ಜ.23ರಂದು ಅರಮನೆ ಮೈದಾನದಲ್ಲಿ ಜೆಡಿಎಸ್ ಸಮಾವೇಷ :ದೇವೇಗೌಡ

ಬೆಂಗಳೂರು 

     ಪಕ್ಷ ಸಂಘಟನೆ ಮಾಡುವ ಉದ್ದೇಶದಿಂದ ಜ.23 ರಂದು ಅರಮನೆ ಮೈದಾನದಲ್ಲಿ ಸಂಸದರು, ಶಾಸಕರು,ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಸೇರಿದಂತೆ ಎಲ್ಲಾ ಮುಖಂಡರ ಸಮಾವೇಶವನ್ನು ನಡೆಸಲಾಗುವುದು ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡರು ತಿಳಿಸಿದರು.

    ಜೆ.ಪಿ.ಭವನದಲ್ಲಿಂದು ನಡೆದ ಬೆಂಗಳೂರು ಮಹಾನಗರ ಜೆಡಿಎಸ್ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ಚುನಾವಣೆಯಲ್ಲಿ ಸೋತವರು, ಗೆದ್ದವರು, ಸಂಸದರು, ಶಾಸಕರು, ನಗರಸಭೆ, ಪುರಸಭೆ ಸದಸ್ಯರು, ತಾಲೂಕು ಮಟ್ಟದ ಮುಖಂಡರು, ಜಿ.ಪಂ., ತಾ.ಪಂ. ಅಧ್ಯಕ್ಷರು ಸದಸ್ಯರನ್ನೊಳಗೊಂಡ ಪಕ್ಷದ ಮುಖಂಡರ ಸಮಾವೇಶ ನಡೆಸಲಾಗುವುದು.ತಳಮಟ್ಟದಿಂದ ಪಕ್ಷ ಸಂಘಟನೆ ಮಾಡುವ ಬಗ್ಗೆ ಸಮಾವೇಶದಲ್ಲಿ ಚರ್ಚಿಸಲಾಗುವುದು ಎಂದರು.

     ಫೆಬ್ರವರಿಯಲ್ಲಿ ಪಕ್ಷದ ಕಾರ್ಯಕಾರಿಣಿ ಸಭೆಯನ್ನು ನಡೆಸಲಾಗುವುದು ಅದಕ್ಕೆ ಬೇಕಾದ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುವುದು. ಮುಂಬರುವ ರಾಜ್ಯಸಭೆ ಚುನಾವಣೆ ನಮಗೆ ಮುಖ್ಯವಲ್ಲ. ಪಕ್ಷದ ಸಂಘಟನೆಗೆ ಹೆಚ್ಚು ಆದ್ಯತೆ ನೀಡಬೇಕಿದೆ ಎಂದು ಹೇಳಿದರು.

    ಕೇರಳದಲ್ಲಿ ಇನ್ನೂ ಒಂದು ವಾರ ಚಿಕಿತ್ಸೆ ಪಡೆಯುವಂತೆ ಹೇಳಿದರು. ಆದರೂ ಮನಸ್ಸು ತಡೆಯಲಿಲ್ಲ. ಹಾಗಾಗಿ ರಾಜ್ಯಕ್ಕೆ ಮರಳಬೇಕಾಯಿತು. ಕೇರಳದಲ್ಲಿ ಜೆಡಿಎಸ್ ಕಾರ್ಯಕರ್ತರು ಏಳು ದಿನ ಪಾದಯಾತ್ರೆ ಯಶಸ್ವಿಯಾಗಿ ನಡೆಸಿ ಆನಂತರ ಸಭೆಯನ್ನು ನಡೆಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

    ಕೇರಳ ಮತ್ತು ಕರ್ನಾಟಕದಲ್ಲಿ ಜೆಡಿಎಸ್‍ಗೆ ಚುನಾವಣಾ ಆಯೋಗದ ಮಾನ್ಯತೆ ಸಿಕ್ಕಿದೆ. ಉಳಿದೆಡೆಗಳಲ್ಲಿ ಪಕ್ಷ ಅಷ್ಟೊಂದು ಪ್ರಬಲವಾಗಿಲ್ಲ ಎಂದರು. ವಿಧಾನಪರಿಷತ್ ಸದಸ್ಯರಾ ಟಿ.ಎ.ಶರವಣ, ರಮೇಶ್‍ಗೌಡ, ಬೆಂಗಳೂರು ಮಹಾನಗರ ಜೆಡಿಎಸ್ ಅಧ್ಯಕ್ಷ ಆರ್.ಪ್ರಕಾಶ್, ಮಾಜಿ ಉಪಮೇಯರ್‍ಗಳಾದ ಭದ್ರೇಗೌಡ, ಆನಂದ್ ಸೇರಿದಂತೆ ಬಿಬಿಎಂಪಿ ಸದಸ್ಯರು, ಪಕ್ಷದ ಮುಖಂಡರು ಮತ್ತಿತರರು ಪಾಲ್ಗೊಂಡಿದ್ದರು.

 

Recent Articles

spot_img

Related Stories

Share via
Copy link
Powered by Social Snap