ಬಡ ಮಹಿಳೆಯರ ಬದುಕು ಕಟ್ಟಿಕೊಟ್ಟ ಜನಸ್ಪಂದನ

ಚಿತ್ರದುರ್ಗ:
   ಚಿತ್ರದುರ್ಗ ಜಿಲ್ಲಾಡಳಿತದಿಂದ ಏರ್ಪಡಿಸಿದ್ದ ಅದೊಂದು ಜನಸ್ಪಂದನ ಸಭೆಯಲ್ಲಿ ಪಾಲ್ಗೊಂಡಿದ್ದ ಬಡ ಮಹಿಳೆಯರು ತಮಗೂ ಸ್ವಾವಲಂಬಿ ಜೀವನ ನಡೆಸಲು ಸರ್ಕಾರದಿಂದ ಏನಾದರೂ ದಾರಿ ಮಾಡಿಕೊಡುವಂತೆ ಜಿಲ್ಲಾಧಿಕಾರಿಗಳಿಗೆ ಬೇಡಿಕೆ ಇಟ್ಟರು.  ಇವರ ಬೇಡಿಕೆಯನ್ನು ತಲೆಗೆ ಹಚ್ಚಿಕೊಂಡ ಜಿಲ್ಲಾಧಿಕಾರಿಗಳು ಕೇವಲ ಒಂದೂವರೆ ತಿಂಗಳಿನಲ್ಲಿಯೇ ಆ ಬಡ ಮಹಿಳೆಯರ ಆಶಯವನ್ನು ಈಡೇರಿಸಿದ್ದಲ್ಲದೆ, ಪ್ರತಿಷ್ಠಿತ ಕಂಪನಿಯಲ್ಲಿ ನೌಕರಿಯೂ ದೊರೆಯುವಂತೆ ಮಾಡಿದ್ದಾರೆ.
  ಹೌದು, ನಿಜಕ್ಕೂ ಇದು ಸತ್ಯ.  ಕಳೆದ ಜುಲೈ 09 ರಂದು ಕೆನ್ನೆಡಲು ಗ್ರಾಮದಲ್ಲಿ ಜಿಲ್ಲಾಡಳಿತದ ವತಿಯಿಂದ ಜನಸ್ಪಂದನ ಸಭೆ ಏರ್ಪಡಿಸಲಾಗಿತ್ತು.  ಇಂತಹ ಜನಸ್ಪಂದನ ಸಭೆಗಳನ್ನು ಜಿಲ್ಲಾಡಳಿತ ಆಗಾಗ್ಗೆ ಗ್ರಾಮೀಣ ಪ್ರದೇಶಗಳಲ್ಲಿ ಏರ್ಪಡಿಸುವ ಮೂಲಕ, ಸ್ಥಳೀಯ ಸಮಸ್ಯೆಗಳನ್ನು ಸ್ಥಳೀಯವಾಗಿಯೇ ಪರಿಹರಿಸಲು ಕಂಡುಕೊಂಡಿರುವ ಉತ್ತಮ ಮಾರ್ಗೋಪಾಯ ಎಂದರೆ ತಪ್ಪಾಗಲಾರದು.
   ಅಂದು ಕೆನ್ನೆಡಲು ಹಾಗೂ ಇಂಗಳದಾಳ್ ಗ್ರಾಮದ ಸ್ತ್ರೀಶಕ್ತಿ ಸ್ವ-ಸಹಾಯ ಗುಂಪುಗಳ ಕೆಲ ಬಡ ಮಹಿಳೆಯರು ಜೊತೆಗೂಡಿ, ಮನವಿಯೊಂದನ್ನು ಸಿದ್ಧಪಡಿಸಿ, ತಮಗೆ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಸರ್ಕಾರದಿಂದ ಏನಾದರೂ ಸಹಾಯ ಮಾಡಿ, ಸಣ್ಣಪುಟ್ಟ ಆರ್ಥಿಕ ಚಟುವಟಿಕೆಗೆ ಸಾಲ ಸೌಲಭ್ಯವಾದರೂ ಕೊಡಿಸುವಂತೆ ಜನಸ್ಪಂದನ ಸಭೆಯಲ್ಲಿ ಭಾಗವಹಿಸಿದ್ದ ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ಅವರಿಗೆ ಮನವಿ ಮಾಡಿಕೊಂಡರು.  ಸಾಮಾನ್ಯವಾಗಿ ಮಹಿಳೆಯರೆಂದರೆ ಕೇವಲ ಅಡುಗೆ ಮನೆಗೆ ಸೀಮಿತ, ಮನೆಯ ಚಾಕರಿ ಮಾಡಿಕೊಂಡಿರಲಷ್ಟೇ ಸಾಧ್ಯ ಎಂಬ ನಮ್ಮ ಸಮಾಜದಲ್ಲಿ, ತಮಗೂ ಸ್ವಾವಲಂಬಿ ಬದುಕು ನಡೆಸಲು ಅನುಕೂಲ ಮಾಡಿಕೊಡುವಂತೆ ಕೋರಿದ ಮಹಿಳೆಯರ ಮನವಿಗೆ ಶ್ಲಾಘನೆ ವ್ಯಕ್ತಪಡಿಸಿ, ಅದನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾಧಿಕಾರಿಗಳು ಖಂಡಿತ ಸಹಾಯ ಮಾಡುವುದಾಗಿ ಭರವಸೆ ಕೊಟ್ಟರು.
 
   ಟೈಲರಿಂಗ್ ತರಬೇತಿಗೆ ಸಜ್ಜು : ಜನಸ್ಪಂದನ ಸಭೆಯಲ್ಲಿ ಮನವಿ ಸಲ್ಲಿಸಿದ ಮಹಿಳೆಯರಿಗೆ ಟೈಲರಿಂಗ್ ತರಬೇತಿ ಕೊಡಿಸುವುದು ಸೂಕ್ತ ಎನಿಸಿಕೊಂಡ ಜಿಲ್ಲಾಧಿಕಾರಿಗಳು ಕೂಡಲೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ, ಜಿಲ್ಲಾ ಪಂಚಾಯತ್, ಚಿತ್ರದುರ್ಗದ ಸರ್ಕಾರಿ ಪಾಲಿಟೆಕ್ನಿಕ್‍ನ ಸಿ.ಸಿ. ಟೆಕ್ ಉಪಘಟಕದ ನರವಿನಲ್ಲಿ ಸುಮಾರು 25 ಮಹಿಳೆಯರಿಗೆ ಒಂದು ತಿಂಗಳ ಅವಧಿಯ ಟೈಲರಿಂಗ್ ತರಬೇತಿ ಕೊಡಿಸಲು ನಿರ್ಧರಿಸಿ, ಈ ತರಬೇತಿ ಕಾರ್ಯಕ್ರಮಕ್ಕೆ ತಾವೇ ಮುಂದೆ ನಿಂತು ಚಾಲನೆ ನೀಡಿದರು.  ಜುಲೈ 25 ರಿಂದ ಆಗಸ್ಟ್ 23 ರವರೆಗೆ ಒಂದು ತಿಂಗಳು ತರಬೇತಿ ಪಡೆದ ಮಹಿಳೆಯರು ತಮ್ಮ ಸ್ವಾವಲಂಬಿ ಬದುಕು ಕಟ್ಟಿಕೊಳ್ಳುವ ಕನಸು ಕಾಣಲು ಪ್ರಾರಂಭಿಸಿದರು.
ಪ್ರತಿಷ್ಠಿತ ಕಂಪನಿಯಲ್ಲಿ ಕೆಲಸ :
     ಶಾಲಾ ಮಕ್ಕಳಂತೆ ಶಿಸ್ತುಬದ್ಧವಾಗಿ ತರಬೇತಿಗೆ ಹಾಜರಾದ ಮಹಿಳೆಯರು ಜಿಲ್ಲಾಡಳಿತದ ವತಿಯಿಂದ ಕೊಡಿಸಿದ ಟೈಲರಿಂಗ್ ತರಬೇತಿಯನ್ನು ಶ್ರದ್ಧೆವಹಿಸಿ ಕಲಿತು, ಅಂತೂ ಇಂತೂ ವಿವಿಧ ಬಗೆಯ ಬಟ್ಟೆ ಡ್ರೆಸ್ ನವ ನವೀನ ಮಾದರಿಯಲ್ಲಿ ಹೊಲಿಯುವುದನ್ನು ಕಲಿತಿಯೇಬಿಟ್ಟರು.  ಬಡ ಮಹಿಳೆಯರಿಗೆ ಕೇವಲ ಟೈಲರಿಂಗ್ ಕಲಿಸುವುದಕ್ಕಷ್ಟೇ ತಮ್ಮ ಯತ್ನವನ್ನು ನಿಲ್ಲಿಸದ ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ಅವರು, ಇವರಿಗೆ ಉದ್ಯೋಗ ಕೊಡಿಸಲು ಕೂಡ ಮುಂದಾದರು.
      ಅರವಿಂದ್ ಮಿಲ್ಸ್ ಪ್ರತಿಷ್ಠಿತ ಬಟ್ಟೆ ಉಡುಪು ತಯಾರಿಕಾ ಕಂಪನಿಯಾಗಿದ್ದು, ಚಿತ್ರದುರ್ಗ ಜಿಲ್ಲೆಯಲ್ಲಿಯೂ ಇದರ ಒಂದು ಘಟಕ ಕಾರ್ಯ ನಿರ್ವಹಿಸುತ್ತಿದೆ.  ಈ ಕಂಪನಿಯ ಅಧಿಕಾರಿಗಳನ್ನು ಸಂಪರ್ಕಿಸಿ, ಟೈಲರಿಂಗ್ ಕಲಿತ ಬಡ ಮಹಿಳೆಯರಿಗೆ ತಮ್ಮ ಕಂಪನಿಯಲ್ಲಿ ಉದ್ಯೋಗ ಕೊಡುವಂತೆ ಮನವಿಯನ್ನೂ ಮಾಡಿಕೊಂಡರು.  ಬಳಿಕ ಕಂಪನಿಯವರು ಮಹಿಳೆಯರ ಕೌಶಲ್ಯ ಪರೀಕ್ಷಿಸಿ, ಕೊನೆಗೂ ಈ ಮಹಿಳೆಯರಿಗೆ ಉದ್ಯೋಗ ಕೊಡಲು ತೀರ್ಮಾನಿಸಿ, ಆಗಸ್ಟ್ 24 ರಂದು ಕೆಲ ಮಹಿಳೆಯರಿಗೆ ತರಬೇತಿ ಪ್ರಮಾಣ ಪತ್ರ ಹಾಗೂ ಉದ್ಯೋಗ ಪತ್ರವನ್ನೂ ಜಿಲ್ಲಾಧಿಕಾರಿಗಳ ಕೈಯಿಂದಲೇ ಕೊಡಿಸಿದರು.
 
      ಚಿತ್ರದುರ್ಗದ ಸರ್ಕಾರಿ ಪಾಲಿಟೆಕ್ನಿಕ್‍ನಲ್ಲಿ ಮಹಿಳೆಯರಿಗೆ ಪ್ರಮಾಣಪತ್ರ ಹಾಗೂ ಉದ್ಯೋಗ ಪತ್ರ ವಿತರಿಸಲು ಏರ್ಪಡಿಸಿದ ಸಮಾರಂಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ಅವರು, ಮಹಿಳೆಯರು ಕೇವಲ ಮನೆಯ ಕೆಲಸಕ್ಕಷ್ಟೇ ಸೀಮಿತವಾಗಬಾರದು.  ಬದುಕಿಗೆ ಇತರರನ್ನು ಅವಲಂಬಿಸದೆ, ಸ್ವಾವಲಂಬಿಯಾಗಿ ಬಾಳಲು ಮುಂದಾಗಬೇಕು.
      ಯಾವುದೇ ವೃತ್ತಿಯ ತರಬೇತಿ ಪಡೆಯಲು ಇಚ್ಛಿಸುವ ಮಹಿಳೆಯರಿಗೆ ಮಹಿಳಾ ಅಭಿವೃದ್ಧಿ ನಿಗಮದ ವತಿಯಿಂದ ಇತರೆ ಇಲಾಖೆಗಳ ಸಹಯೋಗದಲ್ಲಿ ಉದ್ಯಮಶೀಲತಾ ಕಾರ್ಯಕ್ರಮದಡಿ ಕ್ಲಸ್ಟರ್ ಮಟ್ಟದಲ್ಲಿ ತರಬೇತಿ ಕೊಡಿಸಲು ಜಿಲ್ಲಾಡಳಿತ ಸಿದ್ಧವಿದೆ.  ಟೈಲರಿಂಗ್ ತರಬೇತಿಯನ್ನು ಶ್ರದ್ಧೆಯಿಂದ ಕಲಿತು ಯಶಸ್ವಿಗೊಂದ ಈ ಮಹಿಳೆಯರು ಇತರರಿಗೂ ಮಾದರಿಯಾಗಿದ್ದು, ಇತರರೂ ಇದೇ ರೀತಿ ಸ್ವಾವಲಂಬಿ ಜೀವನ ಕಟ್ಟಿಕೊಳ್ಳಲು ಆಸಕ್ತಿ ತೋರಬೇಕು ಎಂದು ತಮ್ಮ ಆಶಯ ವ್ಯಕ್ತಪಡಿಸಿದರು.
 
     ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ರಾಜಾನಾಯಕ್, ಅರವಿಂದ್ ಮಿಲ್ಸ್ ಕಂಪನಿಯ ಮಾನವಸಂಪನ್ಮೂಲ ವ್ಯವಸ್ಥಾಪಕ ಮಹಾಂತೇಶ್, ಸರ್ಕಾರಿ ಪಾಲಿಟೆಕ್ನಿಕ್‍ನ ಪ್ರಾಚಾರ್ಯ ಹೇಮಂತರಾಜ್, ಸಿ.ಸಿ. ಟೆಕ್‍ನ ವ್ಯವಸ್ಥಾಪಕ ಶಿವಕುಮಾರಸ್ವಾಮಿ ಅವರು ಜಿಲ್ಲಾಧಿಕಾರಿಗಳ ಆಶಯ ಪೂರ್ಣಗೊಳಿಸಲು ಶ್ರಮಿಸಿದ್ದು ನಿಜಕ್ಕೂ ಶ್ಲಾಘನೀಯವಾಗಿದೆ
    ನಿಜವಾದ ಜನಸ್ಪಂದನ ಎಂದರೆ ಇದೇ ಅಲ್ಲವೆ.  ಜನರ ಮನವಿಗಳಿಗೆ ಸ್ಪಂದಿಸಿ, ಅವರ ಬೇಡಿಕೆಗಳನ್ನು ಸರ್ಕಾರದ ಚೌಕಟ್ಟಿನಲ್ಲಿ ಈಡೇರಿಸಿ, ಅವರ ಬದುಕು ಹಸನಾಗಿಸಿದಾಗಲೆ ಸರ್ಕಾರದ ಆಶಯ ಈಡೇರಲು ಸಾಧ್ಯ.  ಇಂತಹ ಮಹತ್ವದ ಆಶಯವನ್ನು ಚಿತ್ರದುರ್ಗ ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ಅವರು ಈ ಬಡ ಮಹಿಳೆಯರಿಗೆ ಬದುಕು ಕಟ್ಟಿಕೊಡುವ ಮೂಲಕ ಈಡೇರಿಸಿದ್ದಾರೆ ಎಂದರೆ ಅತಿಶಯೋಕ್ತಿ ಆಗಲಾರದು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap