ಜೂ11ರಿಂದ ಪಿಯುಸಿ. ಪೂರಕ ಪರೀಕ್ಷೆ

ಚಿತ್ರದುರ್ಗ :

    ಇದೇ ಜೂ. 11 ರಿಂದ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ಪ್ರಾರಂಭವಾಗಲಿದ್ದು, 7503 ವಿದ್ಯಾರ್ಥಿಗಳು ಪರೀಕ್ಷೆಗೆ ನೊಂದಣಿ ಮಾಡಿಕೊಂಡಿದ್ದಾರೆ. ಜಿಲ್ಲೆಯಲ್ಲಿ ಬಿಸಿಲಿನ ತಾಪ ಹೆಚ್ಚಿರುವುದರಿಂದ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಸೂಕ್ತ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿ ಎಂದು ಅಪರ ಜಿಲ್ಲಾಧಿಕಾರಿ ಸಿ.ಸಂಗಪ್ಪ ಹೇಳಿದರು.

      ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ಕುರಿತು ಶುಕ್ರವಾರ ಏರ್ಪಡಿಸಿದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

      ಈ ಬಾರಿ ಜಿಲ್ಲೆಯಲ್ಲಿ ಬಿಸಿಲಿನ ತಾಪ ಹೆಚ್ಚಾಗಿದ್ದು, ಪರೀಕ್ಷೆ ಬರೆಯುವ ಸಮಯದಲ್ಲಿ ವಿದ್ಯಾರ್ಥಿಗಳಿಗೆ ದಾಹ ಹೆಚ್ಚಾಗಿ ಗಮನ ಕೇಂದ್ರೀಕರಿಸಲಾಗದೆ ತೊಂದರೆ ಅನುಭವಿಸುವಂತಾಗಬಾರದು. ಹೀಗಾಗಿ ಅಗತ್ಯ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು. ಜಿಲ್ಲಾದ್ಯಂತ ಯಾವುದೇ ಅಕ್ರಮ ಚಟುವಟಿಕೆ ಹಾಗೂ ಅಹಿತಕರ ಘಟನೆಗಳಿಗೆ ಆಸ್ಪದ ನೀಡದೆ ಕ್ರಮಬದ್ದವಾಗಿ ಪರೀಕ್ಷೆಯನ್ನು ಯಶಸ್ವಿಗೊಳಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಸಂಗಪ್ಪ ಹೇಳಿದರು.

     ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕಿ ಶೋಭಾ ಮಾತನಾಡಿ, ಜಿಲ್ಲೆಯಲ್ಲಿ ಒಟ್ಟು 09 ಪರೀಕ್ಷಾ ಕೇಂದ್ರಗಳಲ್ಲಿ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ನಡೆಯಲಿದ್ದು, ಕಲಾ ವಿಭಾಗಕ್ಕೆ-3042, ವಿಜ್ಞಾನ ವಿಭಾಗ- 2423, ವಾಣಿಜ್ಯ ವಿಭಾಗ 2038, ಸೇರಿದಂತೆ ಒಟ್ಟು 7503 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಪರೀಕ್ಷಾ ಕೇಂದ್ರಗಳಿಗೆ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕೈಗೊಳ್ಳಲಾಗುತ್ತಿದ್ದು , ಸೂಕ್ಷ್ಮ ಹಾಗೂ ಅತೀ ಸೂಕ್ಷ್ಮ ಕೇಂದ್ರಗಳೆಂದು ಈ ಬಾರಿ ಗುರುತಿಸಲಾಗಿಲ್ಲ. ಪರೀಕ್ಷೆ ಪ್ರಾರಂಭವಾಗುವುದಕ್ಕಿಂತ 30 ನಿಮಿಷ ಮುಂಚಿತವಾಗಿ ವಿದ್ಯಾರ್ಥಿಗಳು ಹಾಜರಿರಬೇಕು.

       ಪರೀಕ್ಷಾ ಕೇಂದ್ರಗಳ ಸುತ್ತಮುತ್ತಲಿನ ಜೆರಾಕ್ಸ್ ಅಂಗಡಿ, ಕಂಪ್ಯೂಟರ್ ಸೆಂಟರ್‍ಗಳನ್ನು ಮುಚ್ಚಿಸಲಾಗುವುದು. ಅಲ್ಲದೆ 200 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳ್ಳಲಿದೆ. ಪರೀಕ್ಷಾ ಕೊಠಡಿಗಳಲ್ಲಿ ಮೇಲ್ವಿಚಾರಕರಾಗಿ ಪ್ರೌಢಶಾಲಾ ಸಹ ಶಿಕ್ಷಕರನ್ನು ನೇಮಿಸಲಾಗಿದೆ. ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಗಳಿಗೆ ಮೊಬೈಲ್ ಫೋನ್ ತರುವುದನ್ನು ನಿಷೇಧಿಸಲಾಗಿದೆ ಎಂದು ಹೇಳಿದರು. ಸಭೆಯಲ್ಲಿ ಪರೀಕ್ಷಾ ಕೇಂದ್ರಗಳ ಮುಖ್ಯಸ್ಥರು ಭಾಗವಹಿಸಿದ್ದರು.

ಪರೀಕ್ಷಾ ವೇಳಾಪಟ್ಟಿ :

       ಜೂನ್ 11 ರಂದು ಬೆಳಿಗ್ಗೆ ಸಮಾಜಶಾಸ್ತ್ರ, ಲೆಕ್ಕಶಾಸ್ತ್ರ, ಗಣಿತ ಹಾಗೂ ಮಧ್ಯಾಹ್ನ ಗೃಹಶಾಸ್ತ್ರ. ಜೂನ್ 12 ರಂದು ಬೆಳಿಗ್ಗೆ ಇಂಗ್ಲೀಷ್ ಮಧ್ಯಾಹ್ನ ಮಾಹಿತಿ ತಂತ್ರಜ್ಞಾನ, ರಿಟೇಲ್, ಆಟೋಮೊಬೈಲ್, ಹೆಲ್ತ್‍ಕೇರ್, ಬ್ಯೂಟಿ ಮತ್ತು ವೆಲ್‍ನೆಸ್. ಜೂನ್ 13 ರಂದು ಬೆಳಿಗ್ಗೆ ಅರ್ಥಶಾಸ್ತ್ರ, ಭೌತಶಾಸ್ತ್ರ, ಮಧ್ಯಾಹ್ನ ಮನಃಶಾಸ್ತ್ರ. ಜೂನ್ 14 ರಂದು ಐಚ್ಚಿಕ ಕನ್ನಡ, ಎಲೆಕ್ಟ್ರಾನಿಕ್ಸ್, ಕಂಪ್ಯೂಟರ್‍ಸೈನ್ಸ್, ಮಧ್ಯಾಹ್ನ ಭೂಗೋಳಶಾಸ್ತ್ರ, ಕರ್ನಾಟಕ ಸಂಗೀತ, ಹಿಂದೂಸ್ಥಾನಿ ಸಂಗೀತ, ಭೂಗರ್ಭಶಾಸ್ತ್ರ. ಜೂನ್ 15 ರಂದು ಬೆಳಿಗ್ಗೆ ಕನ್ನಡ, ಮಧ್ಯಾಹ್ನ ಉರ್ದು, ಸಂಸ್ಕೃತ.

     ಜೂನ್ 17 ರಂದು ಬೆಳಿಗ್ಗೆ ತರ್ಕಶಾಸ್ತ್ರ, ವ್ಯವಹಾರಶಾಸ್ತ್ರ, ರಸಾಯನಶಾಸ್ತ್ರ, ಶಿಕ್ಷಣ. ಜೂನ್ 18 ರಂದು ಬೆಳಿಗ್ಗೆ ಇತಿಹಾಸ, ಸಂಖ್ಯಾಶಾಸ್ತ್ರ, ಜೀವಶಾಸ್ತ್ರ. ಜೂನ್ 19 ರಂದು ಬೆಳಿಗ್ಗೆ ರಾಜ್ಯಶಾಸ್ತ್ರ, ಬೇಸಿಕ್ ಮ್ಯಾಥ್ಸ್. ಜೂನ್ 20 ರಂದು ಬೆಳಿಗ್ಗೆ ಹಿಂದಿ, ಮಧ್ಯಾಹ್ನ ತಮಿಳು, ತೆಲುಗು, ಮಲಯಾಳಂ, ಮರಾಠಿ, ಅರೇಬಿಕ್, ಪ್ರೆಂಚ್ ವಿಷಯಗಳ ಪರೀಕ್ಷೆ ನಡೆಯಲಿವೆ. ಪರೀಕ್ಷೆ ನಡೆಯವ ನಿಗದಿತ ದಿನದಂದು ಬೆಳಿಗ್ಗೆ 10-15 ರಿಂದ 1-30 ರವರೆಗೆ ಹಾಗೂ ಮಧ್ಯಾಹ್ನ 2-30 ರಿಂದ 5-45 ರವರೆಗೆ ಪರೀಕ್ಷೆ ನಡೆಯಲಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap