ಲೋಕ ಅಭ್ಯರ್ಥಿಗಳಿಗೆ ಹುಳಿಯಾರು ಜನರ ಪ್ರಣಾಳಿಕೆ

ಹುಳಿಯಾರು:

         ಲೋಕಸಭಾ ಚುನಾವಣೆಯ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದ್ದು ಹಳ್ಳಿಹಳ್ಳಿಗಳಲ್ಲೂ ಪಕ್ಷಗಳ, ಅಭ್ಯರ್ಥಿಗಳ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ರಾಜಕೀಯ ಪಕ್ಷಗಳ ಚುನಾವಣಾ ಪ್ರಣಾಳಿಯ ಬಗ್ಗೆಯೂ ಟೀಕೆಟಿಪ್ಪಣಿಗಳು ಸಹಜವಾಗಿದೆ. ಈ ಬಗ್ಗೆ ಹುಳಿಯಾರಿನ ವಿವಿಧ ಸಂಘಸಂಸ್ಥೆಗಳ ಪ್ರತಿನಿಧಿಗಳನ್ನು ಪತ್ರಿಕೆ ಪ್ರಶ್ನಿಸಿದಾಗ ನಮಗೆ ನಮ್ಮೂರು ಅಭಿವೃದ್ಧಿಯೇ ಮುಖ್ಯ. ನಮ್ಮ ಪ್ರಣಾಳಿಕೆಗೆ ಒತ್ತು ಕೊಟ್ಟು ಕೆಲಸ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

          ಬಹುಮುಖ್ಯವಾಗಿ ಹುಳಿಯಾರು ಹೋಬಳಿಯ ಬೋರನಕಣಿವೆ ಜಲಾಶಯಕ್ಕೆ ನದಿ ನೀರು ಹರಿಸುವ ಬಗ್ಗೆ, ಹುಳಿಯಾರನ್ನು ತಾಲೂಕು ಮಾಡುವ ಬಗ್ಗೆ, ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೇರಿಸುವ ಬಗ್ಗೆ ಹಾಗೂ ಈ ಭಾಗದಲ್ಲಿ ಉದ್ಯೋಗವಕಾಶ ಕಲ್ಪಿಸುವ ಬಗ್ಗೆ ಎಲ್ಲರೂ ಒತ್ತಾಯ ಮಾಡಿದರಲ್ಲದೆ ಈ ಬೇಡಿಕೆಗಳಿಗೆ ಸಕರಾತ್ಮಕವಾಗಿ ಸ್ಪಂಧಿಸುವ ಅಭ್ಯರ್ಥಿಗೆ ಮತ ಹಾಕುವುದಾಗಿ ಹೇಳಿಕೊಂಡರು. ಇನ್ನುಳಿದಂತೆ ಕಳದಲ್ಲಿರುವ ಅಭ್ಯರ್ಥಿಗಳಿಗೆ ಮುಖಂಡರ ಹಕ್ಕೊತ್ತಾಯಗಳು ಹೀಗಿದೆ ನೋಡಿ

ಹಣ ಬೇಡ ನದಿ ನೀರು ಕೊಡಿ

        ಪ್ರತಿ ಚುನಾವಣೆಯಲ್ಲೂ ಬೋರನಕಣಿವೆ ಜಲಾಶಯಕ್ಕೆ ಹೇಮೆ, ಭದ್ರೆ ಹರಿಸುವ ಮಾತುಗಳನ್ನಾಡುತ್ತಾರೆ. ಆದರೆ ಇದುವರೆವಿಗೂ ಯಾವ ಕೆರೆ ಕಟ್ಟೆಗೂ ನೀರು ಬಂದಿಲ್ಲ. ಮಳೆಯಿಲ್ಲದೆ ಅಂತರ್ಜಲವೂ ಬರಿದಾಗಿ ತೆಂಗು-ಅಡಿಕೆ ಒಣಗುತ್ತಿವೆ. ಕೆಲ ಹಳ್ಳಿಗಳಲ್ಲಂತೂ ಕುಡಿಯುವ ನೀರೂ ಸಿಗದ ಪರಿಸ್ಥಿತಿ ನಿರ್ಮಾವಾಗಿದೆ. ಹಾಗಾಗಿ ಮತಕ್ಕಾಗಿ ಹಣ ಕೊಡೋದು ಬಿಟ್ಟು ಬೋರನಕಣಿವೆ ಜಲಾಶಯಕ್ಕೆ ನದಿ ನೀರು ಹರಿಸಿ ಪುಣ್ಯ ಕಟ್ಕೊಳ್ಳಿ
ಕೆಂಕೆರೆ ಸತೀಶ್, ಪ್ರಧಾನ ಕಾರ್ಯದರ್ಶಿ, ರಾಜ್ಯ ರೈತ ಸಂಘ, ಹುಳಿಯಾರು

ಹುಳಿಯಾರು ತಾಲೂಕು ಮಾಡಬೇಕು

 

        ತಾಲೂಕು ಆಗಲು ಹುಳಿಯಾರು ಎಲ್ಲಾ ರೀತಿಯ ಅರ್ಹತೆ ಪಡೆದಿದ್ದರೂ ಸಹ ಇದೂ ವರೆವಿಗೂ ತಾಲೂಕು ಮಾಡಿಲ್ಲ. ಬಿಜೆಪಿ, ಜೆಡಿಎಸ್, ಕಾಂಗ್ರೆಸ್ 3 ಪಕ್ಷಗಳ ಸರ್ಕಾರಗಳೂ ಹುಳಿಯಾರನ್ನು ತಾಲೂಕು ಮಾಡುವಲ್ಲಿ ನಿರ್ಲಕ್ಷ್ಯ ವಹಿಸಿದೆ. ಅರ್ಹತೆ ಇಲ್ಲದ ಅನೇಕ ಹಳ್ಳಿಗಳು ಇಂದು ತಾಲೂಕಾಗಿ ಮಾರ್ಪಟ್ಟಿದೆ. ಇದು ಹುಳಿಯಾರಿಗರನ್ನು ಕೆರಳಿಸಿದ್ದು ಚುನಾವಣೆಯೆಂದು ಸುಮ್ಮನಿದ್ದಾರೆ. ಚುನಾವಣೆ ಮುಗಿದ ನಂತರ ಜನಪ್ರತಿನಿಧಿಗಳು ಸ್ಪಂಧಿಸಬೇಕು. ಇಲ್ಲವಾದರೆ ಉಗ್ರ ಹೊರಾಟ ನಿಶ್ಚಿತ
ಎಸ್.ಬಸವರಾಜು, ಅಧ್ಯಕ್ಷರು, ಹಾರ್ಡ್‍ವೇರ್ ವ್ಯಾಪಾರಿಗಳ ಸಂಘ, ಹುಳಿಯಾರು

ನಮ್ಮದು ಮಳೆಯಾಶ್ರಿತ ಪ್ರದೇಶವಾ

ಗಿದ್ದು ಮಳೆ, ಬೆಳೆಯಿಲ್ಲದೆ ಜೀವನ ನಿರ್ವಹಣೆ ಕಷ್ಟಸಾಧ್ಯವಾಗಿದೆ. ಸ್ಥಳೀಯವಾಗಿ ಉದ್ಯೋಗವಕಾಶ ಇಲ್ಲದ ಪರಿಣಾಮ ಅನೇಕ ಹಳ್ಳಿಹಳ್ಳಿಗಳಿಂದ ನೂರಾರು ಮಹಿಳೆಯರು ಉದ್ಯೋಗಕ್ಕಾಗಿ ಗಾರ್ಮೆಂಟ್ಸ್‍ಗಳಿಗೆ ಹೋಗುತ್ತಿದ್ದಾರೆ. ಇತ್ತ ಸಂಸಾರ ಅತ್ತ ಗಾರ್ಮೆಂಟ್ಸ್ ಒತ್ತಡದಲ್ಲಿ ಮಹಿಳೆ ಸಿಲುಕಿ ನಲುಗುತ್ತಿದ್ದಾಳೆ. ಮಹಿಳೆಯರಿಗೆ ನೆರವಾಗುವ ಮನಸ್ಸಿದ್ದರೆ ಗಾರ್ಮೆಂಟ್ಸ್, ಫ್ಯಾಕ್ಟರಿಗಳನ್ನು ಮಾಡಿ ಸ್ಥಳೀಯವಾಗಿ ಉದ್ಯೋಗವಕಾಶ ಕಲ್ಪಿಸಬೇಕು.
ಜಯಲಕ್ಷ್ಮೀ, ಅಧ್ಯಕ್ಷರು, ಸೃಜನಾ ಮಹಿಳಾ ಮಂಡಳಿ, ಹುಳಿಯಾರು

 ಹುಳಿಯಾರು ಪಟ್ಟಣದ ರಸ್ತೆಗಳು ಡಾಂಬರ್ 

ಕಂಡು ಎರಡ್ಮೂರು ದಶಕಗಳೇ ಕಳೆದಿವೆ. ಎಲ್ಲಾ ರಸ್ತೆಗಳೂ ಗುಂಡಿ ಬಿದ್ದಿದೆಯಲ್ಲದೆ ರಸ್ತೆಯಲ್ಲಿನ ಜಲ್ಲಿಗಳು ಮೇಲೆದ್ದು ಓಡಾಡಲು ತೊಂದರೆಯಾಗಿದೆ. ಮಳೆಗಾಲದಲ್ಲಂತೂ ಕೆಸರು ಗದ್ದೆಯಾಗಿ ಪರಿವರ್ತನೆಗೊಳ್ಳುತ್ತದೆ. ಈ ಬಗ್ಗೆ ಜನಪ್ರತಿನಿಧಿಗಳಿಗೆ ಅನೇಕ ಬಾರಿ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಕೇಂದ್ರ ಸರ್ಕಾರದ ವಿಶೇಷ ಯೋಜನೆಯಡಿ ಪಟ್ಟಣದ ಎಲ್ಲಾ ರಸ್ತೆಗಳನ್ನೂ ಡಾಂಬರೀಕರಣ ಮಾಡಬೇಕು
ಅಪ್ಸರ್, ಅಧ್ಯಕ್ಷರು, ಟಿಪ್ಪು ಯುವಕ ಸಂಘ, ಹುಳಿಯರು

ಹುಳಿಯಾರು ಆಸ್ಪತ್ರೆ ಮೇಲ್ದರ್ಜೆಗೆ ಏರಬೇಕು

      ಹುಳಿಯಾರು ಆಸ್ಪತ್ರೆಯು ಹಾಸನ, ಚಿಕ್ಕಮಗಳೂರು, ಚಿತ್ರದುರ್ಗ, ತುಮಕೂರು ಜಿಲ್ಲೆಗಳ ನೂರಾರು ಗಡಿ ಗ್ರಾಮಗಳ ಲಕ್ಷಾಂತರ ಜನರ ಆರೋಗ್ಯ ಸೇವೆಗೆ ಆಸರೆಯಾಗಿದೆ. ಆದರೆ ಇಲ್ಲಿ ಸಿಬ್ಬಂದಿಯ ಕೊರತೆಯ ಜೊತೆಗೆ ಸಮರ್ಪಕ ಔಷಧಿ ಸಹ ಸಿಗದೆ ಖಾಸಗಿ ಆಸ್ಪತ್ರೆಗೆ ಹೋಗುತ್ತಿದ್ದಾರೆ. ಹಾಗಾಗಿ ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವಾಗಿ ಪರಿವರ್ತಿಸಿ 24 ಗಂಟೆ ವೈದ್ಯರೂ ಸೇರಿದಂತೆ ಗುಣಮಟ್ಟದ ಆರೋಗ್ಯ ಸೌಲಭ್ಯ ನೀಡಬೇಕಿದೆ.
ಚನ್ನಕೇಶವ, ಅಧ್ಯಕ್ಷರು, ಕಾಮನಬಿಲ್ಲು ಪೌಂಡೇಷನ್, ಹುಳಿಯಾರು

ಪಟ್ಟಣ ಪಂಚಾಯ್ತಿಗೆ ಅನುಧಾನ ಕೊಡಿ

        ಹುಳಿಯಾರು ಗ್ರಾಮ ಪಂಚಾಯ್ತಿಯನ್ನು ಪಟ್ಟಣ ಪಂಚಾಯ್ತಿಯಾಗಿ ಮೇಲ್ದರ್ಜೆಗೇರಿಸಿ 1 ವರ್ಷಗಳು ಕಳೆದಿದ್ದರೂ ಪೌರಾಡಳಿಯ ಇಲಾಖೆಯಿಂದ ಒಂದು ರೂಪಾಯಿ ಅನುಧಾನ ಬಂದಿಲ್ಲ. ಹಾಗಾಗಿ ಸಮರ್ಪಕವಾಗಿ ನೀರು ಬಿಡಲಾಗುತ್ತಿಲ್ಲ, ಚರಂಡಿ ತ್ಯಾಜ್ಯ ವಿಲೆ ಮಾಡಲಾಗುತ್ತಿಲ್ಲ, ಕಂಬಳಿಗೆ ಬಿದಿದೀಪ ಅಳವಡಿಸಲಾಗುತ್ತಿಲ್ಲ. ಪೌರಕಾರ್ಮಿಕರಿಗೆ ಕಾಲಕಾಲಕ್ಕೆ ಸಂಬಳ ನೀಡಲಾಗುತ್ತಿಲ್ಲ. ತಕ್ಷಣ ಅನುದಾನ ಬಿಡುಗಡೆ ಮಾಡಿಸಿ ಊರಿನ ಅಭಿವೃದ್ಧಿಗೆ ಕೈ ಜೋಡಿಸಬೇಕು.
ಕೋಳಿಶ್ರೀನಿವಾಸ್, ಅಧ್ಯಕ್ಷರು, ಕರವೇ, ಹುಳಿಯಾರು

ರೈಲು ಮಾರ್ಗ ತರಲು ಹೋರಾಡಿ

      2014 ರ ರೈಲ್ವೆ ಬಜೆಟ್‍ನಲ್ಲಿ ಹುಳಿಯಾರು, ಚಿಕ್ಕನಾಯಕನಹಳ್ಳಿ ,ಕೆಬಿಕ್ರಾಸ್, ತುರುವೇಕೆರೆ, ಕದಬಳ್ಳಿ ಮಾರ್ಗವಾಗಿ ಸಂಚರಿಸುವ ಬಳ್ಳಾರಿ -ಮಂಗಳೂರು ನೂತನ ಎಕ್ಸ್‍ಪ್ರೆಸ್ ಟ್ರೈನ್ ಬಿಡುವುದಾಗಿ ಘೋಷಿಸಿದ್ದರು. ಆದರೆ ಇದೂವರೆವಿಗೂ ಇದರ ಬಗ್ಗೆ ಯಾವುದೇ ಪ್ರಗತಿ ಕಂಡ ನಿದರ್ಶನವಿಲ್ಲ. ಹಾಗಾಗಿ ಬರಪೀಡಿತ ಪ್ರದೇಶಗಳು ಪ್ರಗತಿಪಥದಲ್ಲಿ ಸಾಗುವ ನಿಟ್ಟಿನಲ್ಲಿ ನೆನೆಗುದಿಗೆ ಬಿದ್ದಿರುವ ಈ ಯೋಜನೆ ಅನುಷ್ಟಾನಕ್ಕೆ ಹೋರಾಡಬೇಕು.
ಮೋಹನ್ ಕುಮಾರ್ ರೈ, ಅಧ್ಯಕ್ಷರು, ಜಯಕರ್ನಾಟಕ, ಹುಳಿಯಾರು.

ಒಣಗಿರುವ ತೆಂಗಿನ ಮರಗಳಿಗೆ ಪರಿಹಾರ

      ರೋಗ, ಕೀಟಬಾದೆ ಹಾಗೂ ಸತತ ಬರದಿಂದ ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ ಲಕ್ಷಾಂತರ ತೆಂಗಿನ ಮರಗಳು ಒಣಗಿ ಹೋಗಿದೆ. ಪರಿಣಾಮ ತೆಂಗಿನ ಆದಾಯವನ್ನೇ ನೆಚ್ಚಿಕೊಂಡಿದ್ದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಒಣಗಿದ ಮರಗಳಿಗೆ ಪರಿಹಾರ ಕೊಡುವ ಭರವಸೆಗಳನ್ನು ಕೇಳಿದ್ದೇವೆ ನಿನಹ ಪರಿಹಾರ ಸಿಕ್ಕಿಲ್ಲ. ಹಾಗಾಗಿ ಕೇಂದ್ರ ಮತ್ತು ರಾಜ್ಯ ಎರಡೂ ಸರ್ಕಾರಗಳಿಂದ ಒಣಗಿನ ತೆಂಗಿನ ಮರಗಳಿಗೆ ಪರಿಹಾರ ಕೊಡಿಸಬೇಕು.
ಎಂ.ಎಸ್.ಆರ್.ನಟರಾಜ್, ಅಧ್ಯಕ್ಷರು, ವರ್ತಕರ ಸಂಘ, ಹುಳಿಯಾರು

ಸುಸಜ್ಜಿತ ಕ್ರೀಡಾಂಗಣ ನಿರ್ಮಸಿ

    ಹುಳಿಯಾರು ಈಗಾಗಲೇ ತಾಲುಕಿಗೆ ಸರಿಸಮನಾಗಿ ಬೆಳೆದು ನಿಂತಿದೆ. ಈ ಭಾಗದಲ್ಲಿ ಅನೇಕ ಕ್ರೀಡಾ ಪ್ರತಿಭೆಗಳಿದ್ದು ಸುಸಜ್ಜಿತ ಕ್ರೀಡಾಂಗಣ, ತರಬೇತುದಾರರಿಲ್ಲದೆ ಸಾಧನೆ ಮಾಡಲಾಗುತ್ತಿಲ್ಲ. ಶಾಲಾ ಮಟ್ಟದ ಕ್ರೀಡಾಕೂಟದಲ್ಲಂತೂ ವಿಭಾಗೀಯ ಮಟ್ಟದವರೆವಿಗೂ ಗೆಲ್ಲುವ ವಿದ್ಯಾರ್ಥಿಗಳು ರಾಜ್ಯಮಟ್ಟದಲ್ಲಿ ಸೋಲುತ್ತಿದ್ದಾರೆ. ಹಾಗಾಗಿ ಸುಸಜ್ಜಿತ ಕ್ರೀಡಾಂಗಣ ಮತ್ತು ಸ್ವಿಮಿಂಗ್ ಫೂಲ್ ನಿರ್ಮಿಸಿ ಯುವ ಜನತೆಗೆ ಕ್ರೀಡೆಯಲ್ಲಿ ಉತ್ತೇಜನ ನೀಡಬೇಕು.
ಶ್ರೀನಿವಾಸ್, ಅಧ್ಯಕ್ಷರು, ಸ್ಪೋಟ್ರ್ಸ್ ಕ್ಲಬ್, ಹುಳಿಯಾರು.

ವೃತ್ತಿ ಪರ ಕೋರ್ಸ್ ಆರಂಭಿಸಿ

        ಮಳೆಯಿಲ್ಲದೆ ಕೃಷಿ ಚಟುವಟಿಕೆಗಳು ಇಲ್ಲಿ ಸಂಪೂರ್ಣ ಸ್ಥಗಿತಗೊಂಡಿದೆ. ಹಾಗಾಗಿ ಉದ್ಯೋಗಕ್ಕಾಗಿ ಯುವ ಜನತೆ ಪರಿತಪಿಸುತ್ತಿದ್ದಾರೆ. ವೃತ್ತಿ ಶಿಕ್ಷಣ ಇಲ್ಲದ ಇವರಿಗೆ ಗಾರ್ಮೆಂಟ್ಸ್, ಫ್ಯಾಕ್ಟರಿ ಬಿಟ್ಟರೆ ಬೇರೆಲ್ಲೂ ಉದ್ಯೋಗ ಸಿಗದಾಗಿದೆ. ಹಾಗಾಗಿ ಈ ಭಾಗದಲ್ಲಿ ಡಿಪ್ಲಮೋ, ಐಟಿಐ, ಪ್ಯಾರಾ ಮೆಡಿಕಲ್ ಕಾಲೇಜ್‍ಗಳನ್ನು ತೆರೆಯಬೇಕಿದೆ. ಈ ಮೂಲಕ ಯುವ ಜನತೆಗೆ ವಿಫುಲ ಉದ್ಯೋಗವಕಾಶ ಸಿಗುವ ವಾತಾವರಣ ನಿರ್ಮಾಣ ಮಾಡಬೇಕಿದೆ.
ಆರ್.ಸರಸ್ವತಿ, ಎಂಬಿಕೆ, ಬೂಮಿ ಸಂಜೀವಿನಿ ಒಕ್ಕೂಟ, ಹುಳಿಯಾರು

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link