ಮೇಯರ್ ಚುನಾವಣೆ: ಜೆಡಿಎಸ್ ನಿಲುವು ಅಸ್ಪಷ್ಟ, ಪ್ರವಾಸಕ್ಕೆ ಯೋಜನೆ

ತುಮಕೂರು
    ತುಮಕೂರು ಮಹಾನಗರ ಪಾಲಿಕೆಯ ಮೇಯರ್ ಮತ್ತು ಉಪಮೇಯರ್ ಚುನಾವಣೆಗೆ ದಿನಗಣನೆ ಆರಂಭವಾಗಿರುವ ಬೆನ್ನಲ್ಲೇ ಮೈತ್ರಿ ವಿಷಯದಲ್ಲಿ ಭಾರಿ ಕುತೂಹಲ ಕೆರಳಿಸಿದ್ದ ಪಾಲಿಕೆಯ ಜೆಡಿಎಸ್ ಸದಸ್ಯರ ಸಭೆಯಲ್ಲಿ ಯಾವುದೇ ಸ್ಪಷ್ಟ ನಿಲುವು ತಾಳಲು ಆಗಿಲ್ಲ. ಆದರೆ ರಹಸ್ಯ ಸ್ಥಳಕ್ಕೆ ಪ್ರವಾಸ ತೆರಳಿ ಮುಂದಿನ ನಿಲುವು ತಾಳಲು ಉದ್ದೇಶಿಸಲಾಗಿದೆ. 
    ಗುರುವಾರ ಬೆಳಗ್ಗೆ ತುಮಕೂರು ನಗರದ ವಿದ್ಯಾನಗರದಲ್ಲಿರುವ ಗುಬ್ಬಿ ಕ್ಷೇತ್ರದ ಜೆಡಿಎಸ್ ಶಾಸಕ ಹಾಗೂ ಮಾಜಿ ಸಚಿವ ಎಸ್.ಆರ್.ಶ್ರೀನಿವಾಸ್ ನಿವಾಸದಲ್ಲಿ ಪಾಲಿಕೆಯ ಜೆಡಿಎಸ್ ಸದಸ್ಯರುಗಳ ಸಭೆ ಕರೆಯಲಾಗಿತ್ತು. ಪಾಲಿಕೆಯ ಮೇಯರ್ ಮತ್ತು ಉಪಮೇಯರ್ ಸ್ಥಾನಗಳಿಗೆ ಇದೇ ಜ.30 ರಂದು ಚುನಾವಣೆ ಏರ್ಪಟ್ಟಿರುವ ಹಿನ್ನೆಲೆಯಲ್ಲಿ ಪಕ್ಷವು ಕೈಗೊಳ್ಳಬೇಕಾದ ನಿಲುವನ್ನು ಸದಸ್ಯರೊಡನೆ ಶ್ರೀನಿವಾಸ್  ಚರ್ಚಿಸಿದರು.
   ಹಿಂದಿನಿಂದಲೂ ಕಾಂಗ್ರೆಸ್ ಜೊತೆ ಮೈತ್ರಿ ಇದೆ. ಈಗಲೂ ಅದನ್ನು ಮುಂದುವರೆಸಿಕೊಂಡು ಹೋಗಬೇಕೆಂಬ ಒಂದು ವಾದ; ಕಳೆದ ಚುನಾವಣೆಯಲ್ಲಿ ಮೇಯರ್ ಆಯ್ಕೆ ಸಂದರ್ಭದಲ್ಲಿ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸದೆ ಜೆಡಿಎಸ್ ಅವಿರೋಧವಾಗಿ ಆಯ್ಕೆಯಾಗಲು ಬಿಜೆಪಿಯಿಂದಲೂ ಸಹಕಾರ ಸಿಕ್ಕಿತ್ತೆಂಬ ಇನ್ನೊಂದು ವಾದ -ಹೀಗೆ ಸದಸ್ಯರುಗಳಿಂದ ಭಿನ್ನ ಅಭಿಪ್ರಾಯಗಳು ವ್ಯಕ್ತಗೊಂಡÀವು. ಇದರಿಂದಾಗಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಬಗ್ಗೆ ಯಾವುದೇ ಖಚಿತ ನಿಲುವಿಗೆ ಬರಲು ಸಾಧ್ಯವಾಗಲಿಲ್ಲ.
    ಜ.30 ಚುನಾವಣೆ ನಡೆಯಲಿದೆ. ಆದ್ದರಿಂದ ಜ.27 ರಂದೇ ರಹಸ್ಯ ಸ್ಥಳಕ್ಕೆ ಪ್ರವಾಸ ತೆರಳುವುದೆಂದೂ, ಅಲ್ಲಿ ಕುಳಿತು ಪಕ್ಷದ ಭವಿಷ್ಯದ ಬಗ್ಗೆ ಹಾಗೂ ಜೆ.ಡಿ.ಎಸ್. ಸದಸ್ಯರುಗಳ ಅನುಕೂಲಗಳ ಬಗ್ಗೆ ಚರ್ಚಿಸಿ ಅಂತಿಮವಾಗಿ ಮೈತ್ರಿ ಬಗ್ಗೆ ನಿರ್ಧಾರವೊಂದನ್ನು ಕೈಗೊಂಡು, ಅದನ್ನು ಪಕ್ಷದ ಹೈಕಮಾಂಡ್ ಗಮನಕ್ಕೆ ತರುವುದೆಂದೂ, ಬಳಿಕ ಹೈಕಮಾಂಡ್ ಹೇಳಿದಂತೆ ನಡೆದುಕೊಳ್ಳುವುದೆಂದೂ ತೀರ್ಮಾನಿಸಲಾಗಿದೆ.
ಗ್ರಾಮಾಂತರ ಶಾಸಕರ ಗೈರು, ಪಕ್ಷೇತರ ಸೇರಿ 11 ಸದಸ್ಯರು ಭಾಗಿ
    ಈ ಸಭೆಗೆ ತುಮಕೂರು ಗ್ರಾಮಾಂತರ ಕ್ಷೇತ್ರದ ಜೆಡಿಎಸ್ ಶಾಸಕ ಡಿ.ಸಿ.ಗೌರಿಶಂಕರ್ ಗೈರುಹಾಜರಾಗಿದ್ದು, ನಾನಾ ಅರ್ಥಗಳಿಗೆ ಎಡೆಮಾಡಿಕೊಟ್ಟಿದೆ.ಸಭೆಯಲ್ಲಿ ಪಾಲಿಕೆಯ ಮೇಯರ್ ಲಲಿತಾ ರವೀಶ್ (21 ನೇ ವಾರ್ಡ್-ಕುವೆಂಪುನಗರ) ಗೈರುಹಾಜರಾಗಿದ್ದು, ಅವರ ಪರವಾಗಿ ಅವರ ಪತಿ ರವೀಶ್ ಜಹಂಗೀರ್ ಇದ್ದರು. ಅದೇ ರೀತಿ ಸದಸ್ಯೆ ನಾಜೀಮಾಬಿ (29 ನೇ ವಾರ್ಡ್- ಮರಳೂರು ದಿಣ್ಣೆ) ಅವರ ಬದಲು ಅವರ ಪತಿ ಇಸ್ಮಾಯಿಲ್ ಇದ್ದರು. 
   ಮಿಕ್ಕಂತೆ ಪಾಲಿಕೆಯ ಜೆಡಿಎಸ್ ಸದಸ್ಯರುಗಳಾದ ಲಕ್ಷ್ಮೀನರಸಿಂಹರಾಜು (3ನೇ ವಾರ್ಡ್- ಅರಳಿಮರದ ಪಾಳ್ಯ), ಎಂ.ಕೆ. ಮನು (11 ನೇ ವಾರ್ಡ್- ಮೆಳೆಕೋಟೆ), ಬಿ.ಎಸ್.ಮಂಜುನಾಥ್ (17 ನೇ ವಾರ್ಡ್ -ಶಾಂತಿನಗರ), ಎ.ಶ್ರೀನಿವಾಸ್ (20 ನೇ ವಾರ್ಡ್- ಹನುಮಂತಪುರ), ಶ್ರೀನಿವಾಸ್ (22ನೇ ವಾರ್ಡ್- ವಾಲ್ಮೀಕಿ ನಗರ), ಟಿ.ಕೆ.ನರಸಿಂಹಮೂರ್ತಿ (23 ನೇ ವಾರ್ಡ್- ಸತ್ಯಮಂಗಲ), ಧರಣೇಂದ್ರ ಕುಮಾರ್ (28 ನೇ ವಾರ್ಡ್- ಸದಾಶಿವನಗರ), ಶಶಿಕಲಾ ಗಂಗಹನುಮಯ್ಯ (33ನೇ ವಾರ್ಡ್-ಕ್ಯಾತಸಂದ್ರ) ಅವರುಗಳು ಭಾಗವಹಿಸಿದ್ದರು. ಜೆಡಿಎಸ್‍ನ ಈ ಸದಸ್ಯರುಗಳೊಂದಿಗೆ ಪಕ್ಷೇತರ ಸದಸ್ಯ ಶಿವರಾಮು (24 ನೇ ವಾರ್ಡ್-ಉಪ್ಪಾರಹಳ್ಳಿ) ಸಹ ಇದ್ದರು. 
    ಸಭೆಯಲ್ಲಿ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಆಂಜಿನಪ್ಪ, ಕಾರ್ಯಾಧ್ಯಕ್ಷ ಹಾಗೂ ಮಾಜಿ ಉಪಮೇಯರ್ ಟಿ.ಆರ್.ನಾಗರಾಜು, ಪಾವಗಡದ ಮಾಜಿ ಶಾಸಕ ತಿಮ್ಮರಾಯಪ್ಪ, ಪಕ್ಷದ ಮುಖಂಡರುಗಳಾದ ಗಂಗಣ್ಣ, ಬೆಳ್ಳಿ ಲೋಕೇಶ್, ಕೆಂಪರಾಜು ಮೊದಲಾದವರು ಉಪಸ್ಥಿತರಿದ್ದರು. 
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link