ಜಿಲ್ಲೆಯ ಅಭಿವೃದ್ಧಿ ರಾಜಕಾರಣ ಮೊದಲ ಆದ್ಯತೆಯಾಗಲಿ: ಬಿ.ಎಸ್.ಮಲ್ಲಿಕಾರ್ಜುನಯ್ಯ

ಹುಳಿಯಾರು

     ತುಮಕೂರು ಜಿಲ್ಲೆ ಹಿಂದೆಂದೂ ಕಾಣದ ಭೀಕರ ಬರಗಾಲಕ್ಕೆ ತುತ್ತಾಗಿದೆ. ಚುನಾವಣೆ ನೆಪವೊಡ್ಡಿ ಕುಡಿಯುವ ನೀರಿನಂತಹ ಆದ್ಯತೆಯನ್ನೂ ಸಹ ಕಡೆಗಣಿಸಲಾಗಿದೆ ಎಂದು ತುಮಕೂರು ಲೋಕಸಭಾ ಕ್ಷೇತ್ರದ ಕರ್ನಾಟಕ ರಾಷ್ಟ್ರಸಮಿತಿ ಬೆಂಬಲಿತ ಪಕ್ಷೇತರ ಅಭ್ಶರ್ಥಿ ಬಿ.ಎಸ್.ಮಲ್ಲಿಕಾರ್ಜುನಯ್ಯ ಆರೋಪಿಸಿದ್ದಾರೆ.

       ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಇಲ್ಲಿಯವರೆಗೂ ಜನಾಧಿಕಾರ ಪಡೆದ ಜನಪ್ರತಿನಿಧಿಗಳು ಜಿಲ್ಲೆಯ ಭೌಗೋಳಿಕ ಹಿನ್ನೆಲೆ ಮತ್ತು ಜನಜೀವನವನ್ನು ಸೂಕ್ಷ್ಮವಾಗಿ ಅಧ್ಯಯನ ಮಾಡದೆ ಕೇವಲ ಹಣ, ಹೆಂಡದ ಆಮಿಷ ಹೊಡ್ಡಿ ಚುನಾವಣೆಗಳನ್ನು ಅಪಮೌಲ್ಯಗೊಳಿಸಿ ಪ್ರಜಾಪ್ರಭುತ್ವದ ರಾಜಕಾರಣವನ್ನು ಕಲುಷಿತಗೊಳಿಸಿದ್ದೂ ಅಲ್ಲದೆ ಸ್ವಾರ್ಥ ಮತ್ತು ಅಧಿಕಾರದ ದಾಹಕ್ಕಾಗಿ ಜಾತಿ, ಧರ್ಮದ ಹೆಸರಿನಲ್ಲಿ ವ್ಯಕ್ತಿ ವೈಭವೀಕರಿಸಿ ಜನರನ್ನು ಭಾವನಾತ್ಮಕವಾಗಿ ಕೆರಳಿಸಿ ಮತಗಳಿಕೆಯೊಂದನ್ನೇ ಮಾನದಂಡವೆಂದು ಪರಿಗಣಿಸಿದ್ದು ಇಂದಿನ ಜಿಲ್ಲೆಯ ಭೀಕರ ನೈಜಸ್ಥಿತಿಗೆ ಹಿಡಿದ ಕೈಗನ್ನಡಿಯಾಗಿದೆ ಎಂದರು.

       ತುಮಕೂರು ಜಿಲ್ಲೆ ರಾಜ್ಶದಲ್ಲೆ ಅಂತರ್ಜಲ ಕುಸಿತದಲ್ಲಿ ಕ್ರಮವಾಗಿ 2 ಮತ್ತು 3ನೇ ಸ್ಥಾನಕ್ಕಿಳಿದಿರುವುದನ್ನು ಯಾವುದೇ ಪಕ್ಷಗಳು ಪ್ರಸ್ತಾಪಿಸದೆ ಕೇವಲ ಹೇಮಾವತಿ ನೀರು ಮತ್ತು ಕುಟುಂಬ ರಾಜಕಾರಣದ ನೆಪದಲ್ಲಿ ವೈಯುಕ್ತಿಕ ನೆಲೆಗಟ್ಟಿನ ಕೆಸರೆರಚಾಟ ನಿಜಕ್ಕೂ ಅಸಹ್ಯ ಹುಟ್ಟಿಸಿದೆ ಹಾಗೂ ಜಿಲ್ಲೆಯ ಅಭಿವೃದ್ಧಿ ಮತ್ತು ಜನ ಜೀವನದ ಬಗ್ಗೆ ಇವರಿಗೆ ಇರುವ ಕಾಳಜಿಯ ಬೇಜವಾಬ್ದಾರಿತನದ ಬಗ್ಗೆ ಆತಂಕವಾಗಿದೆ ಎಂದರು.

        ರಾಜ್ಯಕ್ಕೆ ಮೊದಲನೇ ಸ್ಥಾನದ ಸಿರಿಧಾನ್ಯ ಮತ್ತು ಪಶುಪಾಲನೆಯ ಜಿಲ್ಲೆ ಸತತ 20 ವರ್ಷಗಳಿಂದ ಭೀಕರ ಬರಕ್ಕೆ ತುತ್ತಾಗುತ್ತಿರುವ ಬಗ್ಗೆ ವೈಜ್ಞಾನಿಕ ಅಧ್ಯಯನಕ್ಕೂ ಮುಂದಾಗದಿರುವುದು ಮತ್ತು ಅವೈಜ್ಞಾನಿಕವಾಗಿ ತೆಂಗು ಮತ್ತು ಅಡಕೆ ಬೆಳೆಯ ಎಗ್ಗಿಲ್ಲದ ವಿಸ್ತರಣೆ ಬಗ್ಗೆ ರೈತರಲ್ಲಿ ಅರಿವು ಮೂಡಿಸದೆ ಬೇಕಾಬಿಟ್ಟಿ ಅಕ್ರಮ ಗಣಿಗಾರಿಕೆ, ಮಣ್ಣು ಮತ್ತು ಮರಳು ದಂಧೆಗೆ ಪರೋಕ್ಷವಾಗಿ ಜನಪ್ರತಿನಿಧಿಗಳೆ ಕುಮ್ಮಕ್ಕು ನೀಡಿದ್ದೂ ಅಲ್ಲದೆ ಅರೆಮಲೆನಾಡಿನ ಇಡಿ ವಾತಾವರಣ ಸರ್ವನಾಶವಾಗಲು ಕಾರಣೀಭೂತರಾಗಿದ್ದಾರೆ ಎಂದು ಟೀಕಿಸಿದರು.

       ಅಲ್ಲದೆ ಇದೆ ಜೆ.ಸಿ.ಬಿ ( ಜನತಾದಳ, ಕಾಂಗ್ರೆಸ್ ಮತ್ತು ಬಿಜೆಪಿ) ಪಕ್ಷಗಳ ಪ್ರತಿರೂಪವಾದ ರಕ್ಕಸ ಗಾತ್ರದ ಜೆಸಿಬಿ ಯಂತ್ರಗಳು ಇಡಿ ಜಿಲ್ಲೆಯ ಕೆರೆ ಕಟ್ಟೆಗಳ ಒಡಲನ್ನು ಅತ್ಯಾಚಾರ ಮಾಡಿ ಪ್ರಾಕೃತಿಕ ಅಸಮತೋಲನಕ್ಕೆ ಕೈಜೋಡಿಸಿವೆ. ಎಲ್ಲಾ ಸರ್ವನಾಶ ಮಾಡಿ ಜಿಲ್ಲೆಯ ಜನತೆ ಶಾಶ್ವತ ಗುಳೆ ಹೋಗಲು ವೇದಿಕೆ ಸಜ್ಜುಗೊಳಿಸಿದ್ದಾರೆ. ಈಗ ಎತ್ತಿನಹೊಳೆ, ಭದ್ರಾಮೇಲ್ದಂಡೆ, ಹೇಮಾವತಿ ನೀರಿನ ಹಂಚಿಕೆಯ ಬಗ್ಗೆ ಬಡಾಯಿ ಕೊಚ್ಚುತ್ತಾ ಪುನಃ ಜಿಲ್ಲೆಯ ರೈತರನ್ನು ಇರುಳು ಕಂಡ ಬಾವಿಗೆ ಹಗಲು ದೂಡುತ್ತಿರುವುದು ಈ ಜಿಲ್ಲೆಯ ರೈತರಿಗೆ ಮಾಡುತ್ತಿರುವ ಘೋರ ಅನ್ಯಾಯ ಎಂದು ಜರಿದರು.

        ಈಗಾಗಲೇ ಜಿಲ್ಲೆಯ ಬಹುತೇಕ ಕೆರೆ ಕಟ್ಟೆಗಳನ್ನು ಅವೈಜ್ಞಾನಿಕವಾಗಿ ಬಗೆಯಲಾಗಿದ್ದು ಅಂತರ್ಜಲಕ್ಕೆ ನೀರಿಂಗಿಸುವ ಮತ್ತು ನೀರನ್ನು ಹಿಡಿದಿಟ್ಟುಕೊಳ್ಳುವ ಮರಳು ಸೇರಿದಂತೆ ಎಲ್ಲವನ್ನೂ ಸಹ ದೋಚಲಾಗಿದ್ದು ಕೆರೆಗಳು ಜೀವಂತ ಶವಗಳಂತಾಗಿವೆ. ಜಿಲ್ಲೆಯಲ್ಲಿ ಸರಾಸರಿ ಬೀಳುವ 350 ರಿಂದ 650 ಮಿ.ಮೀ. ಭೂಮೇಲ್ಮೈ ಮಳೆ ನೀರನ್ನೂ ಸಹ ಸಮರ್ಪಕವಾಗಿ ಭೂಮಿಗೆ ಇಂಗಿಸುವ ಮಳೆ ನೀರು ಕೊಯ್ಲನ್ನೂ ಸಹ ಅನುಷ್ಠಾನಗೊಳಿಸದೆ, ಇಡೀ ಜಿಲ್ಲೆಯನ್ನು 2030 ರೊಳಗೆ ಮರುಭೂಮಿಯಾಗಿಸಲು ಹೊರಟಿರುವ ಜನತಾದಳ-ಕಾಂಗ್ರೆಸ್-ಬಿಜೆಪಿ (ಜೆಸಿಬಿ) ಪಕ್ಷಗಳ ನೀತಿಗಳೆ ಜಿಲ್ಲೆಯ ಇಂದಿನ ದುಸ್ಥಿತಿಗೆ ಕಾರಣ ಎಂದು ಕುಟುಕಿದರು.

        ಈ ಚುನಾವಣೆಯಲ್ಲಿ ಯಾರೆ ಗೆಲ್ಲಲಿ ಈ ಮೇಲ್ಕಂಡ ಎಲ್ಲಾ ಅಂಶಗಳನ್ನು ತಕ್ಷಣ ಅಧ್ಯಯನ ಮಾಡಿ ಜಿಲ್ಲೆಯ ಪ್ರಕೃತಿ ಉಳಿವಿನ ಕೆಲಸವನ್ನು ಸಮರೋಪಾದಿಯಲ್ಲಿ ಜನರನ್ನು ಜಾಗೃತಿಗೊಳಿಸಿ ಅನುಷ್ಠಾನಗೊಳಿಸಿದರೆ ಮಾತ್ರ ಮುಂಬರುವ ಚುನಾವಣೆಗಳಲ್ಲಿ ಈ ಪಕ್ಷಗಳಿಗೆ ಮತ ಹಾಕಲು ಜಿಲ್ಲೆಯ ಹಳ್ಳಿಗಳಲ್ಲಿ ಜನರನ್ನು ಕಾಣಬಹುದು. ಇಲ್ಲವಾದರೆ ಇಡಿ ಜಿಲ್ಲೆಯ ಜನತೆ ಗುಳೆ ಹೋದರೂ ಆಶ್ಚರ್ಯವೇನಿಲ್ಲ ಎಂಬ ಆತಂಕವನ್ನು ಹೊರಹಾಕಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link