ಜೆಡಿಎಸ್‍ಗೆ ಗುಡ್ ಬೈ ಹೇಳಲು ಸಜ್ಜಾದ ಆರು ಶಾಸಕರು.!

ಬೆಂಗಳೂರು

     ಜೆಡಿಎಸ್‍ನಲ್ಲಿ ಮನೆಮಾಡಿದ್ದ ಅಸಮಾಧಾನ ಕೊನೆಗೂ ಸ್ಫೋಟಗೊಳ್ಳುವ ಹಂತಕ್ಕೆ ತಲುಪಿದ್ದು, ಸದ್ಯದಲ್ಲೇ ಆರು ಮಂದಿ ಹಾಲಿ ಶಾಸಕರು ಆ ಪಕ್ಷಕ್ಕೆ ”ಗುಡ್ ಬೈ” ಹೇಳಲು ಮುಂದಾಗಿರುವುದು ರಾಜ್ಯ ರಾಜಕಾರಣದಲ್ಲಿ ಹೊಸದೊಂದು ತಲ್ಲಣಕ್ಕೆ ಕಾರಣವಾಗಿದೆ. ಕಾಂಗ್ರೆಸ್ – ಜೆಡಿಎಸ್ ಮೈತ್ರಿ ಸರ್ಕಾರ ಪತನದ ನಂತರ, ಹಲವಾರು ಜೆಡಿಎಸ್ ಶಾಸಕರು ಗುಂಪಾಗಿ ಪಕ್ಷ ತೊರೆಯಲು ಮುಂದಾಗಿದ್ದರು.

     ಆದರೆ ಸೂಕ್ತ ಸಮಯಕ್ಕಾಗಿ ಕಾದುನೋಡುವ ತಂತ್ರಕ್ಕೆ ಜೋತುಬಿದ್ದಿದ್ದರು. ಪಕ್ಷದ ಒಟ್ಟು ಶಾಸಕರ ಪೈಕಿ ಮೂರನೇ ಒಂದರಷ್ಟು ಶಾಸಕರು ಪಕ್ಷಕ್ಕೆ ರಾಜೀನಾಮೆ ನೀಡಿ ಯಾವುದೇ ರೀತಿಯ ಪಕ್ಷಾಂತರ ನಿಷೇಧ ಕಾಯ್ದೆಯ ಕುಣಿಕೆಗೆ ಸಿಲುಕದಂತೆ, ಮುಂಜಾಗ್ರತೆ ವಹಿಸಲು ನಿರ್ಧರಿಸಿದ್ದರು. ಇದೀಗ ಪಕ್ಷ ತೊರೆಯುವ ದಿಟ್ಟ ನಿರ್ಧಾರಕ್ಕೆ ಶಾಸಕರು ಬಂದಂತಿದೆ.

    ಈಗಾಗಲೇ ಜೆಡಿಎಸ್‍ನಿಂದ ಒಂದು ಹೆಜ್ಜೆ ಹೊರಗಿಟ್ಟಿರುವ ಜಿ.ಟಿ. ದೇವೇಗೌಡ (ಚಾಮುಂಡೇಶ್ವರಿ), ಆರ್. ಶ್ರೀನಿವಾಸ್ (ಗುಬ್ಬಿ), ಶಿವಲಿಂಗೇಗೌಡ (ಅರಸಿಕೆರೆ), ಮಹದೇವ್ (ಪಿರಿಯಾಪಟ್ಟಣ), ಸುರೇಶ್ ಗೌಡ (ನಾಗಮಂಗಲ), ರವೀಂದ್ರ ಶ್ರೀಕಂಠಯ್ಯ (ಶ್ರೀರಂಗಪಟ್ಟಣ), ಸತ್ಯನಾರಾಯಣ (ಸಿರಾ) ಸೇರಿದಂತೆ, ಹಾಲಿ ಶಾಸಕರು ಹಾಗೂ ಕಳೆದ ಚುನಾವಣೆಯಲ್ಲಿ ಸೋತ ಚಿಕ್ಕನಾಯಕನಹಳ್ಳಿಯ ಸುರೇಶ್ ಬಾಬು, ಮತ್ತಿತರರು ಪಕ್ಷದ ನಾಯಕರಿಗೆ ಸೆಡ್ಡು ಹೊಡೆದು, ಇತರೆ ಪಕ್ಷಗಳತ್ತ ಮುಖಮಾಡಿದ್ದಾರೆ.

    ದೇವೇಗೌಡರ ಕುಟುಂಬ ರಾಜಕಾರಣದಿಂದ ಬೇಸತ್ತು ಹಲವಾರು ಕಾರಣಗಳಿಂದ ಪಕ್ಷದಲ್ಲಿ ಉಳಿದುಕೊಂಡು ದಿನದೂಡುತ್ತಿದ್ದ ಆರು ಮಂದಿ ಹಾಲಿ ಶಾಸಕರ ಜೊತೆಗೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋತ ಆರು ಮಂದಿ ಅಭ್ಯರ್ಥಿಗಳು ಹಾಗೂ ಹಲವು ಪ್ರಮುಖರು ಪಕ್ಷ ತೊರೆಯಲು ನಿರ್ಧರಿಸಿದ್ದಾರೆ.

    ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್‍ನಿಂದ 37 ಶಾಸಕರು ಆಯ್ಕೆಯಾಗಿದ್ದರು. ಬಿಜೆಪಿಯ ಆಪರೇಷನ್ ಕಮಲದ ಖೆಡ್ಡಾಕ್ಕೆ ಬಿದ್ದಿದ್ದ ಮೂವರು ಜೆಡಿಎಸ್ ಶಾಸಕರನ್ನು ಅನರ್ಹಗೊಳಿಸಲಾಗಿತ್ತು. ಶಾಸಕರಾದ ಹೆಚ್. ವಿಶ್ವನಾಥ್, ನಾರಾಯಣ ಗೌಡ, ಕೆ. ಗೋಪಾಲಯ್ಯ ಅವರನ್ನು ಪಕ್ಷ ವಿರೋಧಿ ಚಟುವಟಿಕೆ ಆರೋಪದ ಹಿನ್ನೆಲೆಯಲ್ಲಿ ಅನರ್ಹಗೊಳಿಸಲಾಗಿತ್ತು. ಉಳಿದಂತೆ, ಜೆಡಿಎಸ್‍ನಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಸೇರಿದಂತೆ, 34 ಶಾಸಕರಿದ್ದು, ಈ ಪೈಕಿ ಆರು ಮಂದಿ ಶಾಸಕರು ರಾಜೀನಾಮೆ ನೀಡಲು ಮುಂದಾಗಿರುವುದು ಆ ಪಕ್ಷದ ನಾಯಕರಿಗೆ ನುಂಗಲಾರದ ತುತ್ತಾಗಿದೆ.

    ಈ ವಿಷಯವನ್ನು ಅರಿತಿರುವ ಮಾಜಿ ಪ್ರಧಾನಿ ದೇವೇಗೌಡ ಮತ್ತು ಕುಮಾರಸ್ವಾಮಿ, ಅಸಮಾದಾನÀ ಗೊಂಡಿರುವ ಶಾಸಕರನ್ನು ಪಕ್ಷದಲ್ಲಿ ಉಳಿಸಿಕೊಳ್ಳುವ ಯಾವುದೇ ಪ್ರಯತ್ನಕ್ಕೆ ಮುಂದಾಗಿಲ್ಲ ಎನ್ನಲಾಗಿದೆ. ಈ ಪೈಕಿ ಕೆಲವರು ಅಧಿಕಾರದಲ್ಲಿರುವ ಬಿಜೆಪಿ ಸಖ್ಯ ಬೆಳೆಸಲು ಮುಂದಾಗಿದ್ದರೆ, ಮತ್ತೆ ಕೆಲವರು ತಮ್ಮ ರಾಜಕೀಯ ಭವಿಷ್ಯದ ದೃಷ್ಟಿಯಿಂದ ಕಾಂಗ್ರೆಸ್‍ನತ್ತ ವಾಲಲು ಚಿಂತನೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

     ಈ ನಡುವೆ ಪಕ್ಷದಲ್ಲಿ ನಡೆಯುತ್ತಿರುವ ಮುಸುಕಿನ ಗುದ್ದಾಟದಿಂದ ಅಸಮಾದಾನÀ ಗೊಂಡಿರುವ ಮಾಜಿ ಸಚಿವ ಚನ್ನಿಗಪ್ಪ ಅವರ ಪುತ್ರ ಬಿ.ಸಿ. ಗೌರಿ ಶಂಕರ್ ಅವರೂ ಪಕ್ಷ ತೊರೆಯಲು ಸಿದ್ಧತೆ ನಡೆಸಿದ್ದಾರೆ ಎಂದು ಹೇಳಲಾಗಿದೆ.ಸಮ್ಮಿಶ್ರ ಸರ್ಕಾರ ಪತನವಾದಾಗಿನಿಂದ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರೂ ಆಗಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಹಾಡಿಹೊಗಳುತ್ತಲೇ ಬಂದಿರುವ ಜಿ.ಟಿ. ದೇವೇಗೌಡ, ಯಡಿಯೂರಪ್ಪ ಮುಖ್ಯಮಂತ್ರಿ ಆದ ನಂತರ, ಅವರೊಂದಿಗೆ ನಿಕಟ ಸಂಪರ್ಕದಲ್ಲಿದ್ದಾರೆ. ಒಂದಲ್ಲಾ ಒಂದು ಕಾರಣವನ್ನು ಮುಂದಿಟ್ಟುಕೊಂಡು ಅವರ ಆಪ್ತ ಬಳಗದಲ್ಲಿ ಗುರುತಿಸಿಕೊಳ್ಳುವ ಪ್ರಯತ್ನ ಮಾಡಿದ್ದಾರೆ.

    ಅಲ್ಲದೆ, ಮಾಜಿ ಸಚಿವರೂ ಆಗಿರುವ ಗುಬ್ಬಿ ಶಾಸಕ ಶ್ರೀನಿವಾಸ್, ಕುಮಾರಸ್ವಾಮಿ ವಿರುದ್ಧವೇ ತಿರುಗಿಬಿದ್ದಿದ್ದಾರೆ. ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಬಂಧನ ವಿರೋಧಿಸಿ, ಒಕ್ಕಲಿಗರು ನಡೆಸಿದ ಪ್ರತಿಭಟನೆಯಲ್ಲಿ ಪಾಲ್ಗೊಳ್ಳದೆ, ದೂರ ಉಳಿದಿದ್ದ ಕುಮಾರಸ್ವಾಮಿ ಅವರ ಧೋರಣೆಯನ್ನು ಶ್ರೀನಿವಾಸ್ ಕಟುವಾಗಿ ತರಾಟೆಗೆ ತೆಗೆದುಕೊಳ್ಳುವ ಮೂಲಕ ಪಕ್ಷ ಬಿಡುವ ಸುಳಿವನ್ನು ನೀಡಿದ್ದರು.

    ಜೆಡಿಎಸ್ ಭದ್ರಕೋಟೆಯಾದ ಮೈಸೂರು ಭಾಗದ ಹಾಸನ, ಮಂಡ್ಯ, ಮೈಸೂರು ಮತ್ತು ತುಮಕೂರು ಜಿಲ್ಲೆಗಳ ಜೆಡಿಎಸ್ ಶಾಸಕರು ಒಟ್ಟಾಗಿ ಬಿಜೆಪಿಯತ್ತ ಮುಖಮಾಡಿದ್ದಾರೆಂಬ ದಟ್ಟ ವದಂತಿಗಳು ರಾಜಕಾರಣದಲ್ಲಿ ಹರಿದಾಡುತ್ತಿರುವಾಗಲೇ ಆರು ಮಂದಿ ಶಾಸಕರು ಪಕ್ಷಕ್ಕೆ ರಾಜೀನಾಮೆ ನೀಡಲು ಮುಂದಾಗಿರುವುದು ಪ್ರಾದೇಶಿಕ ಪಕ್ಷವಾದ ಜೆಡಿಎಸ್ ಮತ್ತಷ್ಟು ಸಂಕಷ್ಟಕ್ಕೆ ಈಡಾಗುವ ಸೂಚನೆಗಳು ಕಂಡುಬಂದಿವೆ.

      ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap