ಪಾಲಿಕೆಯಲ್ಲಿ ಮೈತ್ರಿ ಬಗ್ಗೆ ಒಲವು: ಇಂದು ಜೆಡಿಎಸ್ ಸಭೆ

ತುಮಕೂರು
    ತುಮಕೂರು ಮಹಾನಗರ ಪಾಲಿಕೆಯ ಮೇಯರ್ ಮತ್ತು ಉಪಮೇಯರ್ ಚುನಾವಣೆ ಇದೇ ಜ.30 ರಂದು ಏರ್ಪಟ್ಟಿರುವ ಬೆನ್ನಲ್ಲೇ ರಾಜಕೀಯ ಚಟುವಟಿಕೆಗಳು ಚುರುಕಾಗಲಾರಂಭಿಸಿವೆ.
    ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಮೊದಲಿನಿಂದ ಮೈತ್ರಿ ಇದ್ದು, ಆ ಮೈತ್ರಿ ಮುಂದುವರೆಯಬೇಕು ಹಾಗೂ ಜೆಡಿಎಸ್ ಎಂದಿಗೂ ಮಾತಿಗೆ ತಪ್ಪಿ ನಡೆಯಬಾರದು ಎಂಬ ಅನಿಸಿಕೆ ಎರಡೂ ಪಕ್ಷಗಳ ಸದಸ್ಯರಲ್ಲಿ ಸಹಜವಾಗಿ ವ್ಯಕ್ತವಾಗುತ್ತಿದ್ದು, ಇದರ ನಡುವೆ ಜ.23 ರಂದು ಬೆಳಗ್ಗೆ 9 ಗಂಟೆಗೆ ತುಮಕೂರು ನಗರದ ವಿದ್ಯಾನಗರದಲ್ಲಿರುವ ಗುಬ್ಬಿ ಶಾಸಕ ಹಾಗೂ ಮಾಜಿ ಸಚಿವ ಎಸ್.ಆರ್.ಶ್ರೀನಿವಾಸ್ ಅವರ ನಿವಾಸದಲ್ಲಿ ಪಾಲಿಕೆಯ ಜೆ.ಡಿ.ಎಸ್. ಸದಸ್ಯರುಗಳ ಸಭೆಯನ್ನು ಕರೆಯಲಾಗಿದೆ.
    ಪಾಲಿಕೆಯ ಜೆಡಿಎಸ್ ಸದಸ್ಯರುಗಳ ಪಾಲಿಗೆ ಶ್ರೀನಿವಾಸ್ ಅವರ ತೀರ್ಮಾನವೇ ಬಹುತೇಕ ಅಂತಿಮವಾಗುತ್ತಿದೆ. ಈವರೆಗಿನ ಎಲ್ಲ ಚುನಾವಣೆಗಳ ಸಮಯದಲ್ಲೂ ಇವರ ನಿರ್ಧಾರವೇ ಪ್ರಾಮುಖ್ಯತೆ ಪಡೆದಿದೆ. ಹೀಗಾಗಿ ಈಗ ಅವರು ಕರೆದಿರುವ ಉಪಹಾರ ಕೂಟದ ಸಭೆಯು ಸಹ ಮಹತ್ವ ಪಡೆದುಕೊಂಡಿದೆ. 
   ಕಳೆದ ವರ್ಷ ಸಹ ಇವರ ಮನೆಯಲ್ಲಿ ನಡೆದಿದ್ದ ಸಭೆಯಲ್ಲಿ ಕೈಗೊಂಡಿದ್ದ ತೀರ್ಮಾನದಂತೆಯೇ, ಪಾಲಿಕೆಯಲ್ಲಿ ಜೆಡಿಎಸ್‍ಗೆ ಮೇಯರ್ ಸ್ಥಾನ ಹಾಗೂ ಕಾಂಗ್ರೆಸ್‍ಗೆ ಉಪಮೇಯರ್ ಸ್ಥಾನ ಲಭಿಸಿದ್ದವು. ಮುಂದಿನ ವರ್ಷವೂ ಪರಸ್ಪರ ಬೆಂಬಲಿಸುವಂತೆ ಅಲ್ಲಿ ನಿರ್ಧರಿಸಲಾಗಿತ್ತು. ಅದರಂತೆ ಈ ಬಾರಿ ಕಾಂಗ್ರೆಸ್ ಅನ್ನು ಜೆಡಿಎಸ್ ಬೆಂಬಲಿಸಬೇಕಿದೆ. ಮೇಯರ್ ಸ್ಥಾನ ಕಾಂಗ್ರೆಸ್‍ಗೆ ಹಾಗೂ ಉಪಮೇಯರ್ ಸ್ಥಾನ ಜೆಡಿಎಸ್‍ಗೆ ಲಭಿಸಬೇಕೆಂಬುದು ಆಗಿನ ಅಲಿಖಿತ ಒಪ್ಪಂದ.
   ಈ ನಿಟ್ಟಿನಲ್ಲಿ ಈ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗುವುದು. ಈ ಸಭೆಗೆ ತುಮಕೂರು ಗ್ರಾಮಾಂತರ ಕ್ಷೇತ್ರದ ಶಾಸಕ ಗೌರಿಶಂಕರ್ ಅವರನ್ನೂ ಆಹ್ವಾನಿಸಿದ್ದು, ಜಿಲ್ಲಾ ಜೆ.ಡಿ.ಎಸ್. ಅಧ್ಯಕ್ಷ ಆಂಜನಪ್ಪ ಮತ್ತು ಕಾರ್ಯಾಧ್ಯಕ್ಷ ಹಾಗೂ ಮಾಜಿ ಉಪಮೇಯರ್ ಟಿ.ಆರ್.ನಾಗರಾಜು ಸೇರಿದಂತೆ ಪಕ್ಷದ ಮುಖಂಡರುಗಳು ಭಾಗವಹಿಸಲಿದ್ದಾರೆ.
ಜೆಡಿಎಸ್ ಸದಸ್ಯರ ಪ್ರತ್ಯೇಕ ಸಭೆ
    ಈ ಮಧ್ಯೆ ಪಾಲಿಕೆಯ ಜೆ.ಡಿ.ಎಸ್.ನ ಕೆಲವು ಸದಸ್ಯರುಗಳು ಜ.21 ರಂದು ಬೆಳಗ್ಗೆ ತುಮಕೂರು ನಗರದ ಹೊರವಲಯ ಒಂದೆಡೆ ಭೋಜನ ಕೂಟದೊಂದಿಗೆ ಸಭೆಯೊಂದನ್ನು ನಡೆಸಿ, ಮೈತ್ರಿ ಬಗ್ಗೆ ಚರ್ಚಿಸಿದ್ದಾರೆ. ಜೆಡಿಎಸ್ ಸದಸ್ಯರಲ್ಲಿ ಒಡಕಿದೆಯೆಂಬ ಸುದ್ದಿ ಹಬ್ಬಿದ್ದು, ಇದು ಒಳ್ಳೆಯ ಬೆಳವಣಿಗೆಯಲ್ಲ. ಒಡಕಿನಿಂದ ಯಾರಿಗೂ ಉಪಯೋಗವಾಗುವುದಿಲ್ಲ. ಒಗ್ಗಟ್ಟಾಗಿದ್ದರೆ ಆಡಳಿತದಲ್ಲಿ ಬಿಗಿ ಬರಲಿದ್ದು, ವಾರ್ಡ್‍ಗಳಲ್ಲಿ ಕೆಲಸ ಕಾರ್ಯಗಳು ಸುಗಮವಾಗಿ ನಡೆಯಲು ಸಾಧ್ಯವಾಗುತ್ತದೆ. ಆದ್ದರಿಂದ ಎಲ್ಲರೂ ಒಗ್ಗಟ್ಟು ಕಾಪಾಡಿಕೊಳ್ಳಬೇಕು ಹಾಗೂ ಪಕ್ಷದ ಹೈಕಮಾಂಡ್ ಹೇಳಿದ್ದನ್ನು ಪಾಲಿಸಬೇಕು. ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡು ಮಾತು ಉಳಿಸಿಕೊಳ್ಳಬೇಕು ಎಂದು ಚರ್ಚಿಸಿದರೆಂದು ತಿಳಿದುಬಂದಿದೆ.
ಕಾಂಗ್ರೆಸ್‍ನಿಂದಲೂ ಸಭೆ
   ಇವೆಲ್ಲದರ ನಡುವೆ, ನಗರದ ಮಾಜಿ ಶಾಸಕ ಡಾ.ಎಸ್.ರಫೀಕ್ ಅಹಮದ್ ಅವರ ನಿವಾಸದಲ್ಲಿ ಜ.21 ರಂದು ಪಾಲಿಕೆಯ ಕಾಂಗ್ರೆಸ್ ಸದಸ್ಯರುಗಳ ಸಭೆಯೊಂದು ನಡೆದಿದ್ದು, ಅಲ್ಲೂ ಸಹ ಜೆ.ಡಿ.ಎಸ್. ಜೊತೆ ಮೈತ್ರಿ ಮುಂದುವರೆಸಲು ಚರ್ಚಿಸಲಾಗಿದೆ. ಈ ಬಾರಿ ಕಾಂಗ್ರೆಸ್ ಪಕ್ಷಕ್ಕೆ ಮೇಯರ್ ಆಗುವ ಅವಕಾಶ ದೊರೆತಿರುವುದರಿಂದ, ಮೇಯರ್ ಸ್ಥಾನಕ್ಕೆ ಯಾರನ್ನು ಅಭ್ಯರ್ಥಿಯನ್ನಾಗಿ ಮಾಡಬಹುದು ಎಂಬುದನ್ನೂ ಕೂಲಂಕಷವಾಗಿ ಚರ್ಚೆ ಮಾಡಲಾಗಿದೆ. ಆದರೆ ಅಭ್ಯರ್ಥಿ ಬಗ್ಗೆ ಇನ್ನೂ ಅಂತಿಮ ನಿರ್ಧಾರಕ್ಕೆ ಬರಲು ಸಾಧ್ಯವಾಗಿಲ್ಲ. 
ಬಿಜೆಪಿಯಲ್ಲೂ ಯತ್ನ
   ಬಿಜೆಪಿಯಲ್ಲೂ ಚಟುವಟಿಕೆಗಳು ನಡೆದಿವೆ. ಮೇಯರ್ ಸ್ಥಾನಾಕಾಂಕ್ಷಿಗಳು ಕಸರತ್ತು ನಡೆಸುತ್ತ, ಪಕ್ಷದ ಮುಖಂಡರುಗಳ ಮೇಲೆ ಒತ್ತಡ ಹಾಕುತ್ತಿದ್ದಾರೆ. ಬಿಜೆಪಿಯ ಈ ಪ್ರಯತ್ನದ ಸಂದರ್ಭದಲ್ಲೇ ಜೆ.ಡಿ.ಎಸ್. ಈ ಬಾರಿ ಹೋಳಾಗಿ ಬಿಜೆಪಿಯನ್ನು ಬೆಂಬಲಿಸುತ್ತ ದೆಂಬ ಮಾತುಗಳು ಪ್ರಬಲವಾಗಿ ಕೇಳಿಬಂದವು. ಆದರೆ ತಕ್ಷಣಕ್ಕೆ ಅಂತಹ ಯಾವ ಬೆಳವಣಿಗೆಗಳೂ ಹೊರನೋಟಕ್ಕೆ ಕಾಣುತ್ತಿಲ್ಲ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link