ಜಾತಿ ರಾಜಕಾರಣ ಹುಟ್ಟಿದ್ದು ದೇವೇಗೌಡರಿಂದ : ಜೆ.ಸಿ.ಮಾಧುಸ್ವಾಮಿ

ಚಿಕ್ಕನಾಯಕನಹಳ್ಳಿ

        ರಾಜ್ಯದಲ್ಲಿ ಜಾತಿ ರಾಜಕಾರಣ ಹುಟ್ಟಿದ್ದು ದೇವೇಗೌಡರಿಂದ, ಈ ಬಾರಿ ದೇವೇಗೌಡರನ್ನು ಸೋಲಿಸುವ ಮೂಲಕ ಜಾತಿ ರಾಜಕಾರಣಕ್ಕೆ ಇತಿಶ್ರೀ ಆಡಿ, ತುಮಕೂರನ್ನು ಕುಟುಂಬ ರಾಜಕಾರಣದ ಕಪಿಮುಷ್ಠಿಯಿಂದ ತಪ್ಪಿಸಿ ಎಂದು ಶಾಸಕ ಜೆ.ಸಿ.ಮಾಧುಸ್ವಾಮಿ ಹೇಳಿದರು.

        ಪಟ್ಟಣದ ಕೆ.ಎಂ.ಎಚ್.ಪಿ.ಎಸ್ ಶಾಲಾ ಆವರಣದಲ್ಲಿ ನಡೆದ ಬಿ.ಜೆ.ಪಿ. ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ದೇವೇಗೌಡ ಕುಟುಂಬದ್ದು ಪಿತೂರಿ ರಾಜಕಾರಣ, ದೇವೇಗೌಡರು 17 ಸಂಸದರ ಸೀಟು ಇಟ್ಟುಕೊಂಡು ಪ್ರಧಾನಿಯಾದರು, ಅವರ ಮಗ ಕುಮಾರಸ್ವಾಮಿ 37 ಸೀಟು ಪಡೆದು ಮುಖ್ಯಮಂತ್ರಿ ಆಗಿದ್ದಾರೆ ಎಂದರು.

      ನಾನು ಎಂದು ಯಾರ ಮೇಲೆಯೂ ವೈಯಕ್ತಿಕವಾಗಿ ಮಾತನಾಡಿರಲಿಲ್ಲ, ಆದರೆ ಮುಖ್ಯಮಂತ್ರಿ ಕುಮಾರಸ್ವಾಮಿ ಚಿಕ್ಕನಾಯಕನಹಳ್ಳಿಗೆ ಬಂದು ನನ್ನ ವಿರುದ್ದ ಅವಹೇಳನಕಾರಿಯಾಗಿ ಮಾತನಾಡಿ ಹೋಗಿದ್ದಾರೆ, ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಬಸವರಾಜು ಅಪ್ರಸ್ತುತ ಆದರೆ ಮೋದಿಯವರ ಗೆಲುವಿಗಾಗಿ ಬಿಜೆಪಿ ಮತ ಹಾಕಿ ಎಂದರು.

       ಹುಳಿಯಾರು ಸಮೀಪದ ತಮ್ಮಡಿಹಳ್ಳಿ ಗೊಲ್ಲರಹಟ್ಟಿಯಲ್ಲಿ ಕಾಂಗ್ರೆಸ್-ಜೆಡಿಎಸ್ ಮುಖಂಡರು ಸಂಚು ರೂಪಿಸಿ ಕುಡುಕನಿಗೆ ಮದ್ಯವನ್ನು ಕುಡಿಸಿ ನನ್ನ ವಿರುದ್ದ ಮಾತನಾಡುವಂತೆ ಪ್ರೇರೇಪಿಸಿದ್ದರು, ನಾನು ಒಂದು ಗಂಟೆಗೆಳ ಕಾಲ ತಾಳ್ಮೆಯಿಂದ ಸಹಿಸಿಕೊಂಡೆ ಅವನ ಆಟೋಟೋಪ ಹೆಚ್ಚಾಗಿದ್ದರಿಂದ ದೂರಕ್ಕೆ ದಬ್ಬಿದೆ ಅದನ್ನು ವಿಡಿಯೋ ಮಾಡಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ಗೊಲ್ಲ ಸಮುದಾಯವನ್ನು ನನ್ನ ವಿರುದ್ದ ಎತ್ತಿಕಟ್ಟಲು ಸಂಚು ರೂಪಿಸಿದ್ದಾರೆ ಎಂದು ಆರೋಪಿಸಿದರು.

         ಈ ವಿಚಾರವನ್ನ ಇಟ್ಟುಕೊಂಡು ಕಾಂಗ್ರೆಸ್ ಮುಖಂಡ ಸಾಸಲು ಸತೀಶ್ ನನ್ನ ವಿರುದ್ದ ಹೇಳಿಕೆ ನೀಡುತ್ತಿದ್ದಾರೆ, ಇವರು ಗೊಲ್ಲ ಸಮುದಾಯವನ್ನು ಕಾಡುಗೊಲ್ಲರು, ಊರುಗೊಲ್ಲರು ಎಂದು ವಿಭಾಗ ಮಾಡುತ್ತಿದ್ದಾರೆ, ಇವರಿಗೇನು ಗೊತ್ತು ನಾನು ಶಾಸಕನಾದ ತಕ್ಷಣ ಗೊಲ್ಲ ಸಮುದಾಯವನ್ನು ಪರಿಶಿಷ್ಠ ಪಂಗಡಕ್ಕೆ ಸೇರಿಸಲು ವಿಧಾನಸಭೆಯಲ್ಲಿ ಪ್ರಸ್ತಾಪಿಸಿದ್ದಾನೆ ಹಾಗೂ ಗೊಲ್ಲರಹಟ್ಟಿಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸಲು ಒತ್ತಡ ಹಾಕಿದ್ದೇನೆ ಈಗಿರುವಾಗ ಗೊಲ್ಲ ಸಮುದಾಯದ ನಿಜವಾದ ನಾಯಕ ನಾನು ಎಂದರು.

       ಕುಮಾರಸ್ವಾಮಿ ಮತ್ತು ದೇವೇಗೌಡ ತಮ್ಮ ಪಕ್ಷದವರನ್ನೇ ಸೋಲಿಸಲು ಸಂಚು ರೂಪಿಸಿದ ಹಲವಾರು ಉದಾಹರಣೆಗಳಿಗೆ ಅದರಲ್ಲಿ ಆರ್.ಎಲ್.ಜಾಲಪ್ಪ ದೊಡ್ಡಬಳ್ಳಾಪುರದಲ್ಲಿ ಜೆಡಿಎಸ್‍ನಿಂದಲೇ ಚುನಾವಣೆಗೆ ನಿಂತಾಗ ಜಾಲಪ್ಪರವರನ್ನೇ ಸೋಲಿಸಲು ಸ್ವತಹ ಕುಮಾರಸ್ವಾಮಿಯೇ ಅವರ ವಿರೋಧಿಗಳಿಗೆ ಮದ್ಯ ಸರಬರಾಜು ಮಾಡಿದ ನಿದರ್ಶನವಿದೆ ಎಂದು ಗಂಭೀರ ಆರೋಪ ಮಾಡಿದರು.

       ಕಾವೇರಿ ನಿಗಮದ ನಿಯಮದಂತೆ ಹಾಸನಕ್ಕೆ 17ಟಿಎಂಸಿ ಹಾಗೂ ತುಮಕೂರಿಗೆ 24ಟಿಎಂಸಿ ನೀರು ಕೊಡಬೇಕಿದೆ ಆದರೆ 1964ರಿಂದ ಇಲ್ಲಿಯವರೆಗೆ ಒಂದು ವರ್ಷವೂ ಕೂಡ ತುಮಕೂರು ಜಿಲ್ಲೆಗೆ ನಿಗಧಿಯಾಗಿರುವ ನೀರನ್ನು ಬಿಟ್ಟಿಲ್ಲ ಇದಕ್ಕೆ ಮುಖ್ಯ ಕಾರಣ ದೇವೇಗೌಡರು ಎಂದು ಆರೋಪಿಸಿದ ಅವರು, ದೇವೇಗೌಡರ ಮೊಮ್ಮಗ ಪ್ರಜ್ವಲ್‍ರೇವಣ್ಣ ಜೆಡಿಎಸ್‍ನಲ್ಲಿ ಸೂಟ್‍ಕೇಸ್ ಸಂಸ್ಕತಿ ಇದೆ, ಸೂಟ್‍ಕೇಸ್ ನೀಡಿದರೆ ಟಿಕೆಟ್ ದೊರೆಯುತ್ತದೆ ಎಂದು ಹೇಳಿಕೆ ನೀಡಿದ್ದರು,

         ಆ ನಂತರ ಇವರಿಗೆ ಹಾಸನ ಲೋಕಸಭಾ ಕ್ಷೇತ್ರಕ್ಕೆ ಟಿಕೆಟ್ ಕೊಡುವುದಾಗಿ ಒಪ್ಪಿಕೊಂಡು ದೇವೇಗೌಡರು ತುಮಕೂರಿಗೆ ಆಗಮಿಸಿ ಮುದ್ದಹನುಮೇಗೌಡರಿಗೆ ಟಿಕೆಟ್ ದೊರೆಯದಂತೆ ಮಾಡಿದರು ಎಂದ ಅವರು, ಸಂಸದ ಮುದ್ದಹನುಮೇಗೌಡರು ಕಾನ್ವೆಂಟ್ ಹುಡುಗನಂತೆ ಇದ್ದರು ಇವರಿಗೆ ಟಿಕೆಟ್ ತಪ್ಪಿಸಿ ದೇವೇಗೌಡರು ತುಮಕೂರು ಲೋಕಸಭಾ ಕ್ಷೇತ್ರಕ್ಕೆ ನಿಂತಿದ್ದಾರೆ, ಮೊದಲು ಹಾಸನ ನಂತರ ಮಂಡ್ಯ, ಈಗ ತುಮಕೂರು ಇದೇನು ಪಾಳೇಗಾರಿಕೆ ಸಂಸ್ಕತಿಯೇ,

        ರಾಜರು ಒಂದು ಪ್ರಾಂತ್ಯವನ್ನು ಗೆದ್ದ ನಂತರ ಪಕ್ಕದ ಪ್ರಾಂತ್ಯಕ್ಕೆ ಕಣ್ಣು ಹಾಕುವಂತೆ ಇಡೀ ದಕ್ಷಿಣ ಕರ್ನಾಟಕವನ್ನು ದೇವೇಗೌಡ ಕುಟುಂಬ ಆವರಿಸಿಕೊಳ್ಳಲು ಹುನ್ನಾರ ನಡೆಸುತ್ತಿದೆ ಎಂದು ಹೇಳಿದರು.

          ಚಿತ್ರದುರ್ಗದ ಮಾಜಿ ಸಂಸದ ಜನಾರ್ಧನಸ್ವಾಮಿ ಮಾತನಾಡಿ, ಬಸವರಾಜು ಸರಳ ಸಜ್ಜನಿಕೆಯ ರಾಜಕಾರಣಿ, ಅವರ ಜೊತೆಯಲ್ಲಿ ನಾನೂ ಸಂಸದನಾಗಿದ್ದೆ ನಮಗೆ ಸಂಸತ್ತಿನಲ್ಲಿ ಯಾವ ರೀತಿ ಇರಬೇಕು ಎಂಬುದರ ಬಗ್ಗೆ ಮಾಹಿತಿ ನೀಡುತ್ತಿದ್ದರು, ಶಿರಾ, ಹಿರಿಯೂರು, ಭಾಗಗಳಿಗೆ ರೈಲ್ವೆ ಮಂಜೂರಾತಿಗಾಗಿ ಸಾವಿರ ಕೋಟಿ ರೂಪಾಯಿ ಕ್ರಿಯಾಯೋಜನೆ ತಯಾರಿಸಿದ್ದು ಇದರಲ್ಲಿ ಯಡಿಯೂರಪ್ಪನರು ರಾಜ್ಯದ ಪಾಲಾದ 500ಕೋಟಿ ರೂಪಾಯಿ ಬಿಡುಗಡೆ ಮಾಡುವುದಾಗಿ ಹೇಳಿದ್ದರು ಈಗ ಇದರ ಯೋಜನಾ ವೆಚ್ಚಾ 6ಸಾವಿರ ಕೋಟಿಯಾಗಿದ್ದು ರಾಜ್ಯ ಸರ್ಕಾರ 3ಸಾವಿರ ಕೋಟಿ ನೀಡಬೇಕಿದೆ ಎಂದರು.

       ಲೋಕಸಭಾ ಅಭ್ಯರ್ಥಿ ಜಿ.ಎಸ್.ಬಸವರಾಜು ಮಾತನಾಡಿ, ನರೇಂದ್ರ ಮೋದಿ ಪ್ರಧಾನಮಂತ್ರಿಯಾಗಲು ತುಮಕೂರು ಕ್ಷೇತ್ರದಿಂದ ನಿಂತಿರುವ ನನ್ನನ್ನು ಬಹುಮತದಿಂದ ಗೆಲ್ಲಿಸುವಂತೆ ಮನವಿ ಮಾಡಿದರು.

        ಕಾರ್ಯಕ್ರಮದಲ್ಲಿ ಬಿಜೆಪಿ ಹಿಂದುಳಿದ ವರ್ಗಗಳ ರಾಜ್ಯ ಉಪಾಧ್ಯಕ್ಷ ಡಾ.ಎಂ.ಆರ್.ಹುಲಿನಾಯ್ಕರ್, ಬಿಜೆಪಿ ತಾ.ಅಧ್ಯಕ್ಷ ಹೆಚ್.ಆರ್.ಶಶಿಧರ್, ಜಿ.ಪಂ.ಸದಸ್ಯೆ ಮಂಜುಳಮ್ಮ, ತಾ.ಪಂ.ಸದಸ್ಯ ಸಿಂಗದಹಳ್ಳಿರಾಜ್‍ಕುಮರ್, ಕೇಶವಮೂರ್ತಿ, ಇಂದಿರಮ್ಮ, ಮುಖಂಡ ಕ್ಯಾಪ್ಟನ್‍ಸೋಮಶೇಖರ್, ಮಾಜಿ ಜಿ.ಪಂ.ಸದಸ್ಯೆ ಲೋಹಿತಬಾಯಿ, ಮಹಿಳಾ ಘಟಕದ ಅಧ್ಯಕ್ಷ ಕವಿತಾಚನ್ನಬಸವಯ್ಯ, ಮುಖಂಡರಾದ ನಂದಿಹಳ್ಳಿಶಿವಣ್ಣ, ಸಿ.ಎಂ.ರಂಗಸ್ವಾಮಯ್ಯ, ಬಿಜೆಪಿ ತಾ.ಕಾರ್ಯದರ್ಶಿ ನಿರಂಜನಮೂರ್ತಿ, ಬರಗೂರುಬಸವರಾಜು, ಹಳೆಮನೆಶಿವನಂಜಪ್ಪ ಮತ್ತಿತರರು ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link