ತಿಪಟೂರು
ಬೈಪಾಸ್ನ ರೈತರ ಸಮಸ್ಯೆಗಳಿಗೆ ಜನಪ್ರತಿನಿಧಿಗಳಾಗಲಿ ಆಧಿಕಾರಿಗಳಾಗಲಿ ಸ್ಪಂದಿಸುತ್ತಿಲ್ಲ ಎಂದು ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ತಿಪಟೂರು ಬೈಪಾಸ್ ಸಂತ್ರಸ್ತರು ಅಹೋರಾತ್ರಿ ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿದ್ದು, ಇಷ್ಟು ದಿನಗಳ ಒತ್ತಡದಿಂದ ಮಣಿದ ಅಧಿಕಾರಿಗಳು 18ನೇ ದಿನ ಸ್ಥಳಕ್ಕೆ ವಿಶೇಷ ಭೂಸ್ವಾಧೀನಾಧಿಕಾರಿ ಬಂದು ರೈತರ ಮನವೊಲಿಸಿ ಜಮೀನಿನಲ್ಲಿ ಜಂಟಿ ಸರ್ವೆ ಮಾಡಲು ಆರಂಭಿಸಿದ್ದಾರೆ.
ತಾಲ್ಲೂಕಿನ ಹುಚ್ಚಗೊಂಡನಹಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ತುಮಕೂರು- ಹೊನ್ನಾವರ ನಡುವಿನ ರಾಷ್ಟ್ರೀಯ ಹೆದ್ದಾರಿ- 206ಅನ್ನು ಚತುಷ್ಪಥ ರಸ್ತೆಯಾಗಿ ಅಭಿವೃದ್ಧಿಪಡಿಸಲು ಭೂಸ್ವಾಧೀನ ಮಾಡಿಕೊಂಡ ರೈತರಿಗೆ ನ್ಯಾಯಯುತ ಬೆಲೆ ನೀಡದೆ, ಮಾತುಕತೆಗಳಿಗೆ ಬದ್ಧವಾಗಿರದೆ ಪೊಲೀಸ್ ಸರ್ಪಗಾವಲಿನಲ್ಲಿ ರೈತರನ್ನು ಬೆದರಿಸಿ ಕಾಮಗಾರಿ ನಡೆಸಲು ಪ್ರಯತ್ನಿಸಲಾಗುತ್ತಿತ್ತು.
ವಿಶೇಷ ಭೂಸ್ವಾಧೀನಾಧಿಕಾರಿ ಎನ್.ಸುಶೀಲಮ್ಮ ಮಾತನಾಡಿ, ಇದುವರೆಗಿನ ಮೊದಲನೆ ಅವಾರ್ಡ್ ನೊಟೀಸ್ ಬಿಟ್ಟು ಹೋಗಿರುವುದನ್ನು ಸೇರಿಸಿ ಪೂರಕ ಅವಾರ್ಡ್ ಕೊಡಲಾಗುವುದು 1ನೇ ಮತ್ತು 2ನೇ ಶೆಡ್ಯೂಲ್ನ ಎಲ್ಲಾ ಪರಿಹಾರಗಳ ಮೊತ್ತಗಳನ್ನು ರೈತರಿಗೆ ನೀಡಿದ ನಂತರವೇ ಕಾಮಗಾರಿ ಆರಂಭಿಸಲಾಗುವುದು ಎಂದು ಭರವಸೆ ನೀಡಿದರು. ಭೂಮಿ ಬೆಲೆಯ ಏರಿಕೆಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಜೋತೆ ಸಭೆ ನಡೆಸಲಾಗುವುದು, ಹುಚ್ಚಗೊಂಡನಹಳ್ಳಿಯಲ್ಲಿ 25 ಸರ್ವೆ ನಂಬರ್ಗಳಿದ್ದು, ಒಟ್ಟು 7.7 ಹೆಕ್ಟೇರ್ ಜಾಗವನ್ನು ಭೂಸ್ವಾಧೀನ ಮಾಡಿಕೊಳ್ಳಲಾಗುತ್ತದೆ.
ರೈತರ ಬಹುದಿನದ ಬೇಡಿಕೆಯಾದ ಜಂಟಿ ಸರ್ವೆಯನ್ನು ಪ್ರಾರಂಭಿಸಿದ್ದು, ರೈತರ ಸಮ್ಮುಖದಲ್ಲಿಯೇ ಇನ್ನೂ 3 ದಿನ ಸರ್ವೆ ಮಾಡಲಾಗುವುದು. ಸದ್ಯಕ್ಕೆ ಪರಿಹಾರದ ಮೊತ್ತದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಜಮೀನಿನಲ್ಲಿ ಇಟ್ಟಿರುವ ವಸ್ತುಗಳು, ಮರ-ಗಿಡಗಳನ್ನು ಸೇರಿಸಿಕೊಂಡು ಸರ್ವೆ ಮಾಡಲಾಗುವುದು ಎಂದರು.
ಸರ್ವೆ ಸಮಸ್ಯೆ ಬಗೆಹರಿಸಲು ಮನವಿ
ಹುಚ್ಚಗೊಂಡನಹಳ್ಳಿ ಸರ್ವೆ ನಂ. 127 ಅನ್ನು 1992ರಲ್ಲಿ ಬಗರ್ಹುಕುಂನಲ್ಲಿ ರೈತರಿಗೆ ಮಂಜೂರು ಮಾಡಿಕೊಡಲಾಗಿತ್ತು. ಆದರೆ, ಅದನ್ನು ದುರಸ್ತು ಮಾಡದೇ ತಾಲ್ಲೂಕು ಆಡಳಿತ ಕಂದಾಯ ವಿಭಾಗವು ರೈತರಿಗೆ ಸಮಸ್ಯೆ ತಂದೊಡ್ಡಿತ್ತು. ಆ ಸರ್ವೆ ನಂಬರ್ನಲ್ಲಿ ಒಟ್ಟು 15 ಜನ ಸಾಗುವಳಿ ಮಾಡುತ್ತಿದ್ದು, 11 ಜನರಿಗೆ ಮಾತ್ರ ದಾಖಲೆ ಇದ್ದು ಉಳಿದ 4 ಜನರಿಗೆ ಯಾವುದೇ ದಾಖಲೆ ಇಲ್ಲ. ಅದನ್ನು ಪರಿಗಣಿಸಲು ರೈತರು ಒತ್ತಾಯಿಸುತ್ತಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
