, ಕ್ರೋಧಗಳು ಇರುವುದು ಗೊತ್ತಾಗುತ್ತದೆ. ಸಮೂಹದಲ್ಲಿ ಬದುಕಿದರೆ ಜನಪದ ಸಂಸ್ಕøತಿ ಉಳಿಯುತ್ತದೆ ಎನ್ನುವುದನ್ನು ಪ್ರತಿಯೊಬ್ಬರೂ ಮನಗಾಣಬೇಕು. ಇಲ್ಲದಿದ್ದರೆ, ಸಂಸ್ಕೃತಿ ಅಧಃಪತನದತ್ತ ಸಾಗಲಿದೆ ಎಂದು ಹೇಳಿದರು.
ಸಮಾಜದ ನೈತಿಕತೆಯನ್ನು ಕಾಪಾಡುವರು ವಕೀಲರು ಮತ್ತು ನ್ಯಾಯಾಧೀಶರು. ನೈತಿಕತೆಯನ್ನು ಕಾಪಾಡುವ ಸಂದರ್ಭದಲ್ಲಿ ಜಾನಪದ ಸೊಗಡು ಹೇಗೆ ಪ್ರಭಾವ ಬೀರಿದೆ ಅನ್ನುವುದು ಮುಖ್ಯವಾಗಲಿದೆ. ನಾವುಗಳು ಬದುಕನ್ನು ರೂಪಿಸಿಕೊಂಡಿದ್ದರೆ ಅದು ನಮ್ಮ ಅಪ್ಪ, ಅಮ್ಮ ಮತ್ತು ಅವರ ಅಪ್ಪ, ಅಮ್ಮ ಅವರಿಂದ ಬಂದ ನೈತಿಕತೆಯಿಂದ ಅಂದರೆ ತಪ್ಪಾಗಲಾರದು ಎಂದರು.
ಇಂದು ಮನುಷ್ಯನಿಗೆ ಬದುಕಿನ ಜ್ಞಾನ ಬೇಕಾಗಿದೆ. ಆ ಜ್ಞಾನ ಶಾಲಾ-ಕಾಲೇಜು, ಶಿಕ್ಷಣ ಸಂಸ್ಥೆಗಳು, ಬುದ್ದಿಜೀವಿಗಳು, ವಿಜ್ಞಾನಿಗಳಿಂದ ಸಿಗಬೇಕಿದೆ. ಇಂಥ ಜ್ಞಾನವನ್ನು ನೀಡುವುದೇ ಜಾನಪದ. ಈ ಜ್ಞಾನದಿಂದ ನಮ್ಮಲ್ಲಿ ಮನೆ ಮಾಡಿರುವ ಅಂಧಃಕಾರ ತೊಲಗಿ ದೈಹಿಕ ವಿಕಾಸಕ್ಕೆ ಬೆಲೆ ಬರುತ್ತದೆ. ಅನಕ್ಷರಸ್ಥರು ಅನ್ನುವರು ದಡ್ಡರು ಎಂಬ ಭಾವನೆ ಇದೆ. ಅದು ಖಂಡಿತ ತಪ್ಪು, ಅವರ ಅನುಭವ, ಚಿಂತನೆಗಳು ಬುದ್ದಿವಂತರಿಗಿಂತ ಹೆಚ್ಚಾಗಿರುತ್ತವೆ ಎಂದರು.
ಜಾನಪದ ವಿದ್ವಾಂಸ ಬಸವರಾಜ ನೆಲ್ಲಿಸರ ಕಾರ್ಯಕ್ರಮ ಉದ್ಘಾಟಿಸಿದರು. ಪರಿಷತ್‍ನ ರಾಜ್ಯ ಘಟಕದ ಅಧ್ಯಕ್ಷ ಡಾ.ಎಸ್.ಬಾಲಾಜಿ ಅಧ್ಯಕ್ಷತೆ ವಹಿಸಿದ್ದರು. ಪ್ರಾಂಶುಪಾಲ ಪ್ರೊ. ಬಿ.ಎಸ್. ರೆಡ್ಡಿ, ಪರಿಷತ್‍ನ ಶ್ರೀಕಾಂತ್ ಬಗರೆ, ಕು.ಪೃಥ್ವಿ ಮತ್ತಿತರರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ