ಜು.1ಕ್ಕೆ ಸಾಗುವಳಿದಾರರ ಹಕ್ಕೋತ್ತಾಯ ಸಮಾವೇಶ

ಚಿತ್ರದುರ್ಗ:

       ಅರಣ್ಯ ಭೂಮಿ ಬಗರ್‍ಹುಕುಂ ಹಾಗೂ ಕಂದಾಯ ಭೂಮಿ ಸಾಗುವಳಿ ಮಾಡುತ್ತಿರುವವರಿಗೆ ಇನ್ನು ಹಕ್ಕುಪತ್ರಗಳನ್ನು ನೀಡದೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸತಾಯಿಸುತ್ತಿರುವುದರ ವಿರುದ್ದ ಕಳೆದ ಹನ್ನೆರಡು ದಿನಗಳಿಂದಲೂ ಜಿಲ್ಲಾಧಿಕಾರಿ ಕಚೇರಿ ವೃತ್ತದಲ್ಲಿ ಧರಣಿ ನಡೆಸುತ್ತಿರುವ ಸಾಗುವಳಿದಾರರ ಹಕ್ಕೋತ್ತಾಯ ಸಮಾವೇಶವನ್ನು ಜು.1 ರಂದು ಬೆಳಿಗ್ಗೆ 11 ಕ್ಕೆ ಜಿಲ್ಲಾಧಿಕಾರಿ ಕಚೇರಿ ವೃತ್ತದಲ್ಲಿ ನಡೆಸಲಾಗುವುದೆಂದು ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ರಾಜ್ಯ ಸಂಚಾಲನಾ ಸಮಿತಿ ಸದಸ್ಯ ಪ್ರಜಾಶಕ್ತಿ ಬೋರಯ್ಯ ತಿಳಿಸಿದರು.

     ಪತ್ರಕರ್ತರ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಅರಣ್ಯ ಹಕ್ಕು ಕಾಯ್ದೆಯಡಿಯಲ್ಲಿ ಹಕ್ಕುಪತ್ರಕ್ಕಾಗಿ 5573 ಅರ್ಜಿಗಳು ಸಲ್ಲಿಕೆಯಾಗಿದ್ದು, ಈ ಪೈಕಿ 358 ಕುಟುಂಬಗಳಿಗೆ ಮಾತ್ರ ಹಕ್ಕುಪತ್ರ ದೊರಕಿದೆ. 614 ಅರ್ಜಿಗಳನ್ನು ಕಾರಣವಿಲ್ಲದೆ ಬಾಕಿ ಉಳಿಸಿಕೊಳ್ಳಲಾಗಿದೆ. ಅರಣ್ಯ ಹಕ್ಕು ಕಾಯ್ದೆಯನ್ನು ಸಂಪೂರ್ಣವಾಗಿ ಉಲ್ಲಂಘಿಸಿರುವುದರಿಂದ 4612 ಅರ್ಜಿಗಳು ಗ್ರಾಮ ಲೆಕ್ಕಾಧಿಕಾರಿ, ಕಂದಾಯ ನಿರೀಕ್ಷಕರು, ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳಿಂದ ತಿರಸ್ಕøತಗೊಂಡಿವೆ. ಇದರಿಂದ ಅರಣ್ಯ ಭೂಮಿಯಲ್ಲಿ ಸಾಗುವಳಿ ಮಾಡುತ್ತಿರುವ ಸುಮಾರು ಹತ್ತು ಸಾವಿರ ಕುಟುಂಬಗಳು ಅರ್ಜಿ ಸಲ್ಲಿಸುವ ಅವಕಾಶದಿಂದ ವಂಚಿತವಾಗಿವೆ ಎಂದು ಆಪಾದಿಸಿದರು.

     ಕಂದಾಯ ಭೂಮಿ ಸಾಗುವಳಿದಾರರು 1990-91 ನೇ ಸಾಲಿನಲ್ಲಿ ಫಾರಂ ನಂ.50 ರಲ್ಲಿ 52222 ಅರ್ಜಿಗಳನ್ನು ಸಲ್ಲಿಸಿದ್ದಾರೆ. ಫಾರಂ ನಂ.53 ರಲ್ಲಿ 1998-99 ನೇ ಸಾಲಿನಲ್ಲಿ 60742 ಅರ್ಜಿಗಳು ಸಲ್ಲಿಕೆಯಾಗಿದ್ದು, ಒಟ್ಟು ಒಂದು ಲಕ್ಷ ಹನ್ನೆರಡು ಸಾವಿರದ 964 ಅರ್ಜಿಗಳಲ್ಲಿ 40842 ಅರ್ಜಿಗಳನ್ನು ಪರಿಶೀಲಿಸದೆ ತಿರಸ್ಕರಿಸಲಾಗಿದೆ. 6800 ಅರ್ಜಿದಾರರಿಗೆ ಭೂಮಿ ಮಂಜೂರಾಗಿದ್ದು, ಸಾಗುವಳಿ ಚೀಟಿಯನ್ನು ವಿತರಿಸಿಲ್ಲ.

      ಹನ್ನೆರಡು ಸಾವಿರ ಸಾಗುವಳಿದಾರರಿಗೆ ಸಾಗುವಳಿ ಚೀಟಿ ವಿತರಿಸಿದ್ದು, ಇನ್ನು ಖಾತೆ ಮಾಡಿಕೊಡದೆ ಸತಾಯಿಸುತ್ತಿದ್ದಾರೆ. 53322 ಅರ್ಜಿಗಳು ಯಾವುದೆ ಪರಿಶೀಲನೆಗೆ ಒಳಪಡದೆ ಬಾಕಿ ಉಳಿದಿದೆ. ಒಟ್ಟಾರೆ ಜಿಲ್ಲೆಯಲ್ಲಿ ಅರಣ್ಯ ಮತ್ತು ಕಂದಾಯ ಭೂಮಿಯಲ್ಲಿ ಒಂದು ಲಕ್ಷ ಅರ್ಜಿಗಳನ್ನು ಪೆಂಡಿಂಗ್ ಇಡಲಾಗಿದೆ. ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಂದ ಇಲ್ಲಿಯವರೆಗೂ ಸಾಂತ್ವನ ಬಿಟ್ಟರೆ ಸಾಗುವಳಿದಾರರಿಗೆ ಯಾವ ಪ್ರಯೋಜನವೂ ಆಗಿಲ್ಲ.

     ಎಲ್ಲಾ ಅರ್ಜಿಗಳನ್ನು ಮರುಪರಿಶೀಲಿಸುವಂತೆ ಸುಪ್ರೀಂಕೋರ್ಟ್ ಸೂಚಿಸಿದ್ದರೂ ಶೇ.2 ರಷ್ಟು ಅರ್ಜಿಗಳು ಪರಿಶೀಲನೆಯಾಗಿಲ್ಲ. ಚಳುವಳಿಯನ್ನು ತೀವ್ರಗೊಳಿಸುವುದಕ್ಕಾಗಿ ಜು.1 ರಂದು ಹಮ್ಮಿಕೊಂಡಿರುವ ಹಕ್ಕೊತ್ತಾಯ ಸಮಾವೇಶಕ್ಕೆ ಹಿರಿಯ ಸ್ವಾತಂತ್ರ ಹೋರಾಟಗಾರರಾದ ಹೆಚ್.ಎಸ್.ದೊರೆಸ್ವಾಮಿ ಆಗಮಿಸಲಿದ್ದಾರೆ. ಜಿಲ್ಲೆಯ ಎಲ್ಲಾ ಶಾಸಕರು, ಸಂಸದರನ್ನು ಆಹ್ವಾನಿಸಲಾಗಿದೆ ಎಂದು ತಿಳಿಸಿದರು.

        ರಾಜ್ಯ ಸಂಚಲನಾ ಸಮಿತಿ ಸದಸ್ಯ ಕುಮಾರ್ ಸಮತಳ ಮಾತನಾಡಿ ಭೂಮಿ ವಸತಿ ಹಕ್ಕೊತ್ತಾಯಕ್ಕಾಗಿ ಹಲವು ದಶಕಗಳ ಹೋರಾಟಗಳನ್ನು ರಾಜಕಾರಣಿಗಳು, ಅಧಿಕಾರಿಗಳು ಗಂಭೀರವಾಗಿ ತೆಗೆದುಕೊಳ್ಳದ ಕಾರಣ ಸಮಸ್ಯೆ ಇನ್ನು ಉಲ್ಬಣಗೊಳ್ಳುತ್ತಿದೆ. ಉನ್ನತ ಮಟ್ಟದ ಸಮಿತಿ ರಚಿಸಲಾಗಿದೆ. ಸಾಗುವಳಿದಾರರಿಗೆ ನ್ಯಾಯ ಸಿಕ್ಕಿಲ್ಲವೆಂದರೆ ನಮಗೆ ಸಮಿತಿ ಅಗತ್ಯವಿಲ್ಲ. ಸಮಿತಿಯೊಳಗೆ ನಾವು ಇರಬೇಕೋ ಬೇಡವೋ ಎನ್ನುವುದನ್ನು ಜು.1 ರಂದು ನಡೆಯುವ ಸಮಾವೇಶದಲ್ಲಿ ತೀರ್ಮಾನಿಸಲಾಗುವುದು ಎಂದರು.

      ಕಡಬನಕಟ್ಟೆಯಲ್ಲಿ ಭೂಮಿ ಸಾಗುವಳಿ ಪತ್ರಕ್ಕಾಗಿ ಅರ್ಜಿ ಸಲ್ಲಿಸಿರುವ 250 ಮಂದಿಯಲ್ಲಿ 242 ಜನ ಈಗಾಗಲೆ ಮೃತರಾಗಿದ್ದಾರೆ. ಅವರ ವಾರಸುದಾರರು ಕೇವಲ ಎಂಟು ಮಂದಿ ಹಕ್ಕುಪತ್ರಕ್ಕಾಗಿ ಅರ್ಜಿ ಹಾಕಿದ್ದಾರೆ. ಹೀಗಾದರೆ ಹಕ್ಕುಪತ್ರಗಳನ್ನು ಯಾರಿಗೆ ನೀಡಬೇಕು. ಆಳುವವರು ಪಕ್ಷಪಾತ, ತಾರತಮ್ಯ ಮಾಡುತ್ತಿದ್ದಾರೆ ಎಂದು ದೂರಿದರು.

        ಕರಿಯಪ್ಪ ಈಚಘಟ್ಟ ಮಾತನಾಡುತ್ತ ಬಂಡವಾಳಶಾಹಿಗಳಿಗೆ, ಉದ್ಯಮಿಗಳಿಗೆ ಸರ್ಕಾರ ಬೇಕಾಬಿಟ್ಟಿಯಾಗಿ ಭೂಮಿಯನ್ನು ಪರಭಾರೆ ಮಾಡಿಕೊಡುತ್ತಿದೆ. ಹೊಟ್ಟೆಪಾಡಿಗಾಗಿ ಹಲವಾರು ವರ್ಷಗಳಿಂದಲೂ ಭೂಮಿ ಸಾಗುವಳಿ ಮಾಡುತ್ತಿರುವ ಬಡವರಿಗೆ ಹಕ್ಕುಪತ್ರ ಕೊಡಲು ಸರ್ಕಾರಕ್ಕೆ ಇಚ್ಚೆಯಿಲ್ಲ. ಕೆಲವು ಕಡೆ ಗೋಮಾಳಗಳನ್ನು ಬಲಾಢ್ಯರು ಒತ್ತುವರಿ ಮಾಡಿಕೊಂಡಿದ್ದಾರೆ. ಹಾಗಾಗಿ ಭೂಮಿ ಹಕ್ಕು ಸಾಗುವಳಿ ಪತ್ರ ನೀಡುವತನಕ ಧರಣಿ ಸ್ಥಳದಿಂದ ಕದಲುವುದಿಲ್ಲವೆಂದು ಬೆದರಿಕೆ ಹಾಕಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link