ಮಧುಗಿರಿ
ಲೋಕಸಭಾ ಚುನಾವಣೆಯಲ್ಲಿ ಸಿದ್ದರಾಮಯ್ಯನವರೊಂದಿಗೆ ಪ್ರಚಾರಕ್ಕೆ ತೆರಳಿ 20 ಕ್ಕೂ ಹೆಚ್ಚು ಸ್ಥಾನಗಳಲ್ಲಿ ಮೈತ್ರಿ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬರುತ್ತೇನೆ ಎಂದು ಮಾಜಿ ಪ್ರಧಾನಿ ಹಾಗೂ ತುಮಕೂರು ಲೋಕಸಭಾ ಆಭ್ಯರ್ಥಿ ಎಚ್.ಡಿ.ದೇವೆಗೌಡ ತಿಳಿಸಿದರು.
ಅವರು ಪಟ್ಟಣದ ರಾಜೀವ್‍ಗಾಂಧಿ ಕ್ರೀಡಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕಾಂಗ್ರೆಸ್ – ಜೆಡಿಎಸ್ ಮೈತ್ರಿ ಪಕ್ಷದ ಕಾರ್ಯಕರ್ತರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಾಜಪೇಯಿ ಕಾಲದಲ್ಲಿ ಪಾರ್ಲಿಮೆಂಟ್ ಕಲಾಪ ಸರಾಗವಾಗಿ ನಡೆಯುತ್ತಿತ್ತು. ಆದರೆ ಮೋದಿ ಕಾಲದಲ್ಲಿ ಸರಿಯಾಗಿ ಪಾರ್ಲಿಮೆಂಟ್ ನಡೆಯಲಿಲ್ಲ, ಈ ಬಗ್ಗೆ ನೋವಿದೆ. ಸೋನಿಯಾಗಾಂಧಿ ಮತ್ತು ರಾಹುಲ್ ಗಾಂಧಿಯವರು ಈ ಮೈತ್ರಿ ಸರ್ಕಾರದ ರೂವಾರಿಗಳು.
ಮೋದಿ ಮತ್ತೆ ಆಕಸ್ಮಿಕವಾಗಿ ಅಧಿಕಾರಕ್ಕೆ ಬಂದರೆ ಅವರು ಸರ್ವಾಧಿಕಾರಿಯಾಗ್ತಾರೆ. ರಾಜ್ಯದ ಎಲ್ಲಾ ಕಡೆ ಸಿದ್ದರಾಮಯ್ಯ ಜೊತೆ ತೆರಳಿ ಏ.14 ರ ವರೆಗೆ ಪ್ರಚಾರ ಮಾಡಿ 20 ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತೇವೆ. ಕೆ.ಎನ್.ರಾಜಣ್ಣ ಮಧುಗಿರಿಯನ್ನು ಜಿಲ್ಲೆ ಮಾಡಲು ಮನವಿ ಮಾಡಿದ್ದಾರೆ. ಮಧುಗಿರಿಯನ್ನು ಪ್ರತ್ಯೇಕ ಜಿಲ್ಲೆ ಮಾಡಲು ನಾನು ಸಹ ಬೆಂಬಲಿಸುತ್ತೇನೆ ಎಂದ ಅವರು, ಸಿಎಂ ಕುಮಾರಸ್ವಾಮಿ ಮತ್ತು ಡಿಸಿಎಂ ಪರಮೇಶ್ವರ್ ಬಳಿ ಈ ವಿಷಯ ಪ್ರಸ್ತಾಪ ಮಾಡುತ್ತೇನೆ ಎಂದು ಕೆ.ಎನ್.ರಾಜಣ್ಣನವರನ್ನು ವೇದಿಕೆಯಲ್ಲಿಯೇ ಬಳಿ ಕರೆದು ಜನಗಳ ಮುಂದೆ ವಾಗ್ದಾನ ಮಾಡಿದರು.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ಈಗಿನ ಪ್ರಧಾನಿ ಮೋದಿ ಹಾಗೂ ಅಮಿತ್‍ಶಾ ಪ್ರಜಾತಂತ್ರ ವ್ಯವಸ್ಥೆಯನ್ನು ಹಾಳು ಮಾಡುವ ನಿಟ್ಟಿನಲ್ಲಿ ಪ್ರಯತ್ನಿಸುತ್ತಿದ್ದಾರೆ. ಇವರು ಸರ್ವಾಧಿಕಾರಿ ಧೋರಣೆಯಿಂದ ಆಡಳಿತ ನಡೆಸುತ್ತಿದ್ದಾರೆ. ದೇಶದಲ್ಲಿರುವ ಸಿಬಿಐ, ಇಡಿ, ಇನ್ ಕಮ್ ಟ್ಯಾಕ್ಸ್ ಗಳನ್ನು ಬಳಸಿಕೊಂಡು ತಮ್ಮ ಅಧಿಕಾರ ದುರುಪಯೋಗ ಪಡಿಸಿಕೊಳ್ಳುತ್ತ ಬರೀ ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರ ಮೇಲೆ ದಾಳಿ ಮಾಡಿಸುತ್ತಿದ್ದಾರೆ.
ಪ್ರಧಾನಮಂತ್ರಿ ಮೋದಿ ಮತ್ತೆ ಪ್ರಧಾನಿಯಾಗುವ ಭ್ರಮೆಯಲ್ಲಿದ್ದಾರೆ. ಮಾಧ್ಯಮಗಳು ಯಾವುದೇ ಸಮೀಕ್ಷೆಗಳನ್ನು ನೀಡಲಿ, ಬಿಜೆಪಿ ಯಾವುದೇ ಕಾರಣಕ್ಕೂ ಅಧಿಕಾರಕ್ಕೆ ಬರಲ್ಲ ಎಂದ ಅವರು, ಮೋದಿ ಸರಕಾರದಲ್ಲಿ ಸಂವಿಧಾನ ಬದಲಾಯಿಸುತ್ತೇನೆ ಎನ್ನುವ ಸಚಿವ ಅನಂತ್ ಕುಮಾರ್ ಹೆಗಡೆ, ಗ್ರಾಮ ಪಂಚಾಯತ್ ಸದಸ್ಯನಾಗಲು ಕೂಡ ನಾಲಾಯಕ್. ಸಾಮಾಜಿಕ ನ್ಯಾಯ ಬೇಕಾದವರು ಬಿಜೆಪಿಯನ್ನು ತಿರಸ್ಕರಿಸಿ, ದೇಶವನ್ನು ಉಳಿಸುವ ನಿಟ್ಟಿನಲ್ಲಿ ಪ್ರಯತ್ನ ಮಾಡಿ. ಮತ್ತೆ ಮೋದಿ ಪ್ರಧಾನಿಯಾದರೆ ಈ ದೇಶದಲ್ಲಿ ಮತ್ತೆ ಚುನಾವಣೆ ನಡೆಯಲ್ಲ.
ಏಕೆಂದರೆ ಇವರು ಸರ್ವಾಧಿಕಾರಿ ಆಡಳಿತ ತರುವರು. 28 ಕ್ಷೇತ್ರದಲ್ಲೂ ಮೈತ್ರಿ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದು, ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಎಚ್.ಡಿ.ದೇವೆಗೌಡರು 3 ಲಕ್ಷಕ್ಕೂ ಅಧಿಕ ಮತಗಳಿಂದ ಗೆಲ್ಲುತ್ತಾರೆ ಎಂದರು.
ಉಪ ಮುಖ್ಯಮಂತ್ರಿ ಡಾ ಜಿ. ಪರಮೇಶ್ವರ ಮಾತನಾಡಿ, ದೇಶದ ದೃಷ್ಟಿಯಿಂದ ಎರಡೂ ಪಕ್ಷದವರು ಒಂದಾಗಿದ್ದೇವೆ. ಬಿಜೆಪಿ ಈ ಬಾರಿ ಬಿಡುಗಡೆ ಮಾಡಿರುವ ಪ್ರಣಾಳಿಕೆಯಲ್ಲಿ ಹರಿಜನ, ಗಿರಿಜನರ ಬಗ್ಗೆ ಒಂದೇ ಒಂದು ಶಬ್ದವಿಲ್ಲ. ಹರಿಜನ-ಗಿರಿಜನರನ್ನ ರಕ್ಷಿಸುವ ಮನಸ್ಸು ಬಿಜೆಪಿಗೆ ಇಲ್ಲ. ನೀರಾವರಿ ವಿಚಾರದಲ್ಲಿ ರಾಜಕೀಯ ಮಾಡುವ ಬಿಜೆಪಿಗೆ ಮನುಷ್ಯತ್ವ ಇಲ್ಲವೆ? ದೇವೆಗೌಡರು ದೇಶದ ಅಭಿವೃದ್ದಿಗಾಗಿ ಹಾಗೂ ಶಾಶ್ವತ ನೀರಾವರಿಗಾಗಿ ಕೆಲಸ ಮಾಡಿದ್ದಾರೆ.
ಬಿಜೆಪಿ ನಾಯಕರು ಅಂಬೇಂಡ್ಕರ್ ಮೂರ್ತಿ ಒಡೆದು ಹಾಕುತ್ತೇವೆ ಹಾಗೂ ಸಂವಿಧಾನವನ್ನು ಸುಟ್ಟು ಹಾಕುತ್ತೇವೆ ಎಂದು ಹೇಳುತ್ತಾರೆ. ಇದು ಆರ್‍ಎಸ್‍ಎಸ್‍ನ ಮುಖವಾಡ. ಈ ದೇಶ ಅಭಿವೃದ್ದಿಯಾಗಬೇಕಾದರೆ ಬಿಜೆಪಿಗೆ ಮತ ನೀಡಬೇಡಿ ಎಂದ ಅವರು, ಮಧುಗಿರಿ ಜನತೆ ಮುದ್ದಹನುಮೆಗೌಡರಿಗೆ ಅತಿ ಹೆಚ್ಚು ಮತಗಳನ್ನು ನೀಡುವ ಮೂಲಕ ಆಶೀರ್ವಾದ ಮಾಡಿದ ರೀತಿಯಲ್ಲೇ ಈ ಬಾರಿ ದೇವೆಗೌಡರಿಗೆ ಆಶೀರ್ವದಿಸಿ ಎಂದರು.
ಮಾಜಿ ಶಾಸಕ ಕೆ.ಎನ್ ರಾಜಣ್ಣ ಮಾತನಾಡಿ, ಕಾಂಗ್ರೆಸ್ ಹೈ ಕಮಾಂಡ್ ನಿರ್ದೇಶನದಂತೆ ದೇವೆಗೌಡರಿಗೆ ನಮ್ಮ ಬೆಂಬಲ ನೀಡುತ್ತೇವೆ. ಸಂಸದರಾದ ಎಸ್.ಪಿ.ಮುದ್ದಹನುಮೆಗೌಡರಿಗೆ ಆಗಿರುವ ಅನ್ಯಾಯಕ್ಕೆ ಪ್ರತಿಯಾಗಿ ಅವರಿಗೆ ಸೂಕ್ತ ಸ್ಥಾನ ನೀಡಬೇಕು ಎಂದು ಮಾಜಿ ಸಿಎಂ ಸಿದ್ದರಾಮಯ್ಯನವರ ಬಳಿ ಮನವಿ ಮಾಡಿದರು. ತಾಲ್ಲೂಕಿನ ಎಲ್ಲಾ ಕೆರೆಗಳಿಗೆ ನೀರು ತುಂಬಿಸುವ ಕೆಲಸವಾಗಬೇಕು ಹಾಗೂ ನೀರಿನ ಬವಣೆಯನ್ನು ಈಡೇರಿಸಬೇಕು. ಕೇಬಲ್ ಕಾರ್ ಯೋಜನೆಯನ್ನು ಪೂರ್ಣಗೊಳಿಸಬೇಕು ಹಾಗೂ ತಾಲ್ಲೂಕನ್ನು ಜಿಲ್ಲಾ ಕೇಂದ್ರವನ್ನಾಗಿ ಮಾಡಿಕೊಡಬೇಕು. ನಾನು ಶಾಸಕನಾಗಿರುವ ಸಂದರ್ಭದಲ್ಲಿ ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ನವರು ತಾಲ್ಲೂಕಿಗೆ ಕೇಳಿರುವ ಎಲ್ಲಾ ಕೆಲಸಗಳಿಗೆ ಅನುದಾನ ನೀಡಿದ್ದಾರೆ. ಹೀಗಾಗಿ ಅವರ ಮಾತಿನಂತೆ ಮಾಜಿ ಪ್ರಧಾನಿ ಅವರನ್ನು ಗೆಲ್ಲಿಸಿ ನಮ್ಮ ಜಿಲ್ಲೆಗೆ ಕೀರ್ತಿ ಬರುವ ಹಾಗೆ ಮಾಡಬೇಕು ಎಂದರು.
ಎಸ್.ಪಿ ಮುದ್ದಹನುಮೆಗೌಡ ಮಾತನಾಡಿ, ಕಳೆದ 5 ವರ್ಷಗಳ ಕಾಲ ಬಹಳ ಜವಾಬ್ದಾರಿಯಿಂದ ನನ್ನ ಕ್ಷೇತ್ರದಲ್ಲಿ ಅಭಿವೃದ್ದಿ ಕೆಲಸಗಳನ್ನು ಮಾಡಿದ್ದೇನೆ. ಹಾಲಿ ಸಂಸದರಿಗೆಲ್ಲಾ ಟಿಕೆಟ್ ನೀಡಿ ನನಗೆ ಮಾತ್ರ ನೀಡದಿರುವುದು ಸರಿಯಲ್ಲ. ಆದರೂ ಸಹ ನಾನು ಯಾವುದೇ ಕಾರಣಕ್ಕೂ ಪಕ್ಷಕ್ಕೆ ಮೋಸ ಮಾಡುವುದಿಲ್ಲ. ದಂಡಿನ ಮಾರಮ್ಮ ದೇವಾಲಯ ಪವಿತ್ರವಾಗಿದ್ದು, ಅದರ ಮೇಲೆ ಆಣೆ ಮಾಡಿ ಹೇಳುತ್ತಿರುವೆ ನಾನು ನಿಷ್ಠಾವಂತ ಕಾರ್ಯಕರ್ತ ಎಂದರು.
ಸಿಎಂ ಇಬ್ರಾಹಿಂ ಮಾತನಾಡಿ, ಭಿಕ್ಷೆ ಬೇಡಲು ಮೋದಿ ವಿದೇಶ ಸುತ್ತುತ್ತಾರೆ. ಸೇನೆಯ ದಾಖಲೆ ಕಾಪಾಡಲು ಸಾಧ್ಯವಾಗದ ಮೋದಿಗೆ ದೇಶ ಕಾಪಾಡಲು ಸಾಧ್ಯವೆ? ನಮಗೆ ಮೋದಿಯ ಭಯವಿಲ್ಲ. ದೇವೆಗೌಡ ರಾಜ್ಯದ ಏಕೈಕ ಪ್ರಧಾನಿಯಾಗಿದ್ದವರು. ಅಂತಹವರು ಚುನಾವಣೆಗೆ ನಿಂತಾಗ ಯಾರೂ ಕೂಡ ಅವರ ಎದುರು ಸ್ಪರ್ಧಿಸಬಾರದಿತ್ತು. ದೆಹಲಿಯಲ್ಲಿ ಹೊಟ್ಟೆ ಖಾಲಿಮಾಡಲು ಹತ್ತು ರೂಪಾಯಿ ಕೊಡಬೇಕು. ಇಲ್ಲಿ ಹತ್ತು ರೂಪಾಯಿಗೆ ಹೊಟ್ಟೆ ತುಂಬುತ್ತದೆ. ಇದು ಸಿದ್ದರಾಮಯ್ಯ ಸರ್ಕಾರದ ಸಾಧನೆ. ಜಿ.ಎಸ್ ಬಸವರಾಜುರವರು ಮೋದಿ ನೋಡಿ ವೋಟ್ ಕೊಡಿ ಅನ್ತಾರೆ.
ಮದುವೆಗೆಯಾಗಬೇಕಾದರೆ ಗಂಡು ನೋಡ್ತಾರೆ ಹೊರತು, ಗಂಡಿನ ಅಪ್ಪನನ್ನಲ್ಲ ಎಂದು ವ್ಯಂಗ್ಯವಾಡಿದರು. ತೇಜಸ್ವಿ ಸೂರ್ಯ ಅಂಬೇಡ್ಕರ್ ಪ್ರತಿಮೆ ಹೊಡೆದು ಹಾಕಿ ಅಂತ ಹೇಳ್ತಾರೆ. ಬಿಜೆಪಿ ಪಕ್ಷದ ಕೆಲವರು ಸಂವಿಧಾನ ಸುಡ್ತೀವಿ ಅಂತ ಹೇಳ್ತಿದಾರೆ. ಇಂತಹ ಪಕ್ಷದಲ್ಲಿ ಶ್ರೀನಿವಾಸಪ್ರಸಾದ್ ಯಾವ ರೀತಿ ಇರ್ತಾರೆ ಎಂದು ಪ್ರಶ್ನಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
