ಜನರಲ್ಲಿ ದುಡಿದು ತಿನ್ನುವ ಮನೋಭಾವ ಮರೆಯಾಗುತ್ತಿದೆ: ಶ್ರೀಗಳ ವಿಷಾದ

ತುಮಕೂರು

    ಹಿಂದೆ ಉದ್ಯೋಗ ಪರ್ವ ಎಂಬುದೊಂದಿತ್ತು. ಪ್ರತಿಯೊಬ್ಬರೂ ಉದ್ಯೋಗ ಮಾಡಿ ದುಡಿದು ತಿನ್ನಬೇಕಿತ್ತು. ಆದರೆ ಈಗ ಸೋಂಬೇರಿ ಪರ್ವ ಶುರುವಾಗಿದೆ. ಸರ್ಕಾರ ಎಲ್ಲವನ್ನೂ ಫ್ರೀಯಾಗಿ ಕೊಡುವಾಗ ನಾನೇಕೆ ದುಡಿದು ತಿನ್ನಬೇಕು ಎಂಬ ಮನೋಭಾವ ಜನರಲ್ಲಿ ಮೂಡಿಬಿಟ್ಟಿದೆ. ಮಕ್ಕಳಿಗೆ ಆಸ್ತಿ ಮಾಡಿ ಇಡಬೇಡಿ. ವಿದ್ಯೆ ಕಲಿಸಿ, ದುಡಿಮೆ ಕಲಿಸಿ, ಕಷ್ಟದ ಅರಿವು ಮೂಡಿಸಿ. ದುಡಿಮೆಯೇ ದೇವರು ಎಂಬುದನ್ನು ಮಕ್ಕಳಿಗೆ ಮನವರಿಕೆ ಮಾಡಿಕೊಡಿ ಎಂದು ಹಿರೇಮಠಾಧ್ಯಕ್ಷರಾದ ಡಾ.ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮಿಗಳು ನುಡಿದರು.

     ಅವರು ಹಿರೇಮಠದಲ್ಲಿ ಅಮಾವಾಸ್ಯೆಯಂದು ಸ್ವಾಮಿಗೆ ರುದ್ರಾಭಿಷೇಕ, ಪೂಜೆ, ಧೂಪ, ದೀಪ, ನೈವೇದ್ಯ, ಮಹಾಮಂಗಳಾರತಿ ನಂತರ ನಡೆದ ಧರ್ಮಗೋಷ್ಠಿಯಲ್ಲಿ ಮಾತನಾಡುತ್ತಾ ಹೊಟ್ಟೆ ತುಂಬಿದವನಿಗೆ ಮೃಷ್ಟಾನ್ನ ಭೋಜನವಿಟ್ಟರೂ ರುಚಿಸದು. ಹಸಿದಾತ ಏನೇ ಕೊಟ್ಟರೂ ಅದು ಮೃಷ್ಟಾನ್ನಕ್ಕೆ ಸಮಾನವಾಗಿರುತ್ತದೆ ಎಂದ ಶ್ರೀಗಳು, ದಣಿವಿಲ್ಲದಾಗ ಮಲಗಿ ಹೊರಳಾಡಿದರೆ ನಿದ್ರೆ ಬಾರದು. ಮೈ ಮನ ದಣಿದಾಗ ಒಂದು ಚಾಪೆ ದಿಂಬಿದ್ದರೂ ಸುಖವಾಗಿ ನಿದ್ರೆ ಬರುತ್ತದೆ. ಒಲ್ಲದೆಡೆ ಹುಗ್ಗಿಯೂ ಮುಳ್ಳಾಗುತ್ತದೆ. ದಣಿಯದೇ ಉಣ್ಣುವುದಲ್ಲ, ಈಗ ಉಂಡು ಉಂಡೇ ದಣಿಯುತ್ತಾರೆ ಜನ. ಇನ್ನು ಭದ್ರಕೋಟೆಯಲ್ಲಿರುವ ಅಂದರೆ ಗುರುರಕ್ಷೆ ಎಂಬುದೇ ಭದ್ರಕೋಟೆ. ಗುರುವಿನ ಆಶ್ರಯದಲ್ಲಿ ಸಂಪರ್ಕದಲ್ಲಿ, ಮಾರ್ಗದರ್ಶನದಲ್ಲಿ ಆತನ ಕೃಪೆಗೆ ಪಾತ್ರನಾಗಿದ್ದರೆ ಅದುವೇ ಭದ್ರಕೋಟೆ ಎಂದರು.

       ಬಸವಣ್ಣನವರ ವಚನಗಳು ಎಂದಿಗೂ ಪ್ರಸ್ತುತ. ಅದಕ್ಕೆ ಸ್ಪಷ್ಟ ಉದಾಹರಣೆ ಎಂದರೆ ಕಾಗೆ ಬಂಧುಗಳ ಕಂಡರೆ ಕರೆಯದೇ ಬಳಗವ ಎಂದು ಕಾಗೆಯ ಹಂಚಿ ತಿನ್ನುವ ಗುಣವನ್ನು ಹೊಗಳಿದ್ದಾರೆ. ಹಾಗೆಯೇ ಮೇರು ಗುಣವನ್ನರಸುವರೇ ಕಾಗೆಯಲ್ಲಿ ಎಂಬುವಲ್ಲಿ ಅರಸಲಾಗದು ಎಂಬ ಉತ್ತರ ದೊರೆಯುತ್ತದೆ. ಹಾಗಾಗಿ ವಚನಗಳು ಸಾಂದರ್ಭಿಕ ಎಂದು ವಿಶ್ಲೇಷಿಸಿದರು.

       ಜನರು ಮರ ಸುತ್ತವಲ್ಲಿ ತಪ್ಪಿಲ್ಲವೆಂದು ತಿಳಿಸಿದ ಶ್ರೀಗಳು, ಇಂದು ಮರವಿದ್ದಲ್ಲಿ ಮಳೆ, ಬೆಳೆ. ಹಾಗಾಗಿ ಪ್ರಕೃತಿ, ನಿಸರ್ಗ, ಮರ, ಗಿಡಗಳನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ಮರಗಳು ಇಂಗಾಲವನ್ನು ಸೇವಿಸಿ, ಆಮ್ಲಜನಕದ ಪ್ರಾಣವಾಯುವನ್ನು ನೀಡುತ್ತದೆ. ವೃಕ್ಷವನ್ನು ಒಂದು ಸಂಸ್ಕತ ಶ್ಲೋಕದಲ್ಲಿ ಸತ್ಪುರುಷರಿಗೆ ಹೋಲಿಸಲಾಗಿದೆ. ಸತ್ಪುರುಷರು ತಮಗಾಗಿ ಏನನ್ನೂ ಉಳಿಸಿಕೊಳ್ಳಲಾರರು. ಸ್ವಾರ್ಥತೆ ಅವರಲ್ಲಿ ಲವಲೇಶವೂ ಇರುವುದಿಲ್ಲ.

       ಪರೋಪಕಾರಾರ್ಥ ಇಂದ ಶರೀರ ಎಂಬಂತೆ ಪರರ ಹಿತವನ್ನೇ ಬಯಸುವರು. ಹಾಗೆಯೇ ಗಿಡ, ಮರಗಳೂ ಸಹ ಗಾಳಿ, ಹೂ, ಹಣ್ಣು, ಮಳೆ, ನೆರಳು, ಉರುವಲು ಎಲ್ಲವನ್ನೂ ನಿಸ್ವಾರ್ಥತೆಯಿಂದ ಮನುಷ್ಯರಿಗೆ ನೀಡುತ್ತವೆ. ಆದ್ದರಿಂದಲೇ ಮರವನ್ನು ಸತ್ಪುರುಷರಿಗೆ ಹೋಲಿಸಿರುವುದು ಎಂದರು. ಶ್ರೀಮಠದ ವ್ಯವಸ್ಥಾಪಕ ತೀ.ತ. ಮಲ್ಲಿಕಾರ್ಜುನಯ್ಯ ಸ್ವಾಗತಿಸಿದರೆ, ಸುಮಪ್ರಸನ್ನ ಕಾರ್ಯಕ್ರಮ ನಿರೂಪಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link