ದೆಹಲಿ:
ತಮಿಳುನಾಡಿನ ಮಾಜಿ ಮುಖ್ಯಮಂತ್ರಿ, ಎಐಎಡಿಎಂಕೆ ಮಾಜಿ ನಾಯಕಿ ಜೆ.ಜಯಲಲಿತಾ ಅವರ ಸಾವಿನ ಪ್ರಕರಣಕ್ಕೆ ಸಂಬಂಧಿಸಿದ ತನಿಖೆಗೆ ಸುಪ್ರೀಂ ಕೋರ್ಟ್ ಇಂದು ತಡೆ ನೀಡಿದೆ.
ಆರ್ಮುಗಂ ಸಮಿತಿ ನಡೆಸುತ್ತಿದ್ದ ಜಯಲಲಿತಾ ಸಾವಿನ ತನಿಖೆಗೆ ತಡೆ ನೀಡುವಂತೆ ಅಪೋಲೋ ಆಸ್ಪತ್ರೆ ಸುಪ್ರೀಂ ಕೋರ್ಟಿಗೆ ಮನವಿ ಮಾಡಿದ್ದ ಹಿನ್ನೆಲೆಯಲ್ಲಿ, ತಡೆ ನೀಡಲಾಗಿದೆ.
ಜಯಲಲಿತಾ ಅವರು 2016 ಡಿಸೆಂಬರ್ 5ರಂದು ಚೆನ್ನೈನ ಅಪೋಲೋ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು. ಆರೋಗ್ಯದಲ್ಲಿ ತೀವ್ರ ಏರುಪೇರು ಕಂಡು ಬಂದ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 22ರಂದು ಜಯಲಲಿತಾ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಜಯಲಲಿತಾ ಅವರ ಸಾವಿನ ಬಳಿಕ ಆಸ್ಪತ್ರೆಯಲ್ಲಿ ಅವರಿಗೆ ಯಾವ ಕಾರಣಕ್ಕೆ ಚಿಕಿತ್ಸೆ ನೀಡಲಾಯಿತು, ಸಾವಿಗೆ ಕಾರಣವೇನು ಎಂಬುದರ ಬಗ್ಗೆ ಹಲವು ಪ್ರಶ್ನೆಗಳು, ಆರೋಪಗಳು ಹುಟ್ಟಿಕೊಂಡಿದ್ದವು. ಈ ಬಗ್ಗೆ ತನಿಖೆ ನಡೆಸಲು ನಿವೃತ್ತ ನ್ಯಾಯಮೂರ್ತಿ ಎ.ಆರ್ಮುಗಸ್ವಾಮಿ ಅವರ ನೇತೃತ್ವದಲ್ಲಿ ತನಿಖಾ ಆಯೋಗವನ್ನು ಸ್ಥಾಪಿಸಲಾಗಿತ್ತು.
ತನಿಖೆಯ ಸಮಯದಲ್ಲಿ ಸಮಿತಿಯು ಅಪೋಲೋ ಆಸ್ಪತ್ರೆಯ ಬಳಿ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ, ನಟ ಎಂಜಿಆರ್ ಅವರ ಸಾವಿನ ಕುರಿತ ದಾಖಲೆಯನ್ನೂ ಕೇಳಿತ್ತು. ಆದರೆ ಜಯಲಲಿತಾ ಅವರ ಸಾವಿನ ಕುರಿತು ತನಿಖೆ ಮಾಡುತ್ತಿರುವಾಗ ಎಂಜಿಆರ್ ಅವರ ಸಾವಿನ ಕುರಿತ ದಾಖಲೆಗಳನ್ನು ಕೇಳುತ್ತಿರುವ ಸಮಿತಿಯ ಕ್ರಮವನ್ನು ವಿರೋಧಿಸಿ, ಅಪೋಲೋ ಆಸ್ಪತ್ರೆ ಸುಪ್ರೀಂ ಕೋರ್ಟ್ ಮೊರೆಹೋಗಿತ್ತು.
ಮುಖ್ಯ ನ್ಯಾಯಾಮೂರ್ತಿ ರಂಜನ್ ಗೊಗೊಯ್ ನೇತೃತ್ವದ ಪೀಠವು ಇಂದು ಆಸ್ಪತ್ರೆಯ ಮನವಿಯನ್ನು ಆಲಿಸಿ, ತನಿಖೆಗೆ ತಡೆ ನೀಡಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ