ಚಿನ್ನಾಭರಣ ಸಾಲ ತೀರಿಸಿದರೂ ರೈತರ ಒಡವೆ ಮರಳಿಸದ ಬ್ಯಾಂಕ್

ಹಿರಿಯೂರು:

          ರ್ಯೆತರು ಒಡವೆ ಸಾಲ ತೀರಿಸಿದರೂ ಆಭರಣ ಮರಳಿಸದ ಕೆನರಾಬ್ಯಾಂಕ್ ಅಧಿಕಾರಿಗಳ ವಿರುದ್ದ ತಾಲ್ಲೂಕು ರೈತಸಂಘದ ನೇತೃತ್ವದಲ್ಲಿ ಕೆನರಾಬ್ಯಾಂಕ್ ಮುಂದೆ ಪ್ರತಿಭಟನೆ ನಡೆಸಲಾಯಿತು.

            ಈ ಸಂದರ್ಭದಲ್ಲಿ ತಾಲ್ಲೂಕು ರೈತ ಸಂಘದ ಅಧ್ಯಕ್ಷ ಕೆ.ಸಿ.ಹೊರಕೇರಪ್ಪ ಮಾತನಾಡಿ, ರೈತರು ಕೆನರಾಬ್ಯಾಂಕ್‍ನ ಚಿನ್ನಾಭರಣ ಸಾಲ ತೀರಿಸಿದರೂ, ರೈತರಿಗೆ ಒಡವೆ ಮರಳಿಸದೆ, ಬೆಳÉಸಾಲವಿದ್ದು ಅದನ್ನು ತೀರುವಳಿ ಮಾಡಬೇಕೆಂಬ ಷರತ್ತು ವಿಧಿಸುತ್ತಿದ್ದಾರೆ. ಈ ಬಗ್ಗೆ ರೈತರಿಗೆ ಯಾವುದೇ ತಿಳುವಳಿಕೆ ನೋಟೀಸ್ ಸಹಾ ನೀಡದೇ ರೈತರಿಗೆ ಶೇ.10.5ರಷ್ಟು ಬಡ್ಡಿ ಪಾವತಿಸದಿದ್ದರೆ ನಿಮ್ಮ ಚಿನ್ನಾಭರಣವನ್ನು ದಾವಣಗೆರೆಯಲ್ಲಿ ಹರಾಜು ಹಾಕುವುದಾಗಿ ಬೆದರಿಸುವ ಮೂಲಕ ಕೆನರಾಬ್ಯಾಂಕ್ ಮ್ಯಾನೇಜರ್ ಪರಶುರಾಮ್ ಎಂಬುವವರು ರೈತರಿಗೆ ಕಿರುಕುಳ ನೀಡುತ್ತಿದ್ದಾರೆ ಎಂಬುದಾಗಿ ಅವರು ಆರೋಪಿಸಿದರು.

       ಅಷ್ಟೇ ಅಲ್ಲ ಚಿನ್ನಾಭರಣ ಸಾಲವನ್ನು ರಿನೀವಲ್ ಮಾಡುವಂತೆ ರೈತರು ಗೋಗರೆದರೂ ಬ್ಯಾಂಕ್ ಅಧಿಕಾರಿಗಳು ಕಿವಿಗೊಡುತ್ತಿಲ್ಲ. ಇತ್ತ ಒಡವೆಯೂ ಇಲ್ಲ, ಹೊಸ ಸಾಲವೂ ಇಲ್ಲ ಎಂಬಂತಹ ದುಃಸ್ಥಿತಿ ರೈತರಿಗೆ ಬಂದಿದೆ ಎಂಬುದಾಗಿ ಕೆನರಾಬ್ಯಾಂಕ್ ಅಧಿಕಾರಿಗಳ ವಿರುದ್ದ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

           ಬೆಳಿಗ್ಗೆ ಸುಮಾರು 11 ಗಂಟೆಗೆ ಆರಂಭಗೊಂಡ ಪ್ರತಿಭಟನೆ ಮಧ್ಯಾಹ್ನ 1 ಗಂಟೆಯವರೆಗೂ ಬ್ಯಾಂಕಿನ ಮುಂದೆ ಮುಂದುವರೆಯಿತು. ಆ ಸಂದರ್ಭದಲ್ಲಿ ಕೆನರಾಬ್ಯಾಂಕಿಗೆ ಯಾವುದೇ ಗ್ರಾಹಕರು ಒಳಹೋಗದಂತೆ ಒಳಗಿನ ಸಿಬ್ಬಂದಿ ಹೊರಬರದಂತೆ ಪ್ರತಿಭಟನಾಕಾರರು ತಡೆಯೊಡ್ಡಿ ಪ್ರತಿಭಟಿಸಿದರು. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ತಾಲ್ಲೂಕು ತಹಶೀಲ್ದಾರ್ ಜೆ.ಸಿ.ವೆಂಕಟೇಶಯ್ಯ ಹಾಗೂ ಪಿಎಸ್‍ಐ ಮಂಜುನಾಥ್ ಹಾಗೂ ಸಿಬ್ಬಂದಿವರ್ಗ ಪ್ರತಿಭಟನಾನಿರತ ರೈತಮುಖಂಡರು ಹಾಗೂ ಬ್ಯಾಂಕ್ ಮ್ಯಾನೇಜರ್ ಜೊತೆಗೆ ಚರ್ಚಿಸಿ ಅಂತಿಮವಾಗಿ ಇದೇ ಡಿಸೆಂಬರ್ 27ರಂದು ಬ್ಯಾಂಕಿನ ಎಜಿಎಂ ಹಾಗೂ ಲೀಡ್‍ಬ್ಯಾಂಕ್ ಮ್ಯಾನೇಜರ್‍ರವರನ್ನು ತಾಲ್ಲೂಕು ಕಛೇರಿಗೆ ಕರೆಸಿ ತಹಶಿಲ್ದಾರ್‍ರವರ ಸಮ್ಮುಖದಲ್ಲಿ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದ್ದರಿಂದ ಪ್ರತಿಭಟನೆಯನ್ನು ಕೈಬಿಡಲಾಯಿತು.

           ಇಂದಿನ ಪ್ರತಿಭಟನೆಯಲ್ಲಿ ರೈತಸಂಘದ ಜಿಲ್ಲಾ ಗೌ||ಅಧ್ಯಕ್ಷ ಎಸ್.ಬಿ.ಶಿವಕುಮಾರ್, ತಾಲ್ಲೂಕು ಗೌ||ಅಧ್ಯಕ್ಷ ಎ.ಕೃಷ್ಣಸ್ವಾಮಿ, ರೈತಮುಖಂಡರುಗಳಾದ ಆಲೂರುಸಿದ್ದರಾಮಣ್ಣ, ಸೆಲ್ವರಾಜ್, ದಸ್ತಗೀರ್‍ಸಾಬ್, ತಿಮ್ಮಾರೆಡ್ಡಿ, ಲಕ್ಷ್ಮೀಕಾಂತ್, ಕೃಷ್ಣಾನಾಯ್ಕ್, ತಿಮ್ಮಕ್ಕ, ಶಶಿಕಲಾ, ರತ್ನಮ್ಮ, ದ್ರಾಕ್ಷಾಯಿಣಿ, ಶಕ್ತಿವೇಲ್, ಅರಳೀಕೆರೆತಿಪೇಸ್ವಾಮಿ, ಬಿ.ಡಿ.ಶ್ರೀನಿವಾಸ್, ಓಬಣ್ಣ, ಪುಟ್ಟರಂಗಮ್ಮ, ತಿಪ್ಪೇಸ್ವಾಮಿ, ಗೋವಿಂದರಾಜ್, ಬಸವರಾಜ್, ಕಿರಣ, ಪ್ರಭು, ಬಿ.ಒ.ಶಿವಕುಮಾರ್, ಶಣ್ಮುಗಂ, ಉಪ್ಪಾರಹಟ್ಟಿಮಣಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap