ಬಳ್ಳಾರಿ
ಜಿಲ್ಲೆಯಲ್ಲಿ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆ ಸಂದರ್ಭದಲ್ಲಿ ನಾಮಫಲಕಗಳಲ್ಲಿ ಜಿಪಂ ಸದಸ್ಯರ ಹೆಸರು ಹಾಕದೇ ಇನ್ಮುಂದೆ ನಿರ್ಲಕ್ಷ್ಯ ವಹಿಸಿದರೇ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳಲಾಗುವುದು ಎಂದು ಜಿಪಂ ಅಧ್ಯಕ್ಷೆ ಭಾರತಿ ತಿಮ್ಮಾರೆಡ್ಡಿ ಹೇಳಿದ್ದಾರೆ.
ನಗರದ ಜಿಪಂ ಸಭಾಂಗಣದಲ್ಲಿ ಸೋಮವಾರ ನಡೆದ ಜಿಪಂ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಅಧಿಕಾರಿಗಳು ಇನ್ಮುಂದೆ ಈ ರೀತಿ ಆಗದಂತೆ ನೋಡಿಕೊಳ್ಳಬೇಕು. ಒಂದು ವೇಳೆ ಇದೇ ರೀತಿಯ ದೂರುಗಳು ಬಂದಲ್ಲಿ ಅಮಾನತಿನಂತ ಗಂಭೀರ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಸೋಗಿ ಜಿಪಂ ಸದಸ್ಯ ವಿಶ್ವನಾಥ ಅವರು ಸಭೆಯಲ್ಲಿ ಪ್ರಸ್ತಾಪಿಸಿದ ವಿಷಯಕ್ಕೆ ಅವರು ಉತ್ತರಿಸಿದರು.ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಸದಸ್ಯರಿಗೆ ನಿರ್ಲಕ್ಷ್ಯ ವಹಿಸಲಾಗುತ್ತಿದೆ ಎಂದು ಕೆಲ ಜಿಪಂ ಸದಸ್ಯರು ಇದೇ ಸಂದರ್ಭದಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.
ಜಿಲ್ಲಾಮಟ್ಟದಲ್ಲಿ ಎಲ್ಲ ಇಲಾಖೆಗಳಿಗೆ ಪ್ರಭಾರ ಅಧಿಕಾರಿಗಳೇ ಕಾರ್ಯನಿರ್ವಹಿಸುತ್ತಿದ್ದು, ಅವರು ಹೇಗೆ ನಿರ್ವಹಣೆ ಮಾಡುತ್ತಾರೆ ಮತ್ತು ಅವರು ಹೇಗೆ ನಮಗೆ ಉತ್ತರ ನೀಡಲು ಸಾಧ್ಯ ಎಂದು ಕೆಲ ಸದಸ್ಯರು ಪ್ರಶ್ನಿಸಿದಕ್ಕೆ ಜಿಪಂ ಸಿಇಒ ಕೆ.ನಿತೀಶ್ ಅವರು ಗ್ರಾಮೀಣ ಕುಡಿಯುವ ನೀರು, ಪಂಚಾಯತ್ ರಾಜ್ ಎಂಜನಿಯರಿಂಗ್ ಇಲಾಖೆಗೆ ಅಧಿಕಾರಿಗಳು ಇನ್ನೂ 15ದಿನಗಳಲ್ಲಿ ಬರಲಿದ್ದಾರೆ. ಪಿಎಂಜಿಎಸ್‍ವೈ (ಪ್ರಧಾನ ಮಂತ್ರಿ ಗ್ರಾಮ್ ಸಡಕ್ ಯೋಜನಾ) ಗೆ ಮಾತ್ರ ಸಮಸ್ಯೆ ಇದೆ ಎಂದರು.
ಅನುದಾನ:ಬಳ್ಳಾರಿ ತಾಲೂಕು ಕಡೆಗಣನೆಗೆ ಅಸಮಾಧಾನ:
ಆರೋಗ್ಯ, ಶಿಕ್ಷಣ, ಪಶುಸಂಗೋಪನೆ ಮತ್ತು ಸಮಾಜಕಲ್ಯಾಣ ಇಲಾಖೆಗಳು ಈ ವರ್ಷ ರೂಪಿಸಲಾಗಿರುವ ಕ್ರಿಯಾಯೋಜನೆಯಲ್ಲಿ ಬಳ್ಳಾರಿ ತಾಲೂಕಿಗೆ ಅನುದಾನವೇ ಮೀಸಲಿಟ್ಟಿಲ್ಲ ಎಂದು ಜಿಪಂ ಸದಸ್ಯರಾದ ಅಲ್ಲಂ ಪ್ರಶಾಂತ ಮತ್ತು ಎ.ಮಾನಯ್ಯ ಅವರು ಆಕ್ಷೇಪ ವ್ಯಕ್ತಪಡಿಸಿದರು.
ಬಳ್ಳಾರಿ ತಾಲೂಕು ಕೂಡ ಇದೇ ಜಿಲ್ಲೆಯಲ್ಲಿಯೇ ಇದೆ ಎಂಬುದನ್ನು ಮರೆಯದಿರಿ ಎಂದು ಅವರು ಗರಂ ಆಗಿ ಹೇಳಿದರು. ಈ ರೀತಿ ಕ್ರಿಯಾಯೋಜನೆ ರೂಪಿಸುವಾಗ ನಮ್ಮ ಗಮನಕ್ಕೆ ಏಕೆ ತಂದಿಲ್ಲ ಎಂದು ಪ್ರಶ್ನಿಸಿದರು.ಆರೋಗ್ಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಆಧಿಕಾರಿಗಳು ಪರಿಶೀಲಿಸಿ ಆ ತಾಲೂಕಿಗೂ ಸಮಾನವಾಗಿ ಹಂಚಿಕೆ ಮಾಡಿ ಎಂದು ಜಿಪಂ ಅಧ್ಯಕ್ಷೆ ಭಾರತಿ ತಿಮ್ಮಾರೆಡ್ಡಿ ಸೂಚಿಸಿದರು.
103 ಶಾಲೆಗಳ ದುರಸ್ತಿಗೆ 1.27 ಕೋಟಿ:
ಬಳ್ಳಾರಿ ಜಿಲ್ಲೆಯಲ್ಲಿ ಈ ಬಾರಿ 103 ಶಾಲೆಗಳಲ್ಲಿ ದುರಸ್ತಿಪಡಿಸಲು ಉದ್ದೇಶಿಸಲಾಗಿದ್ದು, ಇದಕ್ಕೆ ಸಂಬಂಧಿಸಿದಂತೆ 1.27ಕೋಟಿ ರೂ. ಕ್ರಿಯಾಯೋಜನೆ ರೂಪಿಸಿ ತೆಗೆದಿರಿಸಲಾಗಿದೆ.ಜಿಲ್ಲೆಯ ಎಲ್ಲ ಕ್ಷೇತ್ರಗಳ ದುರಸ್ತಿಯಲ್ಲಿರುವ ಶಾಲೆಗಳಿಗೆ ಅನುದಾನ ಹಂಚಿಕೆ ಮಾಡಲಾಗಿದ್ದು, ಈ ಕುರಿತು ಜಿಪಂ ಸದಸ್ಯರ ಗಮನಕ್ಕೆ ತರಲಾಗಿದೆ ಎಂದು ಡಿಡಿಪಿಐ ಶ್ರೀಧರನ್ ಸಭೆಗೆ ವಿವರಿಸಿದರು.
55 ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರಗಳಿಗೆ ಡೆಸ್ಕ್ ಉಪಕರಣಗಳನ್ನು ಖರೀದಿಸಿ ಪೂರೈಸಲು 1.23ಕೋಟಿ ರೂ. ಹಣ ತೆಗೆದಿರಿಸಲಾಗಿದೆ ಎಂದರು.
ಅಧಿಕಾರಿಗಳು ಮತ್ತು ಸದಸ್ಯರ ನಡುವೆ ಸಮನ್ವಯತೆ ಸರಿಯಾಗಿಲ್ಲ. ಸಮನ್ವಯಕ್ಕೆ ಕ್ರಮಕೈಗೊಳ್ಳಿ ಎಂದು ಹೇಳಿದ ಜಿಪಂ ಸದಸ್ಯರು ಪ್ರತಿ ಎರಡು ತಿಂಗಳಿಗೊಮ್ಮೆ ಸಾಮಾನ್ಯ ಸಭೆ ನಡೆಸುವಂತೆ ಸದಸ್ಯ ರಶ್ಮಿ ಒತ್ತಾಯಿಸಿದರು.
ಕ್ಷೇತ್ರ ವಾಸ್ತವ್ಯದ ಮುಖಾಂತರ ಸಮಸ್ಯೆಗೆ ಸ್ಪಂದಿಸಿ:
ಜಿಪಂ ಅಧ್ಯಕ್ಷರು,ಉಪಾಧ್ಯಕ್ಷರು ಮತ್ತು ಜಿಪಂ ಸಿಇಒ ಅವರು ಪ್ರತಿಕ್ಷೇತ್ರದಲ್ಲಿ “ಕ್ಷೇತ್ರವಾಸ್ತವ್ಯ” ನಡೆಸುವ ಮೂಲಕ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡಬೇಕು ಎಂದು ಹಂಪಾಪಟ್ಟಣ ಜಿಪಂ ಸದಸ್ಯ ಮಲ್ಲಿಕಾರ್ಜುನ ನಾಯಕ್ ಒತ್ತಾಯಿಸಿದರು.ಈ ರೀತಿ ಮಾಡುವುದರಿಂದ ಎಲ್ಲ ಅಧಿಕಾರಿಗಳು ಒಂದು ಕಡೆ ಸೇರುವುದರ ಜೊತೆಗೆ ಅಲ್ಲಿನ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ಕಲ್ಪಿಸಲು ಅನುಕೂಲವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
ನಿಗದಿಪಡಿಸಿದ ವರ್ಷದಲ್ಲಿಯೇ ಖರ್ಚು ಮಾಡದಿದ್ದರೇ ಅಧಿಕಾರಿಗಳೇ ಹೊಣೆ:
ಕಾಮಗಾರಿಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ ನಿಗದಿಪಡಿಸಿದ ಅನುದಾನವನ್ನು ಆಯಾ ವರ್ಷದಲ್ಲಿಯೇ ಖರ್ಚು ಮಾಡತಕ್ಕದ್ದು. ಒಂದು ವೇಳೆ ಆ ರೀತಿ ಮಾಡದಿದ್ದರೆ ಆಯಾ ಇಲಾಖೆಯ ಅಧಿಕಾರಿಗಳನ್ನೇ ಹೊಣೆ ಮಾಡಲಾಗುವುದು ಎಂದು ಜಿಪಂ ಅಧ್ಯಕ್ಷೆ ಭಾರತಿ ತಿಮ್ಮಾರೆಡ್ಡಿ ಎಚ್ಚರಿಕೆ ನೀಡಿದರು.
ಈ ಹಿಂದೆ ವಯಸ್ಕರ ಶಿಕ್ಷಣ ಅಡಿ ಕೈಗೊಳ್ಳಲಾದ ಕಾರ್ಯಕ್ರಮಗಳ ವಿವರ ನೀಡುವುದರ ಜತೆಗೆ ಈ ವರ್ಷ ಏನೇನು ಮಾಡುತ್ತೀದ್ದೀರಿ ಎಂಬುದರ ವಿವರ ಕೂಡ ಜಿಪಂ ಸದಸ್ಯರಿಗೆ ತಿಳಿಸುವಂತೆ ಜಿಪಂ ಅಧ್ಯಕ್ಷರು ಸೂಚಿಸಿದರು.ಕಳೆದ ವರ್ಷ ಯಾವ್ಯಾವ ಇಲಾಖೆಗಳಡಿ ಯಾವ್ಯಾವ ಕಾರ್ಯಕ್ರಮಗಳು ಕೈಗೊಳ್ಳಲಾಗಿದೆ. ಈ ವರ್ಷ ಏನೇನು ಮಾಡುತ್ತಿದ್ದೀವೆ ಎಂಬುದರ ವಿವರವನ್ನು 15 ದಿನದೊಳಗೆ ಜಿಪಂ ಸದಸ್ಯರಿಗೆ ನೀಡಲು ಕ್ರಮಕೈಗೊಳ್ಳಲಾಗುವುದು ಎಂದು ಜಿಪಂ ಸಿಇಒ ಕೆ.ನಿತೀಶ್ ತಿಳಿಸಿದರು.ವಾರ್ಷಿಕ ಕ್ರಿಯಾಯೋಜನೆ ಕುರಿತು ಸುದೀರ್ಘ ಚರ್ಚೆ ಈ ಸಂದರ್ಭದಲ್ಲಿ ನಡೆಯಿತು.ಈ ಸಂದರ್ಭದಲ್ಲಿ ಸಂಸದ ವೈ.ದೇವಿಂದ್ರಪ್ಪ, ಜಿಪಂ ಉಪಾಧ್ಯಕ್ಷೆ ದೀನಾ ಮಂಜುನಾಥ, ಜಿಪಂ ಸದಸ್ಯರು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.