ರೈತ ಹೋರಾಟ ಬೆಂಬಲಿಸಿ ಜೆಸಿಟಿಯು ಪ್ರತಿಭಟನೆ

ದಾವಣಗೆರೆ:

       ರೈತರ ಸಮಸ್ಯೆಗಳನ್ನು ಚರ್ಚಿಸಿ, ಪರಿಹರಿಸಲು ಸಂಸತ್ತಿನ ವಿಶೇಷ ಅಧಿವೇಶನ ಕರೆಯಬೇಕೆಂದು ಒತ್ತಾಯಿಸಿ, ದೆಹಲಿಯಲ್ಲಿ ಅಖಿಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿಯ ನೇತೃತ್ವದಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆಯನ್ನು ಬೆಂಬಲಿಸಿ, ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಕಾರ್ಯಕರ್ತರು ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.

       ನಗರದ ಜಯದೇವ ವೃತ್ತದಲ್ಲಿ ಜಮಾಯಿಸಿದ ಎಐಟಿಯುಸಿ, ಸಿಐಟಿಯು ಹಾಗೂ ಎಐಯುಟಿಯುಸಿ ಕಾರ್ಯಕರ್ತರು, ಕೆಂದ್ರ ಸರ್ಕಾರದ ರೈತ-ಕಾಮಿರ್ಕ ವಿರೋಧಿ ನೀತಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿ, ಎಸಿ ಕಚೇರಿಯ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ, ಉಪ ವಿಭಾಗಾಧಿಕಾರಿಗಳ ಮೂಲಕ ರಾಷ್ಟ್ರಪತಿ ಅವರಿಗೆ ಮನವಿ ಸಲ್ಲಿಸಿದರು.

       ಈ ಸಂದರ್ಭದಲ್ಲಿ ಮಾತನಾಡಿದ ಸಿಐಟಿಯು ಮುಖಂಡ ಕೆ.ಲಕ್ಷ್ಮೀನಾರಾಯಣ್ ಭಟ್, ಕೇಂದ್ರ ಸರ್ಕಾರ ಫಸಲ್ ಬಿಮಾ ಯೋಜನೆ ಜಾರಿಗೆ ತಂದಿದ್ದು, ಇದರಿಂದ ರೈತರಿಗೆ ಯಾವುದೇ ಲಾಭವಿಲ್ಲ. ರಿಲಾಯನ್ಸ್ ವಿಮಾ ಕಂಪೆನಿ ಸೇರಿದಂತೆ ಇತರೆ ಖಾಸಗಿ ವಿಮಾ ಕಂಪನಿಗಳಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಈ ಯೋಜನೆಯನ್ನು ಜಾರಿಗೆ ತಂದು ರೈತರನ್ನು ವಂಚಿಸುತ್ತಿದೆ ಎಂದು ಆರೋಪಿಸಿದರು.

          ಬಿಜೆಪಿ ಕಳೆದ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ರೈತರ ಆದಾಯ ದುಪ್ಪಟ್ಟು ಮಾಡಲಿಕ್ಕಾಗಿ ಸ್ವಾಮಿನಾಥನ್ ವರದಿಯ ಶಿಫಾರಸುಗಳನ್ನು ಜಾರಿಗೆ ತಂದು, ರೈತರು ಬೆಳೆ ಬೆಳೆಯಲು ವಿನಿಯೋಗಿಸಿರುವ ಮೊತ್ತದ ಜೊತೆಗೆ ಶೇ.50 ರಷ್ಟು ಲಾಭಾಂಶ ಸೇರಿಸಿ ವೈಜ್ಞಾನಿಕವಾಗಿ ಬೆಳೆ ನಿಗದಿ ಮಾಡುವುದಾಗಿ ಘೋಷಿಸಿತ್ತು. ಆದರೆ, ಈ ವರೆಗೂ ಈ ಬಗ್ಗೆ ಪ್ರಧಾನಿ ಮೋದಿ ಚಕಾರ ಎತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

         ಎಐಟಿಯುಸಿ ಮುಖಂಡ ಆವರಗೆರೆ ಉಮೇಶ್ ಮಾತನಾಡಿ, ಮಹಾರಾಷ್ಟ್ರದ ಸಂಸದ ರಾಜು ಶೆಟ್ಟಿ, ಕೇರಳದ ಸಂಸದ ಕೆ.ಕೆ.ರಾಘೇಶ್ ಅವರುಗಳು ರೈತರ ಸಮಸ್ಯೆಗಳ ಬಗ್ಗೆ ಚರ್ಚಿಸಿ, ಖಾಸಗಿ ಮಸೂದೆ ಮಂಡಿಸಲು ಸಂಸತ್‍ನ ವಿಶೇಷ ಅಧಿವೇಶನ ಕರೆಯಬೇಕೆಂದು ಒತ್ತಾಯಿಸಿದ್ದು, ತಕ್ಷಣವೇ ಈ ನಿಟ್ಟಿನಲ್ಲಿ ಗಮನ ಹರಿಸಿ ವಿಶೇಷ ಅಧಿವೇಶನ ಕರೆದು ರೈತರ ಸಮಸ್ಯೆಗಳಿಗೆ ಪರಿಹಾರ ಕಂಡು ಹಿಡಿಯಬೇಕೆಂದು ಒತ್ತಾಯಿಸಿದರು

         ಎಐಯುಟಿಯುಸಿ ಮುಖಂಡ ಕುಕ್ಕುವಾಡ ಮಂಜುನಾಥ್ ಮಾತನಾಡಿ, ರೈತರ ಬೆಳೆಗಳಿಗೆ ಶೇ.50 ರಷ್ಟು ಲಾಭಾಂಶ ದೊರೆಯುವ ನಿಟ್ಟಿನಲ್ಲಿ ಬೆಲೆ ನಿಗದಿ ಮಾಡಲು ಕೇಂದ್ರ ಸರ್ಕಾರ ತಕ್ಷಣವೇ ಡಾ.ಸ್ವಾಮಿನಾಥನ್ ವರದಿ ಜಾರಿಗೆ ತರಬೇಕು. ರೈತರಿಗೆ ಬಡ್ಡಿ ರಹಿತ ಸಾಲ, ಇಲ್ಲವೇ, ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡಬೇಕು. ಪ್ರಕೃತಿ ವಿಕೋಪ, ಬೆಲೆ ಕುಸಿತ, ಹುಳು ಬಾಧೆಯಿಂದಾದ ಸಾಲ, ಖಾಸಗಿ ರಂಗದ ಸಾಲ ಮನ್ನಾ ಮಾಡಲು ಋಣಮುಕ್ತ ಕಾಯ್ದೆ ಜಾರಿಗೆ ತರಬೇಕೆಂದು ಆಗ್ರಹಿಸಿದರು.
     

         ಪ್ರತಿಭಟನೆಯಲ್ಲಿ ಜೆಸಿಟಿಯು ಮುಖಂಡರುಗಳಾದ ಆವರಗೆರೆ ಉಮೇಶ್, ಈ.ಶ್ರೀನಿವಾಸ್ ಬಾಡಾಕ್ರಾಸ್, ತಿಪ್ಪೇಸ್ವಾಮಿ, ಆನಂದರಾಜ್, ಆವರಗೆರೆ ವಾಸು, ಐರಣಿ ಚಂದ್ರು, ಎನ್.ಟಿ.ಬಸವರಾಜ್, ಸೈಯದ್ ಖಾಜಾಪೀರ್, ಹೆಚ್.ಪಿ.ಉಮಾಪತಿ, ಸರೋಜ, ಚಮನ್‍ಸಾಬ್, ಗದಿಗೇಶ್ ಪಾಳೇದ್, ಕೆ.ಶಿವಕುಮಾರ್, ಶಿವಕುಮಾರ್, ಸಿ.ರಮೇಶ್, ಮೊಹಮ್ಮದ್ ರಫೀಕ್, ಎಸ್.ಜಯಪ್ಪ, ಎಸ್.ಶೇಖರ್ ನಾಯ್ಕ, ಎಲ್.ರಮೇಶ್ ನಾಯ್ಕ, ಪಿ.ಶಿವಕುಮಾರ್ ಮತ್ತಿತರರು ಭಾಗವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link