ದಾವಣಗೆರೆ:
ಲೋಕಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಜೆಡಿಯು ತೊರೆದು ಕಾಂಗ್ರೆಸ್ ಸೇರುತ್ತಿರುವುದಾಗಿ ಮುದ್ದಾಪುರ ರೆಹಮಾನ್ ತಿಳಿಸಿದ್ದಾರೆ.
ಈ ಕುರಿತು ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಾವಣಗೆರೆ ಲೋಕಸಭಾ ಕ್ಷೇತ್ರದಿಂದ ಶಾಸಕ ಡಾ.ಶಾಮನೂರು ಶಿವಶಂಕರಪ್ಪನವರು ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಿರುವ ಹಿನ್ನೆಲೆಯಲ್ಲಿ ಶಿವಶಂಕರಪ್ಪನವರನ್ನು ಬೆಂಬಲಿಸಿ ಗೆಲ್ಲಿಸಿಕೊಂಡು ಬರಬೇಕೆಂಬ ಉದ್ದೇಶದಿಂದ ಜೆಡಿಯು ಪಕ್ಷ ತೊರೆದು, ಕಾಂಗ್ರೆಸ್ಸಿಗೆ ಸೇರಿದ್ದೇವೆ ಎಂದು ಹೇಳಿದರು.
ಶಾಸಕ ಶಾಮನೂರು ಶಿವಶಂಕರಪ್ಪ, ಮುಖಂಡ ಸೈಯದ್ ಸೈಫುಲ್ಲಾ ಅವರುಗಳ ಸಮ್ಮುಖದಲ್ಲಿ ತಮ್ಮ ನೇತೃತ್ವದಲ್ಲಿ ಸುಮಾರು 300ಕ್ಕೂ ಹೆಚ್ಚು ಮುಖಂಡರು, ಕಾರ್ಯಕರ್ತರು ಕಾಂಗ್ರೆಸ್ಸಿಗೆ ಸೇರ್ಪಡೆಯಾಗಿದ್ದೇವೆ. ದಾವಣಗೆರೆ ಜಿಲ್ಲೆಯ ಅಭಿವೃದ್ಧಿಗೆ ಹಾಗೂ ಶಿಕ್ಷಣ ಕ್ಷೇತ್ರಕ್ಕೆ ಶಾಮನೂರು ಸಾಕಷ್ಟು ಕೊಡುಗೆ ನೀಡಿದ್ದು, ಶಿವಶಂಕರಪ್ಪ ಗೆಲುವಿಗೆ ನಾವೆಲ್ಲರೂ ಪ್ರಾಮಾಣಿಕವಾಗಿ ಶ್ರಮಿಸುತ್ತೇವೆ ಎಂದರು.
ನಮಗೆ ಪಕ್ಷಕ್ಕಿಂತಲೂ ವ್ಯಕ್ತಿ ಮುಖ್ಯ ಎಂಬಂತೆ ದಾವಣಗೆರೆ ಕ್ಷೇತ್ರದ ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಇಲ್ಲಿಂದ ಡಾ.ಶಾಮನೂರು ಶಿವಶಂಕರಪ್ಪನವರನ್ನು 1 ಲಕ್ಷ ಮತಗಳ ಅಂತರದಲ್ಲಿ ಗೆಲ್ಲಿಸುವುದು ನಮ್ಮ ಗುರಿಯಾಗಿದೆ. ಪಕ್ಷಕ್ಕಿಂತಲೂ ವ್ಯಕ್ತಿ ಮುಖ್ಯವಾಗಿರುವ ಹಿನ್ನೆಲೆಯಲ್ಲಿ ಯಾವುದೇ ಕಾರಣಕ್ಕೂ ತಾವ್ಯಾರೂ ಬಿಜೆಪಿಗೆ ಬೆಂಬಲಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಎಲ್.ಎಂ.ಮಹಮ್ಮದ್ ಅಲಿ ಬಾಬು, ಹಜ್ ಹಲ್ ಅಲ್ಲಾಬಕ್ಷಿ ಸಾಬ್, ಮಹಮ್ಮದ್ ಅಲಿ ಸಾಬ್, ರಾಜಾಸಾಬ್, ಖಾಸಿಂಗ್, ರಾಜಾಮಿಯಾ ಸಾಬ್, ಮೌನೇಶ್ವರಾಚಾರಿ ಮತ್ತಿತರರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








