ಜಿಲ್ಲಾಧಿಕಾರಿಗಳ ಕಛೇರಿಯ ಮುತ್ತಿಗೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ರೈತ ಸಂಘ ಮನವಿ

ಶಿರಾ

      ಜಿಲ್ಲೆಯ 10 ತಾಲ್ಲೂಕುಗಳಲ್ಲಿ ಮಳೆ-ಬೆಳೆಯಾಗದೆ ಬರಗಾಲಕ್ಕೆ ತುತ್ತಾಗಿದ್ದು ಅಂತರ್ಜಲವೂ ಬತ್ತಿ ಹೋಗಿದೆ. ಜಿಲ್ಲೆಯ ವಿವಿಧ ನೀರಾವರಿ ಯೋಜನೆಗಳ ಅನುಷ್ಠಾನವೂ ಕುಂಠಿತಗೊಂಡಿದ್ದು ಈ ಬಗ್ಗೆ ಸರ್ಕಾರದ ಗಮನ ಸೆಲೆಯಲು ಜೂನ್:26 ರಂದು ಜಿಲ್ಲಧಿಕಾರಿಗಳ ಕಛೇರಿಗೆ ಮುತ್ತಿಗೆ ಹಾಕುವ ಪ್ರತಿಭಟನೆಯನ್ನು ರಾಜ್ಯ ರೈತ ಸಂಘ, ಹಸಿರುಸೇನೆ ಕೈಗೊಂಡಿದ್ದು ಜಿಲ್ಲೆಯ ಎಲ್ಲಾ ರೈತರು ಪಾಲ್ಗೊಳ್ಳುವಂತೆ ರೈತ ಸಂಘದ ರೈತ ಸಂಘದ ಪ್ರಧಾನ ಕಾರ್ಯದರ್ಶಿ ನಾದೂರು ಕೆಂಚಪ್ಪ ಮನವಿ ಮಾಡಿದ್ದಾರೆ.

     ಶಿರಾ ನಗರದ ಪ್ರವಾಸಿ ಮಂದಿರದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಜಿಲ್ಲೆಯ ಅನೇಕ ತಾಲ್ಲೂಕುಗಳಲ್ಲಿ ಮಳೆ ಇಲ್ಲದೆ ಅಡಿಕೆ ತೋಟಗಳು, ತೆಂಗು ಸೇರಿದಂತೆ ಬೆಲೆ ಬಾಳುವ ರೈತರ ಫಸಲುಗಳು ಒಣಗಿ ಹೋಗುತ್ತಿವೆ. ಎತ್ತಿನಹೊಳೆ, ತುಂಗಭದ್ರಾ ನೀರಾವರಿ ಯೋಜನೆಗಳ ಅನುಷ್ಠಾನ ಜಿಲ್ಲೆಯಲ್ಲಿ ಕುಂಠಿತಗೊಂಡಿದ್ದು ಯಾವ ಜನಪ್ರತಿನಿಧಿಗಳಾಗಲಿ, ಸರ್ಕಾರಗಳಾಗಲಿ ಗಮನ ಹರಿಸುತ್ತಿಲ್ಲ ಎಂದು ಕೆಂಚಪ್ಪ ಆರೋಪಿಸಿದರು.

     ರಿಯಲ್ ಎಸ್ಟೇಟ್ ಹಾಗೂ ಕೈಗಾರಿಕೋಧ್ಯಮಿಗಳಿಗೆ ಅನುಕೂಲ ಮಾಡಲು ರಾಜ್ಯ ಸರ್ಕಾರ ಭೂಸ್ವಾಧೀನ ಕಾಯಿದೆ ಜಾರಿಗೆ ತಂದಿದೆಯೇ ಹೊರತು ಇದರಿಂದ ರೈತರಿಗೆ ಎಳ್ಳಷ್ಟೂ ಲಾಭವಿಲ್ಲ. ರೈತರು ಸಾಲ ಕಟ್ಟುವಂತೆ ಬ್ಯಾಂಕುಗಳು ನೋಟೀಸ್ ಜಾರಿ ಮಾಡುತ್ತಿವೆ. ಸರ್ಕಾರ ಇನ್ನೂ ರೈತರ ಸಾಲವನ್ನು ಸಂಪೂರ್ಣ ಮಾಡಿಯೇ ಇಲ್ಲ. ಇದೆಲ್ಲದಕ್ಕೂ ಸರ್ಕಾರ ಕೂಡಲೇ ಸ್ಪಂಧಿಸುವಂತೆ ಜೂನ್:26 ರಂದು ಜಿಲ್ಲಾ ಕೇಂದ್ರದಲ್ಲಿ ಪ್ರತಿಭಟನೆ ನಡೆಯಲಿದ್ದು ಜಿಲ್ಲೆಯ ಎಲ್ಲಾ ರೈತರು ಪಾಲ್ಗೊಳ್ಳುವಂತೆ ನಾದೂರು ಕೆಂಚಪ್ಪ ಮನವಿ ಮಾಡಿದರು.ರೈತ ಸಂಘದ ಉಪಾಧ್ಯಕ್ಷ ಈರಗ್ಯಾತಯ್ಯ, ಸಂಚಾಲಕರಾದ ಗುರುಮೂರ್ತಿ, ರಾಮಣ್ಣ, ಎಸ್.ಜಗದೀಶ್, ಕೃಷ್ಣಮೂರ್ತಿ, ರೈತ ಮುಖಮಡರಾದ ಮಂಜುನಾಥ್, ಓಂಕಾರಪ್ಪ ಸೇರಿದಂತೆ ಅನೇಕ ಪ್ರಮುಖರು ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ