ಜಿಲ್ಲೆಯಲ್ಲಿ 166 ಶಾಲಾ ಕೊಠಡಿ ಶಿಥಿಲಾವಸ್ಥೆಯಲ್ಲಿ

ದಾವಣಗೆರೆ:

ವಿಶೇಷ ವರದಿ: ವಿನಾಯಕ ಪೂಜಾರ್

     ಎಜ್ಯುಕೇಷನ್ ಹಬ್, ವಿದ್ಯಾ ನಗರಿ ಎಂಬುದಾಗಿಯೇ ಖ್ಯಾತಿ ಪಡೆದಿರುವ ಮಧ್ಯ ಕರ್ನಾಟಕದ ದಾವಣಗೆರೆ ಜಿಲ್ಲೆಯ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಲ್ಲಿ 166 ಕೊಠಡಿಗಳು ಸಂಪೂರ್ಣ ಶಿಥಿಲಾವಸ್ಥೆಯಲ್ಲಿದ್ದರೆ, ಇನ್ನೂ 109 ಕೊಠಡಿಗಳು ದುರಸ್ತಿಗೆ ಬಂದಿವೆ. ಹೀಗಾಗಿ ವಿದ್ಯಾರ್ಥಿಗಳು ಜೀವ ಭಯದಲ್ಲಿಯೇ ಪಾಠ-ಪ್ರವಚನ ಆಲಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

      ಹೌದು… ಮಧ್ಯ ಕರ್ನಾಟಕದ ದಾವಣಗೆರೆಯಲ್ಲಿ ವೈದ್ಯಕೀಯ ಕಾಲೇಜು, ಹಲವು ಇಂಜಿನಿಯರಿಂಗ್, ಡಿಪ್ಲೋಮಾ ಸೇರಿದಂತೆ ವಿವಿಧ ಕಾಲೇಜುಗಳು ಇರುವುದರಿಂದ ಈ ಊರನ್ನು ಎಜ್ಯುಕೇಷನಲ್ ಹಬ್, ವಿದ್ಯಾನಗರಿ ಅಂತೆಲ್ಲಾ ಕರೆಯಲಾಗುತ್ತಿದೆ. ಆದರೆ, ಜಿಲ್ಲೆಯ ಬಹುತೇಕ ಶಾಲೆಗಳ ಕೊಠಡಿಗಳು ನೆಲಸಮ ಆಗುವ ಹಂತ ತಲುಪಿವೆ. ಹೀಗಾಗಿ ಶಾಲೆಯ ಮೇಲ್ಛಾವಣಿ, ಗೋಡೆ ಎಲ್ಲಿ ನಮ್ಮ ಮೇಲೆ ಬೀಳಲಿದೆಯೋ ಎಂಬ ಆತಂಕದಲ್ಲಿ ವಿದ್ಯಾರ್ಥಿಗಳು ಜೀವನದ ಹಂಗು ತೊರೆದು ಓದು, ಬರಹ ಕಲಿಯುವುದು ಅನಿವಾರ್ಯವಾಗಿದೆ.

      ಪ್ರಾಥಮಿಕ ಶಾಲೆಗಳಲ್ಲಿ 128 ಕೊಠಡಿಗಳು ಹಾಗೂ ಪ್ರೌಢ ಶಾಲಾ ವಿಭಾಗದಲ್ಲಿ 38 ಕೊಠಡಿ ಸೇರಿ ಒಟ್ಟು 166 ಕೊಠಡಿಗಳು ಸಂಪೂರ್ಣ ಶಿಥಿಲಾವಸ್ಥೆಯಲ್ಲಿದ್ದು, ಇವುಗಳನ್ನು ನೆಲಸಮ ಮಾಡಿ ಹೊಸದಾಗಿ ನಿರ್ಮಾಣ ಮಾಡಬೇಕಾದ ಅವಶ್ಯಕತೆ ಇದೆ. ಹಾಗೆಯೇ ಪ್ರಾಥಮಿಕ ಶಾಲೆಯ 62 ಹಾಗೂ ಪ್ರೌಢ ಶಾಲೆಯ 47 ಕೊಠಡಿಗಳು ಸೇರಿ ಒಟ್ಟು 109 ಕೊಠಡಿಗಳು ದುರಸ್ತಿ ಹಂತ ತಲುಪಿವೆ.

      ಹೀಗಾಗಿ ಪ್ರತಿ ವರ್ಷ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು, ಪ್ರತಿವರ್ಷವೂ ನೆಲಸಮ ಮಾಡಿ, ಹೊಸದಾಗಿ ನಿರ್ಮಿಸಬೇಕಾಗಿರುವ ಕೊಠಡಿಗಳು ಹಾಗೂ ದುರಸ್ತಿ ಮಾಡಬೇಕಾದ ಕೊಠಡಿಗಳ ಬಗ್ಗೆ ಪಟ್ಟಿ ತಯಾರಿಸಿ, ಕ್ರಿಯಾಯೋಜನೆ ರೂಪಿಸಿ, ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸುತ್ತಲೇ ಬಂದಿದ್ದಾರೆ. ಆದರೆ, ರಾಜ್ಯ ಸರ್ಕಾರ ಮಾತ್ರ ಈ ಶಾಲಾ ಕೊಠಡಿಗಳನ್ನು ಅಭಿವೃದ್ಧಿ ಪಡಿಸಲು ಮಾತ್ರ ಹೆಚ್ಚಿನ ಆಸಕ್ತಿ ತೊರುತ್ತಿಲ್ಲ.

        ಜಿಲ್ಲೆಯಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ, ಕೊಠಡಿ ಇಲ್ಲದಿರುವುದರಿಂದ 9,465 ವಿದ್ಯಾರ್ಥಿಗಳನ್ನು 536 ಕೊಠಡಿಗಳಲ್ಲಿಯೇ ಕೂಡಿಹಾಕಲಾಗುತ್ತಿದೆ. ಹೆಚ್ಚಿನ ವಿದ್ಯಾರ್ಥಿಗಳಿರುವುದರಿಂದ ಹೆಚ್ಚುವರಿ ಕೊಠಡಿಗಳ ಅಗತ್ಯವೂ ಇದೆ. ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಪ್ರಾಥಮಿಕ ಶಾಲೆಗಳಲ್ಲಿ 89 ಹಾಗೂ ಪ್ರೌಢ ಶಾಲೆಗಳಲ್ಲಿ 45 ಕೊಠಡಿಗಳು ಸೇರಿ ಒಟ್ಟು 134 ಹೆಚ್ಚುವರಿ ಕೊಠಡಿ ನಿರ್ಮಾಣ ಮಾಡಬೇಕಾದ ಅವಶ್ಯಕತೆ ಇದೆ ಎಂದು ಮೂಲಗಳು ತಿಳಿಸಿವೆ.

       ಇನ್ನೂ ಕಾಂಪೌಂಡ್ ಕುಡಿವ ನೀರು, ಶೌಚಾಲಯ, ಆಟದ ಮೈದಾನ ಮತ್ತು ಇತರೆ ಮೂಲಭೂತ ಸೌಲಭ್ಯಗಳು ಸರ್ಕಾರಿ ಶಾಲೆಗಳಲ್ಲಿ ಮರೀಚಿಕೆಯಾಗಿದೆ. ಜಿಲ್ಲೆಯಲ್ಲಿ ಕಾಂಪೌಂಡ್ ಇಲ್ಲದ ಪ್ರಾಥಮಿಕ ಶಾಲೆಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ದಾವಣಗೆರೆ ಉತ್ತರ ಮತ್ತು ದಕ್ಷಿಣ ವಿಭಾಗದಲ್ಲಿ ಹೆಚ್ಚಿನ ಶಾಲೆಗಳಿವೆ. 4601 ಕಾಂಪೌಂಡ್‍ಗಳನ್ನು ನಿರ್ಮಾಣ ಮಾಡಬೇಕಾಗಿದೆ. ಅಲ್ಲದೇ, ಪ್ರೌಢಶಾಲಾ ಹಂತದಲ್ಲಿ 1150 ಶಾಲೆಗಳಿಗೆ ಕಾಂಪೌಂಡ್‍ಗಳೇ ಇಲ್ಲವಾಗಿದೆ.

      ಜಿಲ್ಲೆಯಲ್ಲಿ 50 ಶಾಲೆಗಳಿಗೆ ಕುಡಿವ ನೀರಿನ ವ್ಯವಸ್ಥೆ ಕಲ್ಪಿಸಬೇಕಿದೆ. 36 ಪ್ರಾಥಮಿಕ ಶಾಲೆಗಳಲ್ಲಿ ಕುಡಿವ ನೀರಿನ ಸಮಸ್ಯೆಯಿದೆ. ಅಲ್ಲದೇ, ಪ್ರಾಥಮಿಕ ಮತ್ತು ಪ್ರೌಢಶಾಲೆ ಸೇರಿ 204 ಶೌಚಾಲಯಗಳನ್ನು ನಿರ್ಮಿಸಬೇಕಿದೆ. ಇದರಲ್ಲಿ ಪ್ರಾಥಮಿಕ ಶಾಲೆಗಳಲ್ಲಿ 143 ಶೌಚಾಲಯ ಹಾಗೂ ಪ್ರೌಢಶಾಲೆಗಳಲ್ಲಿ 61 ಶೌಚಾಲಯ ನಿರ್ಮಿಸಬೇಕಾಗಿದೆ

        ಕೊಠಡಿ, ಶೌಚಾಲಯ, ಕುಡಿವ ನೀರು, ಕಾಂಪೌಂಡ್ ಸೇರಿ ಪೂರ್ಣ ಪ್ರಮಾಣದ ಮೂಲ ಸೌಲಭ್ಯ ಕಲ್ಪಿಸಲು ದಾವಣಗೆರೆ ಜಿಲ್ಲೆಯಲ್ಲಿ ಸುಮಾರು 37.88 ಕೋಟಿ ರೂ. ಅನುದಾನದ ಅಗತ್ಯವಿದ್ದು, ಪ್ರತಿ ವರ್ಷ ಅಧಿಕಾರಿಗಳು ಕ್ರಿಯಾ ಯೋಜನೆ ತಯಾರಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುತ್ತಲೇ ಇದ್ದಾರೆ. ಆದರೆ, ಸರ್ಕಾರಿ ಅಷ್ಟೊ, ಇಷ್ಟೋ ಅನುದಾನ ನೀಡಿ, ಶಾಲೆಗಳಿಗೆ ಸುಣ್ಣ-ಬಣ್ಣ ಬಳಿಸಿ ಕೈ ತೊಳೆದುಕೊಳ್ಳುತ್ತಿದೆ. ಹೀಗಾಗಿ ಸರ್ಕಾರಿ ಶಾಲೆಗಳ ಸ್ಥಿತಿ ನಿಜಕ್ಕೂ ಶೋಚನೀಯವಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap