ಬೆಂಗಳೂರು
ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರವನ್ನು ಪತನಗೊಳಿಸಲು ತೀವ್ರ ಪ್ರಯತ್ನದಲ್ಲಿ ನಿರತವಾಗಿರುವ ಬಿಜೆಪಿ ನಾಯಕರು, ಕಾಂಗ್ರೆಸ್ ಜತೆ ಜೆಡಿಎಸ್ ಶಾಸಕರನ್ನೂ ತಮ್ಮ ತೆಕ್ಕೆಗೆ ತೆಗೆದುಕೊಳ್ಳಲು ತಂತ್ರ ರೂಪಿಸುತ್ತಿದ್ದಾರೆ. ಬಿಜೆಪಿಯ ಈ ನಡೆ ಜೆಡಿಎಸ್ ಪಾಳಯದಲ್ಲಿ ಆತಂಕ ಸೃಷ್ಟಿಸಿದೆ.ಇದಕ್ಕೆ ತಕ್ಕ ಪ್ರತಿತಂತ್ರ ಕೂಡ ಜೆಡಿಎಸ್ ಪಾಳಯದಲ್ಲಿ ಸಿದ್ಧಗೊಳ್ಳುತ್ತಿದೆ.
ಇದರಿಂದ ಎಚ್ಚೆತ್ತುಕೊಂಡಿರುವ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಶಾಸಕರ ರಕ್ಷಣೆಗೆ ಎಚ್ಚರಿಕೆಯ ಹೆಜ್ಜೆ ಇಡುತ್ತಿದ್ದಾರೆ. ತಮ್ಮ ಪಕ್ಷದ ಯಾವುದೇ ಶಾಸಕರು ಆಪರೇಷನ್ ಕಮಲಕ್ಕೆ ಸಿಲುಕದಂತೆ ಖುದ್ದು ಎಚ್ಚರಿಕೆ ವಹಿಸಿದ್ದು, ಪಕ್ಷದ ಶಾಸಕರ ಜತೆ ನೇರ ಸಂಪರ್ಕದಲ್ಲಿದ್ದಾರೆ ಎಂದು ಜೆಡಿಎಸ್ ಮೂಲಗಳು ತಿಳಿಸಿವೆ.
ಅಲ್ಲದೇ ಶಾಸಕರ ಚಟುವಟಿಕೆಗಳ ಮೇಲೆ ಕಣ್ಗಾವಲು ಇಟ್ಟಿದ್ದು, ಪಕ್ಷದ ಮುಖಂಡರಿಂದ ನಿರಂತರ ಮಾಹಿತಿ ಪಡೆಯುತ್ತಿದ್ದಾರೆ. ಅಲ್ಲದೇ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಹಾಗೂ ಸಚಿವ ರೇವಣ್ಣ ಅವರೂ ಸಹ ಶಾಸಕರ ಚಲನವಲನಗಳನ್ನು ಗಮನಿಸುತ್ತಿದ್ದಾರೆ.
ಆಪರೇಷನ್ ಕಮಲಕ್ಕೆ ತಿರುಗೇಟು ನೀಡಲು ಸಿದ್ಧತೆ ನಡೆಸುತ್ತಿರುವ ಮುಖ್ಯಮಂತ್ರಿ ಅವರು, ಹಾಗೊಂದು ವೇಳೆ ಸರ್ಕಾರಕ್ಕೆ ಆಪತ್ತು ಎದುರಾದರೆ, ಬಿಜೆಪಿಯ ಕೆಲ ಶಾಸಕರನ್ನು ತಮ್ಮತ್ತ ಸೆಳೆದುಕೊಳ್ಳುವ ಕುರಿತು ಪಕ್ಷದ ಪ್ರಮುಖರ ಜೊತೆ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.
ಬಿಜೆಪಿಯ ನಾಲ್ಕರಿಂದ ಐದು ಶಾಸಕರನ್ನು ಸೆಳೆಯಲು ತಂತ್ರ ರೂಪಿಸಿರುವ ಅವರು, ಇದಕ್ಕಾಗಿ ಆಪ್ತ ಶಾಸಕರು, ಸಚಿವರು ಮತ್ತು ಆಪ್ತರ ನೆರವು ಪಡೆಯುತ್ತಿದ್ದಾರೆ. ರಾಜಕೀಯ ಪರಿಸ್ಥಿತಿಯ ಆಧಾರದ ಮೇಲೆ ಸೂಕ್ತ ದಾಳವನ್ನು ಉರುಳಿಸುವುದು ಕುಮಾರಸ್ವಾಮಿ ಅವರ ತಂತ್ರವಾಗಿದೆ ಎಂದು ಇವೇ ಮೂಲಗಳು ಸ್ಪಷ್ಟಪಡಿಸಿವೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ