ಹರಪನಹಳ್ಳಿ:
ಮನುಷ್ಯ ಒತ್ತಡದ ಜೀವನದಲ್ಲಿ ಬದುಕುತ್ತಿದ್ದು, ನೆಮ್ಮದಿಗಾಗಿ ಪರಿತಪಿಸುತ್ತಿದ್ದಾನೆ. ಸಮಸ್ಯೆಗಳ ಸುಳಿಗೆ ಸಿಲುಕಿದಾಗ ಅನುಭವಿಸುವ ನೋವು, ಸಂಕಟ ತಾಳಲಾದರೇ ಜೀವಕ್ಕೆ ತಂದುಕೊಳ್ಳುತ್ತಾನೆ. ಇವುಗಳಿಂದ ಮುಕ್ತಿಹೊಂದಿ ಸುಂದರ, ನೆಮ್ಮದಿಯ ಜೀವನಕ್ಕಾಗಿ ರಾಜಯೋಗ ಸಂಜೀವಿನಿಯಾಗಿದೆ ಎಂದು ತೆಗ್ಗಿನಮಠದ ಶ್ರೀ ವರಸದ್ಯೋಜಾತ ಶ್ರಿಗಳು ಹೇಳಿದರು.
ತಾಲ್ಲೂಕಿನ ಚಿಗಟೇರಿ ಗ್ರಾಮದಲ್ಲಿ ಸೋಮವಾರದಿಂದ ಆರಂಭಗೊಂಡ ಶ್ರೀ ನಾರದಮುನಿ ಜಾತ್ರೋತ್ಸವ ಪ್ರಯುಕ್ತ ಹರಪನಹಳ್ಳಿ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಿಂದ ಐದು ದಿನಗಳ `ಜ್ಯೊತೀರ್ಲಿಂಗ ದಿವ್ಯದರ್ಶನ’ ಉಚಿತ ಪ್ರದರ್ಶನ ಮತ್ತು ಮಾಹಿತಿ ಕೇಂದ್ರ ಉದ್ಘಾಟಿಸಿ ಅವರು ಮಾತನಾಡಿದರು.
ಹರಪನಹಳ್ಳಿ ಈಶ್ವರಿವಿಶ್ವವಿದ್ಯಾಲಯದ ಬ್ರಹ್ಮಕುಮಾರಿ ಸುಮಂಗಲ, `ಜಾತ್ರೆ ಪ್ರಯುಕ್ತ ಚಿಗಟೇರಿ ಗ್ರಾಮದಲ್ಲಿ ದ್ವಾದಶ ಜ್ಯೋತಿರ್ಲಿಂಗ ದರ್ಶನದ ವ್ಯವಸ್ಥೆ ಮಾಡಲಾಗಿದೆ. ಇಲ್ಲಿ ಯಾವುದೇ ಶುಲ್ಕ ಇರುವುದಿಲ್ಲ. ಜ್ಯೋತಿರ್ಬಿಂದು ಸ್ವರೂಪ ಪರಮಪಿತ ಪರಮಾತ್ಮ ಶಿವನು ಭೂಮಿಯ ಮೇಲೆ ಅವತರಿಸಿದ ಬಗೆ ತಿಳಿದುಕೊಳ್ಳುವಂತೆ’ ಸಲಹೆ ನೀಡಿದರು. ಬೆಂಗಳೂರು ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದ ಬ್ರಹ್ಮಕುಮಾರ ಮಂಜುನಾಥ್, ವಿಷ್ಣು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.