ಹಿರಿಯೂರು :
ವಾಣಿ ವಿಲಾಸ ಜಲಾಶಯಕ್ಕೆ ಒಂದು ತಿಂಗಳ ಒಳಗೆ ಭದ್ರಾ ನೀರನ್ನು ಹರಿಸುತ್ತೇವೆ ಎಂದು ನೀರಾವರಿ ಸಚಿವರು ಬಂದು ಲಿಖಿತ ಭರವಸೆ ನೀಡುವವರೆಗೆ ಆರಂಭಿಸಿರುವ ಅಮರಣಾಂತರ ಉಪವಾಸ ಸತ್ಯಾಗ್ರಹವನ್ನು ಹಿಂದೆ ಪಡೆಯುವುದಿಲ್ಲ ಎಂಬುದಾಗಿ ಜಿಲ್ಲಾ ಉಸ್ತುವಾರಿ ಸಚಿವರಿಗೆ ಧರಣಿ ನಿರತರು ಸ್ಪಷ್ಟಪಡಿಸಿದರು.
ನಗರದ ತಾಲ್ಲೂಕು ಕಛೇರಿ ಆವರಣದಲ್ಲಿ ವಾಣಿವಿಲಾಸ ಸಾಗರಕ್ಕೆ ಅದಷ್ಟು ಬೇಗ ಭದ್ರೆ ನೀರು ಹರಿಸುವಂತೆ ವಕೀಲರ ಸಂಘದ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದ್ದ ಉಪವಾಸತ್ಯಾಗ್ರಹ ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ವೆಂಕಟರಮಣಪ್ಪ ಬೇಟಿ ನೀಡಿ ಧರಣಿ ನಿರತರ ಅಹವಾಲು ಆಲಿಸಿದ ಸಂದರ್ಭದಲ್ಲಿ ಪ್ರತಿಭಟನಾಕಾರರು ಸಚಿವರಿಗೆ ಈರೀತಿ ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ವೆಂಕಟರಮಣಪ್ಪ ಅವರು ಮಾತನಾಡಿ, ರೈತರ ಕಷ್ಟಗಳ ಬಗ್ಗೆ ಅರಿವಿದೆ. ಸ್ವತಃ ರೈತನಾಗಿರುವ ನನಗೆ ತೋಟಗಳು ಒಣಗಿರುವುದು ನಿಜಕ್ಕೂ ನೋವಿನ ಸಂಗತಿ. ಈ ಬಾಗದಲ್ಲಿ 1000-1500 ಅಡಿ ಕೊಳವೆಬಾವಿ ಕೊರೆಸಿದರೂ ನೀರು ಸಿಗುತ್ತಿಲ್ಲ.
ಭದ್ರಾ ಯೋಜನೆ ನಿಗದಿತ ಅವಧಿಯಲ್ಲಿ ಪೂರ್ಣಗೊಳ್ಳದೇ ಇರುವುದಕ್ಕೆ ಸಂತ್ರಸ್ತ ರೈತರು, ಅರಣ್ಯ ಇಲಾಖೆ ಪರವಾನಿಗೆ ಸೇರಿ ಹಲವು ಕಾರಣಗಳಿವೆ. ಈಗ ಇದಕ್ಕೆ ಪರ್ಯಾಯ ಮಾರ್ಗ ಹುಡುಕಿದ್ದು, ಅಲ್ಲಿಯವರೆಗೆ ನಮಗೆ ಸಮಯ ಕೊಡಿ, ಉಪವಾಸ ಸತ್ಯಾಗ್ರಹ ನಿಲ್ಲಿಸಿ ನಂತರವೂ ನೀರು ಬರದೇ ಹೋದರೆ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುತ್ತೇನೆ ಎಂದು ವೆಂಕಟರಮಣಪ್ಪ ಪ್ರತಿಭಟನಾಕಾರರಿಗೆ ತಿಳಿಸಿದರು.
ಜಿಲ್ಲಾ ಉಸ್ತುವಾರಿ ಸಚಿವರ ಮಾತಿಗೆ ಉತ್ತರಿಸಿದ ಧರಣಿ ನಿರತ ವಕೀಲರಾದ ಸಂಜಯ್ ಮಾತನಾಡಿ, ನಮಗೆ ನಿಮ್ಮ ರಾಜೀನಾಮೆ ಮುಖ್ಯವಲ್ಲ. ಒಂದು ತಿಂಗಳ ವೇಳೆಗೆ ನಾವೆಲ್ಲ ಸತ್ತೇ ಹೋಗಿರುತ್ತೇವೆ. ಎರಡು ವರ್ಷದ ಹಿಂದೆ ಜಲಾಶಯದಲ್ಲಿ 67 ಅಡಿ ನೀರು ಇದ್ದಾಗ ರೈತರ ತೋಟ ಉಳಿಸಲು ನೀರು ಬಿಡಿ ಎಂದು ಧರಣಿ ನಡೆಸಲಾಗಿತ್ತು. ನೀರು ಬಿಟ್ಟರೆ ಡೆಡ್ ಸ್ಟೋರೇಜ್ ಗೆ ತೊಂದರೆಯಾಗುತ್ತದೆ. ಅಂತಹ ನೀರನ್ನು ಬಳಸಲಾಗದು ಎಂದು ಹೇಳಿದ್ದ ಜಿಲ್ಲಾಡಳಿತ ಈಗ ಏಕೆ ಡೆಡ್ ಸ್ಟೋರೇಜ್ ನೀರನ್ನು ಪಂಪ್ ಮಾಡಲಾಗುತ್ತಿದೆ ಎಂಬುದಾಗಿ ಪ್ರಶ್ನಿಸಿದರಲ್ಲದೆ. ನೀರಾವರಿ ಸಚಿವರು ಲಿಖಿತ ಭರವಸೆ ಬರುವವರೆಗೆ ಧರಣಿ ಸತ್ಯಾಗ್ರಹ ಕೈಬಿಡುವ ಪ್ರಶ್ನೆಯೇ ಇಲ್ಲ ಎಂಬುದಾಗಿ ಹೇಳಿದರು.
ಅಂತಿಮವಾಗಿ ಜಿಲ್ಲಾ ಉಸ್ತುವಾರಿ ಸಚಿವರು ವಾಣಿ ವಿಲಾಸ ಹೋರಾಟ ಸಮಿತಿಯ ಸಂಚಾಲಕ ಎಚ್.ಆರ್.ತಿಮ್ಮಯ್ಯ, ಅಧ್ಯಕ್ಷ ಕಸವನಹಳ್ಳಿ ರಮೇಶ್, ಎಚ್.ಆರ್.ಶಂಕರ್, ಆಲೂರುಸಿದ್ಧರಾಮಣ್ಣ, ತ್ರಯಂಭಕಮೂರ್ತಿ, ವೇದಾ ಶಿವಕುಮಾರ್ ಅವರ ಜೊತೆ 15 ನಿಮಿಷ ಚರ್ಚೆ ನಡೆಸಿ ಮನಒಲಿಸಿದ ನಂತರ ಧರಣಿ ನಿರತರು ಧರಣಿ ವಾಪಸ್ ಪಡೆಯುವ ನಿರ್ಣಯ ಕೈಗೊಂಡರು.
ಈ ಸಂದರ್ಭದಲ್ಲಿ ಸಚಿವರ ಜೊತೆ ಮಾಜಿ ಸಚಿವರಾದ ಟಿ.ಬಿ.ಜಯಚಂದ್ರ, ಚಳ್ಳಕೆರೆ ಶಾಸಕ ರಘುಮೂರ್ತಿ, ಕ್ಷೇತ್ರದ ಮಾಜಿ ಶಾಸಕ ಡಿ.ಸುಧಾಕರ್, ಜಿಲ್ಲಾ ಜೆಡಿಎಸ್ ಅಧ್ಯಕ್ಷ ಕಂದಿಕೆರೆ ಯಶೋಧರ್, ಮಾಜಿ ಸಂಸದ ಬಿ.ಎನ್.ಚಂದ್ರಪ್ಪ ಹಾಗೂ ರೈತ ಹೋರಾಟಗಾರರು, ವಕೀಲರಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.