ಶಿರಾ
ಶಿರಾ ಉಪ ಚುನಾವಣೆಗೆ ಸಂಬಂಧಪಟ್ಟಂತೆ ಇನ್ನೂ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಮುಗಿದಿಲ್ಲವಾದರೂ ಕ್ಷೇತ್ರದ ಪ್ರಮುಖ ಧುರೀಣರು ಮಾತೃಪಕ್ಷಗಳನ್ನು ತೊರೆದು ಮತ್ತೊಂದು ಪಕ್ಷಕ್ಕೆ ಸೇರ್ಪಡೆಗೊಳ್ಳುವ ಮೂಲಕ ಪಕ್ಷಗಳ ಕಾರ್ಯಕರ್ತರು ಹಾಗೂ ಮತದಾರರು ಕೂಡ ಪೇಚಿಗೆ ಸಿಲುಕುವಂತಹ ವಾತಾವರಣ ಕ್ಷೇತ್ರದಲ್ಲಿ ಸೃಷ್ಟಿಯಾಗಿದೆ.
ಜೆ.ಡಿ.ಎಸ್. ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಜೆ.ಡಿ.ಎಸ್. ಅಭ್ಯರ್ಥಿಯನ್ನು ಕುಮಾರಸ್ವಾಮಿ ಪ್ರಕಟಿಸುತ್ತಾರೆಂಬ ಭಾವನೆ ಆ ಪಕ್ಷದ ಎಲ್ಲಾ ಮುಖಂಡರಲ್ಲೂ ಇತ್ತು. ಆದರೆ ಅಭ್ಯರ್ಥಿಯ ಘೋಷಣೆ ಮಾಡಲೇ ಇಲ್ಲ. ಶಾಸಕ ಬಿ.ಸತ್ಯನಾರಾಯಣ್ ಅವರ ಕುಟುಂಬಕ್ಕೆ ಮಾತ್ರ ಟಿಕೆಟ್ ನೀಡುವ ಎಲ್ಲಾ ಲಕ್ಷಣಗಳೂ ಕಂಡಿದ್ದರಿಂದ ಜೆ.ಡಿ.ಎಸ್. ಪಕ್ಷದ ಕೆಲ ಪ್ರಬಲ ಮುಖಂಡರು ಕಾಂಗ್ರೆಸ್ ತೊರೆಯಲು ಕಾರಣವಾಗಿದೆ.
ಬಹುತೇಕ ವರ್ಷಗಳಿಂದಲೂ ಜೆ.ಡಿ.ಎಸ್. ಪಕ್ಷದಲ್ಲಿಯೇ ಉಳಿದುಕೊಂಡು ಪಕ್ಷಕ್ಕಾಗಿ ನಿಷ್ಠೆಯಿಂದ ದುಡಿದಿದ್ದ ಕಲ್ಕೆರೆ ರವಿಕುಮಾರ್ ಸೇರಿದಂತೆ ಅವರ ಅನೇಕ ಬೆಂಬಲಿಗರು ದಿಢೀರನೆ ಜೆ.ಡಿ.ಎಸ್. ತೊರೆದು ಬೆಂಗಳೂರಿನ ಕೆ.ಪಿ.ಸಿ.ಸಿ. ಕಚೆರಿಯಲ್ಲಿ ಪಕ್ಷದ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ, ಡಾ.ಜಿ.ಪರಮೇಶ್ವರ್ ಅವರ ಸಮ್ಮುಖದಲ್ಲಿ ಟಿ.ಬಿ.ಜಯಚಂದ್ರ ಹಾಗೂ ಕೆ.ಎನ್.ರಾಜಣ್ಣ ಅವರ ನೇತೃತ್ವದಲ್ಲಿ ಕಾಂಗೈ ಸೇರಿದ್ದು ಅಚ್ಚರಿಯ ಬೆಳವಣಿಗೆಗೆ ಕಾರಣವಾಗಿದೆ.
ರಾಜ್ಯ ಜೆ.ಡಿ.ಎಸ್. ಪಕ್ಷದಲ್ಲಿ ಪ್ರಧಾನ ಕಾರ್ಯದರ್ಶಿಯಾಗಿದ್ದ ಕಲ್ಕೆರೆ ರವಿಕುಮಾರ್ ಅವರ ಪತ್ನಿ ಲತಾ ರವಿಕುಮಾರ್ ಜಿ.ಪಂ. ಅಧ್ಯಕ್ಷರಾಗಿದ್ದು, ಅವರನ್ನು ಅಧಿಕಾರದಿಂದ ಕೆಳಗಿಳಿಸುವ ತಂತ್ರವನ್ನು ಜೆ.ಡಿ.ಎಸ್. ಹಾಗೂ ಬಿ.ಜೆ.ಪಿ. ಮುಖಂಡರು ಮಾಡಿದ್ದಲ್ಲದೆ ಅವರ ವಿರುದ್ಧ ಅವಿಶ್ವಾಸ ಗೊತ್ತುವಳಿಯನ್ನೂ ಮಂಡಿಸಲಾಗಿತ್ತು.
ಈ ಕಾರಣದಿಂದ ಬೇಸತ್ತ ರವಿಕುಮಾರ್ ಕಾಂಗೈ ಸೇರ್ಪಡೆಗೊಳ್ಳಲು ಪ್ರಮುಖ ಕಾರಣ ಎನ್ನಲಾಗಿದೆ. ಜೆ.ಡಿ.ಎಸ್. ಪಕ್ಷದಲ್ಲಿ ಪ್ರಬಲ ಮುಖಂಡರೆಂದೇ ಗುರ್ತಿಸಿಕೊಂಡಿದ್ದ ಪುರಸಭೆಯ ಮಾಜಿ ಅಧ್ಯಕ್ಷ ಹಾಗೂ ಕುಂಚಿಟಿಗರ ಸಂಘದ ಅಧ್ಯಕ್ಷ ಪಿ.ಎಸ್.ತ್ಯಾಗರಾಜು, ತ್ಯಾಗರಾಜ್ ಅವರ ಪುತ್ರ ತಾ.ಪಂ. ಮಾಜಿ ಸದಸ್ಯ ಟಿ.ವಿನಯ್, ತಾ.ಪಂ. ಮಾಜಿ ಸದಸ್ಯ ರಾಘವೇಂದ್ರ(ರಘು), ತಾವರೇಕೆರೆ ವಿ.ಎಸ್.ಎಸ್.ಎನ್. ಅಧ್ಯಕ್ಷ ಕೃಷ್ಣಮೂರ್ತಿ, ಬಲಿಜ ಸಂಘದ ಅಧ್ಯಕ್ಷ ಶ್ರೀರಂಗಪ್ಪ, ಯುವ ಬಲಿಜ ಸಂಘದ ಅಧ್ಯಕ್ಷ ಕಿಶೋರ್, ಜೆ.ಡಿ.ಎಸ್. ಯುವ ಘಟಕದ ಅಧ್ಯಕ್ಷ ಮಣಿಕಂಠ, ಶರತ್ ಸೇರಿದಂತೆ ಅನೇಕ ಮಂದಿ ಕೆ.ಪಿ.ಸಿ.ಸಿ. ಕಚೆರಿಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ.
ತಾಲ್ಲೂಕಿನ ಬಹುತೇಕ ವಕೀಲರು ಕೂಡ ಕೆ.ಪಿ.ಸಿ.ಸಿ. ಕಚೆರಿಯಲ್ಲಿ ಕಾಂಗ್ರೆಸ್ ಸೇರ್ಪಡೆಗೊಂಡಿದ್ದಾರೆ. ವಕೀಲರ ಸಂಘದ ಮಾಜಿ ಅಧ್ಯಕ್ಷ ಸರ್ವೇಶ್ ಸೇರಿದಂತೆ ಸುಮಾರು 60 ಕ್ಕೂ ಹೆಚ್ಚು ವಕೀಲರು ಕಾಂಗೈ ಕಾನೂನು ಘಟಕದ ಅಧ್ಯಕ್ಷ ಹೆಚ್.ಗುರುಮೂರ್ತಿ ನೇತೃತ್ವದಲ್ಲಿ ಭಾನುವಾರ ಬೆಂಗಳೂರಿಗೆ ತೆರಳಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ ಎನ್ನಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
