ತುಮಕೂರು
ವಿವಿಧ ತಾಲ್ಲೂಕುಗಳ ಹಿಂದುಳಿದ ವರ್ಗಗಳ ಇಲಾಖೆ ವಿದ್ಯಾರ್ಥಿ ನಿಲಯಗಳಲ್ಲಿ ಪ್ರವೇಶವಾಗದೆ ಖಾಲಿ ಉಳಿದ ಸೀಟುಗಳನ್ನು ಜಿಲ್ಲಾ ಕೇಂದ್ರದ ಹಾಸ್ಟೆಲ್‍ಗಳಿಗೆ ವರ್ಗಾವಣೆ ಮಾಡಿ ವಿದ್ಯಾರ್ಥಿಗಳಿಗೆ ಪ್ರವೇಶಾವಕಾಶ ಕಲ್ಪಿಸಲು ಮಂಗಳವಾರ ನಡೆದ ಜಿಲ್ಲಾ ಪಂಚಾಯ್ತಿ ಸಾಮಾನ್ಯ ಸಭೆ ಅನುಮೋದನೆ ನೀಡಿತು.
ಸದಸ್ಯ ಕೆಂಚಮಾರಯ್ಯ ಅವರು ಮಾತನಾಡಿ, ಶಾಲಾ ಕಾಲೇಜುಗಳು ಆರಂಭವಾಗಿ ಮೂರು ತಿಂಗಳಾಗಿವೆ, ವಿದ್ಯಾರ್ಥಿಗಳು ಹಾಸ್ಟೆಲ್ ಸಿಗದೆ ಪರದಾಡುತ್ತಿದ್ದಾರೆ, ಅವರ ಅನುಕೂಲಕ್ಕಾಗಿ ಹಾಸ್ಟೆಲ್ ಸಿಟುಗಳ ವರ್ಗಾವಣೆಗೆ ಅವಕಾಶ ನೀಡಬೇಕು ಎಂದು ಕೋರಿದರು.
ಜಿಲ್ಲಾ ಕೇಂದ್ರದಲ್ಲಿ ಹಾಸ್ಟೆಲ್‍ಗಳಿಗೆ ಬೇಡಿಕೆ ಹೆಚ್ಚಾಗಿದೆ ವಿದ್ಯಾರ್ಥಿಗಳ ಬೇಡಿಕೆಗೆ ತಕ್ಕಂತೆ ಹಾಸ್ಟೆಲ್ ಸೌಲಭ್ಯ ನೀಡಲಾಗುತ್ತಿಲ್ಲ ಇರುವ ಅವಕಾಶದಲ್ಲಿ ಅನುಕೂಲ ಮಾಡಿಕೊಡಬೇಕು ಎಂದು ಸದಸ್ಯರು ಹೇಳಿ, ಸೀಟು ವರ್ಗಾವಣೆಗೆ ಸಭೆ ಅನುಮೋದನೆ ನೀಡಿತು. ತುಮಕೂರಿನಲ್ಲಿ ಸುಮಾರು 300ಕ್ಕೂ ಹೆಚ್ಚು ಹೆಚ್ಚು ಹಾಸ್ಟೆಲ್ ಸೀಟುಗಳ ವರ್ಗಾವಣೆ ಮೂಲಕ ವಿದ್ಯಾರ್ಥಿಗಳಿಗೆ ಪ್ರವೇಶ ಕಲ್ಪಿಸಲು ಸಾಧ್ಯವಿದೆ ಎಂದು ಅಧಿಕಾರಿ ಮಾಹಿತಿ ನೀಡಿದರು.
ತುಮಕೂರಿನಲ್ಲಿ ಬಿಸಿಎಂ ಇಲಾಖೆಯ 20 ಹಾಸ್ಟೆಲ್‍ಗಳಲ್ಲಿ ಮೆಟ್ರಿಕ್ 3 ಪೂರ್ವದ ಹಾಸ್ಟೆಲ್‍ಗಳಲ್ಲಿ ಒಂದು ಬಾಲಕಿಯರು, ಉಳಿದೆರಡು ಬಾಲಕರ ಹಾಸ್ಟೆಲ್ ಇವೆ. 17 ಮೆಟ್ರಿಕ್ ನಂತರದ ಹಾಸ್ಟೆಲ್‍ಗಳಲ್ಲಿ 11 ಬಾಲಕಿಯರು ಹಾಗೂ 6 ಬಾಲಕರ ಹಾಸ್ಟೆಲ್ ಇದ್ದರೂ ಇನ್ನೂ ನಾಲ್ಕು ಹಾಸ್ಟೆಲ್‍ಗಳಿಗೆ ತುಮಕೂರಿನಲ್ಲಿ ಬೇಡಿಕೆ ಇದೆ ಎಂದು ಅಧಿಕಾರಿಗಳು ಹೇಳಿದರು.
ಅನುಷ್ಠಾನ ಯಾವಾಗ?
ಮಾರ್ಚಿಯಲ್ಲಿ ನಡೆದ ಸಾಮಾನ್ಯ ಸಭೆಯ ಅನುಪಾಲನಾ ವರದಿ ಪರಿಶೀಲಿಸುವ ಸಂದರ್ಭದಲ್ಲಿ, ವರದಿಯಲ್ಲಿ ಸಮಂಜಸವಾದ ವಿವರಣೆ ಇಲ್ಲ, ನಾವು ಕೇಳಿದ ಪ್ರಶ್ನೆಗಳಿಗೂ ಅಧಿಕಾರಿಗಳು ವರದಿಯಲ್ಲಿ ನೀಡಿರುವ ವಿವರಣೆಗೆ ಸಂಬಂಧವೇ ಇಲ್ಲ ಎಂದು ಸದಸ್ಯ ವಯ ಹೆಚ್ ಹುಚ್ಚಯ್ಯ ಆಕ್ಷೇಪವ್ಯಕ್ತಪಡಿಸಿದರು.
ತಿಪಟೂರು ತಾಲ್ಲೂಕು ಪಂಚಾಯ್ತಿ ಅಧ್ಯಕ್ಷರು 5.10.18ರ ಜಿಲ್ಲಾ ಪಂಚಾಯ್ತಿ ಸಭೆಯಲ್ಲಿ ಮಾತನಾಡಿ, ಗೋವಿಂದಯ್ಯ ಎಂಬುವವರು ತಮ್ಮ ನಾಲ್ಕು ಎಕರೆ ಜಮೀನಿಗೆ ಕೃಷಿ ಇಲಾಖೆಯಿಂದ 2,74 ಲಕ್ಷ ರೂ, ತೋಟಗಾರಿಕೆ ಇಲಾಖೆಯಿಂದ 1.20 ಲಕ್ಷ ರೂ. ಹಾಗೂ ಹಣ್ಣು ಮತ್ತು ತರಕಾರಿಗಳ ಬೆಳೆಗಾಗಿ 1.75 ಲಕ್ಷ ರೂನಂತೆ ಒಂದೇ ತಿಂಗಳಲ್ಲಿ ಒಂದೇ ಸರ್ವೆ ನಂಬರ್ ಜಮೀನಿಗೆ ಮೂರು ಬಾರಿ ಸಾಲ ಪಡೆದಿದ್ದಾರೆ. ಈ ಲೋಪದ ಬಗ್ಗೆ ಈವರೆಗೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಆಪಾದಿಸಿದ್ದರು.
ಈ ಕುರಿತು ಮಾತನಾಡಿದ್ದ ಜಂಟಿ ಕೃಷಿ ನಿರ್ದೇಶಕರು, ಈ ವಿಷಯವಾಗಿ ಕೆಡಿಪಿ ಸಭೆಯಲ್ಲೂ ಚರ್ಚೆಯಾಗಿದೆ, ಪ್ರಕರಣವನ್ನು ಪರಿಶೀಲಿಸಿ ಕ್ರಮವಹಿಸಲಾಗುವುದು ಎಂದು ಭರವಸೆ ನೀಡಿದ್ದರು. ಅದೇ ಸಭೆಯಲ್ಲಿ ಕುಣಿಗಲ್ ತಾಲ್ಲೂಕು ಪಂಚಾಯ್ತಿ ಅಧ್ಯಕ್ಷರು ಸದರಿ ಪ್ರಕರಣವನ್ನು ಲೋಕಾಯುಕ್ತ ತನಿಖೆಗೆ ವಹಿಸಬೇಕು ಎಂದು ಒತ್ತಾಯಿಸಿದ್ದರು.
ಇದಾಗಿ ಸುಮಾರು ಹತ್ತು ತಿಂಗಳ ನಂತರ ಈಗ ನಡೆದ ಸಾಮಾನ್ಯ ಸಭೆಯಲ್ಲಿ ಸದಸ್ಯರಿಗೆ ನೀಡಿದ ಹಿಂದಿನ ಸಭೆಯ ನಡವಳಿಗಳಿಗೆ ಅನುಪಾಲನಾ ವರದಿಯಲ್ಲಿ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ, ಕುಣಿಗಲ್ ತಾಲ್ಲೂಕಿನ ಕೃಷಿ ಮತ್ತು ತೋಟಗಾರಿಕಾ ಇಲಾಖೆಯಿಂದ ಸಹಾಯಧನ ಪಡೆಯಲಾದ ಫಲಾನುಭವಿಯ ವಿವರ ಪಡೆಯಲಾಗಿದ್ದು, ಕ್ರೂಢೀಕರಿಸಿ ಪರಿಶೀಲಿಸಿ ವರದಿ ನೀಡಲಾಗುವುದು ಎಂದು ಇಲಾಖೆ ಅಧಿಕಾರಿಗಳು ಉತ್ತರ ನೀಡಿದ್ದರು.
ಅಧಿಕಾರಿಗಳ ವಿವರಣೆ ಓದಿ ಸಿಟ್ಟಿಗೆದ್ದ ವೈ ಹೆಚ್ ಹುಚ್ಚಯ್ಯ ಅವರು, ಚರ್ಚೆಯಾಗಿ ಹತ್ತು ತಿಂಗಳಾದರೂ ಅಧಿಕಾರಿಗಳು ಯಾವುದೇ ಕ್ರಮ ತೆಗೆದುಕೊಂಡಿಲ್ಲ, ಇನ್ನೂ ಪರಿಶೀಲನೆ ಹಂತದಲ್ಲಿದೆ ಎನ್ನುವುದಾದರೆ ಇದು ಜಿಲ್ಲಾ ಪಂಚಾಯ್ತಿ ಆಡಳಿತಕ್ಕೆ ನಾಚಿಕೆಯಾಗಬೇಕು, ಲೋಪದ ವಿರುದ್ಧ ಎರಡು ತಿಂಗಳಲ್ಲಿ ಕ್ರಮ ತೆಗೆದುಕೊಳ್ಳಬೇಕಾಗಿತ್ತು, ಅಧಿಕಾರಿಗಳ ಬೇಜವಾಬ್ದಾರಿ ಆಡಳಿತದಲ್ಲಿ ಬಿಗಿ ಇಲ್ಲದ್ದು ಇಲ್ಲಿ ಕಾಣುತ್ತದೆ. ಅಧಿಕಾರಿಗಳು ಈ ರೀತಿ ಬೇಜವಾಬ್ದಾರಿ ಉತ್ತರ ಕೊಟ್ಟಿದ್ದರೂ ಯಾಕೆ ಸುಮ್ಮನಿದ್ದೀರಿ ಎಂದು ಅಧ್ಯಕ್ಷರು ಹಾಗೂ ಸಿಇಓ ವಿರುದ್ಧ ಹುಚ್ಚಯ್ಯ ಹರಿಹಾಯ್ದರು.
ಪ್ರತಿ ಸಭೆಯಲ್ಲೂ ಪರಿಶೀಲಿಸುತ್ತೇವೆ, ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಅಧಿಕಾರಿಗಳು ಸಿದ್ಧ ಉತ್ತರ ಹೇಳುವುದೇ ಆಗಿದೆ ಹೊರತು ಕ್ರಮ ತೆಗೆದುಕೊಳ್ಳುವುದು, ಕಾರ್ಯಕ್ರಮ ಅನುಷ್ಠಾನಗೊಳಿಸಿರುವ ವಿಚಾರಗಳೇ ಇಲ್ಲ ಎಂದು ಹಲವು ಸದಸ್ಯರು ಅಧಿಕಾರಿಗಳು ಹಾಗೂ ಆಡಳಿತ ವ್ಯವಸ್ಥೆಗೆ ಅಸಮಧಾನ ವ್ಯಕ್ತಪಡಿಸಿದರು. ಸಕಾಲದಲ್ಲಿ ಕಾಮಗಾರಿ ಮುಗಿಸಿ ಬಿಲ್ಲು ಮಾಡಲು ವಿಳಂಬ ಮಾಡುವುದರಿಂದ ಹಣ ಸರ್ಕಾರಕ್ಕೆ ವಾಪಸ್ ಹೋಗುತ್ತದೆ ಈ ಬಾರಿ ಪಂಚಾಯತ್ ರಾಜ್ ಇಲಾಖೆಯಿಂದ ಬಿಡುಗಡೆಯಾಗಿದ್ದ ರಸ್ತೆ, ಸಣ್ಣ ಸೇತುವೆ ನಿರ್ಮಾಣಕ್ಕೆಂದು ಬಿಡುಗಡೆಯಾಗಿದ್ದ 193 ಲಕ್ಷ ರೂ ಸಕಾಲದಲ್ಲಿ ಬಿಲ್ಲು, ಲೆಕ್ಕಪತ್ರ ಸಲ್ಲಿಸದ ಕಾರಣ ಸರ್ಕಾರಕ್ಕೆ ವಾಪಸ್ ಹೋಗಿದೆ. ಇದಕ್ಕೆ ಅಧಿಕಾರಿಗಳ ಬೇಜವಾಬ್ದಾರಿಯೇ ಕಾರಣ ಎಂದು ಸದಸ್ಯ ಜಿ ಜೆ ರಾಜಣ್ಣ ಹೇಳಿದರು.
ಅಧಿಕಾರಿಗಳ ನಿರ್ಲಕ್ಷತನದಿಂದ ಸರ್ಕಾರಕ್ಕೆ ಹೋಗಿರುವ ಹಣವನ್ನು ವಾಪಾಸ್ ತರಲು ಪ್ರಯತ್ನಿಸಿ ಎಂದು ಸದಸ್ಯ ಕೆಂಚಮಾರಯ್ಯ ಮತ್ತಿತರರು ಒತ್ತಾಯಿಸಿದರು. ಖರೀದಿ ವಿಷಯದಲ್ಲಿ ಹಣ ಲ್ಯಾಪ್ಸ್ ಆಗುವುದಿಲ್ಲ, ಅಭಿವೃದ್ಧಿ ಕಾರ್ಯದ ಹಣ ಲ್ಯಾಪ್ಸ್ ಆಗಿಬಿಡುತ್ತದೆ ಎಂದು ಸದಸ್ಯ ವೈ ಹೆಚ್ ಹುಚ್ಚಯ್ಯ ಅಧಿಕಾರಿಗಳ ಧೋರಣೆ ಟೀಕಿಸಿದರು.
ಸಭೆಯಲ್ಲಿ ಸರ್ವಾನುಮತದಿಂದ ಅಂಗೀಕಾರಗೊಂಡ ಕೆಲಸ ಕಾರ್ಯಗಳು ಅರು ತಿಂಗಳಾದರೂ ಅನುಷ್ಠಾನಗೊಳ್ಳುವುದಿಲ್ಲ ಎಂದ ಮೇಲೆ ಜಿಲ್ಲಾ ಪಂಚಾಯ್ತಿಯಲ್ಲಿ ಸದಸ್ಯರ ಚರ್ಚೆಗೆ ಬೆಲೆ ಎಲ್ಲಿ, ಇದು ಜಿಲ್ಲಾ ಪಂಚಾಯ್ತಿ ಸಭೆಯೋ ಇಲ್ಲಾ ಅರಳಿಕಟ್ಟೆ ಪಂಚಾಯ್ತಿಯೋ ಎಂದು ಕೆಂಚಮಾರಯ್ಯ ಬೇಸರ ವ್ಯಕ್ತಪಡಿಸಿದರು.
ಅನುದಾನಿತ ಶಾಲೆಗಳಿಗೂ ಶಿಕ್ಷಕರ ನೇಮಿಸಿ
ಸರ್ಕಾರಿ ಶಾಲೆಗಳ ಖಾಲಿ ಇರುವ ಶಿಕ್ಷಕರ ಹುದ್ದೆಗಳಿಗೆ ಗೌರವ ಶಿಕ್ಷಕರನ್ನು ನೇಮಿಸುವಂತೆ ಅನುದಾನಿತ ಶಾಲೆಗಳಿಗೂ ಗೌರವ ಶಿಕ್ಷಕರನ್ನು ನೇಮಕ ಮಾಡಲು ಠರಾವು ಮಾಡಿ ಸರ್ಕಾರಕ್ಕೆ ಕಳುಹಿಸಿಕೊಡಿ ಎಂದು ಸದಸ್ಯ ಹುಚ್ಚಯ್ಯ ಹೇಳಿದರು.ಸರ್ಕಾರಿ ಶಾಲೆ ಮಕ್ಕಳಂತೆ ಅನುದಾನಿತ ಶಾಲೆ ಮಕ್ಕಳಿಗೂ ಶಿಕ್ಷಣ ಸೌಲಭ್ಯ ಒದಗಿಸಬೇಕು ಆ ಶಾಲೆಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಶಿಕ್ಷಕರನ್ನು ನೇಮಕ ಮಾಡಿ ಗೌರವ ಧನ ನೀಡಬೇಕು ಎಂದು ಹೇಳಿದರು.
. ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ