ತುಮಕೂರು
ಮುಖ್ಯಮಂತ್ರಿ ಕುಮಾರಸ್ವಾಮಿಯವರು ಆಯೋಜಿಸುತ್ತಿರುವ ಜನತಾದರ್ಶನ ಕಾರ್ಯಕ್ರಮವನ್ನು ಆದರ್ಶವಾಗಿಟ್ಟುಕೊಂಡು ತುಮಕೂರು ಗ್ರಾಮಾಂತರ ಶಾಸಕ ಡಿ.ಸಿ.ಗೌರಿಶಂಕರ್‍ರವರ ಅಧ್ಯಕ್ಷತೆಯಲ್ಲಿ ಪ್ರತೀ ಸೋಮವಾರದಂದು ತುಮಕೂರು ತಾಲ್ಲೂಕು ಕಚೇರಿ ಆವರಣದಲ್ಲಿರುವ ಗ್ರಾಮಾಂತರ ಶಾಸಕರ ಕಚೇರಿಯಲ್ಲಿ ಆಯೋಜಿತವಾಗುತ್ತಿರುವ ಜನತಾದರ್ಶನ ಕಾರ್ಯಕ್ರಮವು ದಿನದಿಂದ ದಿನಕ್ಕೆ ನಿರೀಕ್ಷೆಗೂ ಮೀರಿದ ಜನಮನ್ನಣೆ ಗಳಿಸುತ್ತಿದೆ.
ಅ.15ರ ಸೋಮವಾರದಂದು ನಡೆದ ಜನತಾದರ್ಶನ ಕಾರ್ಯಕ್ರಮದಲ್ಲಿ ವಿವಿಧ ಅಹವಾಲುಗಳಿಗೆ ಸಂಬಂಧಿಸಿದಂತೆ 2000ಕ್ಕೂ ಹೆಚ್ಚು ಅರ್ಜಿಗಳನ್ನು ಶಾಸಕರು ಕ್ಷೇತ್ರದ ಜನರಿಂದ ಸ್ವೀಕರಿಸಿದ್ದಲ್ಲದೇ, ಜನತಾದರ್ಶನ ಕಾರ್ಯಕ್ರಮಕ್ಕೆ ಆಗಮಿಸಿ ಆರೋಗ್ಯ ಸಮಸ್ಯೆ ನಿವೇದಿಸಿಕೊಂಡ 18ಕ್ಕೂ ಹೆಚ್ಚು ರೋಗಿಗಳ ಚಿಕಿತ್ಸೆಗಾಗಿ ಸ್ಥಳದಲ್ಲೆ 3ಲಕ್ಷ ರೂಗಳ ಧನಸಹಾಯ ನೀಡಿ ಮಾನವೀಯತೆ ಮೆರೆದರು.
ರೈತರ ಜಮೀನಿಗೆ ಸಂಬಂಧಿಸಿದ ಪಹಣಿ ತಿದ್ದುಪಡಿ, ಪಹಣಿದುರಸ್ತು, ಖಾತೆ ಬದಲಾವಣೆ, ಎಂ.ಆರ್‍ತಿದ್ದುಪಡಿಗೆ ಸಂಬಂಧಿಸಿದಂತೆ ರೈತರು ಹೆಚ್ಚು ಅರ್ಜಿಗಳನ್ನು ಹಾಗೂ ತಾಲ್ಲೂಕು ಪಂಚಾಯಿತಿಗೆ ಸಂಬಂಧಿಸಿದಂತೆ ಗ್ರಾಮಗಳಲ್ಲಿ ನಿವೇಶನ ಹಂಚಿಕೆ, ಖಾತೆ ಬದಲಾವಣೆ, ಹೊಸ ನಿವೇಶನಕ್ಕೆ ಅರ್ಜಿಗಳು ಸಲ್ಲಿಕೆಯಾದವು, ಮತ್ತು ಪಶುಸಂಗೋಪನೆ, ಬೆಸ್ಕಾಂ ಇಲಾಖೆ, ಪೊಲೀಸ್ ಇಲಾಖೆ, ಸಂಧ್ಯಾ ಸುರಕ್ಷಾಯೋಜನೆ, ವಿಧವಾ ವೇತನ, ಅಂಗವಿಕಲರ ಮಾಸಾಶನಕ್ಕೆ ಸಂಬಂಧಿಸಿದಂತೆ ವಿವಿಧ ಇಲಾಖಾವಾರು ಅರ್ಜಿಗಳನ್ನು ಕ್ಷೇತ್ರದ ಜನರಿಂದ ಶಾಸಕರು ಸ್ವೀಕರಿಸಿದರು.
ಸೋಮವಾರ ಬೆಳಗ್ಗೆ 11 ಗಂಟೆಯಿಂದ ಶಾಸಕರ ನೇತೃತ್ವದಲ್ಲಿ ನಡೆದ ಜನತಾದರ್ಶನ ಕಾರ್ಯಕ್ರಮದಲ್ಲಿ ತಹಸೀಲ್ದಾರ್ ನಾಗರಾಜು, ಇಓ ವೆಂಕಟೇಶ್, ವಿವಿಧ ಇಲಾಖೆಯ ಅಧಿಕಾರಿಗಳ ಉಪಸ್ಥಿತಿಯಲ್ಲಿ ಕ್ಷೇತ್ರದ ಜನರ ಸಮಸ್ಯೆಗಳನ್ನು ಆಲಿಸಿ ಸಣ್ಣ ಪುಟ್ಟ ಸಮಸ್ಯೆಗಳಿಗೆ ಅಧಿಕಾರಿಗಳ ಮುಖೇನ ಪರಿಹಾರ ಸೂಚಿಸಿದರು. ಗಂಭೀರ ಸಮಸ್ಯೆಗಳನ್ನು ಶೀಘ್ರವಾಗಿ ಇತ್ಯರ್ಥ ಮಾಡಲು ಅಧಿಕಾರಿಗಳಿಗೆ ಆದೇಶಿಸಿ ಮುಂದಿನ ಸೋಮವಾರದೊಳಗೆ ಸ್ವೀಕೃತಿಯಾಗಿರುವ ಎಲ್ಲಾ ಅರ್ಜಿಗಳನ್ನು ವಿಲೇವಾರಿ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ವೇಳೆ ಶಾಸಕ ಡಿ.ಸಿ.ಗೌರಿಶಂಕರ್ ಮಾತನಾಡಿ ಕಾರಣಾಂತರಗಳಿಂದ ಜನತಾದರ್ಶನ ಕಾರ್ಯಕ್ರಮವನ್ನು ಮುಂದೂಡಲಾಗಿತ್ತು. ಇನ್ನು ಮುಂದೆ ಪ್ರತೀ ಸೋಮವಾರ ಜನತಾದರ್ಶನ ಕಾರ್ಯಕ್ರಮ ನಡೆಯಲಿದೆ. ಕ್ಷೇತ್ರದ ಜನತೆ ತಮ್ಮ ಸಮಸ್ಯೆಗಳನ್ನು ಖುದ್ದಾಗಿ ನನ್ನ ಗಮನಕ್ಕೆ ತರಬಹುದು, ಕಂದಾಯ ಅಧಿಕಾರಿಗಳು, ವಿದ್ಯುತ್ ಇಲಾಖೆ, ಪೊಲೀಸ್ ಇಲಾಖೆ ಸೇರಿದಂತೆ ಯಾವುದೇ ಇಲಾಖೆಗಳಿಗೆ ಸಂಬಂಧಪಟ್ಟ ಅಧಿಕಾರಿಗಳು ರೈತರ, ಬಡವರ ಹಾಗೂ ಕ್ಷೇತ್ರದ ಜನತೆಗೆ ತಕ್ಷಣ ಸ್ಪಂದಿಸಬೇಕು ಒಂದು ವೇಳೆ ಸ್ಪಂದಿಸದಿದ್ದರೆ ಅಂತಹ ವಿಚಾರಗಳನ್ನು ಜನತಾದರ್ಶನ ಕಾರ್ಯಕ್ರಮದಲ್ಲಿ ನನ್ನ ಗಮನಕ್ಕೆ ತಂದರೆ ಸಮಸ್ಯೆಗೆ ಸ್ಪಂದಿಸದ ಅಧಿಕಾರಿಗಳ ವಿರುದ್ದ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು ಎಂದರು.
ಜನತಾದರ್ಶನ ಕಾರ್ಯಕ್ರಮಕ್ಕೆ ಆಗಮಿಸುವ ಮೊದಲು ಕಲ್ಯಾಣಪುರ ಗ್ರಾಮದಿಂದ ವಕ್ಕೋಡಯ್ಯನಪಾಳ್ಯದವರೆಗೂ 25 ಲಕ್ಷ ರೂ.ಗಳ ನೂತನ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿ ಪೂಜೆ ನೇರವೇರಿಸಿದರು.
ಈ ವೇಳೆ ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಹಾಲನೂರುಅನಂತ್‍ಕುಮಾರ್, ಹೆಬ್ಬೂರು ಹೋಬಳಿ ಜೆಡಿಎಸ್ ಅಧ್ಯಕ್ಷ ವೈ.ಟಿ.ನಾಗರಾಜು, ಮಾಜಿ ಜಿ.ಪಂ. ಸದಸ್ಯ ರಾಮಚಂದ್ರಪ್ಪ, ಪಾಲನೇತ್ರಯ್ಯ, ಹಿರೇಹಳ್ಳಿ ಮಹೇಶ್, ಹರಳೂರು ರುದ್ರೇಶ್,ಸುವರ್ಣಗಿರಿಕುಮಾರ್, ನರುಗನಹಳ್ಳಿ ಮಂಜುನಾಥ್, ಬೆಳಗುಂಬ ವೆಂಕಟೇಶ್, ಹಾಗೂ ಸಾವಿರಾರು ಜೆಡಿಎಸ್ ಕಾರ್ಯಕರ್ತರು, ರೈತರು, ಸಾರ್ವಜನಿಕರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ