ದಾವಣಗೆರೆ:
ರೈತರಿಗೆ ಮರಣ ಶಾಸನವಾಗಿರುವ ಭೂಸ್ವಾಧೀನ ತಿದ್ದುಪಡಿ ಕಾಯ್ದೆಯನ್ನು ಕೈಬಿಡಬೇಕು. ಜಿಂದಾಲ್‍ಗೆ ಯಾವುದೇ ಕಾರಣಕ್ಕೂ ಭೂಮಿ ಪರಭಾರೆ ಮಾಡಬಾರದು ಹಾಗೂ ಸಾರ್ಕರ ಮೊದಲು ಹೇಳಿದಂತೆ, ರೈತರ 46 ಕೋಟಿ ರೂ. ಸಾಲ ಮನ್ನಾ ಮಾಡಬೇಕೆಂದು ಒತ್ತಾಯಿಸಿ ಜುಲೈ 16ರಂದು ವಿಧಾನಸೌಧಕ್ಕೆ ಮುತ್ತಿಗೆ ಹಾಕಿ, ಸರ್ಕಾರದ ಗಮನ ಸೆಳೆಯಲು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಕಾರ್ಯಕಾರಿಣಿ ಮಂಡಳಿ ಸಭೆ ನಿರ್ಧರಿಸಿದೆ.
ನಗರದ ಪಿಎಂಎಂಸಿ ಸಭಾಂಗಣದಲ್ಲಿ ಬುಧವಾರ ಸೇನೆಯ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕಾರಣಿ ಸಮಿತಿ ಸಭೆಯಲ್ಲಿ ಜುಲೈ 12ರಿಂದ ಆರಂಭವಾಗಲಿರುವ ವಿಧಾನಸಭಾ ಅಧಿವೇಶನದ ಸಂದರ್ಭದಲ್ಲಿ ರೈತರ ಬೇಡಿಕೆಗಳ ಬಗ್ಗೆ ಸರ್ಕಾರದ ಗಮನ ಸೆಳೆಯಲು ಹೋರಾಟ ತೀವ್ರ ಗೊಳಿಸಬೇಕೆಂಬ ಚರ್ಚೆ ವ್ಯಕ್ತವಾದ ಹಿನ್ನೆಲೆಯಲ್ಲಿ ಜುಲೈ 16ರಂದು ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಸಂಘ ನಿರ್ಣಯ ಕೈಗೊಂಡಿದೆ.
ಸಭೆಯಲ್ಲಿ ಮಾತನಾಡಿದ ಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್, ಜುಲೈ 12ರಿಂದ 26ರ ವರೆಗೆ ವಿಧಾನಸಭೆ ಅಧಿವೇಶನ ನಡೆಯಲಿದ್ದು, ಈ ವೇಳೆ ರೈತರ ಸಂಕಷ್ಟವನ್ನು ಸರ್ಕಾರಕ್ಕೆ ಮನವರಿಕೆ ಮಾಡಿಕೊಡಲಿಕ್ಕಾಗಿ ಹಾಗೂ ಭೂಸ್ವಾಧೀನ ಕಾಯ್ದೆ ತಿದ್ದುಪಡಿ ಮಸೂದೆ ಜಾರಿಗೆ ಯಾವುದೇ ಕಾರಣಕ್ಕೂ ಅವಕಾಶ ಮಾಡಿಕೊಡವುದಿಲ್ಲ ಎಂಬುದಾಗಿ ಸರ್ಕಾರಕ್ಕೆ ಎಚ್ಚರಿಕೆಯ ಗಂಟೆ ಬಾರಿಸಲು ಈ ಹೋರಾಟ ಹಮ್ಮಿಕೊಳ್ಳಲಾಗಿದ್ದು, ರೈತರು ಹೋರಾಟಕ್ಕೆ ಸಜ್ಜಾಗಬೇಕೆಂದು ಕರೆ ನೀಡಿದರು.
ರಾಜ್ಯದಲ್ಲಿರುವುದು ಬಹುಮತದ ಸರ್ಕಾರವಲ್ಲ. ಜಂಟಿ ಸರ್ಕಾರ ಆಗಿದೆ. ಹೀಗಾಗಿ ಎರಡು, ಮೂರು ದಿನಗಳಲ್ಲಿ ಅಧಿವೇಶನ ನಡೆಸಿ, ಕೆಲ ಮಸೂದೆಗಳನ್ನು ಅಂಗೀಕರಿಸಿ ಮನೆ ಕಡೆಗೆ ಹೋರಟರೆ, ರೈತರಿಗೆ ಸಾಕಷ್ಟು ಸಮಸ್ಯೆಯಾಗಲಿದೆ. ಅದಲ್ಲದೇ, ಪ್ರಸ್ತುತ ಶಾಸಕರ ರಾಜೀನಾಮೆ ಪ್ರಹಸನ ಹೆಚ್ಚು ಗಮನ ಸೆಳೆದಿದ್ದು, ರೈತರ ಸಮಸ್ಯೆಗಳ ಬಗ್ಗೆ ಸರ್ಕಾರ ಗಮನ ಹರಿಸದೇ ಹೋಗಬಹುದು. ಆದ್ದರಿಂದ ಸರ್ಕಾರದ ಗಮನ ರೈತರೆಡೆಗೆ ಸೆಳೆಯಲು ಚಳವಳಿಯನ್ನು ತೀವ್ರಗೊಳಿಸಬೇಕಾಗಿದೆ ಎಂದರು.
ರಾಜ್ಯ ಸರ್ಕಾರ ನೈಸ್ ಕಂಪನಿಗೆ 21 ಸಾವಿರ ಎಕರೆ ಕೃಷಿ ಭೂಮಿ ನೀಡಲು ಹಾಗೂ ಜಿಂದಾಲ್‍ಗೆ 3667 ಎಕರೆ ಭೂಮಿ ಪರಭಾರೆ ಮಾಡಲು ಮುಂದಾಗಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ. ಈ ಭೂಮಿಯನ್ನು ರಸ್ತೆ ಅಭಿವೃದ್ಧಿಗೆ ಕೊಟ್ಟರೇ ನಮ್ಮ ತಕರಾರು ಇಲ್ಲ. ಆದರೆ, ರಸ್ತೆ ಅಭಿವೃದ್ಧಿಯ ನೆಪದಲ್ಲಿ ರಿಯಲ್ ಎಸ್ಟೇಟ್ ನಡೆಸಲು ಭೂಮಿ ಕೊಡುತ್ತಿರುವುದು ಅತ್ಯಂತ ಖಂಡನೀಯವಾಗಿದೆ. ಮಣ್ಣಿನ ಮಗ ಎಂದು ಹೇಳಿಕೊಳ್ಳುವ ದೇವೇಗೌಡರು, ತಮ್ಮ ಮಗ ಕುಮಾರಸ್ವಾಮಿ ನೇತೃತ್ವದ ಸರ್ಕಾರವೇ ರೈತರಿಗೆ ನೈಸ್ ಕಂಪನಿಗೆ ಕೃಷಿ ಭೂಮಿ ಕೊಡಿಸುವ ಮೂಲಕ ದ್ರೋಹ ಎಸಗುತ್ತಿದ್ದರೂ ಏಕೆ ಮೌನ ವಹಿಸಿದ್ದಾರೆಂದು ಖಾರವಾಗಿ ಪ್ರಶ್ನಿಸಿದರು.
ಹಿಂದೆ ಯಡಿಯೂರಪ್ಪ ಸರ್ಕಾರದ ಅವಧಿಯಲ್ಲಿ ನೈಸ್ ಕಂಪನಿಗೆ ಭೂಮಿ ಕೋಡ್ತಾರೆ ಅಂತಾ ಹೇಳಿ, ಇದೇ ದೇವೇಗೌಡ ಪಾರ್ಲಿಮೆಂಟ್ ಎದುರು ಚಳವಳಿ ಮಾಡಿದ್ದರು. ಆದರೆ, ಈಗ ಅವರ ಮಗನೆ ಸಿಎಂ ಆಗಿದ್ದಾರೆ. ಈಗ ಏಕೆ ಅನ್ಯಾಯ ಮಾಡಲು ಬಿಡುತ್ತಿದ್ದಾರೆಂಬುದು ಯಕ್ಷ ಪ್ರಶ್ನೆಯಾಗಿದೆ. ಗೌಡರಿಗೆ ನಿಜವಾಗಿಯೂ ರೈತರ ಬಗ್ಗೆ ಕಾಳಜಿ ಇದ್ದರೆ, ರಾಜ್ಯ ಸರ್ಕಾರ ನೈಸ್ ಕಂಪನಿಗೆ ಭೂಮಿ ನೀಡುವ ಪ್ರಯತ್ನವನ್ನು ತಡೆಯಬೇಕೆಂದು ಒತ್ತಾಯಿಸಿದರು.
ಈಗಾಗಲೇ 11 ಸಾವಿರ ಎಕರೆ ಭೂಮಿಯಲ್ಲಿ ಕಬ್ಬಿಣ, ಸಿಮೆಂಟ್, ವಿದ್ಯುತ್ ಉತ್ಪಾದನೆಯಲ್ಲಿ ತೊಡಗಿದೆ. ಈಗ ಮತ್ತೆ ಅದೇ ಜಿಂದಾಲ್‍ಗೆ ರಾಜ್ಯ ಸರ್ಕಾರ 3667 ಎಕರೆ ಭೂಮಿಯನ್ನು ಕಡಿಮೆ ದರಕ್ಕೆ ಪರಭಾರೆ ಮಾಡಲು ಮುಂದಾಗಿರುವುದು ಸರಿಯಲ್ಲ. ಈ ಭೂಮಿಯನ್ನು ಲೀಸ್‍ಗೆ ಕೊಟ್ಟರೆ ನಮ್ಮ ವಿರೋಧವಿಲ್ಲ. ಆದರೆ, ಕೃಷಿ ಭೂಮಿಯನ್ನು ಮಾರಾಟ ಮಾಡಲು ಸರ್ಕಾರಕ್ಕೆ ಅಧಿಕಾರ ಕೊಟ್ಟವರ್ಯಾರು? ಎಂದು ಪ್ರಶ್ನಿಸಿದರು.
ಜಿಂದಾಲ್‍ಗೆ ಭೂಮಿ ಮಾರಾಟ ಮಾಡುವ ಬಗ್ಗೆ ಪರಿಶೀಲನಬೆ ನಡೆಸಲು ಸದನ ಸಮಿತಿ ರಚಿಸಿರುವುದು, ಒಂದು ರೀತಿಯಲ್ಲಿ ಕಳ್ಳಂಗೆ ಪಿಳ್ಳೆ ನೆವದಂತಾಗಿದೆ. ಈ ಸಮಿತಿಯಿಂದ ಯಾವುದೇ ಪ್ರಯೋಜನವಿಲ್ಲ. ಈ ಸಮಿತಿಯೂ ಜಿಂದಾಲ್ ಪರ ವಕಾಲತ್ತು ವಹಿಸುವ ಸಾಧ್ಯತೆ ಇದೆ ಎಂದು ಆರೋಪಿಸಿದ ಅವರು, ಯಾವುದೇ ಕಾರಣಕ್ಕೂ ರಾಜ್ಯ ಸರ್ಕಾರ ಜಿಂದಾಲ್‍ಗೆ ಭೂಮಿ ಪರಭಾರೆ ಮಾಡಬಾರದು ಎಂದು ಒತ್ತಾಯಿಸಿದರು.
ಇದೇ ಎಚ್.ಡಿ.ಕುಮಾರಸ್ವಾಮಿ ಚುನಾವಣೆ ಪೂರ್ವದಲ್ಲಿ ರೈತರ ಸಂಪೂರ್ಣ ಸಾಲ ಮನ್ನಾ ಮಾಡುವುದಾಗಿ ಹೇಳಿದ್ದರು. ಆದರೆ, ಅಧಿಕಾರ ಸಿಕ್ಕ ನಂತರ ಸಾಲ ಮನ್ನಾ ಮಾಡುತ್ತೇವೆ ಎನ್ನುತ್ತಲೇ ಬೆಳೆ ಸಾಲ ಸಂಪೂರ್ಣ ಮನ್ನಾ ಮಾಡುವುದಾಗಿ ಹೇಳಿ, 46 ಸಾವಿರ ಕೋಟಿ ಮನ್ನಾ ಮಾಡುವುದಾಗಿ ಘೋಷಿಸಿದ್ದರು. ಆದರೆ, ಈಗ ಅದು 16 ಸಾವಿರ ಕೋಟಿಗೆ ಬಂದು ನಿಂತಿದೆ. ಸರ್ಕಾರದ ಈ ನಡೆ ಘನತೆ ತರುವಂತದಲ್ಲ. ಮೊದಲು ಘೋಷಿದಂತೆ 46 ಸಾವಿರ ಕೋಟಿಯೂ ಬ್ಯಾಂಕ್‍ಗಳಿಗೆ ಜಮೆ ಮಾಡಿ, ರೈತರ ಬೆಳೆ ಸಾಲ ಮನ್ನಾ ಮಾಡಬೇಕೆಂದು ಆಗ್ರಹಿಸಿದರು.
ಸಭೆಯಲ್ಲಿ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಹೆಚ್.ಆರ್.ಬಸವರಾಜಪ್ಪ, ರಾಜ್ಯ ಕಾರ್ಯದರ್ಶಿ ಕೋಲಾರ ಶಿವಪ್ಪ, ಈಚಗಟ್ಟ ಸಿದ್ದವೀರಪ್ಪ, ಜಡಿಯಪ್ಪ ದೇಸಾಯಿ, ಅನಸೂಯಮ್ಮ, ಕುರುವ ಗಣೇಶ್, ಮಹೇಶ್ ತರೀಕೆರೆ, ಮಲ್ಲಶೆಟ್ಟಿಹಳ್ಳಿ ಚನ್ನಬಸಪ್ಪ, ಚಿನ್ನಸಮುದ್ರ ಶೇಖರ್ ನಾಯ್ಕ ಮತ್ತಿತರರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ