ಜನರ ಋಣ ತೀರಿಸಲು ಮತ್ತೊಮ್ಮೆ ಅವಕಾಶ ನೀಡಿ

ದಾವಣಗೆರೆ:

        ಈ ಕ್ಷೇತ್ರದ ಜನತೆಯ ಋಣ ತೀರಿಸಲು, ನನಗೆ ಇನ್ನೊಮ್ಮೆ ಅವಕಾಶ ನೀಡಬೇಕೆಂದು ಬಿಜೆಪಿ ಅಭ್ಯರ್ಥಿ ಜಿ.ಎಂ.ಸಿದ್ದೇಶ್ವರ್ ಮನವಿ ಮಾಡಿದರು.

       ಹರಿಹರ ತಾಲೂಕಿನ ಸಾಲಕಟ್ಟೆ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಚುನಾವಣೆ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಈ ಕ್ಷೇತ್ರದ ಜನರ ಋಣವನ್ನು ತೀರಿಸುವ ಗುರುತರ ಜವಬ್ದಾರಿ ನಮ್ಮ ಕುಟುಂಬದ ಮೇಲಿದ್ದು, ಮುಂದಿನ ಐದು ವರ್ಷಗಳ ಕಾಲ ಅತ್ಯಂತ ಸಮರ್ಥವಾಗಿ ಆ ಹೊಣೆಗಾರಿಕೆಯನ್ನು ನಿಭಾಯಿಸುತ್ತೇನೆ ವಿಶ್ವಾಸ ನನಗಿದೆ. ಈ ನಿಟ್ಟಿನಲ್ಲಿ ಮತದಾರರು ಚುನಾವಣೆಯಲ್ಲಿ ಅತ್ಯಧಿಕ ಮತಗಳನ್ನು ನೀಡುವ ಮೂಲಕ ನನ್ನನ್ನು ಜಯಶೀಲನನ್ನಾಗಿ ಮಾಡಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಕೈಬಲಪಡಿಸಬೇಕೆಂದು ಮನವಿ ಮಾಡಿದರು.

        ಚುನಾವಣೆಗಳಲ್ಲಿ ಅಭಿವೃದ್ಧಿಯೊಂದೇ ಮಾನದಂಡವಾಗಲಾರದು, ಅಭಿವೃದ್ಧಿಯ ಜೊತೆಗೆ ಜನರೊಂದಿಗಿನ ಒಡನಾಟವೂ ಸಹ ಅತ್ಯಂತ ಪ್ರಮುಖ ಪಾತ್ರ ವಹಿಸಲಿದೆ ಎನ್ನುವುದಕ್ಕೆ ದಾವಣಗೆರೆ ಲೋಕಸಭಾ ಕ್ಷೇತ್ರಕ್ಕೆ 1996ರಿಂದ ನಡೆದಿರುವ ಚುನಾವಣೆಗಳೇ ಸಾಕ್ಷಿಯಾಗಿವೆ. ನಮ್ಮ ತಂದೆ ದಿ|| ಜಿ.ಮಲ್ಲಿಕಾರ್ಜುನಪ್ಪನವರೂ ಕೂಡ ಲೋಕಸಭಾ ಸದಸ್ಯ ಸ್ಥಾನದ ಗೌರವವನ್ನು ಎತ್ತಿ ಹಿಡಿಯುವ ಕೆಲಸ ಮಾಡಿ ಹೋಗಿದ್ದಾರೆ, ಒಬ್ಬ ಲೋಕಸಭಾ ಸದಸ್ಯ ಹೇಗಿರಬೇಕು ಎಂಬುದಕ್ಕೆ ನಮ್ಮ ತಂದೆಯವರು ಸರ್ವಕಾಲಿಕ ಉದಾಹರಣೆಯಾಗಿ ನಿಲ್ಲುತ್ತಾರೆ ಎಂದು ಹೇಳಿದರು.

          ಕ್ಷೇತ್ರದ ಕಟ್ಟ ಕಡೆಯ ಗ್ರಾಮಗಳಿಗೆ ಹೋಗಿ ಜನರ ಸಮಸ್ಯೆಗಳನ್ನು ಆಲಿಸಬಹುದು ಎನ್ನುವುದನ್ನು ತೋರಿಸಿಕೊಟ್ಟವರೇ ನಮ್ಮ ತಂದೆಯವರು, ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಾನು ಕಳೆದ ಹದಿನೈದು ವರ್ಷಗಳಿಂದ ಸಾಗುತ್ತಿದ್ದೇನೆ, ನಾನು ಪ್ರತಿ ಗ್ರಾಮಗಳಿಗೂ ನಾಲ್ಕೈದು ಬಾರಿ ಭೇಟಿ ನೀಡಿರುವುದಕ್ಕೆ ನನ್ನ ತಂದಯವರೇ ಸ್ಪೂರ್ತಿಯಾಗಿದ್ದಾರೆ ಎಂದರು.

         ನನ್ನ ಕ್ಷೇತ್ರ ಪ್ರವಾಸದ ಸಂದರ್ಭದಲ್ಲಿ ಹಲವಾರು ಗ್ರಾಮಗಳಿಗೆ ಭೇಟಿ ನೀಡಿದ ವೇಳೆಯಲ್ಲಿ ನಮ್ಮ ಕಾರ್ಯಕರ್ತರುಗಳ ಮನೆಗಳಿಗೆ ಭೇಟಿ ನೀಡಿದಾಗ ನಮ್ಮ ತಂದೆಯವರ ಫೋಟೋಗಳು ಅವರ ಮನೆಯಲ್ಲಿರುವುದನ್ನು ಗಮನಿಸಿದ್ದೇನೆ. ಈ ವಿಷಯವನ್ನು ಸೂಕ್ಷ್ಮವಾಗಿ ವಿಶ್ಲೇಷಣೆ ಮಾಡಬಹುದಾದರೆ ಕ್ಷೇತ್ರದ ಮತದಾರರು ನಮ್ಮ ತಂದೆಯವರನ್ನು ಕೇವಲ ಒಬ್ಬ ಸಂಸದರನ್ನಾಗಿ ನೋಡಿಲ್ಲ, ನಮ್ಮ ತಂದೆಯವರೊಂದಿಗೆ ಹಾಗೂ ನಮ್ಮ ಕುಟುಂಬದೊಂದಿಗೆ ರಾಜಕೀಯವಾಗಿ ಅಷ್ಟೇ ಅಲ್ಲದೇ ಭಾವನಾತ್ಮಕ ಸಂಬಂಧವನ್ನೂ ಕೂಡ ಹೊಂದಿದ್ದರು ಎಂದರು.

        ಮಾಜಿ ಶಾಸಕ ಬಿ.ಪಿ.ಹರೀಶ್ ಮಾತನಾಡಿ, ಸಂಸದ ಸಿದ್ದೇಶಣ್ಣನವರು ನಮ್ಮ ಗ್ರಾಮಗಳಿಗೆ ಹಲವಾರು ಬಾರಿ ಬಂದಿದ್ದಾರೆ, ಖುದ್ದು ಅವರೇ ಬಂದು ಉಜ್ವಲ ಯೋಜನೆಯಡಿ ಗ್ಯಾಸ್ ವಿತರಣೆ ಮಾಡಿದ್ದಾರೆ. ಕೇಂದ್ರ ಸರ್ಕಾರದ ಯೋಜನೆಗಳು ಅರ್ಹರಿಗೆ ತಲುಪಬೇಕು ಎನ್ನುವುದು ಅವರ ಆಶಯವಾಗಿದೆ. ಇಂತಹ ಜನಪರ ಕಾಳಜಿಯುಳ್ಳ ಸಂಸದರನ್ನು ನಾವು ಈ ಬಾರಿ ಹರಿಹರ ವಿಧಾನಸಭಾ ಕ್ಷೇತ್ರದಿಂದ ಅತಿ ಹೆಚ್ಚು ಮತಗಳನ್ನು ನೀಡಿ ಆರಿಸಿಕಳುಹಿಸಬೇಕಾಗಿದೆ ಎಂದರು.

         ಈ ಸಂದರ್ಭದಲ್ಲಿ ಜಿ.ಪಂ ಸದಸ್ಯ ವಾಗೀಶ್ ಸ್ವಾಮಿ, ಹರಿಹರ ಮಂಡಲ ಅಧ್ಯಕ್ಷ ಗೋವಿನಾಳ್ ರಾಜು, ಮುಖಂಡರಾದ ಹನಗವಾಡಿ ವೀರೇಶ್, ಬೆಳ್ಳೂಡ್ಡಿ ರಾಮಚಂದ್ರಪ್ಪ, ಸಾಲಕಟ್ಟೆ ಸಿದ್ದೇಶ್, ಕೋಮರನಹಳ್ಳಿ ಅಣ್ಣಪ್ಪ, ಹನುಮಂತರಾಜು, ಹನುಮಂತ ಗೌಡ್ರು, ಚಂದ್ರಶೇಖರ ಪೂಜಾರ್ ಮತ್ತಿತರರು ಹಾಜರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap