ಜೆ.ಸಿ.ಮಾಧುಸ್ವಾಮಿಗೆ ಒಲಿದ ಸಚಿವ ಸ್ಥಾನ

ತುಮಕೂರು:
 
    ಅವಕಾಶಗಳು ಹೇಗೆ ಒದಗಿ ಬರುತ್ತವೆ ಎಂಬುದನ್ನು ಯಾರೂ ನಿರೀಕ್ಷಿಸಲಾರರು. ಕೆಲವೊಮ್ಮೆ ನಿರೀಕ್ಷೆಗಳು ಹುಸಿಯಾದರೆ ಮತ್ತೆ ಕೆಲವೊಮ್ಮೆ ಅದೃಷ್ಟ ಒಲಿದು ಬರುತ್ತದೆ. ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದಲ್ಲಿ ಚಿಕ್ಕನಾಯಕನಹಳ್ಳಿ ಕ್ಷೇತ್ರದ ಶಾಸಕ ಜೆ.ಸಿ.ಮಾಧುಸ್ವಾಮಿ ಅವರಿಗೆ ಸಚಿವ ಸ್ಥಾನ ಒಲಿದು ಬರುವ ಮೂಲಕ ಅವರ ಆಪ್ತ ವಲಯದಲ್ಲಿ ಸಂಭ್ರಮ ಮನೆ ಮಾಡಿದೆ. 
    ತುಮಕೂರು ಜಿಲ್ಲೆಯಲ್ಲಿ ಅತ್ಯಂತ ಹಿಂದುಳಿದ ತಾಲ್ಲೂಕಾಗಿಯೇ ಗುರುತಿಸಿಕೊಂಡು ಬಂದಿರುವ ಚಿಕ್ಕನಾಯಕನಹಳ್ಳಿಯಿಂದ ಜೆ.ಸಿ.ಮಾಧುಸ್ವಾಮಿ ಸಚಿವರಾಗುತ್ತಿರುವವರ ಪೈಕಿ ಎರಡನೆಯವರು. ಈ ಹಿಂದೆ ಎನ್.ಬಸವಯ್ಯ ಅವರು ಕೆಲಕಾಲ ನೀರಾವರಿ ಸಚಿವರಾಗಿದ್ದರು. ಜೆ.ಸಿ.ಮಾಧುಸ್ವಾಮಿ ಇದೀಗ ನಾಲ್ಕನೇ ಬಾರಿ ಗೆಲುವು ಸಾಧಿಸಿದ್ದು, ಮಂತ್ರಿ ಪಟ್ಟವನ್ನು ಅಲಂಕರಿಸುತ್ತಿದ್ದಾರೆ. 
     ಜೆ.ಸಿ.ಮಾಧುಸ್ವಾಮಿ ಅವರ ಹಿನ್ನೆಲೆ ಗ್ರಾಮೀಣ ಸೊಗಡಿನದ್ದು. ಮೈಸೂರಿನಲ್ಲಿ ವ್ಯಾಸಂಗ ಮಾಡುವಾಗ ಸಿದ್ಧರಾಮಯ್ಯ ಅವರ ಕಾಲೇಜು ಸಹಪಾಠಿಗಳು. ಸಮಾಜವಾದಿ ತತ್ವದ ಅಡಿಯಲ್ಲಿ ಬೆಳೆದವರು. ಹೀಗಾಗಿಯೇ ಆರಂಭಿಕ ದಿನಗಳಲ್ಲಿ ಬಿಜೆಪಿ ತತ್ವ ಸಿದ್ಧಾಂತಗಳ ಬಗ್ಗೆ ಅಷ್ಟಕ್ಕಷ್ಟೆ. ಆದರೆ ಈಗಿನ ಅನಿವಾರ್ಯ ರಾಜಕಾರಣದಲ್ಲಿ ಆ ಪಕ್ಷ ಸೇರದೆ ಬೇರೆ ಮಾರ್ಗಗಳೇ ಇರಲಿಲ್ಲ. ಹೀಗಾಗಿ ಬಿಜೆಪಿಯಿಂದ ಸ್ಪರ್ಧಿಸಿ ಗೆಲುವು ಸಾಧಿಸಿ ಇದೀಗ ಮಂತ್ರಿಸ್ಥಾನ ಪಡೆದುಕೊಂಡಿದ್ದಾರೆ.
      1989ರಲ್ಲಿ ಜನತಾದಳದಿಂದ ಸ್ಪರ್ಧಿಸಿ ಪ್ರಥಮ ಬಾರಿಗೆ ವಿಧಾನಸಭೆ ಪ್ರವೇಶಿಸಿದರು. ಬಿ.ಎಸ್ಸಿ, ಎಂ.ಎ. ಜೊತೆಗೆ ಕಾನೂನು ಪದವಿ ಪಡೆದಿರುವ ಜೆ.ಸಿ.ಎಂ. ಹೆಚ್ಚು ಪುಸ್ತಕಗಳ ಒಡನಾಡಿ. ಜೆ.ಸಿ.ಪುರದ ತಮ್ಮ ಮನೆಯಲ್ಲಿ ಅವರು ಪುಸ್ತಕಗಳ ಅಧ್ಯಯನದಲ್ಲಿ ಹೆಚ್ಚು ತೊಡಗಿಸಿಕೊಂಡು ಬಂದವರು. 1999 ರಲ್ಲಿ ಸಂಯುಕ್ತ ಜನತಾದಳ ಸೇರಿ ಸೋತರು. 2004 ರಲ್ಲಿ ಮತ್ತೊಮ್ಮೆ ಗೆಲುವು ಸಾಧಿಸಿದರು.
 
       2008 ರಿಂದ ಸೋಲು ಅನುಭವಿಸಬೇಕಾಯಿತು. ಬಿ.ಎಸ್.ಯಡಿಯೂರಪ್ಪ ಅವರು ಕೆ.ಜೆ.ಪಿ. ಕಟ್ಟಿದಾಗ ಅವರ ಹಿಂದೆ ಹೋದರು. ಕೆ.ಜೆ.ಪಿ. ಅಸ್ತಿತ್ವದಲ್ಲಿದ್ದಾಗ ಚಿಕ್ಕನಾಯಕನಹಳ್ಳಿಯಲ್ಲಿ ಕೆ.ಎಸ್.ಕಿರಣ್‍ಕುಮಾರ್ ಬಿ.ಜೆ.ಪಿ. ಅಭ್ಯರ್ಥಿಯಾಗಿ ಕಣದಲ್ಲಿದ್ದರು. 2018ರ ವಿಧಾನಸಭಾ ಚುನಾವಣೆಯಲ್ಲಿ ಕೆ.ಎಸ್.ಕಿರಣ್ ಕುಮಾರ್ ಸ್ಪರ್ಧೆಯೊಡ್ಡದೆ ರಾಜಕೀಯದಿಂದ ದೂರ ಉಳಿದಿದ್ದು ಮಾಧುಸ್ವಾಮಿಗೆ ಪ್ಲಸ್ ಪಾಯಿಂಟ್ ಆಯಿತು.
       ಅಲ್ಲದೆ, ಸಚಿವರಾಗಿದ್ದ ಟಿ.ಬಿ.ಜಯಚಂದ್ರ ಅವರು ತನ್ನ ಪುತ್ರ ಸಂತೋಷ್ ಅವರನ್ನು ರಾಜಕೀಯಕ್ಕೆ ತರಲು ಚಿಕ್ಕನಾಯಕನಹಳ್ಳಿ ಕ್ಷೇತ್ರದಿಂದ ಸ್ಪರ್ಧಿಸುವಂತೆ ಮಾಡಿದ್ದು ಜೆ.ಸಿ.ಮಾಧುಸ್ವಾಮಿಯ ಗೆಲುವಿಗೆ ನಿರಾಳವಾಯಿತು. ಸಂತೋಷ್ ಜಯಚಂದ್ರ ಮತ್ತು ಸಿ.ಬಿ.ಸುರೇಶ್‍ಬಾಬು ಅವರ ನಡುವೆ ಮತಗಳು ಹಂಚಿ ಹೋಗಿ ಜೆ.ಸಿ.ಮಾಧುಸ್ವಾಮಿ ನಿರಾಯಾಸವಾಗಿ ಗೆಲುವು ಸಾಧಿಸಿದರು. ಸಿ.ಬಿ.ಸುರೇಶ್ ಬಾಬು ಸೋಲಲು ಟಿ.ಬಿ.ಜಯಚಂದ್ರ ಅವರೇ ಕಾರಣ ಎಂಬ ಮಾತುಗಳು ಈಗಲೂ ಚಿಕ್ಕನಾಯಕನಹಳ್ಳಿ ಕ್ಷೇತ್ರದ ಮತದಾರರಲ್ಲಿ ಕೇಳಿಬರುತ್ತಿದೆ. 
     ರಾಮಕೃಷ್ಣ ಹೆಗಡೆ ಅವರ ಜೊತೆ ಹೆಚ್ಚಾಗಿ ಗುರುತಿಸಿಕೊಂಡಿದ್ದ ಜೆ.ಸಿ.ಮಾಧುಸ್ವಾಮಿ ತಮ್ಮದೇ ಆದ ಗತ್ತು, ಗೈರತ್ತು ಪ್ರದರ್ಶಿಸುತ್ತ ರಾಜ್ಯ ರಾಜಕಾರಣದಲ್ಲಿ ವಿಶೇಷ ಛಾಪು ಮೂಡಿಸಿದ್ದಾರೆ. ತೆರೆಮರೆಯ ಬೈಗುಳದಿಂದ ದೂರವೇ ಇರುವ ಜೆ.ಸಿ.ಎಂ. ನೇರವಾಗಿಯೇ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಳ್ಳುತ್ತಾರೆ. ಲೋಹಿಯಾ ತತ್ವ, ಶಾಂತವೀರ ಗೋಪಾಲಗೌಡರ ಅನುಯಾಯಿಗಳಾಗಿ, ಜೆ.ಪಿ.ಚಳುವಳಿಗಳನ್ನು ಮೆಲುಕು ಹಾಕುವ ಮಾಧುಸ್ವಾಮಿ ತುಮಕೂರು ಹಾಲು ಒಕ್ಕೂಟಕ್ಕೆ ನಿರ್ದೇಶಕರಾಗಿ ಪಾದಾರ್ಪಣೆ ಮಾಡಿ ಡೈರಿಗೆ ಒಂದು ಸಂಘಟನಾ ಸಾಮಥ್ರ್ಯ ತಂದುಕೊಟ್ಟರು. 
      ಜೆ.ಎಚ್.ಪಟೇಲ್, ಸಿದ್ದರಾಮಯ್ಯ, ಮಾಧುಸ್ವಾಮಿ ಇವರೆಲ್ಲಾ ಒಂದು ತರಹದ ಮನುಷ್ಯರು ಎಂದು ಕೆಲವರು ಅವರನ್ನು ಹತ್ತಿರದಿಂದ ಬಲ್ಲವರು ಹೇಳುತ್ತಾರೆ. ಇದೇ ಕಾರಣಕ್ಕೆ ಸಿದ್ದರಾಮಯ್ಯ ಅವರು ಜೆ.ಸಿ.ಎಂ. ಜೊತೆ ಮಾತನಾಡುವಾಗ ತಮ್ಮ ಹಿಂದಿನ ಸಲುಗೆಯಿಂದಲೇ ಮಾತನಾಡಿಸುತ್ತಾರೆ. ಸದನದಲ್ಲಿ  ವಾಟಾಳ್ ನಾಗರಾಜ್, ಮಾಕ್ರ್ಸ್‍ವಾದಿ ಕಮ್ಯುನಿಷ್ಟ್ ಪಕ್ಷದ ಶಾಸಕರಾಗಿದ್ದ ಜಿ.ವಿ.ಶ್ರೀರಾಮರೆಡ್ಡಿ, ಜೆ.ಸಿ.ಮಾಧುಸ್ವಾಮಿ ಇಂತಹವರೆಲ್ಲ ಇದ್ದು ಮಾತನಾಡುತ್ತಾರೆಂದರೆ ಅದಕ್ಕೊಂದು ವಿಶೇಷ ಅರ್ಥ ಇರುತ್ತದೆ ಎಂದೇ ವ್ಯಾಖ್ಯಾನಿಸಲಾಗುತ್ತಿತ್ತು.
     ವಾಟಾಳ್ ನಾಗರಾಜ್, ಜಿ.ವಿ.ಶ್ರೀರಾಮರೆಡ್ಡಿ ಮೊದಲಾದ ವಾಕ್ ಪಟುಗಳು ಈಗ ಸದನದಲ್ಲಿ ಇಲ್ಲ. ಸದನಶೂರ ಎಂದೇ ಹೆಸರು ಪಡೆದಿರುವ ಜೆ.ಸಿ.ಮಾಧುಸ್ವಾಮಿ ಈಗ ಸದನದಲ್ಲಿದ್ದು, ಸಚಿವರೂ ಆಗುತ್ತಿದ್ದಾರೆ. ಇದುವರೆಗೆ ವಿರೋಧ ಪಕ್ಷದ ಆಸನಗಳಲ್ಲಿ ಕುಳಿತು ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದವರು ಇನ್ನು ಮುಂದೆ ಆಡಳಿತ ಪಕ್ಷದ ಸಾಲಿನಲ್ಲಿ ಕುಳಿತು ಸರ್ಕಾರವನ್ನು ಸಮರ್ಥಿಸಿಕೊಳ್ಳಬೇಕಿದೆ. 
    ವಿರೋಧ ಪಕ್ಷದಲ್ಲಿ ಕುಳಿತು ಸರ್ಕಾರವನ್ನು ಟೀಕಿಸುವುದು, ತರಾಟೆಗೆ ತೆಗೆದುಕೊಂಡಷ್ಟು ಆಡಳಿತ ಪಕ್ಷದಲ್ಲಿ ಕುಳಿತು ಆಡಳಿತ ನಡೆಸುವುದು ಅಷ್ಟು ಸುಲಭವಲ್ಲ. ಎಲ್ಲವನ್ನೂ ಸರಿದೂಗಿಸಿಕೊಂಡು ಇತರರನ್ನು ಸಂಬಾಳಿಸಿಕೊಂಡು ಹೋಗುವ ಕೆಲಸ ಬಹಳ ಕಷ್ಟಕರ. ಮುಂದೆ ಎದುರಾಗಬಹುದಾದ ಸವಾಲುಗಳನ್ನು ಹೇಗೆ ಸ್ವೀಕರಿಸಿ ಉತ್ತಮ ಆಡಳಿತಕ್ಕೆ ನಾಂದಿ ಹಾಡುತ್ತಾರೆ ಎಂಬುದನ್ನು ಜನತೆ ನಿರೀಕ್ಷಿಸುತ್ತಿದ್ದಾರೆ. 
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link