ಶಿರಾ:
ತಾಲ್ಲೂಕಿನ ಮದಲೂರು ಕೆರೆಗೆ ಹೇಮಾವತಿ ನೀರನ್ನು ಹರಿಸುವ ಸಂಬಂಧ ಸರ್ಕಾರದ ಸುತ್ತೋಲೆಗಳನ್ನೇ ಸರಿಯಾಗಿ ಓದದ ಕಾನೂನು ಮಂತ್ರಿ ಜೆ.ಸಿ.ಮಾಧುಸ್ವಾಮಿ ಅವರು ಓರ್ವ ವಿಕೃತ ಮನಸ್ಸಿನ ರಾಜಕಾರಣಿ ಎಂದು ಮಾಜಿ ಸಚಿವ ಟಿ.ಬಿ.ಜಯಚಂದ್ರ ಜಿಲ್ಲಾ ಸಚಿವರ ವಿರುದ್ಧ ತೀವ್ರವಾಗಿ ವಾಗ್ದಾಳಿ ನಡೆಸಿದರು.
ಮಾಜಿ ಸಚಿವ ಟಿ.ಬಿ.ಜಯಚಂದ್ರ ಬುಧವಾರ ಅವರ ಶಿರಾ ನಿವಾಸದಲದಲ್ಲಿ ಸುದ್ದಿಗೋಷ್ಠಿಯೊಂದನ್ನು ನಡೆಸುವ ಮೂಲಕ ಮದಲೂರು ಕೆರೆಗೆ ಹೇಮಾವತಿ ನೀರು ಹರಿಸಲು ಯಾವುದೇ ಸರ್ಕಾರದ ಆದೇಶವಿಲ್ಲ. ಒಂದು ವೇಳೆ ಹರಿಸಿದಲ್ಲಿ ನ್ಯಾಯಾಗ ನಿಂಧನೆಯಾಗುತ್ತದೆ ಎಂಬ ಹೇಳಿಯೊಂದನ್ನು ನೀಡಿರುವ ಹಿನ್ನೆಲೆಯಲ್ಲಿ ಸಚಿವರ ಹೇಳಿಕೆಯನ್ನು ಜಯಚಂದ್ರ ತೀವ್ರವಾಗಿ ಖಂಡಿಸಿದರು.
ರಾಜ್ಯ ಸರ್ಕಾರದ ಸಚಿವ ಸಂಪುಟದಲ್ಲಿ ಕೂತ ಯಾವುದೇ ಸಚಿವರು ಮಾದ್ಯಮಗಳಿಗಾಗಲಿ, ಸಭೆಯಲ್ಲಾಗಲಿ ಹೇಳಿಕೆ ನೀಡುವಾಗ ಜೋಪಾನವಾಗಿ ನೀಡಬೇಕು. ಸಚಿವರುಗಳಿಂದ ಬರುವ ಯಾವುದೇ ಮಾತುಗಳು ಸರ್ಕಾರದ ಮಾತುಗಳಾಗಿರುತ್ತವೆ ಎಂಬುದರ ಅರಿವು ರಾಜ್ಯ ಸರ್ಕಾರದ ಭಾಗವೇ ಆದ ಸಚಿವರುಗಳಿಗೆ ಇರಬೇಕು ಆದರೆ ಜಿಲ್ಲಾ ಸಚಿವರಾದ ಅದರಲ್ಲೂ ಕಾನೂನು ಮಂತ್ರಿಗಳೆನಿಸಿದ ಮಾಧುಸ್ವಾಮಿ ಅವರಿಗೆ ಕನಿಷ್ಟಪಕ್ಷ ಸರ್ಕಾರದ ಸುತ್ತೋಲೆಗಳನ್ನು ಓದುವಂತಹ ತಾಳ್ಮೆಯೂ ಇಲ್ಲವಾಗಿರುವುದು ವಿಪರ್ಯಾಸ ಎಂದರು.
ಅತ್ಯಂತ ಬರಗಾಲಕ್ಕೀಡಾದ ಶಿರಾ ಭಾಗಕ್ಕೆ ಹೇಗಾದರೂ ಸರಿ ಹೇಮಾವತಿಯ ನೀರು ಹರಿಸಬೇಕೆಂಬ ಸದುದ್ದೇಶದಿಂದ ಕಳೆದ ಹಲವು ವರ್ಷಗಳಿಂದಲೂ ಸರ್ಕಾರದ ಹಿಂದೆ ಬಿದ್ದವನು ನಾನು. ನಾನೂ ಕೂಡಾ 5 ವರ್ಷಗಳವರೆಗೆ ಕಾನೂನು ಮಂತ್ರಿಯಾಗಿದ್ದೆನು. ಇಂತಹ ಪ್ರಮುಖ ಸ್ಥಾನದಲ್ಲಿರುವವರು ಮೊದಲು ಸರ್ಕಾರಿ ಸುತ್ತೋಲೆ ಓದಿ ಮಾತನಾಡಬೇಕು. ಆ ವ್ಯವಧಾನವೂ ಜಿಲ್ಲಾ ಸಚಿವರಿಗೆ ಇಲ್ಲ ಎಂದು ಆರೋಪಿಸಿದರು.
ಹೇಮಾವತಿ ಯೋಜನೆಯ ತುಮಕೂರು ನಾಲೆಯ 105.600 ಕಿ.ಮೀ.ನಿಂದ ಕಳ್ಳಂಬೆಳ್ಳ ಹಾಗೂ ಶಿರಾ ಕೆರೆಗಳಿಗೆ ಮತ್ತು ಸುತ್ತಮುತ್ತ ಗ್ರಾಮಗಳ ಯೋಜನೆಗಾಗಿ 28.7.2000ರಂತೆ 0.90 ಟಿಎಂಸಿ ನೀರು ಹಂಚಿಕೆಯಾಗಿದೆ. ಈಗಾಗಲೇ ಶಿರಾ, ಕಳ್ಳಂಬೆಳ್ಳ ಕೆರೆಗಳಿಗೆ ನೀರನ್ನು ಹರಿಸಲಾಗುತ್ತಿದೆ. ಪ್ರತೀ ವರ್ಷವೂ ಸರಾಸರಿ 0.50 ಟಿಎಂಸಿ ನೀರನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ. ಶಿರಾ ತಾಲ್ಲೂಕಿಗೆ ಹಂಚಿಕೆಯಾದ 0.90 ಟಿಎಂಸಿ ನೀರಿನಲ್ಲಿ 0.50 ಟಿಎಂಸಿ ಬಳಕೆಯಾದರೆ ಉಳಿದ 0.40 ಟಿಎಂಸಿ ನೀರು ಉಳಿಕೆಯಾಗುತ್ತದೆ ಎಂದರು.
ಈ ಉಳಿಕೆಯಾಗುವ ನೀರನ್ನು ಕಳ್ಳಂಬೆಳ್ಳ ಕೆರೆಯಿಂದ ಮದಲೂರು ಕೆರೆಗೆ ಹಾಗೂ ಮಾರ್ಗ ಮದ್ಯದಲ್ಲಿ ಬರುವ 11 ಕೆರೆಗಳಿಗೆ ಹರಿಸುವಂತೆ ಒತ್ತಾಯಿಸಲಾಯಿತು. ಇದರಂತೆ ಸ್ಥಳ ಪರಿಶೀಲನೆ ಮಾಡಲು ಅಇ/Pಖಇಆ ಗೆ ಸರ್ಕಾರದ ಸೂಚನೆ ನೀಡಲಾಗಿ, ಸದರಿ ಇಲಾಖೆಯಿಂದ ಸಂಸ್ಥೆಗೆ ವರದಿ ನೀಡಲು ವಹಿಸಿತು. ಪರಿಶೀಲನೆ ನಂತರ ಡಾ.ನಂಜುಂಡಪ್ಪ ವರದಿಯಂತೆ ಬಹು ಗ್ರಾಮಗಳು ಈ ಯೋಜನೆಯಲ್ಲಿ ಬರುವುದರಿಂದ ಕುಡಿಯುವ ನೀರಿನ ಸಲುವಾಗಿ ಹಾಗೂ ಅಂತರ್ಜಲ ವೃದ್ಧಿಯಾಗುತ್ತದೆ ಎಂಬ ತೀರ್ಮಾನಕ್ಕೆ ಬರಲಾಯಿತು ಎಂದರು.
ಉದ್ದೇಶಿತ ಯೋಜನೆಗೆ ಕೇಂದ್ರ ಪುರಸ್ಕøತ ಓಖಆWP ಯೋಜನೆಯಡಿ ಅನುದಾನ ಲಭ್ಯವಾಗುವುದರಿಂದ ಈ ಯೋಜನೆಯನ್ನು ಕೇಂದ್ರ ವಲಯದಡಿ ಅನುಷ್ಠಾನಗೊಳಿಸಲು ರಾಜ್ಯ ಮಟ್ಟದ ಎಂಫವರ್ಡ್ ಸಮಿತಿ ಅಧ್ಯಕ್ಷರ ಅನುಮೋಧನೆ ಪಡೆಯಲಾಗಿದೆ ಎಂದರು.
ಒಟ್ಟಾರೆ ಶಿರಾ ತಾಲ್ಲೂಕಿನ ಕಳ್ಳಂಬೆಳ್ಳ ಕೆರೆಯನ್ನು ಮದಲೂರು ಕೆರೆಗೆ ಜೋಡಣೆ ಮಾಡಿ ಅಲ್ಲಿಂದ ಮದಲೂರು ಕೆರೆ ಸೇರಿದಂತೆ 11 ಕೆರೆಗಳಿಗೆ ನೀರು ಹಾಯಿಸಿ ಮಾರ್ಗ ಮದ್ಯದ 43 ಗ್ರಾಮಗಳ ಜನ ಜಾನುವಾರುಗಳಿಗೆ ಶಾಶ್ವತ ಕುಡಿಯುವ ನೀರನ್ನು ಕಲ್ಪಿಸುವ ಸಂಬಂಧ ಸಿದ್ಧಪಡಿಸಿರುವ 59.89 ಕೋಟಿ ರೂಗಳನ್ನು ಬಳಸಿ ನೀರು ಪೂರೈಸಲು ಸರ್ಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್ ಇಲಾಖಾ ನಿರ್ದೇಶಕರು ಹಾಗೂ ಪದನಿಮಿತ್ತ ಸರ್ಕಾರದ ಜೆಂಟಿ ಕಾರ್ಯದರ್ಶಿಗಳಿಂದ ದಿ:7.12.2009 ರಂದು ಅನುಮೋಧನೆ ನೀಡಲಾಗಿದೆ ಎಂದು ಜಯಚಂದ್ರ ತಿಳಿಸಿದರು.
ಸರ್ಕಾರದ ಓರ್ವ ಅಧಿಕಾರಿಗಳ ಹಾಗೂ ಸರ್ಕಾರದ ಈ ಸುತ್ತೋಲೆಯನ್ನೇ ಓದದ ಜಿಲ್ಲಾ ಸಚಿವರು ಮದಲೂರು ಕೆರೆಗೆ ಹೇಮಾವತಿಯ ನೀರು ಹರಿಸಲು ಅನುಮೋಧನೆಯೇ ದೊರೆತಿಲ್ಲ ಎಂಬ ಹೇಳಿಕೆ ನೀಡುವ ಮೂಲಕ ಸರ್ಕಾರದ ಆದೇಶವನ್ನೇ ಮರೆತಿದ್ದಾರೆಂದರು.
ನಾನು ಜೆ.ಸಿ.ಮಾಧುಸ್ವಾಮಿಯವರನ್ನು ಕಳೆದ 20 ವರ್ಷಗಳಿಂದ ನೋಡುತ್ತಿದ್ದೇನೆ. ಅವರದು ವಿಕೃತ ಮನಸ್ಸಿನ ರಾಜಕಾರಣ. ಈ ಹಿಂದೆ ನಾನು ಭದ್ರಾ ಮೇಲ್ದಂಡೆ ಯೋಜನೆಯ ಅನುಷ್ಠಾನದ ಬಗ್ಗೆ ವ್ಯಾಪಕ ಹೋರಾಟಕ್ಕೂ ಮುಂದಾದಾಗ ಅದನ್ನು ಅವರು ಟೀಕೆ ಮಾಡಿ ಅಪಹಾಸ್ಯ ಮಾಡಿದ್ದರು. ಈ ಯೋಜನೆಯ ಸಂಬಂಧ ಶಿರಾ ಹಾಗೂ ಚಿ.ನಾ.ಹಳ್ಳಿ ತಾಲ್ಲೂಕಿನ ಜನರನ್ನು ನನ್ನ ವಿರುದ್ಧ ಎತ್ತಿಕಟ್ಟುವ ಕೆಲಸವನ್ನೂ ಮಾಡಿದ್ದರು ಎಂದರು.
ತಾವು ಮೊದಲು ಕೆಟ್ಟ ಆಲೋಚನೆಗಳನ್ನು ಬಿಡಿ. ಜಾತಿ ರಾಜಕಾರಣ ಮಾಡುವ ವ್ಯಕ್ತಿ ನಾನಲ್ಲ. ನೀರಾವರಿ ಯೋಜನೆಗಾಗಿಯೇ ನಾನು ಕಟಿಬದ್ಧ ರಾಜಕಾರಣ ಮಾಡುವ ವ್ಯಕ್ತಿ. ನಾನು ನೀರಾವರಿ ವಿಚಾರದಲ್ಲಿ ಎಂದೂ ಸೋತಿಲ್ಲ. ಗೂರೂರು ಜಲಾಶಯದಲ್ಲಿ ಇನ್ನೂ 20 ಟಿ.ಎಂ.ಸಿ. ನೀರಿದೆ. ನಮ್ಮ ಪಾಲಿನ ನೀರನ್ನು ನಮಗೆ ನೀಡಲೇಬೇಕು. ಈ ನಡುವೆ ಮದಲೂರು ಕೆರೆಗೂ ನೀರು ಹರಿಸಬೇಕು ಎಂದರು.
ಶಿರಾ ಶಾಸಕರು ಹಾಗೂ ಚಿ.ನಾ.ಹಳ್ಳಿ ಶಾಸಕರಿಬ್ಬರಿಗೂ ಮದಲೂರು ಕೆರೆಗೆ ನೀರು ಹರಿಸಬಾರದೆಂಬ ಕಣ್ಣು ಬಿದ್ದಿದೆ. ಅವರಿಗೆ ಮದಲೂರು ಯೋಜನೆಯ ಸಂಬಂಧದ ಯಾವುದೇ ಸರ್ಕಾರಿ ಆದೇಶಗಳು ಕಣ್ಣಿಗೆ ಕಾಣುತ್ತಿಲ್ಲವೆನಿಸುತ್ತದೆ. ಅವರಿಬ್ಬರ ಕಣ್ಣಿಗೆ ನಾನೇ ಒಳ್ಳೆಯ ಕನ್ನಡಕಗಳನ್ನು ಕೊಡಿಸುತ್ತೇನೆ. ಹಾಗೆಯೇ ಹಗಲಿನಲ್ಲೂ ಅವರಿಗೆ ಸರ್ಕಾರಿ ಆದೇಶಗಳು ಕಣ್ಣಿಗೆ ಕಾಣದಿದ್ದರೆ ಬ್ಯಾಟರಿಯನ್ನೂ ಕೊಡಿಸುತ್ತೇನೆ. ಅವುಗಳ ಬೆಳಕಿನಲ್ಲಾದರೂ ಸರ್ಕಾರದ ಆದೇಶಗಳನ್ನು ಓದಿ ತಿಳಿಯಿರಿ ಎಂದು ಜಯಚಂದ್ರ ಛೇಡಿಸಿದರು.
ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಆರ್.ಮಂಜುನಾಥ್, ಗ್ರಾಮಾಂತರ ಅಧ್ಯಕ್ಷ ನಟರಾಜ್ ಬರಗೂರು, ಹಿರಿಯ ಮುಖಂಡ ಎಸ್.ಎನ್.ಕೃಷ್ಣಯ್ಯ, ಎ.ಪಿ.ಎಂ.ಸಿ. ಮಾಜಿ ಅಧ್ಯಕ್ಷ ಸತ್ಯನಾರಾಯಣ್, ವಕೀಲ ಗುರುಮೂರ್ತಿ, ಡಿ.ಸಿ.ಅಶೋಕ್, ರಾಮಕೃಷ್ಣ, ನೂರುದ್ಧೀನ್, ಪಿ.ಬಿ.ನರಸಿಂಹಯ್ಯ, ಬಾಂಬೇ ರಾಜಣ್ಣ ಸೇರಿದಂತೆ ಕಾಂಗ್ರೆಸ್ ಪಕ್ಷದ ಅನೇಕ ಮುಖಂಡರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ