ದಾವಣಗೆರೆ:
ಲೋಕಸಭಾ ಚುನಾವಣೆಯಲ್ಲಿ ದಾವಣಗೆರೆ ಕ್ಷೇತ್ರದಲ್ಲಿ ಜೆಡಿಯು ಪಕ್ಷವು ಬಿಜೆಪಿ ಅಭ್ಯರ್ಥಿ ಜಿ.ಎಂ.ಸಿದ್ದೇಶ್ವರ್ ಅವರಿಗೆ ಬೆಂಬಲ ನೀಡಲಿದೆ ಎಂದು ರಾಜ್ಯ ಜೆಡಿಯು ಅಧ್ಯಕ್ಷ, ಮಾಜಿ ಶಾಸಕ ಮಹಿಮಾ ಜೆ.ಪಟೇಲ್ ಘೋಷಿಸಿದರು.
ಹರಿಹರ ತಾಲ್ಲೂಕಿನ ಹಿಂಡಸಗಟ್ಟೆ ಗ್ರಾಮದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜೆಡಿಯು ರಾಷ್ಟ್ರೀಯ ನಾಯಕ ನಿತೀಶ್ ಕುಮಾರ್ ಅವರ ಕರೆಯ ಮೇರೆಗೆ ದಾವಣಗೆರೆ ಲೋಕಸಭಾ ಕ್ಷೇತ್ರದ ಬಿಜೆಪಿಯ ಅಭ್ಯರ್ಥಿ ಜಿ.ಎಂ. ಸಿದ್ದೇಶ್ವರ್ ಅವರಿಗೆ ಬೆಂಬಲ ಸೂಚಿಸುತ್ತಿದ್ದೇವೆ ಎಂದು ಹೇಳಿದರು.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪನವರು ಇತ್ತೀಚೆಗೆ ನನ್ನೊಂದಿಗೆ ಮಾತನಾಡಿ, ಪಕ್ಷದ ಒತ್ತಡದಿಂದ ಜೆಡಿಯುಗೆ ಕ್ಷೇತ್ರವನ್ನು ಬಿಟ್ಟುಕೊಡಲಾಗಿಲ್ಲ. ಆದರೆ ನಿಮ್ಮ ಪಕ್ಷ ಬೆಳೆಸಲು ಅಗತ್ಯ ಸಹಕಾರ ನೀಡುವುದಾಗಿ ಭರವಸೆ ನೀಡಿದ್ದಾರೆ. ಹೀಗಾಗಿ ನಾವು ಸಹ ದಾವಣಗೆರೆ ಕ್ಷೇತ್ರದಲ್ಲಿ ಎಲ್ಲರ ಜೊತೆಗೆ ಬೆರೆಯುವಂತಹ ಬಿಜೆಪಿ ಅಭ್ಯರ್ಥಿ ಜಿ.ಎಂ.ಸಿದ್ದೇಶ್ವರ್ ಅವರನ್ನು ಬೆಂಬಲಿಸುತ್ತಿದ್ದು, ನಮ್ಮ ಪಕ್ಷದ ಕಾರ್ಯಕರ್ತರು, ಅನುಯಾಯಿಗಳು ಸಹ ಈ ಬಾರಿ ಬಿಜೆಪಿಗೆ ಮತ ನೀಡುವ ಮೂಲಕ ಸಿದ್ದೇಶ್ವರ್ ಅವರನ್ನು ಗೆಲ್ಲಿಸಿ ಎಂದು ಮನವಿ ಮಾಡಿದರು.
ದಾವಣಗೆರೆಯನ್ನು ಮತ್ತೆ ಕೈಗಾರಿಕಾ ಕೇಂದ್ರವನ್ನಾಗಿ ಮಾಡುವ ದಿಸೆಯಲ್ಲಿ ಹಾಗೂ ರೈತರಿಗೆ ಜೀವನ ಹಸನಾಗಿಸಲು ಮತ್ತು ನಿರುದ್ಯೋಗ ಸಮಸ್ಯೆ ಸೇರಿದಂತೆ ಇತರೆ ಸಮಸ್ಯೆಗಳಿಗೆ ಬಿಜೆಪಿ ಪರಿಹಾರ ಹುಡುಕಲಿದೆ ಎಂಬ ಕಾರಣಕ್ಕೆ ಈ ಬಾರಿ ಬಿಜೆಪಿ ಅಭ್ಯರ್ಥಿಯ ಬೆನ್ನಿಗೆ ನಿಂತಿದ್ದೇವೆ ಎಂದರು.
ಹಾಲಿ ಸಂಸದ, ಬಿಜೆಪಿ ಅಭ್ಯರ್ಥಿ ಜಿ.ಎಂ.ಸಿದ್ದೇಶ್ವರ್ ಮಾತನಾಡಿ, 2014ರ ಲೋಕಸಭಾ ಚುನಾವಣೆಯಲ್ಲಿ ಮಹಿಮಾ ಪಟೇಲರು ಜೆಡಿಎಸ್‍ನಿಂದ ಸ್ಪರ್ಧಿಸಿ 55 ಸಾವಿರ ಮತ ಗಳಿಸಿದ್ದರು. ಈಗ ಅವರ ಎಲ್ಲಾ ಮತಗಳು ತಮಗೆ ಸಿಗುವ ನಿರೀಕ್ಷೆ ಇದೆ. ಈಗ ಅವರು ತಮ್ಮನ್ನು ಬೆಂಬಲಿಸುತ್ತಿರುವುದು ಸಂತಸ ತಂದಿದೆ ಎಂದು ಹೇಳಿದರು.
ಕಳೆದ ಐದು ವರ್ಷಗಳಲ್ಲಿ ಜಿಲ್ಲೆಗೆ ತಾವು 9927 ಕೋಟಿ ರೂ., ಅನುದಾನ ತಂದಿದ್ದೇನೆ. ರಸ್ತೆ, ನೀರು, ಆರೋಗ್ಯ, ಶಿಕ್ಷಣ ಎಲ್ಲಾ ಕಡೆಯೂ ಹೆಚ್ಚಿನ ಒತ್ತು ಕೊಟ್ಟಿದ್ದೇನೆ. ಕೇಂದ್ರದಿಂದ ನಾವೆಷ್ಟೇ ಅನುದಾನ ತಂದರೂ ಅದಕ್ಕೆ ರಾಜ್ಯಸರ್ಕಾರವೂ ಬೆಂಬಲ ನೀಡಬೇಕು. ಆಗ ಅಭಿವೃದ್ಧಿ ಕಾರ್ಯಗಳು ಶರವೇಗದಲ್ಲಿ ನಡೆಯಲಿದೆ. ಆದರೆ, ಸ್ಥಳೀಯವಾಗಿ ಸಹಕಾರ ಇಲ್ಲದ ಕಾರಣ ಅಶೋಕ ರಸ್ತೆ ಮೇಲ್ಸೇತುವೆ ನಿರ್ಮಾಣಕ್ಕೆ 35 ಕೋಟಿ ಕೇಂದ್ರದಿಂದ ತಂದರೂ ಸಹ ಅದು ಇದುವರೆಗೂ ನೆನೆಗುದಿಗೆ ಬಿದ್ದಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಹರಿಹರ ಮಾಜಿ ಶಾಸಕ ಬಿ.ಪಿ. ಹರೀಶ್, ಎಂ.ಜಿ. ನಾಗನಗೌಡ, ಜಿಪಂ ಸದಸ್ಯ ವಾಗೀಶ್‍ಸ್ವಾಮಿ, ತಾಪಂ ಅಧ್ಯಕ್ಷೆ ಶ್ರೀದೇವಿ, ರಾಮಚಂದ್ರಪ್ಪ, ಲಿಂಗರಾಜ್ ಸಿಂಧೆ, ಐರಣಿ ಅಣ್ಣೇಶ್, ಪರಮೇಶ್ವರ್ ಮತ್ತಿತರರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
