ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ

ದಾವಣಗೆರೆ:

        ನಗರದ ಕುವೆಂಪು ಕನ್ನಡ ಭವನದ ರಾಷ್ಟ್ರಕವಿ ಡಾ.ಜಿ.ಎಸ್.ಶಿವರುದ್ರಪ್ಪ ವೇದಿಕೆಯಲ್ಲಿ ನಾಳೆ (ಜ.30ರಂದ) ಹಾಗೂ ನಾಡಿದ್ದು (ಜ.31ರಂದು) ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಆಶ್ರಯದಲ್ಲಿ 9ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ ಎಂದು ಕಸಾಪ ಜಿಲ್ಲಾಧ್ಯಕ್ಷ ಡಾ.ಹೆಚ್.ಎಸ್.ಮಂಜುನಾಥ ಕುರ್ಕಿ ತಿಳಿಸಿದರು.

        ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಳೆ ಬೆಳಿಗ್ಗೆ 8.30ಕ್ಕೆ ಮಹಾಪೌರರಾದ ಶೋಭಾ ಪಲ್ಲಾಘಟ್ಟೆ ರಾಷ್ಟ್ರ ಧ್ವಜಾರೋಹಣ ಹಾಗೂ ನಾವು ಪರಿಷತ್ತಿನ ಧ್ವಜಾರೋಹಣ ನೆರವೇರಿಸಲಿದ್ದೇವೆ. ಮಾಗನೂರು ಬಸಪ್ಪ ಶಾಲೆಯ ಮಕ್ಕಳು ರಾಷ್ಟ್ರಗೀತೆ ಮತ್ತು ನಾಡಗೀತೆ ಹಾಡಲಿದ್ದಾರೆಂದು ಹೇಳಿದರು.

          ಬೆಳಿಗ್ಗೆ 9 ಗಂಟೆಗೆ ನಗರದ ಎಂ.ಸಿ.ಮೋದಿ ವೃತ್ತದಿಂದ ಆರಂಭವಾಗುವ ಸಮ್ಮೇಳನದ ಅಧ್ಯಕ್ಷರ ಪಾದಯಾತ್ರೆಯ ಮೆರವಣಿಗೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಚೇತನ್ ಚಾಲನೆ ನೀಡಲಿದ್ದಾರೆ. ಮೆರವಣಿಗೆಯಲ್ಲಿ ಡೊಳ್ಳು ಕುಣಿತ, ಹಗಲು ವೇಷ, ಬೊಂಬೆ ಮೇಳ ಹಾಗೂ ಇತರೆ ಜನಪದ ತಂಡಗಳವು ಪಾಲ್ಗೊಳ್ಳಲಿವೆ. ಜಿಲ್ಲಾ ಪಂಚಾಯತ್ ಪ್ರಭಾರ ಅಧ್ಯಕ್ಷೆ ಚಿತ್ರPಕಲಾ ಪ್ರದರ್ಶನವನ್ನು ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಸಿ.ಆರ್.ಪರಮೇಶ್ವರಪ್ಪ ಪುಸ್ತಕ ಮಳಿಗೆಗಳನ್ನು ಉದ್ಘಾಟಿಸಲಿದ್ದಾರೆ ಎಂದರು.

         ಬೆಳಿಗ್ಗೆ 11 ಗಂಟೆಗೆ ಸಾಣೇಹಳ್ಳಿಯ ಡಾ.ಶ್ರೀಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅವರ ದಿವ್ಯ ಸಾನಿಧ್ಯ ಹಾಗೂ ಶಾಸಕ ಎಸ್.ಎ.ರವೀಂದ್ರನಾಥ್ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಸಮ್ಮೇಳನವನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಎಸ್.ಜಿ.ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ.

         ಸಚಿವ ಎಸ್.ಆರ್.ಶ್ರೀನಿವಾಸ್ ವೇದಿಕೆ ಉದ್ಘಾಟಿಸಲಿದಾರೆ. ಸಂಸದ ಜಿ.ಎಂ.ಸಿದ್ದೇಶ್ವರ ಹಾಗೂ ಶಾಸಕ ಡಾ.ಶಾಮನೂರು ಶಿವಶಂಕರಪ್ಪ ವಿವಿಧ ಕೃತಿಗಳನ್ನು ಲೋಕಾರ್ಪಣೆ ಮಾಡಲಿದ್ದಾರೆ. ಸಮ್ಮೇಳನದ ಅಧ್ಯಕ್ಷ ಡಾ.ಲೋಕೇಶ್ ಅಗಸನಕಟ್ಟೆ ಅವರಿಗೆ, ನಿಕಟಪೂರ್ವ ಅಧ್ಯಕ್ಷ ಪ್ರೊ.ಎಸ್.ಬಿ.ರಂಗನಾಥ್ ಕನ್ನಡ ಧ್ವಜ ಹಸ್ತಾಂತರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕರ್ನಾಟಕ ಸರ್ಕಾರದ ಸಂಸದೀಯ ಕಾರ್ಯದರ್ಶಿ, ವಿಧಾನ ಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್, ಶಾಸಕರಾದ ಎಸ್.ರಾಮಪ್ಪ, ಕೆ.ಲಿಂಗಣ್ಣ, ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್, ಜಿ.ಪಂ. ಸಿಇಒ ಎಸ್.ಅಶ್ವತಿ, ಕಸಾಪ ಜಿಲ್ಲಾ ನಿಕಟಪೂರ್ವ ಅಧ್ಯಕ್ಷ ಎ.ಆರ್.ಉಜ್ಜಿನಪ್ಪ ಮತ್ತಿತರರು ಭಾಗವಹಿಸಲಿದ್ದಾರೆಂದು ಮಾಹಿತಿ ನೀಡಿದರು.

          ಮಧ್ಯಾಹ್ನ 2 ಗಂಟೆಯಿಂದ ದಾವಣಗೆರೆ ಜಿಲ್ಲೆಯ ಅನನ್ಯತೆ ಕುರಿತು ನಡೆಯುವ ಮೊದಲ ಗೋಷ್ಠಿಯ ಅಧ್ಯಕ್ಷತೆ ವಹಿಸುವ ಡಾ.ಎಂ.ಜಿ.ಈಶ್ವರಪ್ಪ ಶೈಕ್ಷಣಿಕ ಅನನ್ಯತೆ ಕುರಿತು, ಮಲ್ಲಿಕಾರ್ಜುನ ಕಡಕೋಳ ಸಾಂಸ್ಕತಿಕ ಅನನ್ಯತೆ ಕುರಿತು ಹಾಗೂ ಡಾ.ಹೆಚ್.ವಿ.ವಾಮದೇವಪ್ಪ ಅಭಿವೃದ್ಧಿ ಅನನ್ಯತೆ ಕುರಿತು ವಿಚಾರ ಮಂಡಿಸಲಿದ್ದಾರೆ. ಮಧ್ಯಾಹ್ನ 3.30ರಿಂದ ನಡೆಯುವ ಕನ್ನಡ ಸಾಹಿತ್ಯ: ಸಾಮರಸ್ಯದ ನೆಲೆಗಳು ಕುರಿತ ಗೋಷ್ಠಿಯ ಅಧ್ಯಕ್ಷತೆ ವಹಿಸುವ ಡಾ.ದಾದಾಪೀರ್ ನವಿಲೇಹಾಳ್ ನವೋದಯ ಸಾಹಿತ್ಯದ ಗ್ರಹಿಕೆಗಳ ಕುರಿತು, ಡಾ.ಎ.ಬಿ.ರಾಮಚಂದ್ರಪ್ಪ ಪ್ರಗತಿಶೀಲ, ದಲಿತ ಬಂಡಾಯದ ನಿಲುವುಗಳ ಕುರಿತು, ಡಾ.ನಾರಾಯಣ ಸ್ವಾಮಿ ಹೊಸ ತಲೆಮಾರಿನ ಸಾಹಿತ್ಯಿಕ ಆಶಯಗಳ ಕುರಿತು ವಿಷಯ ಮಂಡಿಸಲಿದ್ದಾರೆ. ಸಂಜೆ 5 ಗಂಟೆಯಿಂದ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಲಿವೆ ಎಂದು ಅವರು ವಿವರಿಸಿದರು.

         ನಾಡಿದ್ದು (ಜ.31ರಂದು) ಬೆಳಿಗ್ಗೆ 9.30ಕ್ಕೆ ಬಿ.ಎನ್.ಮಲ್ಲೇಶ್ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ನಡೆಯಲಿದ್ದು, ಡಾ.ಮಲ್ಲಿಕಾರ್ಜುನ ಕಲಮರಹಳ್ಳಿ ಆಶಯ ನುಡಿಗಳನ್ನಾಡಲಿದ್ದಾರೆ. ಹಲವು ಕವಿಗಳು ಕಾವ್ಯ ವಾಚಿಸಲಿದ್ದಾರೆ. 11.30ರಿಂದ ನಡೆಯುವ ಮಹಿಳೆ; ಸೃಜನಶೀಲತೆಯ ಸಾಧ್ಯತೆಗಳು ಕುರಿತ ಗೋಷ್ಠಿಯಲ್ಲಿ ಸಾಂಸ್ಕøತಿ ಸಾಧ್ಯತೆಗಳ ಬಗ್ಗೆ ಸುಶಿಳದೇವಿ ರಾವ್, ಆಡಳಿತಾತ್ಮಕ ಸಾಧ್ಯತೆ ಕುರಿತು ಡಿ.ರೂಪಾ ಮೌದ್ಗಲ್, ಸ್ತ್ರೀ ಸಶಕ್ತೀಕರಣ ಮತ್ತು ಕಾನೂನುಗಳ ಕುರಿತು ಎನ್.ಟಿ. ಮಂಜುನಾಥ್ ವಿಚಾರ ಮಂಡಿಸಲಿದ್ದಾರೆ. ಮಧ್ಯಾಹ್ನ 2 ಗಂಟೆಯಿಂದ ನಡೆಯುವ ಜಿಲ್ಲಾ ಭೌಗೋಳಿಕ ವಿಂಗಡಣೆಯ ಹಿಂದಿನ ಸವಾಲುಗಳು ಕುರಿತ ಸಂವಾದ ಗೋಷ್ಠಿಯ ಅಧ್ಯಕ್ಷತೆಯನ್ನು ಡಾ.ಶ್ರೀಕಂಠ ಕೂಡಿಗೆ ವಹಿಸುವರು. ಡಾ.ಟಿ.ಆರ್.ಚಂದ್ರಶೇಖರ್ ವಿಷಯ ಮಂಡಿಸುವರು. ಡಾ.ಆರ್.ಜಿ.ಚಿದಾನಂದ ಮತ್ತಿತರರು ಭಾಗವಹಿಸುವರು ಎಂದು ಮಾಹಿತಿ ನೀಡಿದರು.

         ಸಂಜೆ 4 ಗಂಟೆಯಿಂದ ತಮ್ಮ ಅಧ್ಯಕ್ಷತೆಯಲ್ಲಿ ನಡೆಯುವ ಬಹಿರಂಗ ಅಧಿವೇಶನದಲ್ಲಿ ಪರಿಷತ್‍ನ ಕೋಶಾಧ್ಯಕ್ಷ ಬುರುಡೇಕಟ್ಟೆ ಮಂಜಪ್ಪ ನಿರ್ಣಯ ಮಂಡಿಸುವರು. ಸಂಜೆ 4.30ರಿಂದ ನಡೆಯುವ ಸನ್ಮಾನ ಮತ್ತು ಸಮಾರೋಪ ಸಮಾರಂಭದಲ್ಲಿ ಸಾಹಿತಿ ಕುಂ.ವೀರಭದ್ರಪ್ಪ ಸಮಾರೋಪ ನುಡಿಗಳನ್ನಾಡುವರು. ಸಮ್ಮೇಳನದ ಅಧ್ಯಕ್ಷ ಡಾ.ಲೋಕೇಶ್ ಅಗಸನಕಟ್ಟೆ ಸಮ್ಮೇಳನಾಧ್ಯಕ್ಷ ನುಡಿಗಳನ್ನಾಡಿದರು. ಮುಖ್ಯ ಅತಿಥಿಗಳಾಗಿ ಶಾಸಕರಾದ ಎಂ.ಪಿ.ರೇಣುಕಾಚಾರ್ಯ, ಕೆ.ಮಾಡಾಳು ವಿರೂಪಾಕ್ಷಪ್ಪ, ಎಸ್.ವಿ.ರಾಮಚಂದ್ರಪ್ಪ, ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಎಂ.ಬಸಪ್ಪ, ಎಸ್.ಹೆಚ್.ಹೂಗಾರ್, ಬಿ.ಎಂ.ಸದಾಶಿವಪ್ಪ ಶ್ಯಾಗಲೆ ಮತ್ತಿತರರು ಉಪಸ್ಥಿತರಿರುವರು ಎಂದು ಹೇಳಿದರು.ಸುದ್ದಿಗೋಷ್ಠಿಯಲ್ಲಿ ಪರಿಷತ್‍ನ ಎನ್.ಎಸ್.ರಾಜು, ಬಿ.ದಿಳ್ಯೆಪ್ಪ, ಬಿ.ವಾಮದೇವಪ್ಪ, ಎ.ಆರ್.ಉಜ್ಜಿನಪ್ಪ, ಕೆ.ಸಿರಾಜ್ ಅಹಮದ್, ಶಿವಕುಮಾರ್ ಮತ್ತಿತರರು ಹಾಜರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link