ಜಾತಿ ಅಹಂ ತೊಡೆದು ಮನುಷ್ಯರಾಗಿ : ನಾಗಭೂಷಣ ಬಗ್ಗನಡು

ಪಾವಗಡ:

        ನಮ್ಮ ಮನಸು ಪರಿವರ್ತನೆಯಾಗದ ಹೊರತು ಸಮಾಜದಲ್ಲಿ ಸಾಮರಸ್ಯ ಕಾಣಲು ಸಾಧ್ಯವಿಲ್ಲ. ಸಾಮರಸ್ಯದ ಬದುಕು ನಮ್ಮದಾಗ ಬೇಕಿದೆ, ಸಾಮರಸ್ಯದ ಬದುಕು ಕಂಡುಕೊಂಡಾಗ ಸಮಾಜ ನೆಮ್ಮದಿಯಿಂದ ಇರಲು ಸಾಧ್ಯವಾಗುತ್ತದೆ ಎಂದು ತುಮಕೂರಿನ ವಿಶ್ವ ವಿದ್ಯಾನಿಲಯದ ಸಹಾಯಕ ಪ್ರಾಧ್ಯಾಪಕ ಡಾ.ನಾಗಭೂಷಣ ಬಗ್ಗನಡು ಅಭಿಪ್ರಾಯಪಟ್ಟರು.

      ತಾಲ್ಲೂಕಿನ ಬೂದಿಬೆಟ್ಟ ಗ್ರಾಮದಲ್ಲಿ ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆ, ತಾಲ್ಲೂಕು ಆಡಳಿತ ವತಿಯಿಂದ ಶುಕ್ರವಾರ ಸವರ್ಣೀಯರು ಮತ್ತುದಲಿತರ ನಡುವೆಆಯೋಜಿಸಿದ್ದ ಶಾಂತಿಸಭೆಯಲ್ಲಿ ಮಾತನಾಡಿದರು.ಜಾತಿ ಎನ್ನುವುದು ಸಮಾಜದಲ್ಲಿ ವಿಷ ಬೀಜದ ರೀತಿ ಪರಿವರ್ತನೆಯಾಗಿ , ಜಾತಿಯೇ ಎಲ್ಲದಕ್ಕೂ ಮಾನದಂಡವಾಗಿದೆ. ವಿದ್ಯಾವಂತರಾದ ನಾವೆಲ್ಲಾ ಜಾತಿ ಭೇದದ ವಿಷಬೀಜದ ಬಗ್ಗೆ ಅರ್ಥಮಾಡಿಕೊಳ್ಳುವ ತುರ್ತು ಇಂದಿಗಿದೆ.ಜಾತಿ ಕೆಲವರಿಗೆ ಅಹಂನ, ಅಭಿಮಾನದ ಪ್ರಶ್ನೆಯಾದರೆ ಕೆಲವರಿಗೆ ಅವಮಾನದ ಸಂಗತಿಯಾಗಿದೆ .

       ಯಾವಜಾತಿ ಕೀಳಲ್ಲ, ಯಾವಜಾತಿ ಮೇಲಲ್ಲ. ಮೂಲತಃ ನಾವೆಲ್ಲ ಮನುಷ್ಯರು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕಿದೆ .ಅಕ್ಷರವಂತರು , ಬುದ್ಧಿವಂತರು, ಶಿಕ್ಷಣ ಪಡೆದವರಾದ ನಾವು ಜಾತಿ ವ್ಯವಸ್ಥೆಯನ್ನು ತೊಡೆದು ಹಾಕುವ ಪ್ರಯತ್ನ ಮಾಡಬೇಕಿದೆ ಎಂದರು.
ಬುದ್ಧ, ಬಸವ, ಅಂಬೇಡ್ಕರ್, ಕನಕದಾಸ ಸೇರಿದಂತೆ ಇತ್ತೀಚಿನ ಆಂಧ್ರಪ್ರದೇಶದ ವೇಮುಲಾನಂತರವರೆಗೆ ಜಾತಿ ವ್ಯವಸ್ಥೆಯನ್ನು ತೊಡೆದು ಹಾಕಲು ಪ್ರಯತ್ನಪಟ್ಟರು. ನಮ್ಮ ಎಲ್ಲ ಪೂರ್ವಿಕರು ಜಾತಿಯನ್ನು ಹೋಗಲಾಡಿಸುವ ಪ್ರಯತ್ನ ಮಾಡಿದ್ದರೆ,ಅವರನ್ನು ಪೂಜಿಸುವ ನಾವು ಜಾತಿಗೆ ಅಂಟಿಕೊಂಡು ಜಗ್ಗಾಡುತ್ತಿದ್ದೇವೆ. ಈ ಸಮಾಜದಲ್ಲಿ ಎಲ್ಲರಿಗೂ ಗೌರವಯುತವಾಗಿ ಬದುಕುವ ಅವಕಾಶವಿದೆ ಎಂದರು.

       ಪಾರಂಪರಿಕವಾದದ್ದು, ಸಂಪ್ರದಾಯವಾದದ್ದು ಎನ್ನುವ ಅಸ್ಪೃಶ್ಯತೆಗೆ ಯಾವುದೇ ವೈಜ್ಞಾನಿಕ ಕಾರಣಗಳಿಲ್ಲ. ಜಗತ್ತು ಬದಲಾಗುತ್ತಿದೆ .ಚಂದ್ರಲೋಕಕ್ಕೆ, ಮಂಗಳಗ್ರಹಕ್ಕೆ ಮಾನವ ಹೋದರೂ ಭಾರತದಲ್ಲಿ ನಮ್ಮ ನಮ್ಮ ಊರುಗಳಲ್ಲಿ ಒಬ್ಬರ ಮನೆಗೆ ಮತ್ತೊಬ್ಬರು ಹೋಗದಂತ ಪರಿಸ್ಥಿತಿ ಇದೆ.ಜಾತಿ ನಮ್ಮನ್ನು ಭೇದಭಾವ ಮಾಡುತ್ತಿದೆ. ನಮ್ಮ ಭಾರತೀಯತೆಯನ್ನು ಒಡೆಯುತ್ತಿದೆ.ನಾವೆಲ್ಲ ಒಂದು.ಆದರೆ, ಜಾತಿಯ ವಿಷಬೀಜ ನಮ್ಮೊಳಗೆ ಬಿದ್ದುಅದು ನಮ್ಮಲ್ಲಿ ಅಹಂನ್ನು ಉಂಟು ಮಾಡುತ್ತಿದೆ ಎಂದರು.

       ಪ್ರತಿಯೊಬ್ಬ ಮನುಷ್ಯನಿಗೂ ಕಾನೂನು ಸಮಾನವಾಗಿ ಹಾಗೂ ಗೌರವಯುತವಾಗಿ ಬದುಕಲು ಅವಕಾಶ ಮಾಡಿಕೊಟ್ಟಿದೆ.ನಾವು ಕಾನೂನನ್ನು ಪರಿಪಾಲನೆ ಮಾಡುತ್ತಿರುವ ಸಮಾಜದಲ್ಲಿ ಬದುಕುತ್ತಿದ್ದೇವೆಯೇ ಹೊರತು ಅನ್ಯಲೋಕದಲ್ಲಲ್ಲ. ಆದ್ದರಿಂದ ನಾವೆಲ್ಲರೂ ಕಾನೂನಿಗೆ ಋಣಿಗಳಾಗಿ, ಕಾನೂನನ್ನು ಗೌರವಿಸಬೇಕಿದೆ.ಕಾನೂನನ್ನು ನಾವು ಗೌರವಿಸಿದರೆ ಕಾನೂನು ನಮ್ಮನ್ನು ಗೌರವಿಸುತ್ತದೆ ಎಂದರು.

       ನಮ್ಮ ಪರಂಪರೆಯಲ್ಲಿ ಬಸವಣ್ಣನ ವಚನಗಳು, ಕನಕದಾಸರ ಕೀರ್ತನೆಗಳು ಮುಂತಾದವರೆಲ್ಲ ಹೇಳುವುದು ಮನುಷ್ಯರೆಲ್ಲ ಒಂದೇ ಎಂದು. ಮನುಷ್ಯ ಶ್ರೇಷ್ಠ ಎಂದು ಬದುಕುತ್ತಿರುವ ಈ ನೆಲೆಯಲ್ಲಿ ನನ್ನಜಾತಿ ಶ್ರೇಷ್ಠ ಎಂದು ಹೇಳುವ ಯಾವ ಅರ್ಹತೆಯೂ ನಮಗಿಲ್ಲ. ತನ್ನಜಾತಿ ಶ್ರೇಷ್ಠ ಅವರಜಾತಿ ಕನಿಷ್ಠ ಎಂದು ಹೇಳುವವರ ರಕ್ತವೆಲ್ಲವೂಕೆಂಪಾಗಿಯೇಇದೆ.ಜಾತಿ ಶ್ರೇಷ್ಠ ಎಂಬ ನಂಬಿಕೆ ಹುಸಿಯಾದುದು ಎಂದರು.

       ಪ್ರತಿಯೊಬ್ಬರಲ್ಲೂ ಮಾನವೀಯತೆ ಸದಾ ಇರಬೇಕು.ಮಾನವೀಯತೆನ್ನು ಕಳೆದುಕೊಂಡಾಗ ಮಾನವ ಕುಲವೇ ನಾಶವಾಗಿ ಹೋಗುತ್ತದೆ. ಹಾಗಾಗಿ ಸಮಾಜದಲ್ಲಿ ಶಾಂತಿ ಸಾಮರಸ್ಯ ಕಾಪಾಡಿಕೊಂಡು ನಮ್ಮೊಳಗಿರುವ ಜಾತಿಭೇದ, ಜಾತಿ ಅಹಂನ್ನುಕಿತ್ತೆಸೆದು ಮನುಷ್ಯರಾಗಿ ಬದುಕೋಣ. ಮಾನವೀಯತೆ ಎಂಬ ಬೀಜವನ್ನು ನಮ್ಮ ಅಂತರಂಗದಲ್ಲಿ ಬಿತ್ತಿದರೆ ಅದುದೊಡ್ಡ ಹೆಮ್ಮರವಾಗಿ ಬೆಳೆಯುತ್ತದೆ.ಅದು ಸದಾಎಲ್ಲರಿಗೂ ನೆರಳನ್ನು ನೀಡುತ್ತದೆ.ಆದ್ದರಿಂದಎಲ್ಲರೂ ಮಾನವೀಯ ಪ್ರಜ್ಞೆಯನ್ನು ಬೆಳೆಸಿಕೊಳ್ಳಬೇಕು ಎಂದರು.
ತಹಶೀಲ್ದಾರ್ ವಿ.ಎಸ್.ಕುಂಬಾರ ಮಾತನಾಡಿ, ದಲಿತರ ಮೇಲೆ ಜಾತಿ ದೌರ್ಜನ್ಯ ಎಸಗಿದವರ ಮೇಲೆ ಕಾನೂನು ರೀತಿಕ್ರಮ ಕೈಗೊಳ್ಳಲಾಗುತ್ತದೆ .

        ಗ್ರಾಮದಲ್ಲಿ ಎಲ್ಲರೂ ಸೌಹಾರ್ಧಯುತವಾಗಿ ಸಹಬಾಳ್ವೆಯಿಂದ ಜೀವನ ಮಾಡಬೇಕು ಎಂದರು. ಗ್ರಾಮಸ್ಥ ಹರೀಶ್‍ರೆಡ್ಡಿ ಮಾತನಾಡಿ, ಪ್ರಕರಣದಲ್ಲಿ ಭಾಗಿಯಾಗದವರ ವಿರುದ್ಧಜಾತಿ ನಿಂದನೆದೂರು ದಾಖಲಿಸಲಾಗಿದೆ.ರಾಜಿ ಸಂಧಾನ ಮಾಡಿದರೆ ಗ್ರಾಮದಲ್ಲಿ ಹೊಂದಾಣಿಕೆ ಇರುತ್ತದೆ, ಇಲ್ಲ ನಾವು ಕಾನೂನು ರೀತಿಯಾಗಿ ಹೋಗುತ್ತೇವೆ ಎಂದರೆ ಸಾಮರಸ್ಯ ಇರುವುದಿಲ್ಲ ಎಂದರು.

      ಘಟನೆ ನಡೆದಾಗ ಗ್ರಾಮದಲ್ಲಿ ಹಿರಿಯರನ್ನು ಸೇರಿಸಿ ಮಂತ್ರಿಗಳನ್ನು ಕರೆಸಿ, ಮಾಜಿ ಶಾಸಕ ತಿಮ್ಮರಾಯಪ್ಪ ಎಲ್ಲರೂ ಕುಳಿತು ಮಾತನಾಡಿ ಬಗೆಹರಿಸಬಹುದಿತ್ತು.ಈ ಸಮಸ್ಯೆ ಬಗೆಹರಿಯಬೇಕಾದರೆ ದಲಿತರು ನಮಗೆ ಸಹಕರಿಸಬೇಕು.ದಲಿತರ ಮೇಲೆ ದೌರ್ಜನ್ಯ ಮಾಡಿರುವುದು ತಪ್ಪು ಎಂದು ಹೇಳುತ್ತೇವೆ. ತಪ್ಪನ್ನು ತಪ್ಪು ಎಂದು ನಾವು ಒಪ್ಪಿಕೊಳ್ಳುತ್ತಿದ್ದೇವೆ. ಗ್ರಾಮಸ್ಥರು ಸುರಕ್ಷಿತವಾಗಬೇಕು, ಅವರು ಉಳಿಯಬೇಕು ಎಂದರೆ ರಾಜಿಯಾಗಬೇಕು, ಇಲ್ಲ ಕಾನೂನು ಪ್ರಕಾರವೇ ನಡೆಯಲಿ ಎಂದರೆ ಗ್ರಾಮದಲ್ಲಿ ಹೊಂದಾಣಿಕೆ ಇರುವುದಿಲ್ಲ. ಇದು ಹೀಗೆ ಮುಂದುವರೆಯುತ್ತದೆ. ಇದು ಒಂದು ಹಳ್ಳಿಯಲ್ಲಿ ಆಗಿದ್ದು, ಮತ್ತೊಂದು ಹಳ್ಳಿಯಲ್ಲಿ ಆಗುತ್ತದೆ.ಅವರು ಹೀಗೆ ಇವರು ಹೀಗೆ ಎಂದು ಬಾಳಬೇಕಾಗುತ್ತದೆ ಎಂದರು.

       ದೂರುದಾರ ಓಬಳನರಸಿಂಹ ಮಾತನಾಡಿ, ಗ್ರಾಮದಲ್ಲಿ ಘಟನೆ ನಡೆದು ಎರಡು ವಾರ ಕಳೆದರೂ ಪೊಲೀಸರು ಯಾರೊಬ್ಬ ಆರೋಪಿಯನ್ನು ಬಂಧಿಸಿಲ್ಲ. ಸವರ್ಣೀಯರು ನಿತ್ಯ ನಮ್ಮ ಕೇರಿಗಳಿಗೆ ಬಂದುಜೀವ ಬೆದರಿಕೆ ಹಾಕುತ್ತಿದ್ದಾರೆ. ಬೆದರಿಕೆಯಿಂದ ಭಯ ಗೊಂಡಿರುವ ನಾವೆಲ್ಲ ಗ್ರಾಮವನ್ನು ತೊರೆದಿದ್ದೇವೆ. ಶೀಘ್ರ ಆರೋಪಿಗಳನ್ನು ಬಂಧಿಸಿ ನಮಗೆ ರಕ್ಷಣೆ ನೀಡಬೇಕು ಹಾಗೂ ಪ್ರಕರಣವನ್ನು ನ್ಯಾಯಾಲಯದಲ್ಲಿಯೇ ತೀರ್ಮಾನ ಮಾಡಬೇಕು ಎಂದು ಒತ್ತಾಯಿಸಿದರು.

        ಈ ವೇಳೆ ತಾಲ್ಲೂಕು ಸಮಾಜ ಕಲ್ಯಾಣ ಅಧಿಕಾರಿ ಶಿವಪ್ಪ, ವೈ,ಎನ್.ಹೊಸಕೋಟೆ ಪೊಲೀಸ್‍ ಠಾಣೆ ಸಬ್‍ ಇನ್ಸ್ ಪೆಕ್ಟರ್ ರಂಗಪ್ಪ ಸೇರಿದಂತೆ ತಾಲ್ಲೂಕು ಆಡಳಿತ ಅಧಿಕಾರಿಗಳು, ಗ್ರಾಪಂ ಸಿಬ್ಬಂದಿ ಹಾಗೂ ಗ್ರಾಮಸ್ಥರುಇದ್ದರು.

ಘಟನೆಯ ಹಿನ್ನೆಲೆ:

      ಪಾವಗಡ ತಾಲ್ಲೂಕಿನ ಬೂದಿಬೆಟ್ಟ ಗ್ರಾಮದಲ್ಲಿ ಏಪ್ರಿಲ್ 14ರಂದು ದಲಿತರು ಅಂಬೇಡ್ಕರ್ ಜಯಂತಿ ಆಚರಿಸುತ್ತಿದ್ದರು .ತಮ್ಮ ಕೇರಿಯಲ್ಲಿ ಶಾಮಿಯಾನ ಹಾಕಿಕೊಂಡು ಅಡುಗೆ ವ್ಯವಸ್ಥೆ ಮಾಡಿಕೊಂಡಿದ್ದರು. ದಲಿತರು ಗ್ರಾಮದಲ್ಲಿ ಅಂಬೇಡ್ಕರ್ ಭಾವಚಿತ್ರವನ್ನು ಮೆರವಣಿಗೆ ಮಾಡುತ್ತಿದ್ದ ಸಂದರ್ಭದಲ್ಲಿ ಸವರ್ಣೀಯ ಜನಾಂಗದ ತಿಪ್ಪೇರುದ್ರಪ್ಪ ಎನ್ನುವವರು ತಮ್ಮ ಜಮೀನಿನಲ್ಲಿ ಬೋರ್‍ವೆಲ್‍ಕೊರೆಸಲು ಬೋರ್ ಲಾರಿಯನ್ನು ಕರೆಸಿದ್ದರು. ಬೋರ್ ಲಾರಿಯು ದಲಿತಕೇರಿಯಲ್ಲಿ ಹಾದು ಹೋಗುವ ರಸ್ತೆಯಲ್ಲೇ ಹಾದುಹೋಗಬೇಕು.ಈ ಸಂದರ್ಭದಲ್ಲಿ ತಿಪ್ಪೇರುದ್ರಪ್ಪ ಎನ್ನುವರು ಶಾಮಿಯಾನವನ್ನು ಕಿತ್ತುರಸ್ತೆಗೆ ಎಸೆದು ಬೋರ್ ವೆಲ್  ಲಾರಿಯನ್ನು ತೆಗೆದುಕೊಂಡು ಹೋಗಿದ್ದಾರೆ .ಶಾಮಿಯಾನ ಕಿತ್ತು ಹಾಕಿದ ವಿಷಯ ತಿಳಿದ ಕೆಲ ದಲಿತ ಯುವಕರು ಅವರನ್ನು ಪ್ರಶ್ನಿಸಿದ್ದಾರೆ.ಇದರಿಂದ ಕೋಪಗೊಂಡ ಸವರ್ಣೀಯರು ದಲಿತರ ಮೇಲೆ ಹಲ್ಲೆ ನಡೆಸಿದ್ದಾರೆ.

         ಅಷ್ಟೇ ಅಲ್ಲದೆ ಗ್ರಾಮದಲ್ಲಿರುವ ಸವರ್ಣೀಯರೆಲ್ಲರೂ ಒಟ್ಟಾಗಿ ಮಹಿಳೆಯರು ಮಕ್ಕಳೆನ್ನದೆ ದಲಿತರ ಮನೆಗಳಿಗೆ ನುಗ್ಗಿ ದಲಿತರ ಮೇಲೆ ಹಲ್ಲೆ ಮಾಡಿದ್ದಾರೆ.ಅಲ್ಲದೆ ಪ್ರಾಣ ಬೆದರಿಕೆಯನ್ನೂ ಹಾಕಿ ಜಾತಿನಿಂದನೆ ಮಾಡಿದ್ದಾರೆ.ಇದರಿಂದ ಹಲ್ಲೆಗೊಳಗಾದ ದಲಿತರು ವೈ.ಎನ್.ಹೊಸಕೋಟೆ ಪೊಲೀಸ್‍ಠಾಣೆಗೆ ತೆರಳಿ 21 ಜನರ ವಿರುದ್ಧ ಜಾತಿನಿಂದನೆ ಹಾಗೂ ಪ್ರಾಣ ಬೆದರಿಕೆದೂರು ದಾಖಲಿಸಿದ್ದರು. ಇದರಿಂದ ಬೂದಿಬೆಟ್ಟ ಗ್ರಾಮದಲ್ಲಿ ದಲಿತರು ಮತ್ತು ಸವರ್ಣೀಯರ ಮಧ್ಯೆ ವಿಷಮ ಪರಿಸ್ಥಿತಿ ಉಂಟಾಗಿತ್ತು.ಈ ಕಾರಣದಿಂದ ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆ ತಹಶೀಲ್ದಾರ್ ನೇತೃತ್ವದಲ್ಲಿ ಗುರುವಾರ ಗ್ರಾಮದಲ್ಲಿ ಶಾಂತಿ ಸಭೆ ಆಯೋಜಿಸಿತ್ತು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link
Powered by Social Snap