ಚಳ್ಳಕೆರೆ
ಬರ ಹಿನ್ನೆಲೆಯಲ್ಲಿ ತಾಲ್ಲೂಕಿನ ಹಲವಾರು ಗೋಶಾಲೆಗಳಿಗೆ ಮೇವು ವಿತರಣೆ ಮಾಡುವ ಕಾರ್ಯವನ್ನು ಖಾಸಗಿ ಗುತ್ತಿಗೆದಾರರಿಗೆ ವಹಿಸಿದ್ದು, ಪ್ರತಿನಿತ್ಯ ವಿವಿಧ ಗೋಶಾಲೆಗಳಿಗೆ ಅಗತ್ಯವಿರುವ ಮೇವನ್ನು ವಿತರಣೆ ಮಾಡಲಾಗುತ್ತಿದೆ. ಸೋಜಿಗದ ಸಂಗತಿ ಎಂದರೆ ಟ್ರ್ಯಾಕ್ಟರ್ ಮೂಲಕ ಗೋಶಾಲೆಗಳಿಗೆ ಸಾಗಾಣಿಕೆಯಾಗುವ ಮೇವು ಹೊತ್ತ ಟ್ರಾಲಿ ಒಳಗೆ ಬಾರವಾದ ಕಲ್ಲುಗಳು ಮತ್ತು ಮೇವಿಗೆ ನೀರನ್ನು ಹಾಕಿ ಸರಬರಾಜು ಮಾಡುತ್ತಿದ್ದು, ಇದನ್ನು ರೈತರೇ ಪತ್ತೆ ಹಚ್ಚಿರುವುದು ವಿಶೇಷ.
ಈ ಬಗ್ಗೆ ಪತ್ರಿಕೆಗೆ ಮಾಹಿತಿ ನೀಡಿದ ರೈತ ಮುಖಂಡ ಟಿ.ಮಂಜುನಾಥ ಮತ್ತು ತಂಡ ಶನಿವಾರ ಬೆಳಗ್ಗೆ ಇಲ್ಲಿನ ಎಜಿ ರಸ್ತೆಯಲ್ಲಿನ ಸರ್ಕಾರಿ ಗೋಶಾಲೆಗೆ ಟ್ರ್ಯಾಕ್ಟರ್ ಮೂಲಕ ಮೇವು ಸರಬರಾಜು ಆಗುತ್ತಿದ್ದ ಸಂದರ್ಭದಲ್ಲಿ ಅನುಮಾನಗೊಂಡ ಇವರು ಟ್ರ್ಯಾಕರ್ ನಿಲ್ಲಿಸಿ ತಪಾಸಣೆ ನಡೆಸಿದಾಗ ಮೇವಿನ ಜೊತೆಯಲ್ಲಿ ಸುಮಾರು ಎರಡು ಟನ್‍ನಷ್ಟು ಕಲ್ಲುಗಳು ಹಾಗೂ ಮೇವಿಗೆ ನೀರು ಹಾಕಿ ಸರಬರಾಜು ಮಾಡುತ್ತಿರುವುದು ಕಂಡು ಬಂದಿದ್ದು ಕೂಡಲೇ ಟ್ರ್ಯಾಕ್ಟರ್ ತಡೆದು ತಹಶೀಲ್ದಾರ್ ಎಂ.ಮಲ್ಲಿಕಾರ್ಜುನವರಿಗೆ ಮಾಹಿತಿ ನೀಡಿದ್ಧಾರೆ.
ಸುದ್ದಿ ತಿಳಿಸಿದ ಕೂಡಲೇ ತಹಶೀಲ್ದಾರ್ ಎಂ.ಮಲ್ಲಿಕಾರ್ಜುನ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ರೈತರು ಮಾಡಿದ ಆರೋಪದಲ್ಲಿ ಸತ್ಯಾಂಶವಿದ್ದು, ಕೂಡಲೇ ಟ್ರ್ಯಾಕ್ಟರ್ ಚಾಲಕನನ್ನು ತರಾಟೆಗೆ ತೆಗೆದುಕೊಂಡಿದ್ಧಾರೆ. ಜಾನುವಾರುಗಳಿಗೆ ಪ್ರತಿನಿತ್ಯ ನಿಗದಿತ ಪ್ರಮಾಣದಲ್ಲೇ ಮೇವು ನೀಡಬೇಕು. ಯಾವುದೇ ಕಾರಣಕ್ಕೂ ಮೇವಿಗೆ ನೀರು ಹಾಕುವುದು, ಕಲ್ಲು ಇಟ್ಟು ಹೆಚ್ಚು ತೂಕ ತೋರಿಸುದನ್ನು ಮಾಡಿದರೆ ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ್ದಾರಲ್ಲದೆ ಪ್ರಕರಣ ದಾಖಲಿಸಿ ಬಂಧಿಸಲಾಗುವುದು ಎಂದು ತಿಳಿಸಿದ್ಧಾರೆ.
ರೈತ ಗಾದ್ರಿಪಾಲಯ್ಯ, ಒಬಯ್ಯ, ಪಾಲಯ್ಯ, ಬಸವರಾಜು ಮಾತನಾಡಿ, ಕಳೆದ ಹಲವು ತಿಳುಗಳಿಂದ ಇಲ್ಲಿನ ಗೋಶಾಲೆಗೆ ಮೇವು ಸರಬರಾಜಾಗುತ್ತಿದ್ದು, ಈ ಬಗ್ಗೆ ಜಾನುವಾರುಗಳಿಗೆ ಸಮರ್ಪಕವಾಗಿ ಮೇವು ವಿತರಣೆ ಮಾಡಲಾಗುತ್ತಿದೆ ಎಂದು ಹೇಳಲಾಗಿತ್ತಾದರೂ ಕೆಲವೊಮ್ಮೆ ಜಾನುವಾರುಗಳಿಗೆ ಮೇವು ಸಿಗುತ್ತಿರಲಿಲ್ಲ. ಇದನ್ನು ಅನುಮಾನಗೊಂಡ ನಾವುಗಳು ಶನಿವಾರ ಬೆಳಗ್ಗೆ ರಸ್ತೆಯಲ್ಲೇ ಕಾದಿದ್ದು, ಬಂದ 7 ಲೋಡ್ ಮೇವನ್ನು ಪರಿಶೀಲಿಸಿದಾಗ ಕೆಲವು ಟ್ರ್ಯಾಕ್ಟರ್‍ಗಳಲ್ಲಿ ಮೇವಿನ ಜೊತೆಯಲ್ಲಿ ದೊಡ್ಡ ಗಾತ್ರದ ಕಲ್ಲು ಕಂಡರೆ ಕೆಲವುಗಳಲ್ಲಿ ಮೇವಿಗೆ ನೀರು ಹಾಕಿದ್ದು ಕಂಡು ಬಂತು ಕೂಡಲೇ ಟ್ರ್ಯಾಕ್ಟರ್ ನಿಲ್ಲಿಸಿ ತಹಶೀಲ್ದಾರ್‍ಗೆ ಮಾಹಿತಿ ನೀಡಿದ್ದೇವೆ. ತಹಶೀಲ್ದಾರ್‍ರವರು ಈಗಾಗಲೇ ಎಚ್ಚರಿಕೆ ನೀಡಿದ್ದು, ಮುಂದೆ ಈ ರೀತಿ ಲೋಪವಾಗದಂತೆ ಜಾಗ್ರತೆ ವಹಿಸುವುದಾಗಿ ತಿಳಿಸಿದ್ಧಾರೆ.
ತಹಶೀಲ್ದಾರ್ ಎಂ.ಮಲ್ಲಿಕಾರ್ಜುನ್ ಗೋಶಾಲೆಯ ಮೇಲ್ತುವಾರಿ ಗ್ರಾಮ ಲೆಕ್ಕಿಗ ರಾಘವೇಂದ್ರರವರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿ ಗೋಶಾಲೆಗೆ ಬಂದ ಪ್ರತಿಲೋಡ್ ಮೇವನ್ನು ಪರಿಶೀಲನೆ ನಡೆಸಬೇಕು, ಗುತ್ತಿಗೆದಾರ, ಸರ್ಕಾರಿ ಅಧಿಕಾರಿಯ ಸಮಕ್ಷಮದಲ್ಲಿ ತೂಕಮಾಡಿಸಿ ಲಿಖಿತ ಮೂಲಕ ಬರೆದು ಮೇವಿನಲ್ಲಿ ಯಾವುದೇ ತೇವಾಂಶ ಅಡಕವಾಗಿದೆ ಎಂಬ ಬಗ್ಗೆ ಪರಿಶೀಲನೆ ನಡೆಸಬೇಕು ಎಂದು ಸೂಚಿಸಿದರು.