ಜಿಲ್ಲೆಯತ್ತ ಸುಳಿಯದ ಉಸ್ತುವಾರಿ ಸಚಿವ….!

ದಾವಣಗೆರೆ:

ವಿಶೇಷ ವರದಿ :ವಿನಾಯಕ ಪೂಜಾರ್

        ದೋಸ್ತಿ ಸರ್ಕಾರದಲ್ಲಿ ದಾವಣಗೆರೆ ಜಿಲ್ಲೆಯ ಉಸ್ತುವಾರಿ ವಹಿಸಿಕೊಂಡಿರುವ, ತುಮಕೂರು ಜಿಲ್ಲೆಯ ಗುಬ್ಬಿ ವಿಧಾನಸಭಾ ಕ್ಷೇತ್ರದ ಶಾಸಕ ಎಸ್.ಆರ್.ಶ್ರೀನಿವಾಸ್ (ವಾಸು) ಇತ್ತೀಚೆಗೆ ಜಿಲ್ಲೆಯ ಕಡೆಗೆ ಸುಳಿಯದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

        ಹೌದು… ಬರೀ ಜಯಂತಿ ಹಾಗೂ ರಾಷ್ಟ್ರೀಯ ಹಬ್ಬಗಳಿಗೆ ಸೀಮಿತವಾಗಿರುವ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಆರ್.ಶ್ರೀನಿವಾಸ್ ಅವರು ಸ್ವಾತಂತ್ರ್ಯ ದಿನಾಚರಣೆ, ಕನ್ನಡ ರಾಜ್ಯೋತ್ಸವ, ಗಣ ರಾಜ್ಯೋತ್ಸವದಂತಹ ರಾಷ್ಟ್ರೀಯ ಹಬ್ಬಗಳನ್ನು ಹೊರತು ಪಡಿಸಿದರೆ, 2018ರ ಮೇ 7ರ ಭಾನುವಾರ ಜಿಲ್ಲೆಗೆ ಭೇಟಿ ನೀಡಿದ ಕೃಷಿ ಸಚಿವ ಶಿವಶಂಕರರೆಡ್ಡಿ ನೇತೃತ್ವದ ಸಚಿವ ಸಂಪುಟದ ಉಪ ಸಮಿತಿಯ ಜೊತೆಗೆ ಒಮ್ಮೆ ಮಾತ್ರ ಜಿಲ್ಲೆಯ ಬರ ಅಧ್ಯಯನಕ್ಕೆ ಬಂದದ್ದು ಹಾಗೂ ಇನ್ನೊಮ್ಮೆ ಪ್ರಗತಿ ಪರಿಶೀಲನಾ ಸಭೆ ನಡೆಸಿದನ್ನು ಬಿಟ್ಟರೇ, ಬೇರೆ ಸಂದರ್ಭಗಳಲ್ಲಿ ಜನರ ಕಷ್ಟ-ಕಾರ್ಪಣ್ಯಗಳನ್ನು ಆಲಿಸಿಯೇ ಇಲ್ಲ. ಹೀಗಾಗಿ ಜನರಲ್ಲಿ ಸಹಜವಾಗಿಯೇ ಜಿಲ್ಲೆಗೆ ಉಸ್ತುವಾರಿ ಮಂತ್ರಿ ಇದ್ದಾರೋ, ಇಲ್ಲವೋ ಎಂಬ ಗೊಂದಲ ಮನೆ ಮಾಡಿದೆ.

       ಜನವರಿ 26ರಂದು ನಡೆದ ಗಣರಾಜ್ಯೋತ್ಸವ ಹಾಗೂ ಗಾಜಿನ ಮನೆಯಲ್ಲಿ ಆಯೋಜಿಸಿದ್ದ ಫಲಪುಷ್ಪ ಪ್ರದರ್ಶನದಲ್ಲಿ ಭಾಗವಹಿಸಿದ್ದು ಬಿಟ್ಟರೇ, ಈ ವರೆಗೂ ಜಿಲ್ಲಾ ಉಸ್ತುವಾರಿ ಸಚಿವರು ದಾವಣಗೆ ಜಿಲ್ಲೆಯ ಕಡೆಗೆ ತಲೆ ಹಾಕಿಯೂ ನೋಡಿಯೇ ಇಲ್ಲ. ಹೀಗಾಗಿ ವಿವಿಧ ಅಭಿವೃದ್ಧಿ ಕಾಮಗಾರಿಗಳಲ್ಲಿ ಲೋಪ ಸಹ ಕಂಡುಬರುತ್ತಿದೆ. ಅಲ್ಲದೇ, ಅಧಿಕಾರಿಗಳ ಲಗಾಮು ಜಿಲ್ಲಾ ಮಂತ್ರಿಗಳ ಕೈಯಲ್ಲಿ ಇಲ್ಲದೇ ಇರುವುದರಿಂದ ಮನಸೋಇಚ್ಛೆ ಅಧಿಕಾರಿಗಳು ನಡೆದುಕೊಳ್ಳುತ್ತಿದ್ದು, ಅಭಿವೃದ್ಧಿ ಕಾಮಗಾರಿಗಳಿಗೂ ಗರ ಬಡಿದಂತಾಗಿದೆ.

        ಅವರದೇ ಪಕ್ಷದ ಜೆಡಿಎಸ್ ಮುಖಂಡ ಜೆ.ಅಮಾನುಲ್ಲಾ ಖಾನ್ ಹೇಳುವಂತೆ ಸ್ಮಾರ್ಟ್‍ಸಿಟಿ ಯೋಜನೆಯ ಕಾಮಗಾರಿಗಳು ಕಳಪೆ ಗುಣಮಟ್ಟ ಹಾಗೂ ಅವೈಜ್ಞಾನಿಕತೆಯಿಂದ ಕೂಡಿದ್ದು, ಇದಕ್ಕೆ ಜನಪ್ರತಿನಿಧಿಗಳಲ್ಲಿರುವ ಇಚ್ಛಾಸಕ್ತಿಯ ಕೊರತೆಯು ಕಾರಣವಾಗಿದೆ ಎಂದಿದ್ದಾರೆ. ಇದಕ್ಕೆ ಜಿಲ್ಲಾ ಮಂತ್ರಿಗಳು ಸಹ ಹೊರತಾಗಿಲ್ಲ ಎಂಬುದು ಸಾರ್ವಜನಿಕರ ವಾದವಾಗಿದೆ.

         ಜಿಲ್ಲೆಯಲ್ಲಿ ಈ ಬಾರಿಯೂ ಬರದ ಛಾಯೆ ಮುಂದುವರೆದಿದ್ದು, ಜನ-ಜಾನುವಾರುಗಳಿಗೆ ಕುಡಿಯಲು ನೀರಿಲ್ಲದ್ದ ಪರಿಸ್ಥಿತಿ ನಿರ್ಮಾಣವಾಗಿದೆ. ಅಲ್ಲದೇ, ಪಶುಗಳಿಗೆ ಮೇವಿನ ಕೊರತೆಯೂ ಇದೆ. ಆದರೂ ಸಹ ಜಿಲ್ಲಾಮಂತ್ರಿ ಜಿಲ್ಲೆಯ ಜನರ ಸಂಕಟಕ್ಕೆ ಸ್ಪಂದಿಸುತ್ತಿಲ್ಲ. ಈಗೇನೋ ಲೋಕಸಭಾ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿದೆ. ಆದರೆ, ನೀತಿ ಸಂಹಿತೆ ಜಾರಿಗೂ ಮುನ್ನವೂ ಜಿಲ್ಲಾ ಮಂತ್ರಿ ಜಿಲ್ಲೆಯನ್ನು ಸಂಪೂರ್ಣ ಕಡೆಗಣಿಸಿಕೊಂಡು ಬಂದಿದ್ದಾರೆ.

          ಇದನ್ನು ಪ್ರಶ್ನಿಸಿದ ಮಾಧ್ಯಮ ಪ್ರತಿನಿಧಿಗಳಿಗೆ ನನಗೆ ಇಲ್ಲಿ ವಾಸಕ್ಕೆ ಇರಲು ಮನೆ ಇಲ್ಲ. ನೀವು ಮನೆ ಮಾಡಿಕೊಡುತ್ತೀರಾ ಎಂಬುದಾಗಿ, ಮರು ಪ್ರಶ್ನೆ ಹಾಕುವ ಮೂಲಕ ಜನರ ಟೀಕೆಗೂ ಸಹ ಗುರಿಯಾಗಿದ್ದರು.

           ಚುನಾವಣಾ ನೀತಿ ಸಂಹಿತೆ ಜಾರಿ ಇರುವುದರಿಂದ ಹೊಸ ಕಾಮಗಾರಿಗಳ ಉದ್ಘಾಟನೆ, ಶಂಕುಸ್ಥಾಪನೆ ನೆರವೇರಿಸುವಂತಿಲ್ಲ. ಆದರೆ, ಅಧಿಕಾರಿಗಳನ್ನು ವಿಶ್ವಾಸಕ್ಕೆ ಪಡೆದು ಈಗಾಗಲೇ ಚಾಲ್ತಿಯಲ್ಲಿರುವ ಕಾಮಗಾರಿಗಳನ್ನು ಹಾಗೂ ಜನ-ಜಾನುವಾರಿಗೆ ಸಮರ್ಪಕ ನೀರು ಪೂರೈಸಲು, ಮೇವಿನ ಕೊರತೆ ಎದುರಿಸುತ್ತಿರುವ ಪಶುಗಳಿಗೆ ಮೇವು ತಲುಪಿಸಲು, ನರೇಗಾದಡಿ ಕೆಲಸ ಮಾಡಿರುವ ಕಾರ್ಮಿಕರಿಗೆ ಕೂಲಿ ಕೊಡಿಸಲು ಏನು ಸಮಸ್ಯೆ? ಎಂದು ಪ್ರಶ್ನಿಸಿರುವ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯಾಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ್, ಜಿಲ್ಲಾ ಮಂತ್ರಿಗಳ ಬಗ್ಗೆ ಮಾತನಾಡಲಿಕ್ಕೆ ಪದಗಳೇ ಹೊಳೆಯುತ್ತಿಲ್ಲ. ಜನರ ಸಂಕಷ್ಟಗಳಿಗೆ ಸ್ಪಂದಿಸದಿರುವವರು ಕಾಟಾಚಾರಕ್ಕಾಗಿ ಏಕೆ ಮಂತ್ರಿಯಾಗಿರಬೇಕೆಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

         ಈಗಾಗಲೇ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಎರಡು ಬಾರಿ ಜಿಲ್ಲೆಗೆ ಭೇಟಿ ನೀಡಿ, ಅಧಿಕಾರಿಗಳ ಪರಿಶೀಲನಾ ಸಭೆ ನಡೆಸಿ, ಗೋಶಾಲೆ ತೆರೆಯಲು, ಸಮರ್ಪಕ ನೀರು ಪೂರೈಸಲು ಸೂಚಿಸಿ ಹೋಗಿದ್ದಾರೆ. ಆದರೆ, ಜಿಲ್ಲಾ ಮಂತ್ರಿಗಳು ಮಾತ್ರ ತುಮಕೂರು ಲೋಕಸಭಾ ಕ್ಷೇತ್ರದಿಂದ ದೊಡ್ಡ ಗೌಡರನ್ನು ಗೆಲ್ಲಿಸಿಕೊಂಡು ಬರಲು ಚುನಾವಣೆಯಲ್ಲಿಯೇ ಮುಳುಗಿ ಹೋಗಿದ್ದಾರೆಂದು ಸಿಪಿಐ ನಾಯಕ ಹೆಚ್.ಕೆ.ರಾಮಚಂದ್ರಪ್ಪ ಲೇವಡಿ ಮಾಡಿದ್ದಾರೆ.

         ಚುನಾವಣಾ ನೀತಿ ಸಂಹಿತೆ ಜಾರಿ ಯಾಗುವದಕ್ಕೂ ಮುಂಚೆಯಿಂದಲೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಆರ್.ಶ್ರೀನಿವಾಸ್ ಜಿಲ್ಲೆಯನ್ನು ಸಂಪೂರ್ಣ ಕಡೆಗಣಿಸಿಕೊಂಡಿಯೇ ಬಂದಿದ್ದಾರೆ. ಇನ್ನೂ ಮುಂದೆ ಚುನಾವಣಾ ನೀತಿ ಸಂಹಿತೆ ಮುಗಿದ ನಂತರವಾದರೂ ಜಿಲ್ಲಾ ಮಂತ್ರಿಗಳು ಜಿಲ್ಲೆಗೆ ಬಂದು ಜನರ ಸಮಸ್ಯೆಗಳಿಗೆ ಪರಿಹಾರ ಕಂಡು ಹಿಡಿಯಲು ಪ್ರಾಮಾಣಿಕ ಪ್ರಯತ್ನ ಮಾಡಲಿ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link
Powered by Social Snap