ಜೆಡಿಎಸ್ ನಲ್ಲಿ ಹೊರಟ್ಟಿ ಅವರನ್ನು ನಿರ್ಲಕ್ಷ್ಯ ಮಾಡಲಾಗಿದೆ

ಬೆಂಗಳೂರು

           ಉತ್ತರ ಕರ್ನಾಟಕ ಭೌಗೋಳಿಕ, ಶೈಕ್ಷಣಿಕವಾಗಿ ಮತ್ತು ಸರ್ಕಾರದ ಸವಲತ್ತುಗಳನ್ನು ಪಡೆಯುವಲ್ಲಿ ಮಾತ್ರವೇ ಹಿಂದೆ ಬಿದ್ದಿಲ್ಲ, ರಾಜಕೀಯ ಪ್ರಾತಿನಿಧ್ಯದಲ್ಲೂ ಸಹ ನಿರ್ಲಕ್ಷಕ್ಕೆ ಒಳಗಾಗಿವೆ. ಇದನ್ನು ವಿರೋಧಿಸಿ ಕಾಂಗ್ರೆಸ್‍ನ ಕೆಲವು ಮುಖಂಡರು ಪಕ್ಷದ ಹೈಕಮಾಂಡ್‍ಗೆ ದೂರು ನೀಡಲು ನಿರ್ಧರಿಸಿದ್ದಾರೆ. ಇತ್ತ ಜೆಡಿಎಸ್ ನಲ್ಲೂ ಹೊರಟ್ಟಿ ಅವರನ್ನು ನಿರ್ಲಕ್ಷ್ಯ ಮಾಡಿರುವ ಬಗ್ಗೆ ಅಸಮಾಧಾನ ಕಂಡು ಬಂದಿದೆ.

           ವಿಧಾನಪರಿಷತ್ ಸಭಾಪತಿ ಹುದ್ದೆ ಎಸ್. ಆರ್. ಪಾಟೀಲ್ ಅವರ ಕೈ ತಪ್ಪಿಸಿದ ಬಗ್ಗೆ ಈ ಭಾಗದ ಶಾಸಕರು ಆಕ್ರೋಶಗೊಂಡಿದ್ದಾರೆ. ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ವಿರುದ್ಧ ಅಸಮಾಧಾನಗೊಂಡಿದ್ದಾರೆ. ಈ ಕುರಿತು ವರಿಷ್ಠರಿಗೆ ದೂರು ನೀಡಲು ಈ ಭಾಗದ ಅವಕಾಶ ವಂಚಿತ ಶಾಸಕರು, ಮುಖಂಡರು ತೀರ್ಮಾನಿಸಿದ್ದಾರೆ.

          ಇನ್ನು ಬಸವರಾಜ ಹೊರಟ್ಟಿ ಅವರಿಗೆ ಸಭಾಪತಿ ಹುದ್ದೆ ಕೈ ತಪ್ಪಿಸಿರುವ ಬಗ್ಗೆ ಅಸಮಾಧಾನ ವ್ಯಕ್ತವಾಗಿದೆ. ಇದು ಒಳಗೊಳಗೆ ಕುದಿಯುತ್ತಿದ್ದು, ಶೀರ್ಘದಲ್ಲೇ ಸ್ಪೋಟಗೊಳ್ಳುವ ನಿರೀಕ್ಷೆಯಿದೆ.

         ಸರ್ಕಾರ ಹಾಗೂ ರಾಜಕೀಯ ಪಕ್ಷಗಳ ಪ್ರಭಾವಿ ಹುದ್ದೆಗಳಲ್ಲಿ ಇಂದು ಉತ್ತರ ಕರ್ನಾಟಕದ ಯಾವೊಬ್ಬ ರಾಜಕಾರಣಿಯೂ ಕಾಣುತ್ತಿಲ್ಲ. ಉತ್ತರ ಕರ್ನಾಟಕದ ರಾಜಕಾರಣಿಗಳು ದಿನದಿಂದ ದಿನಕ್ಕೆ ಪೊಲಿಟಿಕಲ್ ಪವರ್‍ನಿಂದ ವಂಚಿತರಾಗುತ್ತಿದ್ದಾರೆ. ಪ್ರಾದೇಶಿಕ ಅಸಮಾನತೆ ನಿವಾರಿಸಲು ಬೆಳಗಾವಿಯಲ್ಲಿ ಸುವರ್ಣಸೌಧ ನಿರ್ಮಿಸಿ ಪ್ರತಿವರ್ಷ ಅಧಿವೇಶನ ನಡೆಸಿದರೂ ಬೆಳಗಾವಿ ಕರ್ನಾಟಕದ ಎರಡನೇ ರಾಜಧಾನಿ ಎಂದು ಪ್ರತಿಬಿಂಬಿಸುವ ಯತ್ನ ನಡೆದರೂ ಅಂದಾಜು ಶೇ.50ರಷ್ಟು ಶಾಸಕ ಸ್ಥಾನಗಳನ್ನು ಹೊಂದಿರುವ ಉತ್ತರ ಕರ್ನಾಟಕ ಭಾಗದ ರಾಜಕಾರಣಿಗಳಿಗೆ ಗೌರವಯುತ ಹಾಗೂ ಹೆಸರಿಸುವ ಹೆಚ್ಚಿನ ಅಧಿಕಾರ ಹೊಂದಿದ ಯಾವ ಹುದ್ದೆಯೂ ರಾಜ್ಯದ ರಾಜಕಾರಣದಲ್ಲಿ ಸಿಗುತ್ತಿಲ್ಲ.

         ಮುಖ್ಯಮಂತ್ರಿ,ಉಪಮುಖ್ಯಮಂತ್ರಿ, ವಿಧಾನಸಭೆ ಸ್ಪೀಕರ್, ಉಪಾಧ್ಯಕ್ಷ, ವಿಧಾನಪರಿಷತ್ ಸಭಾಪತಿ, ಉಪ ಸಭಾಪತಿ, ವಿಧಾನ ಸಭೆ ಪ್ರತಿಪಕ್ಷ ನಾಯಕ, ವಿಧಾನಪರಿಷತ್ ಪ್ರತಿಪಕ್ಷ ನಾಯಕ, ಪ್ರಮುಖ ರಾಜಕೀಯ ಪಕ್ಷಗಳ ಅಧ್ಯಕ್ಷ ಸ್ಥಾನ ಇವು ಪ್ರಮುಖವಾಗಿ ರಾಜಕೀಯದಲ್ಲಿ ಪ್ರಮುಖ ಹುದ್ದೆಗಳಾಗಿವೆ. ಈ ಎಲ್ಲ ಆಯಕಟ್ಟಿನ ಸ್ಥಾನಗಳನ್ನು ದಕ್ಷಿಣ ಕರ್ನಾಟಕದವರೇ ಅಲಂಕರಿಸಿದ್ದು, ಇದು ಉತ್ತರ ಕರ್ನಾಟಕ ಭಾಗದ ರಾಜಕಾರಣಿಗಳನ್ನು ಕೆರಳಿಸಿದೆ.

        ವಿಧಾನಪರಿಷತ್ ಸಭಾಪತಿ ಸ್ಥಾನವಾದರೂ ಉತ್ತರ ಕರ್ನಾಟಕ ಭಾಗದವರಿಗೆ ಸಿಗುತ್ತದೆ ಎನ್ನುವ ನಿರೀಕ್ಷೆ ಎಲ್ಲರಲ್ಲೂ ಇತ್ತು. ದೋಸ್ತಿ ಸರ್ಕಾರದಲ್ಲಿ ಜೆಡಿಎಸ್‍ಗೆ ಸಭಾಪತಿ ಸ್ಥಾನ ಲಭಿಸಿದರೆ ಬಸವರಾಜ ಹೊರಟ್ಟಿ, ಕಾಂಗ್ರೆಸ್ ಪಕ್ಷದಲ್ಲಾದರೆ ಎಸ್.ಆರ್. ಪಾಟೀಲ ಸಭಾಪತಿ ಆಗುತ್ತಾರೆ ಎನ್ನುವ ಆಶಾಭಾವನೆ ಎಲ್ಲರಲ್ಲೂ ಮೂಡಿತ್ತು. ಆದರೆ ಅನಿರೀಕ್ಷಿತವಾಗಿ ಪ್ರತಾಪಚಂದ್ರ ಶೆಟ್ಟಿ ಸಭಾಪತಿ ಆಗಿ ಆಯ್ಕೆಯಾಗಿದ್ದು, ಈ ಮೂಲಕ ಉತ್ತರ ಕರ್ನಾಟಕದ ರಾಜಕಾರಣಿಗಳಿಗೆ ಲಭಿಸಲಿದ್ದ ಕೊನೆಯ ಅವಕಾಶವೂ ತಪ್ಪಿಹೋದಂತಾಗಿದೆ.

         ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಉತ್ತರ ಕರ್ನಾಟಕದ ರಾಜಕಾರಣಿಗಳು ಕರ್ನಾಟಕವನ್ನು ನಿಯಂತ್ರಿಸಿ ಆಡಳಿತ ನಡೆಸುತ್ತಿದ್ದರು. ಮಾಜಿ ಮುಖ್ಯಮಂತ್ರಿ ಬಿ.ಡಿ. ಜತ್ತಿ, ವೀರೇಂದ್ರ ಪಾಟೀಲ ಸೇರಿದಂತೆ ಮಾಜಿ ಸಿಎಂ ಜಗದೀಶ ಶೆಟ್ಟರ್ ಅವರ ಆಡಳಿತ ತನಕವೂ ಉತ್ತರ ಕರ್ನಾಟಕದವರಿಗೆ ಪ್ರಾಶಸ್ತ್ಯ ಸಿಗುತ್ತಿತ್ತು.

        ಈಗ ಹಂತಹಂತವಾಗಿ ಒಂದೊಂದೇ ಅಧಿಕಾರದ ಸ್ಥಾನಮಾನಗಳು ಕೈ ತಪ್ಪಿ ಹೋಗ ತೊಡಗಿವೆ. ಇದಕ್ಕೆ ತಾಜಾ ನಿದರ್ಶನ ಬಸವರಾಜ ಹೊರಟ್ಟಿ ಮತ್ತು ಎಸ್.ಆರ್. ಪಾಟೀಲ ಅವರಿಗೆ ಸ್ಥಾನಮಾನ ಸಿಗದಿರುವುದು.

        ರಾಜ್ಯದಲ್ಲಿ ಆಯಕಟ್ಟಿನ ಸ್ಥಾನಮಾನಗಳನ್ನು ನಿಭಾಯಿಸುವ ಅರ್ಹ ರಾಜಕಾರಣಿಗಳಿಗೇನು ಉತ್ತರ ಕರ್ನಾಟಕದಲ್ಲಿ ಕೊರತೆಯಿಲ್ಲ. ಮುಖ್ಯಮಂತ್ರಿ, ಸ್ಪೀಕರ್, ಪರಿಷತ್ ಸಭಾಪತಿ, ಪ್ರತಿಪಕ್ಷ ನಾಯಕ, ಪಕ್ಷದ ರಾಜ್ಯಾಧ್ಯಕ್ಷ ಸ್ಥಾನಮಾನಗಳನ್ನು ನಿಭಾಯಿಸುವ ಹಲವಾರು ರಾಜಕಾರಣಿಗಳ ಪಟ್ಟಿಯೇ ಇದೆ. ಜಗದೀಶ ಶೆಟ್ಟರ್ ಮುಖ್ಯಮಂತ್ರಿ ಆಗಿ, ಸ್ಪೀಕರ್ ಆಗಿ, ಪ್ರತಿಪಕ್ಷ ನಾಯಕರಾಗಿ, ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದರೂ, ಇಂದು ಯಾವುದೇ ಅರ್ಹ ಸ್ಥಾನಮಾನ ಇಲ್ಲದೇ ಉಳಿದಿದ್ದಾರೆ.

        ಇವರಂತೆ ಬಸವರಾಜ ಹೊರಟ್ಟಿ, ಎಸ್.ಆರ್. ಪಾಟೀಲ, ಹೆಚ್.ಕೆ. ಪಾಟೀಲ, ಉಮೇಶ ಕತ್ತಿ, ಡಾ. ಪ್ರಭಾಕರ ಕೋರೆ, ಎಂ.ಬಿ. ಪಾಟೀಲ, ಮುರಗೇಶ ನಿರಾಣಿ, ಬಸನಗೌಡ ಪಾಟೀಲ ಯತ್ನಾಳ, ಪ್ರಕಾಶ ಹುಕ್ಕೇರಿ ಸೇರಿದಂತೆ ಹಲವಾರು ರಾಜಕಾರಣಿಗಳ ಪಟ್ಟಿಯೇ ಇದೆ. ಉತ್ತರ ಕರ್ನಾಟಕ ರಾಜಕಾರಣಿಗಳನ್ನು ನಿರ್ಲಕ್ಷಿಸುವಲ್ಲಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಮೂರು ಪಕ್ಷಗಳು ಹಿಂದೆ ಬಿದ್ದಿಲ್ಲ.

       ಪೈಪೋಟಿಗೆ ಇಳಿದವರಂತೆ ಪವರ್‍ಫುಲ್ ಪೊಲಿಟಿಕಲ್ ಸ್ಥಾನಮಾನಗಳನ್ನು ಈ ಭಾಗಕ್ಕೆ ವಂಚಿಸುತ್ತಲೇ ಬಂದಿವೆ. ಪಕ್ಷಗಳ ಈ ಒಳಮರ್ಮ ಉತ್ತರ ಕರ್ನಾಟಕದ ರಾಜಕಾರಣಿಗಳ ಅರಿವಿಗೆ ಬರತೊಡಗಿದ್ದು, ನಿರ್ಲಕ್ಷ್ಯದ ವಿರುದ್ಧ ಆಕ್ರೋಶ ಸ್ಫೋಟಗೊಳ್ಳುವ ಹಂತ ತಲುಪಿದೆ.

  ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap