ಜಾತಿ-ಧರ್ಮಕ್ಕೆ ಮಹಾತ್ಮರು ಸೀಮಿತ ಸಲ್ಲ

ದಾವಣಗೆರೆ:

    ನಾಡಪ್ರಭು ಕೆಂಪೇಗೌಡರು ಸೇರಿದಂತೆ ಮಹಾತ್ಮರನ್ನು ಯಾವುದೇ ಒಂದು ಜಾತಿ, ಧರ್ಮಕ್ಕೆ ಸೀಮಿತ ಮಾಡುವುದು ಸರಿಯಲ್ಲ ಎಂದು ಬೆಂಗಳೂರಿನ ಜಾನಪದ ಹಾಗೂ ಬುಡಕಟ್ಟು ಸಂಶೋಧಕ ಡಾ. ಹನಿಯೂರು ಚಂದ್ರೇಗೌಡ ತಿಳಿಸಿದರು.

    ನಗರದ ಕುವೆಂಪು ಕನ್ನಡ ಭವನದಲ್ಲಿ ಗುರುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕತಿ ಇಲಾಖೆ, ಮಹಾನಗರ ಪಾಲಿಕೆ ಹಾಗೂ ಜಿಲ್ಲಾ ಒಕ್ಕಲಿಗರ ಸಂಘ ಇವುಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ನಾಡಪ್ರಭು ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿ ಅವರು ಮಾತನಾಡಿದರು.

     ಮಹಾತ್ಮರನ್ನು ಯಾವುದೇ ಕಾರಣಕ್ಕೂ ಯಾರೂ ಸಹ ಒಂದು ಜಾತಿ, ಧರ್ಮಕ್ಕೆ ಸೀಮಿತ ಮಾಡುವುದನ್ನು ಬಿಟ್ಟು, ಮಹಾತ್ಮರನ್ನು ಮಹಾತ್ಮರನ್ನಾಗಿ ಇರಲು ಬಿಟ್ಟು, ಅವರ ಆಲೋಚನೆಗಳು ಹಾಗೂ ಚಿಂತನೆಗಳನ್ನು ಮಾತ್ರ ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕೆಂದು ಕಿವಿಮಾತು ಹೇಳಿದರು.

     ಮಹಾತ್ಮರ ಚಿಂತನೆಗಳು ಮತ್ತು ಕಾರ್ಯ ಚಟುವಟಿಕೆಗಳನ್ನು ನಾವು ತಿಳಿದುಕೊಳ್ಳುವ ಮೂಲಕ ನಮ್ಮಲ್ಲಿ ಬದಲಾವಣೆ ತಂದುಕೊಳ್ಳಬೇಕಾದ ಅವಶ್ಯಕತೆ ಇದೆ. ನಾಡ ಪ್ರಭು ಕೆಂಪೇಗೌಡರು ಸರ್ವಜಾತಿ ಸಮನ್ವಯ, ಸರ್ವಧರ್ಮ ಪರಿಪಾಲಕರಾಗಿದ್ದರು ಎಂದು ಸ್ಮರಿಸಿದ ಅವರು, ವಿಶಾಲ ನೀರಾವರಿ ಯೋಜನೆಗಳು ಹಾಗೂ ಬೃಹತ್ ಬೆಂಗಳೂರು ನಿರ್ಮಾಣದಂತಹ ಕಾರ್ಯಗಳಿಂದ ನಾಡಿನಲ್ಲಿ ಪ್ರಖ್ಯಾತಿ ಹೊಂದಿದಂತಹವರು. ಅವರ ಅಂದಿನ ಯೋಜನೆಗಳು ಇಂದಿಗೂ ಪ್ರಸ್ತುತವಾಗಿವೆ ಎಂದರು.

     ಕೆಂಪೇಗೌಡರು ಒಂದೂವರೆ ಕಿ.ಲೋ.ಮೀಟರ್ ವ್ಯಾಪ್ತಿಯಲ್ಲಿ ನಾಲ್ಕು ಹೆಬ್ಬಾಗಿಲುಗಳನ್ನು ಕಟ್ಟಿ ಬೆಂಗಳೂರು ಈ ಹೆಬ್ಬಾಗಿಲಗಳವರೆಗೆ ಮಾತ್ರ ವಿಸ್ತಾರವಾಗಬೇಕು. ಎಂಬುದು ಅವರ ಯೋಜನೆಯಾಗಿತ್ತು. ಕೆಂಪೇಗೌಡರು ಸುಮಾರು 480 ವರ್ಷಗಳ ಹಿಂದೆಯೇ ಕೃಷಿ ಮತ್ತು ನೀರಾವರಿಗೆ ಹೆಚ್ಚಿನ ಪ್ರ್ರಾಮುಖ್ಯತೆ ನೀಡಿದ್ದು, ಅದಕ್ಕಾಗಿ 387 ದೊಡ್ಡ ಕೆರೆಗಳು ಹಾಗೂ ಒಂದು ಸಾವಿರಕ್ಕೂ ಅಧಿಕ ಸಣ್ಣ ಕೆರೆಗಳನ್ನು ನಿರ್ಮಾಣ ಮಾಡಿದ್ದರು.

      ಇಂದು ಬೆಂಗಳೂರಿನ ಬೃಹತ್ ಬೆಳವಣಿಗೆಯಿಂದಾಗಿ ಸಿದ್ದನಕಟ್ಟೆ ದೊಡ್ಡ ಕೆರೆಯು ಕೆ.ಆರ್ ಮಾರುಕಟ್ಟೆಯಾಗಿ, ಸಂಪಂಗಿ ಕೆರೆಯು ಕಂಠೀರವ ಸ್ಟೇಡಿಯಂ ಆಟದ ಮೈದಾನವಾಗಿ, ಧರ್ಮಾವತಿ ಕೆರೆಯು ಮೆಜೆಸ್ಟಿಕ್ ಬಸ್ ನಿಲ್ದಾಣವಾಗಿ ಮಾರ್ಪಟ್ಟಿವೆ. ಹೀಗೆ ನಿರಂತರ ಒತ್ತುವರಿಯಿಂದಾಗಿ ಇಂದು ಕೇವಲ ಬೆರಳೆಣಿಕೆಯಷ್ಟು ಕೆರೆಗಳು ಮಾತ್ರ ಉಳಿದುಕೊಂಡಿವೆ ಎಂದು ಬೇಸರ ವ್ಯಕ್ತಪಡಿಸಿದರು.

     ಕೆಂಪೇಗೌಡರು ತಮ್ಮ ಕಾಲಾವಧಿಯಲ್ಲಿ ಸರ್ವಜಾತಿಗೆ ಪ್ರಾಮುಖ್ಯತೆ ನೀಡಿದ್ದು, ಜಾತಿ ಮತ್ತು ಕುಲಕಸುಬುಗಳಿಗೆ ಸಂಬಂಧಿಸಿದಂತೆ ಶಟ್ಟಿಪೇಟೆ, ಗೌಡಪೇಟೆ, ಅಕ್ಕಿಪೇಟೆ ಮತ್ತು ಬಳೆಪೇಟೆ ಸೇರಿದಂತೆ ಸುಮಾರು 52 ಪೇಟೆಗಳನ್ನು ಕಟ್ಟಿದ್ದಾರೆ. ಕೆಂಪೇಗೌಡರ ಈ ಪೇಟೆಗಳನ್ನು ಕಂಡ ಬ್ರಿಟಿಷರು ಲಂಡನ್‍ನಲ್ಲಿ 12 ಪೇಟೆಗಳನ್ನು ಇವರ ವಿಚಾರಗಳನ್ನಿಟ್ಟುಕೊಂಡು ಲಂಡೋನಿಯಾ ಎನ್ನುವ ಸ್ಟ್ರೀಟ್‍ಗಳನ್ನು ಕಟ್ಟಿದ್ದಾರೆ ಎಂದರು.

    ಶಾಸಕ ಎಸ್.ಎ ರವೀಂದ್ರನಾಥ್ ಮಾತನಾಡಿ, ಕೆಂಪೇಗೌಡರು ಅನೇಕ ನಗರಗಳನ್ನು ನಿರ್ಮಾಣ ಮಾಡಿ, ಹೆಸರುಗಳನ್ನು ಇಟ್ಟಿದ್ದಾರೆ. ನೂರಾರು ಕೆರೆಗಳನ್ನು ಕಟ್ಟಿದ್ದಾರೆ. ಆದರೆ ನಾವು ಒಂದು ಕೆರೆಯನ್ನೂ ಕಟ್ಟಲಾಗುವುದಿಲ್ಲ. ಅಂದಿನ ಜನರಲ್ಲಿ ತ್ಯಾಗದ ಮನೊಭಾವನೆ ಇದ್ದಿದ್ದರಿಂದ ಅವರು ಕೆರೆಗಳನ್ನು ಕಟ್ಟಲು ಜಮೀನುಗಳನ್ನು ದಾನ ಮಾಡಿದ್ದರು. ಆದರೆ, ಇಂದು ಮನುಷ್ಯ ಸ್ವಾರ್ಥಕ್ಕೆ ಒಳಗಾಗಿ ಕೆರೆಗಳನ್ನು ಒತ್ತುವರಿ ಮಾಡುತ್ತಿರುವುದು ಅತ್ಯಂತ ವಿಪರ್ಯಾಸವಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.

      ಜಿ.ಪಂ ಅಧ್ಯಕ್ಷೆ ಶೈಲಜಾ ಬಸವರಾಜ್ ಮಾತನಾಡಿ, ಇಂದು ಕರ್ನಾಟಕ ಎಂದ ಕೂಡಲೇ ಕೆಂಪೇಗೌಡರು 480 ವರ್ಷಗಳ ಹಿಂದೆ ನಿರ್ಮಿಸಿದ ಬೆಂಗಳೂರು ನಗರದ ಹೆಸರನ್ನು ಹೇಳುತ್ತಾರೆ. ಕೆಂಪೇಗೌಡರು ಬೆಂಗಳೂರು ನಗರದಲ್ಲಿ ಉತ್ತಮ ಮಾರುಕಟ್ಟೆ, ವ್ಯವಸ್ಥಿತವಾದ ಪೇಟೆಗಳನ್ನು ನಿರ್ಮಾಣ ಮಾಡಿ ಅಂದಿನ ಕಾಲದಲ್ಲಿಯೇ ಎಲ್ಲರಿಗೂ ಉಪಯುಕ್ತವಾಗುವಂತಹ ನಗರವನ್ನಾಗಿ ನಿರ್ಮಿಸಿದ್ದರು. ನಮ್ಮ ನಗರವು ಸಹ ಬೆಂಗಳೂರು ನಗರದಂತೆ ಬೆಳೆದು ಇಲ್ಲಿಯೂ ಐಟಿಬಿಟಿ ಕಂಪನಿಗಳು ಪ್ರಾರಂಭವಾಗಿ ಉದ್ಯೋಗಗಳು ಸೃಷ್ಟಿಯಾಗಲಿ ಎಂದು ಶುಭ ಹಾರೈಸಿದರು.

      ಜಿ.ಪಂ ಸದಸ್ಯ ಕೆ.ಎಸ್.ಬಸವಂತಪ್ಪ ಮಾತನಾಡಿ, ಕೆಂಪೇಗೌಡರು ಬೆಂಗಳೂರು ನಗರವನ್ನು ನಿರ್ಮಾಣ ಮಾಡಿದ ರೀತಿಯಲ್ಲಿ, ಇಂದು ನಾವು ಒಡೆದ ಮನಸ್ಸುಗಳನ್ನು ಕಟ್ಟಿ, ಜಾತಿ ಮತ ಬೇಧಗಳಿಲ್ಲದ ಹೊಸ ನಾಡನ್ನು ಕಟ್ಟಬೇಕಾಗಿದೆ ಎಂದರು.

      ಅಪರ ಜಿಲ್ಲಾಧಿಕಾರಿ ಪದ್ಮ ಬಸವಂತಪ್ಪ ಮಾತನಾಡಿ, ಜನರಿಗಾಗಿ ಕೆಲಸ ಮಾಡಿದವರು, ಜನರ ಒಳಿತಿಗಾಗಿ ದುಡಿದಂತಹ ಕೆಂಪೇಗೌಡರು ಮತ್ತು ವಿಶ್ವೇಶ್ವರಯ್ಯ ಅವರು ಜನರ ಮನಸ್ಸಿನಲ್ಲಿ ಶಾಶ್ವತವಾಗಿ ಅಚ್ಚಳಿಯದೇ ಉಳಿದಿದ್ದಾರೆ. ಮಹನೀಯರ ಚಿಂತನೆಗಳನ್ನು ನಮ್ಮ ಮುಂದಿನ ಪೀಳಿಗೆಗೆ ತಿಳಿಸಿ, ಅವರಲ್ಲಿ ಉತ್ತಮ ಚಿಂತನೆಗಳನ್ನು ಬಿತ್ತಿ ಮುಂದೆಯೂ ಅಂತಹ ವ್ಯಕ್ತಿಗಳು ತಲೆ ಎತ್ತುವಂತೆ ಮಾಡಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.

    ಕಾರ್ಯಕ್ರಮದಲ್ಲಿ ಜಿಲ್ಲಾ ಒಕ್ಕಲಿಗ ಸಂಘದ ಅಧ್ಯಕ್ಷ ಎನ್.ಜೆ ನಾಗರಾಜ್, ಕನ್ನಡ ಮತ್ತು ಸಂಸ್ಕತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ್ ಬೆಕ್ಕೇರಿ ಮತ್ತಿತರರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap