ಜನರ ಕೆಲಸ ಮಾಡುವವರನ್ನು ಗೆಲ್ಲಿಸಿ : ಡಾ.ಜಯಮಾಲ

0
11

ಉಡುಪಿ

       ಕ್ಷೇತ್ರದ ಜನರ ನಡುವೆ ಇದ್ದು ಜನತೆಯ ಕೆಲಸ, ಊರಿನ ಅಭಿವೃದ್ಧಿಯ ಕೆಲಸ ಮಾಡುವಂತಹ ಸಂಸದರನ್ನು ಆಯ್ಕೆ ಮಾಡಬೇಕಾಗಿದೆ . ಈ ನಿಟ್ಟಿನಲ್ಲಿ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ ಕಾಂಗ್ರೆಸ್ – ಜೆಡಿಎಸ್ ಮೈತ್ರಿ ಕೂಟದ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಅವರನ್ನು ಗೆಲ್ಲಿಸಬೇಕಾಗಿದೆ ಎಂದು ರಾಜ್ಯ ಮಹಿಳಾ ಮತ್ತು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಡಾ.ಜಯಮಾಲ ಅವರು ಹೇಳಿದರು.

      ಅವರು ಉಡುಪಿಯ ಹಾವಂಜೆ ಕೊಳಲಗಿರಿಯಲ್ಲಿ ನಿನ್ನೆ ಸಂಜೆ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು. ಪ್ರಮೋದ್ ಮಧ್ವರಾಜ್ ಅವರು ಶಾಸಕರಾಗಿದ್ದ ಹಾಗೂ ಸಚಿವರಾಗಿದ್ದ ಅವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಪ್ರಮೋದ್ ಅವರು ಜನತೆಯ ಆಶೋತ್ತರಗಳಿಗೆ ಸದಾ ಸ್ಪಂದಿಸುವ ನಾಯಕರಾಗಿದ್ದಾರೆ , ಅವರಿಗೆ ಅಭಿವೃದ್ಧಿಯ ದೃಷ್ಟಿ ಕೋನವಿದೆ , ಅವರು ಸಂಸತ್ತಿನಲ್ಲಿ ನಮ್ಮ ಪ್ರತಿನಿಧಿಯಾಗಲು ಅತ್ಯಂತ ಸೂಕ್ತ ಅಭ್ಯರ್ಥಿ ಎಂದು ಡಾ.ಜಯಮಾಲ ಅವರು ಹೇಳಿದರು.

      ಬಿಜೆಪಿಯವರು ಕ್ಷೇತ್ರದ ಅಭ್ಯರ್ಥಿಯ ಪರವಾಗಿ ಮತ ಕೇಳುತ್ತಿಲ್ಲ , ಮೋದಿಯನ್ನು ತೋರಿಸಿ ಮತ ಕೇಳುತ್ತಿದ್ದಾರೆ, ಅವರ ಅಭ್ಯರ್ಥಿ ಜನತೆಯ ಕೆಲಸ ಮಾಡಿದ್ದರೆ, ಅಥವಾ ಜನತೆಯ ಆಶೋತ್ತರಗಳಿಗೆ ಸ್ಪಂದಿಸುತ್ತಿದ್ದರೆ ಅವರಿಗೆ ಈ ಪರಿಸ್ಥಿತಿ ಎದುರಾಗುತ್ತಿತ್ತೆ ಎಂದು ಡಾ.ಜಯಮಾಲ ಪ್ರಶ್ನಿಸಿದ್ದಾರೆ. ಬಿಜೆಪಿಯವರು ಕೇವಲ ಸುಳ್ಳಿನ ಸರಮಾಲೆಯ ಮೂಲಕ ಜನತೆಯ ಹಾದಿ ತಪ್ಪಿಸುತ್ತಿದ್ದಾರೆ ಎಂದು ಸಚಿವೆ ಡಾ.ಜಯಮಾಲ ಟೀಕಿಸಿದರು.

      ಕೇಂದ್ರ ಸರಕಾರ ಉಡುಪಿ ಚಿಕ್ಕಮಗಳೂರು ಕ್ಷೇತ್ರಕ್ಕೆ ಯಾವ ಯೋಜನೆಯನ್ನು ತಂದಿದೆ ಎಂಬುದನ್ನು ಬಿಜೆಪಿ ಅಭ್ಯರ್ಥಿ ತಿಳಿಸಲಿ, ಎಷ್ಟು ಯುವ ಜನರಿಗೆ ಉದ್ಯೋಗ ನೀಡಿದ್ದಾರೆ ಎಂದು ಹೇಳಲಿ, ಯಾವ ಜನೋಪಯೋಗ ಯೋಜನೆಯನ್ನು ಜಾರಿ ಮಾಡಿದ್ದಾರೆ ಎಂದು ತಿಳಿಸಲಿ ಎಂದು ಸಚಿವೆ ಆಹ್ರಹಿಸಿದರು.

      ಈ ಬಾರಿ ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಜನತೆ ಬದಲಾವಣೆಯನ್ನು ಬಯಸಿದ್ದಾರೆ. ಈ ಹಿನ್ನೆಲೆಯಲ್ಲಿ ಮೈತ್ರಿ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಗೆಲುವು ಖಚಿತ ಎಂದು ಸಚಿವೆ ಡಾ.ಜಯಮಾಲ ಅವರು ವಿಶ್ವಾಸ ವ್ಯಕ್ತಪಡಿಸಿದರು.

       ಸಭೆಯಲ್ಲಿ ಜಿಲ್ಲಾ ಕಾಂಗ್ರೆಸ್ ನಿಕಟಪೂರ್ವ ಅಧ್ಯಕ್ಷ ಜನಾರ್ಧನ ತೋನ್ಸೆ, , ಮುಖಂಡರಾದ ರಮೇಶ್ ಶೆಟ್ಟಿ, ನಾಗರಾಜ ಹೆಗ್ಡೆ ಮೊದಲಾದವರು ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

LEAVE A REPLY

Please enter your comment!
Please enter your name here