ಜಿಲ್ಲಾಸ್ಪತ್ರೆ ಗುತ್ತಿಗೆ ನೌಕರರಿಗೆ ಕೆಲಸದಿಂದ ಕೋಕ್

ದಾವಣಗೆರೆ:

      ಕಳೆದ 8 ವರ್ಷಗಳಿಂದ ಜಿಲ್ಲಾ ಸಾರ್ವಜನಿಕ ಚಿಗಟೇರಿ ಆಸ್ಪತ್ರೆಯಲ್ಲಿ ಹೊರ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ, 82 ನೌಕರರನ್ನು ಏಕಾಏಕಿ ಕೆಲಸದಿಂದ ತೆಗೆದು ಹಾಕಿರುವುದರಿಂದ ಮನನೊಂದು ಐವರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಶನಿವಾರ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ.

      ನಗರದ ಜಿಲ್ಲಾ ಸಾರ್ವಜನಿಕರ ಚಿಗಟೇರಿ ಆಸ್ಪತ್ರೆಯಲ್ಲಿ ಹೊರ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸುಮಯ್ಯಾಭಾನು, ಸಿಂಧು, ದೀಪಾ, ಹನುಮಂತಪ್ಪ, ಸೋಮಶೇಖರ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಸ್ಟಾಫ್ ನರ್ಸ್‍ಗಳಾಗಿದ್ದು, ಈ ಪೈಕಿ ಸುಮಯ್ಯಾಬಾನು ಹಾಗೂ ಸಿಂಧು ಪರಿಸ್ಥಿತಿ ಗಂಭೀರವಾಗಿದೆ ಎಂದು ಮೂಲಗಳು ತಿಳಿಸಿವೆ.

      ಸತತ ಎಂಟು ವರ್ಷಗಳಿಂದ ಟ್ರಾಮಾ ಕೇರ್ ಯೋಜನೆ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಸುಮಾರು 82 ಜನ ಹೊರ ಗುತ್ತಿಗೆ ನೌಕರರು ಎಂದಿನಂತೆ ಶನಿವಾರವೂ ಸೇವೆಗೆ ಹಾಜರಾಗಿ, ಹಾಜರಿ ಪುಸ್ತಕಕ್ಕೆ ಸಹಿ ಹಾಕುವ ವೇಳೆಯಲ್ಲಿ, ಅನುದಾನದ ಕೊರತೆಯ ಕಾರಣ ನೀಡಿ, ಕೆಲಸದಿಂದ ತೆಗೆದು ಹಾಕಿರುವುದಾಗಿ ಅಧಿಖಾರಿಗಳು ಹೇಳುತ್ತಿದ್ದಂತೆ, ದಿಕ್ಕು ತೋಚದಾಗದ ಹೊರಗುತ್ತಿಗೆ ನೌಕರರು ಸ್ಥಳದಲ್ಲಿಯೇ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ. ಈ ವೇಳೆ ಐವರು ನೌಕರರು ಏಕಾಏಕಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಇವರನ್ನು ತುರ್ತು ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ ನೀಡಿ ಸಾಮಾನ್ಯ ವಾರ್ಡ್‍ಗೆ ವರ್ಗಾಯಿಸಲಾಗಿದೆ.

   2011ರಿಂದಲೂ ಜಿಲ್ಲಾಸ್ಪತ್ರೆಯಲ್ಲಿ ಹೊರ ಗುತ್ತಿಗೆ ಆಧಾರದಲ್ಲಿ 82 ನೌಕರರು ಕೆಲಸ ಮಾಡುತ್ತಿದ್ದಾರೆ. ಈ ಪೈಕಿ 42 ಜನ ಸ್ಟ್ಯಾಫ್ ನರ್ಸ್‍ಗಳಿದ್ದು, ಉಳಿದವರು ಎಕ್ಸ್-ರೇ, ಲ್ಯಾಬ್ ಟೆಕ್ನಿಷಿಯನ್ಸ್, ಕಂಪ್ಯೂಟರ್ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಆದರೆ, ಕಾಲಕಾಲಕ್ಕೆ ಸಂಬಳ ನೀಡದ ಜಿಲ್ಲಾಸ್ಪತ್ರೆ, ಹರಿಹರದ ಗುತ್ತಿಗೆ ಏಜೆನ್ಸಿ ಏಕಾಏಕಿ ಕೆಲಸದಿಂದ 82 ಜನರನ್ನು ತೆಗೆದು ಹಾಕಿ, ಇವರೆಲ್ಲರನ್ನೂ ಬೀದಿ ಪಾಲು ಮಾಡಿದ್ದಾರೆ.

    ಹರಿಹರದ ಬಿ.ಕೆ.ಆರ್.ಸ್ವಾಮಿ ಎಂಬುವರಿಗೆ ಸೇರಿದ ಮ್ಯಾನ್ ಪವರ್ ಏಜೇನ್ಸಿಯಡಿ ಹೊರ ಗುತ್ತಿಗೆ ಆಧಾರದಲ್ಲಿ ಸತತ 8 ವರ್ಷದಿಂದಲೂ 82 ಜನ ಕೆಲಸ ಮಾಡುತ್ತಾ ಬಂದಿದ್ದಾರೆ. ಆಗಿನಿಂದ ಈ ಕ್ಷಣದವರೆಗೂ ಹೊರ ಗುತ್ತಿಗೆ ನೌಕರರಿಗೆ ಸರ್ಕಾರದ ಮಾರ್ಗಸೂಚಿ ಪ್ರಕಾರ ಸಿಗಬೇಕಾದ ಇಎಸ್‍ಐ, ಪಿಎಫ್ ಸೇರಿದಂತೆ ಯಾವುದೇ ಭತ್ಯೆ ನೀಡಿಲ್ಲ. ಅಲ್ಲದೇ, ಗುತ್ತಿಗೆ ಪಡೆದ ಏಜೇನ್ಸಿಯವರು ನಮ್ಮನ್ನು ಕೆಲಸದಿಂದ 6 ತಿಂಗಳಿನಿಂದ ತೆಗೆಯುವುದಾಗಿ ಹೇಳುತ್ತಾ ಬಂದಿದ್ದು, ಇಂದು 82 ಜನರನ್ನೂ ಕೆಲಸದಿಂದ ತೆಗೆದಿದ್ದಾರೆ ಎಂದು ಕೆಲಸ ಕಳೆದುಕೊಂಡ ಹೊರ ಗುತ್ತಿಗೆ ನೌಕರರು ಅಳಲು ತೋಡಿಕೊಂಡರು.

     ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ಹಾಗೂ ಜಿಲ್ಲಾಡಳಿತಕ್ಕೆ ನಿರಂತರ ಮನವಿ ಸಲ್ಲಿಸುತ್ತಾ ಬಂದಿದ್ದರೂ ಯಾವುದೇ ಪ್ರಯೋಜನಗಳಾಗಿಲ್ಲ. ಬದಲಿಗೆ ಕಪ್ಪು ಪಟ್ಟಿಗೆ ಸೇರಲ್ಪಟ್ಟಿರುವ ಸಂಸ್ಥೆಗೆ ಜಿಲ್ಲಾಸ್ಪತ್ರೆಗೆ ಹೊರ ಗುತ್ತಿಗೆ ನೌಕರರನ್ನು ಒದಗಿಸಲು ಅವಕಾಶ ನೀಡಲಾಗಿದೆ. ನಮಗೆ ಏಳು ತಿಂಗಳ ವೇತನ ಸಹ ನೀಡಿಲ್ಲ. ಈ ಬಗ್ಗೆ ಜಿಲ್ಲಾಸ್ಪತ್ರೆ ಅಧೀಕ್ಷಕಿ ಡಾ.ನೀಲಾಂಬಿಕೆಯವರನ್ನು ಕೇಳಿದರೆ, ಸೆಪ್ಟಂಬರ್‍ನಿಂದಲೇ ನಿಮ್ಮ ಸೇವೆ ಬೇಡವೆಂದು ನಿಮ್ಮನ್ನು ಪೂರೈಸಿರುವ ಸಂಸ್ಥೆಗೆ ಬರೆದುಕೊಟ್ಟಿದ್ದೇವೆ. ಅಲ್ಲದೇ, ನಿಮ್ಮ ವೇತನವನ್ನು ಏಜೆನ್ಸಿಗೆ ಪಾವತಿಸಲಾಗಿದೆ ಎನ್ನುತ್ತಿದ್ದಾರೆ.

      ಇನ್ನೂ ಏಜೆನ್ಸಿಯವರನ್ನು ಕೇಳಿದರೆ, ತಮಗೆ ಜಿಲ್ಲಾಸ್ಪತ್ರೆ ಅಧೀಕ್ಷಕರಿಂದ ಚೆಕ್ ಬಂದಿಲ್ಲವೆಂಬ ಉತ್ತರ ನೀಡುತ್ತಾರೆ. ಹಾಗಾದರೆ, ಇವರಿಬ್ಬರಲ್ಲಿ ಯಾರ ಮಾತು ಸತ್ಯ ಎಂದು ಗುತ್ತಿಗೆ ನೌಕರರು ಪ್ರಶ್ನಿಸಿದರು.ಈ ಇಬ್ಬರ ನಿರ್ಲಕ್ಷ್ಯದಿಂದಾಗಿ 82 ಜನ ಹೊರ ಗುತ್ತಿಗೆ ನೌಕರರು ಹಾಗೂ ನಮ್ಮನ್ನೇ ಅವಲಂಬಿಸಿರುವ ಕುಟುಂಬ ಸದಸ್ಯರು ಬೀದಿಪಾಲಾಗಿದ್ದಾರೆ. ಬಡವರು, ರೈತಾಪಿ ಕುಟುಂಬ, ಪರಿಶಿಷ್ಟರು, ಅಲ್ಪಸಂಖ್ಯಾತರು, ಹೀಗೆ ಕಡು ಬಡ ಕುಟುಂಬಗಳ ಹಿನ್ನೆಲೆಯ 82ಕ್ಕೂ ಹೆಚ್ಚು ಜನರು ಈಗ ಕೆಲಸ ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ. 2,400 ರು.ನಿಂದ ಸೇವೆ ಆಧಾರದಲ್ಲಿ ಇಂತಿಷ್ಟು ಎಂಬಂತೆ ಸರ್ಕಾರದ ಮಾನದಂಡಕ್ಕಿಂತಲೂ ಕಡಿಮೆ ವೇತನಕ್ಕೆ ಈ ಜನರನ್ನು ಹೊರ ಗುತ್ತಿಗೆ ಹೆಸರಿನಲ್ಲಿ ಜಿಲ್ಲಾಸ್ಪತ್ರೆಯಲ್ಲಿ ಸರ್ಕಾರ ಜೀತ ಮಾಡಿಸಿಕೊಂಡು, ಈಗ ನಡು ನೀರಿನಲ್ಲಿ ಕೈ ಬಿಟ್ಟಿರುವುದು ಸಾರ್ವಜನಿಕರ ಸಾರ್ವಜನಿಕರ ಆಕ್ರೋಶಕ್ಕೂ ಕಾರಣವಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap