ಬೆಂಗಳೂರು
ಹೊಟ್ಟೆಯಲ್ಲಿ ಮಗುವಿದೆ ಎಂದು ಭಾವಿಸಿ ವೈದ್ಯರು ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಮಾಡಿದ ಪರಿಣಾಮ ಮಹಿಳೆಯೊಬ್ಬರು ಅಸ್ವಸ್ಥಗೊಂಡು ನಗರದ ಖಾಸಗಿ ಆಸ್ಪತ್ರೆಯೊಂದರಲ್ಲಿ ಮೃತಪಟ್ಟಿದ್ದಾರೆ. ಇದರಿಂದ ಆಕ್ರೋಶಗೊಂಡ ಮಹಿಳೆಯ ಕುಟುಂಬದವರು ಪ್ರತಿಭಟನೆ ನಡೆಸಿದ್ದಾರೆ.
ಚಿಕ್ಕಬಳ್ಳಾಪುರದ ಮಂಡಿಕಲ್ ಬಳಿಯ ಬೀಸೇಗಾರಹಳ್ಳಿಯ ಮುನಿರತ್ನಮ್ಮ(23)ಮೃತ ಮಹಿಳೆಯಾಗಿದ್ದಾರೆ. ಕಳೆದ ಭಾನುವಾರ ತೀವ್ರ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಮುನಿರತ್ನಮ್ಮಳನ್ನು ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು ಪರಿಶೀಲನೆ ನಡೆಸಿದ ಜಿಲ್ಲಾಸ್ಪತ್ರೆಯ ಸ್ತ್ರೀ ರೋಗ ತಜ್ಞೆ ರೇಣುಕಾ, ಮುನಿರತ್ನಮ್ಮಳಿಗೆ ಖಾಸಗಿ ಆಸ್ಪತ್ರೆಯಲ್ಲಿ ಸ್ಕ್ಯಾನಿಂಗ್ ಗೆ ಮಾಡಿಸಿಕೊಂಡು ಬರುವಂತೆ ಕಳುಹಿಸಿದ್ದರು.
ಸ್ಕ್ಯಾನಿಂಗ್ ವರದಿ ನೋಡಿದ ವೈದ್ಯೆ ರೇಣುಕಾ, ಹೊಟ್ಟೆಯಲ್ಲಿ ಮಗು ಅಡ್ಡ ತಿರುಗಿದೆ ಸರಿಯಾಗಿ ಕಾಣಿಸುತ್ತಿಲ್ಲ ಕೂಡಲೇ ಶಸ್ತ್ರಚಿಕಿತ್ಸೆ ಮಾಡಬೇಕು ಎಂದು ಹೇಳಿ ತರಾತರುರಿಯಲ್ಲಿ ಶಸ್ತ್ರಚಿಕಿತ್ಸೆ ಮಾಡಿದ್ದು ಹೊಟ್ಟೆಯಲ್ಲಿ ಯಾವುದೇ ಮಗು ಕಂಡುಬಂದಿಲ್ಲ.ಇದರಿಂದ ಗಾಬರಿಗೊಂಡ ವೈದ್ಯೆ ಕೂಡಲೇ ಮಹಿಳೆಯನ್ನು ಅಂಬ್ಯುಲೆನ್ಸ್‍ನಲ್ಲಿ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ಆಸ್ಪತ್ರೆಗೆ ಕಳುಹಿಸಿದ್ದಾರೆ.
ಕಳೆದ ಎರಡು ದಿನಗಳಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸಗೆ ದಾಖಲಾಗಿದ್ದ ಮುನಿರತ್ನಮ್ಮ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾಳೆ. ಇದರಿಂದ ಆಕ್ರೋಶಗೊಂಡಿರುವ ಮೃತಳ ಸಂಬಂಧಿಕರು, ಮೃತದೇಹವನ್ನು ಜಿಲ್ಲಾಸ್ಪತ್ರೆ ಎದುರು ಇಟ್ಟು ಪ್ರತಿಭಟನೆ ನಡೆಸಿದ್ದರು.ಮುನಿರತ್ನಮ್ಮಳ ಸಾವಿಗೆ ವೈದ್ಯೆ ರೇಣುಕಾ ಹಾಗೂ ಜಿಲ್ಲಾಸ್ಪತ್ರೆಯ ಮುಖ್ಯವೈದ್ಯಾಧಿಕಾರಿ ವಿಜಯ್ ಕುಮಾರ್ ನೇರ ಹೊಣೆ ಎಂದು ಆರೋಪಿಸಿದ್ದಾರೆ.
ಪ್ರತಿಭಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ ಅನಿರುದ್ದ್ ಶ್ರವಣ್ ಹಾಗೂ ಕ್ಷೇತ್ರದ ಶಾಸಕ ಡಾ ಕೆ ಸುಧಾಕರ್ ಬರುವಂತೆ ಆಗ್ರಹಿಸಿದ್ದಾರೆ.ಸ್ಥಳಕ್ಕೆ ಬಂದ ಚಿಕ್ಕಬಳ್ಳಾಪುರ ನಗರ ಪೊಲೀಸರು ಪ್ರತಿಭಟನಕಾರರ ಮನವೊಲಿಸಿ ದೂರು ನೀಡುವಂತೆ ಮನವಿ ಮಾಡಿಕೊಂಡರು.
ಈ ಸಂಬಂಧ ಮೃತಳ ಸಂಬಂಧಿಕರು ವೈದ್ಯೆ ವಿರುದ್ಧ ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ ಮತ್ತೊಂದೆಡೆ ತಳ ಸಂಬಂಧಿಕರ ಆರೋಪಕ್ಕೆ ಪ್ರತಿಕ್ರಿಯಿಸಿರುವ ವೈದ್ಯೆ ರೇಣುಕಾ, ಸ್ಕ್ಯಾನಿಂಗ್ ರಿಪೋರ್ಟ್ ಆಧಾರದ ಮೇಲೆ ಶಸ್ತ್ರಚಿಕಿತ್ಸೆ ಮಾಡಿದ್ದೆ. ಮುನಿರತ್ಮಮ್ಮಳ ಗಂಭೀರ ಸ್ಥಿತಿ ಬಗ್ಗೆ ಸಂಬಂಧಿಕರಿಗೆ ತಿಳಿಸಿದ್ದೇನೆ. ನನ್ನದೇನು ತಪ್ಪಿಲ್ಲ ಎಂದು ಹೇಳಿದ್ದಾರೆ. ಆದರೆ ಇತ್ತ ಮೃತ ಮುನಿಲಕ್ಷಮ್ಮಳಿಗೆ 3 ವರ್ಷದ ಮಗು ಸಹ ಇದ್ದು ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.