ಜೆಸಿಎಂರಿಂದ ನೀತಿ ಸಂಹಿತೆ ಉಲ್ಲಂಘನೆ : ಉಗ್ರಪ್ಪ

ಬೆಂಗಳೂರು,

      ಇತ್ತೀಚೆಗೆ ನಡೆದ 15 ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ಪ್ರಚಾರ ಸಂದರ್ಭದಲ್ಲಿ ವೀರಶೈವರ ಹೆಸರಿನಲ್ಲಿ ಮತ ಕೇಳುವುದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸುವ ಮೂಲಕ ನೀತಿಸಂಹಿತೆ ಉಲ್ಲಂಘಿಸಿರುವ ಕಾನೂನು ಸಚಿವ ಜೆ.ಸಿ. ಮಾಧು ಸ್ವಾಮಿ ಅವರನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸಂಪುಟದಿಂದ ಕೈಬಿಡಬೇಕು ಎಂದು ಮಾಜಿ ಸಂಸದ, ಕಾಂಗ್ರೆಸ್ ಮುಖಂಡ ವಿ.ಎಸ್.ಉಗ್ರಪ್ಪ ಒತ್ತಾಯಿಸಿದ್ದಾರೆ.

     ಚುನಾವಣಾ ಆಯೋಗ ನಿಜವಾಗಿಯೂ ಜೀವಂತವಾಗಿ ಇರುವುದೇ ಆಗಿದ್ದರೆ ತಕ್ಷಣವೆ ಮಾಧುಸ್ವಾಮಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕಿತ್ತು. ಆದರೆ ಆಯೋಗ ಜೀವಂತವಾಗಿರುವ ಬಗ್ಗೆ ತಮಗೆ ವಿಶ್ವಾಸವಿಲ್ಲ ಎಂದರು.ಕೆಪಿಸಿಸಿ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾನೂನು ಸಚಿವರಾಗಿ ಮಾಧುಸ್ವಾಮಿ ಜಾತಿ ಹೆಸರಿನಲ್ಲಿ ಮತ ಕೇಳುವುದು ತಪ್ಪಲ್ಲ ಎನ್ನುತ್ತಾರೆ ಎಂದಾದರೆ, ಅವರು ಸಚಿವರಾಗಿ ಮುಂದುವರೆಯಲು ಅರ್ಹರಲ್ಲ.

       ಜಾತಿ ಆಧಾರದ ಮೇಲೆ ಮತ ಕೇಳಿದ್ದಕ್ಕೆ ಕಾನೂನಿನ ಪ್ರಕಾರ ಮೂರು ವರ್ಷ ಜೈಲು ಶಿಕ್ಷೆ ಆಗುತ್ತದೆ. ಕಾನೂನು ಸಚಿವರಿಗೆ ಕಾನೂನಿನ ಬಗ್ಗೆ ಜ್ಞಾನವೆ ಇಲ್ಲ. ಕಾನೂನು ಸಚಿವರ ಕಾನೂನು ಉಲ್ಲಂಘನೆಯನ್ನು ರಾಜ್ಯಪಾಲರು ಗಮನಿಸಿಯೂ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಾಧುಸ್ವಾಮಿ ಅವರು ಜನರಲ್ಲಿ ಕ್ಷಮೆ ಕೇಳಬೇಕು. ಆಯೋಗ ಅವರ ವಿರುದ್ಧ ಪ್ರಕರಣ ದಾಖಲಿಸಬೇಕು. ಯಡಿಯೂರಪ್ಪ ಅವರು ಮಾಧುಸ್ವಾಮಿ ಅವರನ್ನು ಸಂಪುಟದಿಂದ ಕೈ ಬಿಡಬೇಕು ಎಂದು ಆಗ್ರಹಿಸಿದರು.

       ಸಚಿವ ಈಶ್ವರಪ್ಪ ನಟಿ ಐಶ್ವರ್ಯ ರೈ ಬಗ್ಗೆ ಮಾತನಾಡುತ್ತಾರೆ. ಆದರೆ ಇವರು ರಾಮನ ಹೆಸರಿನಲ್ಲಿ ಅಧಿಕಾರ ನಡೆಸುತ್ತಿದ್ದಾರೆ. ಮರ್ಯಾದಾ ಪುರುಷೋತ್ತಮ ರಾಮನ ಹೆಂಡತಿ ಸೀತೆಯ ಬಗ್ಗೆ ಇರುವ ಭಾವನೆ ಎಲ್ಲ ಹೆಣ್ಣು ಮಕ್ಕಳ ಬಗ್ಗೆಯೂ ಇರಬೇಕು. ಐಶ್ವರ್ಯ ರೈ ಗೌರವಸ್ಥ ಮನೆತನದ ಹೆಣ್ಣು ಮಗಳು. ಅವರ ಅತ್ತೆ ಸಂಸತ್ ಸದಸ್ಯೆ. ಅವರ ಮಾವ ಅಮಿತಾಬ್ ಬಚ್ಚನ್ ಸಾಂಸ್ಕೃತಿಕ ರಾಯಭಾರಿ. ಇಂತಹ ಗೌರವಸ್ಥ ಕುಟುಂಬದ ಹೆಣ್ಣು ಮಗಳ ಬಗ್ಗೆ ಹಗುರವಾಗಿ ಮಾತನಾಡಿರುವುದು ಮಹಿಳಾ ಸಮೂಹಕ್ಕೆ ಮಾಡಿರುವ ಅಪಮಾನ. ಈಶ್ವರಪ್ಪ ಜನರ ಕ್ಷಮೆ ಕೋರಬೇಕು. ಬಿಜೆಪಿಯವರು ಈಶ್ವರಪ್ಪ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಉಗ್ರಪ್ಪ ಒತ್ತಾಯಿಸಿದರು.

      ಮುಖ್ಯಮಂತ್ರಿ ಯಡಿಯೂರಪ್ಪ ಅವರು ಯಾರನ್ನು ಮಂತ್ರಿ ಮಾಡಬೇಕು ಎಂಬ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ. ಆದರೆ ಈರುಳ್ಳಿ ಬೆಲೆ ಗಗನಕ್ಕೆ ಏರಿದ್ದು, ಜನತೆ ಎಲಿದ್ದೀಯಪ್ಪ ಯಡಿಯೂರಪ್ಪ ಎಂದು ಕೇಳುವಂತಾಗಿದೆ. ಲೋಕಾಯುಕ್ತರು ಈರುಳ್ಳಿ ಅಕ್ರಮ ದಾಸ್ತಾನು ಪತ್ತೆ ಮಾಡಲು ಮಾರ್ಕೆಟ್ ಯಾರ್ಡ್‍ಗಳ ಮೇಲೆ ದಾಳಿ ಮಾಡಿದ್ದಾರೆ. ನಿಮ್ಮ ಸರ್ಕಾರ ಹಾಗೂ ಸಚಿವರು ಏನು ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು.

     ರಾಜ್ಯದಲ್ಲಿ ಪ್ರವಾಹದಿಂದ ಜನ ಸಂಕಷ್ಟ ಎದುರಿಸುತ್ತಿದ್ದು, ಅವರಿಗೆ ಪರಿಹಾರ ನೀಡುವ ಬದಲು ಸೋಲು ಗೆಲುವಿನ ಲೆಕ್ಕಾಚಾರ ಹಾಕುತ್ತಾ ಕುಳಿತಿದ್ದರೆ ಏನು ಪ್ರಯೋಜನ. ಸರ್ಕಾರಕ್ಕೆ ಬದ್ಧತೆ ಇದ್ದರೆ ಈರುಳ್ಳಿಯನ್ನು ಪಡಿತರ ವ್ಯವಸ್ಥೆಯ ಮೂಲಕ ಹಂಚಿಕೆ ಮಾಡಲು ಕ್ರಮ ಕೈಗೊಳ್ಳಬೇಕು ಎಂದರು. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿದ್ದು, ಹೆಣ್ಣುಮಕ್ಕಳಿಗೆ ರಕ್ಷಣೆ ಇಲ್ಲದಂತಾಗಿದೆ. ಭಯದ ವಾತಾವರಣ ನಿರ್ಮಾಣವಾಗಿದೆ.

      ಬಳ್ಳಾರಿಯಲ್ಲಿ ಎಂಟು ವರ್ಷ ದ ಬಾಲಕಿಯರ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಿರುವ ಬಗ್ಗೆ ಇದುವರೆಗೂ ಕ್ರಮ ಕೈಗೊಂಡಿಲ್ಲ. ನಿರ್ಭಯ ನಿಧಿ ಹಣ ಎರಡು ಸಾವಿರ ಕೋಟಿ ಇದ್ದು, ಈ ಹಣವನ್ನು ಇದುವರೆಗೂ ಬಳಸಿಕೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಉತ್ತರ ಪ್ರದೇಶ ಅತ್ಯಾಚಾರ ಸಂತ್ರಸ್ತೆಯನ್ನು ಪೆಟ್ರೊಲ್.ಸುರಿದು ಕೊಲೆ ಮಾಡುತ್ತಾರೆ. ಇಂತಹ ಗಂಭೀರ ಪ್ರಕರಣದ ಬಗ್ಗೆ ಕೇಂದ್ರ ಹಾಗೂ ಉತ್ತರ ಪ್ರದೇಶ ಸರ್ಕಾರಗಳು ಬೇಜವಾಬ್ದಾರಿತನದಿಂದ ವರ್ತಿಸುತ್ತಿದೆ. ಉತ್ತರಪ್ರದೇಶದ ಮುಖ್ಯಮಂತ್ರಿ ಹಾಗೂ ಗೃಹ ಸಚಿವರು ಈ ಘಟನೆಯ ನೈತಿಕ ಜವಾಬ್ದಾರಿ ಹೊರಬೇಕು. ರಾಮನ ಗುಡಿ ಕಟ್ಟುವುದು ಪರಿಹಾರವಲ್ಲ ರಾಮನ ಆದರ್ಶ ಪಾಲನೆ ಮಾಡುವುದು ಮುಖ್ಯ ಎಂದು ಉಗ್ರಪ್ಪ ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap