ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡಿದ್ದೇ ಕಾಂಗ್ರೆಸ್ ಸೋಲಿಗೆ ಕಾರಣ

ತುಮಕೂರು

      ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡಿದ್ದೇ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಹೀನಾಯ ಸೋಲಿಗೆ ಕಾರಣ. ತುಮಕೂರಿನಲ್ಲಿ ದೇವೇಗೌಡರು ಸೋಲಲು ಚುನಾವಣೆಯ ಜವಾಬ್ದಾರಿ ಹೊತ್ತಿದ್ದ ಕಾಂಗ್ರೆಸ್, ಜೆಡಿಎಸ್ ಮಂತ್ರಿಗಳು ಕಾರಣ ಎಂದು ರಾಜ್ಯ ಯುವ ಕಾಂಗ್ರೆಸ್ ಉಪಾಧ್ಯಕ್ಷ ಆರ್ ರಾಜೇಂದ್ರ ಹೇಳಿದರು.

      ಮೈತ್ರಿ ಬಿಟ್ಟು ಮುಂದಿನ ಚುನಾವಣೆಗಳಲ್ಲಿ ಕಾಂಗ್ರೆಸ್ ಸ್ವತಂತ್ರವಾಗಿ ಸ್ಪರ್ಧೆ ಮಾಡಿದರೆ ಪಕ್ಷಕ್ಕೆ ಹೆಚ್ಚು ಸ್ಥಾನ ದೊರೆಯುತ್ತದೆ ಎಂದು ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಹೇಳಿದರು.

     ರಾಜ್ಯದ ಮೈತ್ರಿ ಸರ್ಕಾರದ ಆಡಳಿತ ವೈಫಲ್ಯವೂ ಲೋಕಸಭೆ ಚುನಾವಣೆಯ ಸೋಲಿನ ಮೇಲೆ ಪರಿಣಾಮ ಬೀರಿದೆ. ಸರ್ಕಾರ ದೇವೇಗೌಡರ ಕುಟುಂಬಕ್ಕೆ ಸೀಮಿತವಾಗಿದೆ. ಕಾಂಗ್ರೆಸ್ ಶಾಸಕರು ತುಳಿತಕ್ಕೊಳಗಾಗಿದ್ದಾರೆ. ಅವರ ಕ್ಷೇತ್ರಗಳಿಗೆ ಸರ್ಕಾರ ಅನುದಾನ ನೀಡುತ್ತಿಲ್ಲ. ಅಭಿವೃದ್ಧಿ ಕೆಲಸ ಮಾಡದೆ ಯಾವಾಗಲೂ ರೆಸಾರ್ಟಿನ ಸುದ್ದಿಯೇ ಪ್ರಚಾರಪಡೆದುಕೊಳ್ಳುತ್ತಿದೆ. ಸರ್ಕಾರದ ಈ ಆಡಳಿತ ವೈಖರಿಗೆ ಜನ ಬೇಸತ್ತು ಈ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿಸಿದ್ದಾರೆ ಎಂದು ಹೇಳಿದರು.

    ತುಮಕೂರು ಕ್ಷೇತ್ರದಲ್ಲಿ ದೇವೇಗೌಡರು ಸ್ಪರ್ಧೆ ಮಾಡಿರುವ ಸಂದರ್ಭಲ್ಲಿ ಜೆಡಿಎಸ್ ಮಂತ್ರಿ, ಶಾಸಕರು ಕಾಂಗ್ರೆಸ್ ನಾಯಕರನ್ನು ಜೊತೆಯಾಗಿ ತೆಗೆದುಕೊಂಡು ಹೋಗುವ ಕೆಲಸ ಮಾಡಲಿಲ್ಲ, ಕಾಂಗ್ರೆಸಿನವರನ್ನು ಸಂಪೂರ್ಣವಾಗಿ ಕಡೆಗಣಿಸಿದ್ದು ಕೂಡಾ ದೇವೇಗೌಡರ ಸೋಲಿಗೆ ಕಾರಣವಾಯಿತು. ಇದರ ನಡುವೆ ಮುದ್ದಹನುಮೇಗೌಡ, ಕೆ ಎನ್ ರಾಜಣ್ಣ ಹಣ ಪಡೆದರು ಎಂಬ ಅಪಪ್ರಚಾರವೂ ಸೋಲಿಗೆ ಕಾರಣವಾಯಿತು ಎಂದರು.

      ಜೆಡಿಎಸ್ ದೂರವಿಟ್ಟು, ಯುವಕರಿಗೆ ಆದ್ಯತೆ ನೀಡಿದರೆ ಕಾಂಗ್ರೆಸ್ ಮುಂದಿನ ಚುನಾವಣೆಗಳಲ್ಲಿ ಹೆಚ್ಚು ಸ್ಥಾನ ಪಡೆಯಲಿದೆ. ಇಲ್ಲವಾದರೆ ಪಕ್ಷ ಸರ್ವನಾಶವಾಗುತ್ತದೆ ಎಂದರು.

     ಉಪ ಮುಖ್ಯಮಂತ್ರಿ ಡಾ. ಪರಮೇಶ್ವರ್ ಅವರನ್ನು ಝೀರೋ ಟ್ರಾಫಿಕ್ ಮಂತ್ರಿ ಟೀಕಿಸಿ, ಮೈತ್ರಿ ಅಭ್ಯರ್ಥಿಯ ವಿರುದ್ಧ ಮಾತನಾಡಿದ್ದರು ಎಂದು ಮಾಜಿ ಶಾಸಕ ಕೆ ಎನ್ ರಾಜಣ್ಣ ಅವರನ್ನು ಪಕ್ಷದಿಂದ ಹೊರ ಹಾಕಿ ಎಂಬ ಹೇಳಿಕೆ ನೀಡಿದ್ದ ಕಾಂಗ್ರೆಸ್‍ನ ಜಿಲ್ಲಾ ಪಂಚಾಯ್ತಿ ಸದಸ್ಯ ಕೆಂಚಮಾರಯ್ಯ ಅವರಿಗೆ ತಿರುಗೇಟು ನೀಡಿದ ರಾಜೇಂದ್ರ, ಕೆಂಚಮಾರಯ್ಯ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮಧುಗಿರಿ ಶಾಸಕರಿಂದ ಎಷ್ಟು ಹಣ ಪಡೆದಿದ್ದರು ಎಂಬುದನ್ನು ಹೇಳಲಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಅವರು ಹಣ ಪಡೆದು ಜೆಡಿಎಸ್ ಅಭ್ಯರ್ಥಿ ಬೆಂಬಲಿಸಿದ್ದರು ಎಂದು ಆರೋಪಿಸಿದರು.

     ಕೆಎನ್‍ಆರ್ ವಿರುದ್ಧ ಆಪಾದನೆ ಮಾಡಿದ್ದ ಜೆಡಿಎಸ್ ಶಾಸಕ ಗೌರಿಶಂಕರ್ ಅವರಿಗೆ ಸವಾಲು ಹಾಕಿದ ರಾಜೇಂದ್ರ, ರಾಜೀನಾಮೆ ನೀಡಿ ಗ್ರಾಮಾಂತರ ಕ್ಷೇತ್ರದಲ್ಲಿ ಮತ್ತೆ ಗೌರಿಶಂಕರ್ ಸ್ಪರ್ಧಿಸಲಿ, ನಾನು ಪಕ್ಷೇತರನಾಗಿ ಸ್ಪರ್ಧಿಸುತ್ತೇನೆ ಯಾರು ಗೆಲ್ಲುತ್ತಾರೋ ನೋಡೋಣ ಎಂದರು.

       ಮಧುಗಿರಿಯಲ್ಲಿ ಗೆದ್ದಿದ್ದ ಗೌರಿಶಂಕರ್ ವಿಧಾನಸೌಧಕ್ಕೆ ಎಷ್ಟು ಮಟ್ಟಿಲಿವೆ ಎಂದು ಎಣಿಸುವ ಮೊದಲೇ ರಾಜಿನಾಮೆ ಕೊಟ್ಟು ಬಿಜೆಪಿ ಸೇರಿದ್ದರು ಎಂದು ಟೀಕಿಸಿದರು.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ರಾಮಕೃಷ್ಣ ವೇಸ್ಟ್ ಕ್ಯಾಂಡೇಟ್, ಅವರು ಯಾವ ಚುನಾವಣೆಯಲ್ಲಿ ಯಾರನ್ನು ಗೆಲ್ಲಿಸಿದ್ದಾರೆ. ಅವರನ್ನು ತಕ್ಷಣ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಿ ಪಕ್ಷ ಕಟ್ಟುವವರನ್ನು ಕೂರಿಸಬೇಕು ಎಂದರು.ಮುಖಂಡರಾದ ಕಲ್ಲಹಳ್ಳಿ ದೇವರಾಜು, ಮೂರ್ತಿ, ಜಿ ಆರ್ ರವಿ, ಶಶಿ ಹುಲಿಕುಂಟೆಮಠ ಮತ್ತಿತರರು ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link